Loading..

ಬೀಜ ಮಸೂದೆ 2025 - ಕೃಷಿಕರ ಗಾಯದ ಮೇಲೊಂದು ಬರೆ!

ಬೀಜ ಮಸೂದೆ 2025 – ಕೃಷಿಕರ ಗಾಯದ ಮೇಲೊಂದು ಬರೆ! ರೈತರ ಬವಣೆಗಳಿಗೆ ಕೊನೆಯೇ ಇಲ್ಲ! ದಿನನಿತ್ಯ ಅವೇ ಸುದ್ದಿಗಳು ಪುನರಾವರ್ತಿಸುತ್ತಿರುತ್ತವೆ: ‘ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲ’, ‘ಮೆಣಸಿನ ಕಾಯಿ, ಟೊಮೆಟೊ ರಸ್ತೆಗೆ ಚೆಲ್ಲಿದ ರೈತರು’, ‘ ‘ಅತಿವೃಷ್ಟಿಯಿಂದ ಬೆಳೆ ಹಾನಿ’, ‘ದಿಢೀರ್ ಬೆಲೆ ಕುಸಿತದಿಂದ ಹಾಕಿದ ಬಂಡವಾಳವನ್ನೂ ಕಾಣದ ರೈತ’ ಇತ್ಯಾದಿ, ಇತ್ಯಾದಿ. ಇಂತಹ ಸಮಸ್ಯೆಗಳ ಸರಪಳಿಯಲ್ಲಿ ಸಿಲುಕಿರುವ ರೈತರು ಆತ್ಮಹತ್ಯೆಗೆ ಮೊರೆ ಹೋಗುತ್ತಿರುವುದು ಸರ್ವೇಸಾಮಾನ್ಯವಾಗಿರುವ ವಿಷಯ. ಕಳೆದ 30 ವರ್ಷಗಳಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರವು ತಾನು ಜಾರಿಗೆ ತರಬೇಕೆಂದಿದ್ದ ರೈತ ವಿರೋಧಿಯಾಗಿದ್ದ ಮೂರು ಕರಾಳ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ನಡೆಸಿದ ಭವ್ಯ ಹೋರಾಟದ ಹಿನ್ನೆಲೆಯಲ್ಲಿ ಅವನ್ನು ತಾನೇ ಹಿಂಪಡೆಯಬೇಕಾಯಿತು. ಆದರೆ, ಈಗ ಆ ಕಾಯ್ದೆಗಳಲ್ಲಿದ್ದ ಅಂಶಗಳನ್ನೇ ವಿವಿಧ ರಾಜ್ಯಗಳಲ್ಲಿ ಸರ್ಕಾರಗಳು ಹಿಂಬಾಗಿಲಿನಿಂದ ಜಾರಿ ಮಾಡುತ್ತಿವೆ. ಅವುಗಳ ಜೊತೆಯಲ್ಲಿಯೇ, ರೈತರ ಮೇಲೆ ಎಡೆಬಿಡದೆ ವಿವಿಧ ರೀತಿಯ ಪ್ರಹಾರಗಳನ್ನೂ ಸಹ ಮಾಡುತ್ತಲೇ ಇರುತ್ತವೆ. ಕಳೆದ ನವೆಂಬರ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ಬೀಜ ಮಸೂದೆ 2025 ಆ ಪ್ರಹಾರಗಳ ಪಟ್ಟಿಗೆ ಈಗ ಹೊಸ ಸೇರ್ಪಡೆಯಾಗಿದೆ. ಈ ಮಸೂದೆಯು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತದೆ. ದೇಶದಲ್ಲಿ ಬೀಜ ವಲಯದ ಉಗಮ ಹಾಗೂ ಬೆಳವಣಿಗೆ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಬೀಜದ ಅವಶ್ಯಕತೆಯನ್ನು ರೈತರು ವಿನಿಮಯದ ಮೂಲಕ ಪೂರೈಸಿಕೊಳ್ಳುತ್ತಿದ್ದರು. ಅದರ ಉತ್ಪಾದನೆ, ಸಂಸ್ಕರಣೆ, ದಾಸ್ತಾನು ಹಾಗೂ ಹಂಚಿಕೆಯನ್ನು ಅವರೇ ಸ್ವತ: ನಿರ್ವಹಿಸುತ್ತಿದ್ದರು. ಸ್ವಾತಂತ್ರ್ಯಾ ನಂತರ ಕೇಂದ್ರ ಸರ್ಕಾರವು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಹೊಂದಲು ಮಾರಾಟಕ್ಕಿಡುವ ಬೀಜದ ಗುಣಮಟ್ಟವನ್ನು ತಾನೇ ನಿಯಂತ್ರಿಸಲು ಆರಂಭಿಸಿತು. 1966ರ ಬೀಜ ಕಾಯ್ದೆಯು ಬೀಜದ ಪರಿವೀಕ್ಷಣೆ, ಪರೀಕ್ಷೆ, ಪ್ರಮಾಣ ಪತ್ರ ನೀಡಿಕೆಗಳನ್ನು ಕುರಿತ ವಿವಿಧ ಅಂಶಗಳನ್ನು ಒಳಗೊಂಡಿತ್ತು ಹಾಗೂ ವಿವಿಧ ಭೂಪ್ರದೇಶಗಳಿಗೆ ಮತ್ತು ವಾತಾವರಣಗಳಿಗೆ ಹೊಂದುವ ಬೀಜಗಳ ಹೊಸ ತಳಿಗಳು ಮತ್ತು ಕೃಷಿ ಕ್ಷೇತ್ರ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಸಾರ್ವಜನಿಕ ವಲಯದಲ್ಲಿಯೇ ಮಾಡುವ ಅಂಶಗಳನ್ನು ಹೊಂದಿತ್ತು. ಬೀಜ ಅಭಿವೃದ್ಧಿ ನೀತಿ, ಜಾಗತೀಕರಣ, ಡಬ್ಲ್ಯೂ ಟಿ ಓ ಒಪ್ಪಂದಗಳು ಮತ್ತು ಟ್ರಿಪ್ಸ್ 1988ರಲ್ಲಿ, ದೇಶದಲ್ಲಿ ಬೀಜ ಉತ್ಪಾದನೆಯ ಕ್ಷೇತ್ರವನ್ನು ಉದಾರೀಕರಿಸಲಾಯಿತು. ಇದರಿಂದ ವಿದೇಶಿ ಕಂಪನಿಗಳಿಗೆ ಎಫ್‌ಡಿಐ ಯೋಜನೆಯ ಮೂಲಕ ದೇಶದ ಒಳಗೆ ನುಸುಳಲು ಸಾಧ್ಯವಾಗುವಂತಹ ಆಮದು ನೀತಿ ಜಾರಿಗೆ ಬಂತು. 1991ರಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಜಾಗತೀಕರಣದ ನೀತಿಗನುಗುಣವಾಗಿ, 1994ರಲ್ಲಿ ವಿಶ್ವವಾಣಿಜ್ಯ ಸಂಸ್ಥೆ(ಡಬ್ಲ ಡಬ್ಲ್ಯೂ ಟಿ ಓ)ಯ ಪ್ರತಿಪಾದನೆಯಂತೆ ಟ್ರಿಪ್ಸ್(ವ್ಯಾಪಾರ ಸಂಬಂಧಿತ ಬೌದ್ಧಿಕ ಆಸ್ತಿ ಹಕ್ಕುಗಳು)ನ ಷರತ್ತುಗಳಿಗೆ ಒಪ್ಪಿಗೆ ನೀಡಲಾಯಿತು. ಸಸ್ಯ ವೈವಿಧ್ಯತೆಯನ್ನು ಕಾಪಾಡಲು ಎಲ್ಲವನ್ನೂ ಪೇಟೆಂಟ್ ಪದ್ಧತಿಗೆ ಒಳಪಡಿಸಬೇಕು ಎಂದು ಹೇಳಲಾಯಿತು. ಇದಾದ ನಂತರ ಬೀಜೋದ್ಯಮದಲ್ಲಿ ಖಾಸಗಿ ವಲಯಕ್ಕೆ ಉತ್ತೇಜನ ದೊರೆಯಿತು. ಪ್ರಸಕ್ತ ಬೀಜ ಉತ್ಪಾದನೆ ಅಥವಾ ಮಾರಾಟ ಕ್ಷೇತ್ರದಲ್ಲಿ 400 ರಿಂದ 500 ಕಂಪನಿಗಳು ಭರ್ಜರಿ ವ್ಯವಹಾರ ನಡೆಸುತ್ತಿವೆ. ಅತ್ಯಧಿಕ ಲಾಭವನ್ನು ನೀಡುವ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುವ, ಹೆಚ್ಚಿನ ಬೆಲೆಯ ಬೀಜಗಳನ್ನು ಖಾಸಗಿ ಬೀಜ ಕಂಪನಿಗಳು ತಮ್ಮ ಗುರಿಯಾಗಿಟ್ಟುಕೊಂಡಿದ್ದರೆ, ಸಾರ್ವಜನಿಕ ವಲಯದ ಬೀಜ ನಿಗಮಗಳು ಲಾಭಗಳಿಕೆಯನ್ನೇ ತಮ್ಮ ಏಕೋದ್ದೇಶ ಮಾಡಿಕೊಳ್ಳದೆ ಕಡಿಮೆ ಬೆಲೆಯ ಅಪಾರ ಪ್ರಮಾಣದಲ್ಲಿ ಬಳಕೆಯಾಗುವ, ಬದುಕಿಗೆ ಮೂಲಭೂತವಾಗಿ ಬೇಕಾಗಿರುವ ಆಹಾರ ಧಾನ್ಯ ಬೀಜಗಳ ಕ್ಷೇತ್ರಕ್ಕೆ ಒತ್ತು ನೀಡಿದ್ದವು. ಆರ್ಥಿಕ ಸುಧಾರಣೆ(ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ) ಹಾಗೂ ಟ್ರಿಪ್ಸ್ ಗೆ ಭಾರತವು ಸಹಿ ಹಾಕಿದ ಪರಿಣಾಮದಿಂದಾಗಿ, ಹೊಸ ವಿದೇಶಿ ಹಾಗೂ ಸ್ವದೇಶಿ ಕಂಪನಿಗಳು ಭಾರತದ ಬೀಜ ವಲಯವನ್ನು ಆಕ್ರಮಿಸತೊಡಗಿದವು ಮತ್ತು ಮಾರುಕಟ್ಟೆಗಾಗಿ ತೀವ್ರ ಪೈಪೋಟಿ ಶುರುವಾಯಿತು. ಜೊತೆಗೆ ಬೀಜದ ಉತ್ಪಾದನಾ ವೆಚ್ಚವು ಏರಿ ಬೀಜದ ಬೆಲೆ ಗಗನಮುಖಿಯಾಗುತ್ತಾ ಸಾಗಿತು. ಹಿಂದೆ ರೈತರು ತಾವು ಬೆಳೆದ ಬೆಳೆಯ ಬೀಜಗಳನ್ನು ಮರುಬಳಕೆ ಮಾಡುತ್ತಿದ್ದ ವಿಧಾನವನ್ನು ಬದಲಾಯಿಸಲಾಯಿತು. ಮಿಶ್ರತಳಿಯನ್ನು ಬಳಸಲು ಉತ್ತೇಜನ ನೀಡಲಾಯಿತು. ತತ್ಪರಿಣಾಮವಾಗಿ, ಮಿಶ್ರತಳಿಯ ಬೀಜಗಳನ್ನು ಮರುಬಳಕೆ ಮಾಡಿದರೆ ಇಳುವರಿಯು ಸಾಕಷ್ಟು ಇಳಿಮುಖವಾಯಿತು. ಇದರಿಂದ ರೈತರು ಅನಿವಾರ್ಯವಾಗಿ, ಪ್ರತಿ ವರ್ಷವೂ ಬೀಜ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. 1988ರ ಬೀಜ ನೀತಿಯು ಖಾಸಗಿ ವಲಯಕ್ಕೆ ನೀಡಿದ ಉತ್ತೇಜನದಿಂದಾಗಿ ಬೀಜ ವ್ಯಾಪಾರದ ಕ್ಷೇತ್ರದಲ್ಲಿ ಖಾಸಗಿ ವಲಯದ ಅಸ್ತಿತ್ವದ ಪ್ರಮಾಣವು 1981-95ರ ನಡುವೆ ಶೇ.50 ರಿಂದ ಶೇ.60ರಷ್ಟು ಇದ್ದದ್ದು, 2019ರ ಸಂದರ್ಭದಲ್ಲಿ, ಶೇ.80ರಷ್ಟು ಆಯಿತು. ಖಾಸಗಿ ವಲಯದಲ್ಲಿ ಹೆಚ್ಚು ಬಂಡವಾಳದ ಹೂಡಿಕೆಯಿಂದ ಮತ್ತು ಉನ್ನತ ಸಂಶೋಧನೆಗಳ ಪರಿಣಾಮದಿಂದ ದೊರೆತ ಬೀಜಗಳನ್ನು ಪಡೆಯಲು ರೈತರು ಅಧಿಕ ಬೆಲೆಯನ್ನು ತೆರಬೇಕಾಯಿತು. ಸ್ವದೇಶಿ ಬೀಜಗಳ ಬಳಕೆ ಕಡಿಮೆಯಾಗುತ್ತಾ ಸಾಗಿತು. ಹೇಗೆ ಭಾರತದ ರೈತರು ಕಾನೂನಾತ್ಮಕ ತಡೆಗಳಿಗಿಂತ ಹೆಚ್ಚಾಗಿ ತಾಂತ್ರಿಕ ಬೆಳವಣಿಗೆಯ ಕೊರತೆಯಿಂದ ನರಳುತ್ತಾರೆ ಎನ್ನುವುದಕ್ಕೆ ಇದು ಉತ್ತಮ ನಿದರ್ಶನವಾಗುತ್ತದೆ. ಭಾರತದ ರೈತರ ವಿನಾಶಕಾರಿ ಸ್ಥಿತಿ ಕಳೆದ ಮೂರು ದಶಕಗಳಲ್ಲಿ ಕೃಷಿ ಉತ್ಪಾದನೆ ವೆಚ್ಚ ವಿಪರೀತವಾಗಿ ಏರಿದೆ. ಅದಕ್ಕೆ ಮೂಲ ಕಾರಣವೇ, ಕೃಷಿ ಒಳಸುರಿ ವೆಚ್ಚಗಳ ಅಪಾರ ಏರಿಕೆ. ಕನಿಷ್ಠ ಬೆಂಬಲ ಬೆಲೆ(ಸಿ2+50%) ನೀಡಬೇಕು ಮತ್ತು ಎಲ್ಲಾ ಕೃಷಿ ಉತ್ಪನ್ನಗಳನ್ನೂ ಬೆಂಬಲ ಬೆಲೆಯ ಆಧಾರದಲ್ಲಿ ಖರೀದಿಸಬೇಕು ಎಂಬ ರೈತರ ಕನಿಷ್ಠ ಆಗ್ರಹಕ್ಕೆ ಮುಖ ತಿರುಗಿಸಿಕೊಂಡಿರುವ ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳು ಆ ವಿಷಯವನ್ನೇ ಮುಂದೆ ಹಾಕುತ್ತಾ ನಡೆದಿವೆ. ಜೊತೆಗೆ, ಸೂಕ್ತ ಸಮಯಕ್ಕೆ ಬೀಜ ಲಭ್ಯವಾಗದೇ ಇರುವುದು ಹಾಗೂ ಕಳಪೆ ಬೀಜಗಳ ಹಾವಳಿಗೆ ಯಾವುದೇ ಪರಿಹಾರ ದೊರಕಿಲ್ಲ. ಹೀಗಾಗಿ ರೈತರು ತಮ್ಮ ಇತರೆ ಎಲ್ಲಾ ಸಮಸ್ಯೆಗಳೊಂದಿಗೆ ಖಾಸಗಿ ಕಂಪನಿಗಳು ಸರಬರಾಜು ಮಾಡುತ್ತಿರುವ ಕಳಪೆ ಬೀಜದಿಂದಾಗಿ ಅಪಾರ ಬೆಳೆ ನಷ್ಟವನ್ನು ಅನುಭವಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಬಿಹಾರದಲ್ಲಿ ಆಲೂಗಡ್ಡೆ ಮತ್ತು ಹತ್ತಿ ಬೆಳೆಗಾರರು ಖಾಸಗಿ ಬೀಜ ನಿಗಮಗಳಿಂದ ಪೂರೈಕೆಯಾದ ಅತಿಕಳಪೆ ಬೀಜಗಳ ಬಳಕೆಯಿಂದಾಗಿ ಭೀಕರ ನಷ್ಟಕ್ಕೆ ಒಳಗಾದರು. ಅಂತಹ ಸಂದರ್ಭಗಳಲ್ಲಿ, ಸಾಮಾನ್ಯ ರೈತರು ಬೃಹತ್ ಏಕಸ್ವಾಮ್ಯ ಬಹುರಾಷ್ಟ್ರೀಯ ದೈತ್ಯ ಕಂಪನಿಗಳ ವಿರುದ್ಧ ದಾವೆ ಹೂಡಿ ಗೆಲ್ಲಲು ಸಾಧ್ಯವೇ? ಆ ದೋಷಿ ಕಂಪನಿಗಳಿಗೆ ನಿದರ್ಶನೀಯ ಶಿಕ್ಷೆಗೆ ಗುರಿಮಾಡಲೋ ಅಥವಾ ಅವುಗಳಿಂದ ಸೂಕ್ತ ಪರಿಹಾರವನ್ನು ರೈತರಿಗೆ ದೊರಕಿಸಿಕೊಡಲೋ ಸರ್ಕಾರಗಳು ತಮ್ಮ ಕಿರುಬೆರಳನ್ನೂ ಎತ್ತಿಲ್ಲ. 2025ರ ಬೀಜ ಮಸೂದೆಯ ಅಂಶಗಳು 2025ರ ನವೆಂಬರ್ 12ರಂದು ಮಂಡಿಸಲಾದ ‘ಕರಡು ಬೀಜ ಮಸೂದೆ 2025’ರ ಪ್ರಮುಖ ಅಂಶಗಳು ಹಾಗೂ ಉದ್ದೇಶಗಳು: ಈಗ ಚಾಲ್ತಿಯಲ್ಲಿರುವ ಬೀಜ ಕಾಯ್ದೆ 1966 ಅನೂರ್ಜಿತವಾಗುತ್ತದೆ, ಬೀಜ ಮಾರಾಟ, ಆಮದು, ರಫ್ತು, ಉತ್ಪಾದನೆ, ಸಂಗ್ರಹಣೆ, ಸರಬರಾಜು ಇತ್ಯಾದಿಗಳ ಮೇಲೆ ನಿಗಾ ವಹಿಸಲಾಗುತ್ತದೆ, ರೈತರು, ಮಾರಾಟಗಾರರು, ಉತ್ಪಾದಕರು, ವಿತರಕರು ಎಂದು ಸರಬರಾಜು ಸರಪಳಿಯಲ್ಲಿರುವ ಎಲ್ಲರನ್ನೂ ಪ್ರತ್ಯೇಕವಾಗಿ ವಿಂಗಡಿಸಲಾಗುತ್ತದೆ. ವ್ಯವಸ್ಥೆಯ ನಿಯಂತ್ರಣಕ್ಕಾಗಿ 27 ಸದಸ್ಯರ ಕೇಂದ್ರ ಬೀಜ ಸಮಿತಿ ಹಾಗೂ 15 ಸದಸ್ಯಬಲದ ರಾಜ್ಯ ಬೀಜ ಸಮಿತಿಯನ್ನು ರಚಿಸಲಾಗುತ್ತದೆ. ರಾಷ್ಟ್ರೀಯ ನೋಂದಣಿ ಪಡೆದ ಬೀಜ ಕಂಪನಿಗಳಿಗೆ ಎಲ್ಲಾ ರಾಜ್ಯಗಳಲ್ಲಿ ಸುಲಭವಾಗಿ ವ್ಯಾಪಾರ ವಹಿವಾಟು ನಡೆಸಲು ಅನುವು ಮಾಡಿಕೊಡಲಾಗುತ್ತದೆ. ಬೀಜವೆಂದರೇನು ಎಂದು ವಿವರಿಸಿ, ಆ ವ್ಯಾಖ್ಯಾನವು ಎಲ್ಲಾ ಬೀಜ ಹಾಗೂ ಗಿಡಗಳನ್ನು ವ್ಯಾಪಿಸಿಕೊಂಡಿರುವಂತೆ ನಿಗಾವಹಿಸಲಾಗಿದೆ. 1966ರ ಬೀಜ ಕಾಯ್ದೆಯು ಕೆಲವೇ ಆಯ್ದ ಬೀಜಗಳನ್ನು ಮಾತ್ರ ಒಳಗೊಂಡಿತ್ತು. ಅಂದರೆ, ಇದರಿಂದಾಗಿ, ಈಗ ದೈತ್ಯ ಕೃಷಿ ಕಂಪನಿಗಳಿಗೆ ಹಾಗೂ ಕಾರ್ಪೊರೇಟ್ ತಿಮಿಂಗಲಗಳಿಗೆ ಎಲ್ಲ ಕೃಷಿ ಸಂಬಂಧಿತ ವಸ್ತುಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದು ಲಾಭದಾಯಕ ವ್ಯವಹಾರ ನಡೆಸಲು ದೇಶೀಯ ಮಾರುಕಟ್ಟೆಯ ಹೆಬ್ಬಾಗಿಲು ತೆರೆಯಲಾಗಿದೆ. ಕಳಪೆ ಬೀಜಗಳಿಂದಾಗಿ ರೈತರಿಗೆ ಬೆಳೆ ಹಾನಿಯಾದರೆ ಅವರಿಗೆ ದೊರಕಬೇಕಾದ ಪರಿಹಾರದ ಕುರಿತು ಗಟ್ಟಿಯಾದ ಪ್ರತಿಪಾದನೆ ಈ ಮಸೂದೆಯಲ್ಲಿಲ್ಲ. ಅವರಿಗೆ ಕೋರ್ಟ್ ಮೆಟ್ಟಿಲು ಹತ್ತಲು ಸಲಹೆಗಳಿವೆ ಮಾತ್ರ! ಯಾರಾದರೂ ರೈತರು ವೈಯಕ್ತಿಕವಾಗಿ ಹಾಗೂ ತಮ್ಮದೇ ಗುಂಪುಗಳಲ್ಲಿ ತಮ್ಮ ಮಧ್ಯೆ ಬೀಜ ವಿತರಣೆಯನ್ನು ಮಾಡಿಕೊಂಡರೆ ಅಂತಹ ಗುಂಪುಗಳನ್ನು ವಾಣಿಜ್ಯ ಘಟಕಗಳಂತೆ ಪರಿಗಣಿಸಲಾಗುತ್ತದೆ, ಅವಕ್ಕೆ ಎಲ್ಲ ಕಂಪನಿಗಳಿಗೆ ಅನ್ವಯಿಸುವ ನಿಬಂಧನೆಗಳೂ ಇರುತ್ತವೆ. ಅವರು ಬೀಜದ ಬೆಲೆಯನ್ನು ನಿಗದಿಪಡಿಸಲು ಸಾಧ್ಯವಿಲ್ಲ. ಯಾರು ಕಾಯ್ದೆಯಡಿ ನೋಂದಾಯಿಸಿಕೊಳ್ಳುವರೋ ಅವರಿಗೆ ಮಾತ್ರವೇ ಬೀಜದ ಬೆಲೆಯನ್ನು ನಿರ್ಧರಿಸಲು ಅವಕಾಶವಿದೆ. ಈ ಮಸೂದೆಯ ಹೊಸ ನಿಯಮಗಳ ಪ್ರಕಾರ ಇದೀಗ ಗುಡಿ ಕೈಗಾರಿಕೆಗಳಂತೆ ಇರುವ ಸಾವಿರಾರು ಬೀಜದ ಅಂಗಡಿಗಳು ಮುಚ್ಚಿ ಹೋಗುತ್ತವೆ. ಸಣ್ಣ ಹಾಗೂ ಗ್ರಾಮೀಣ ಬೀಜ ಮಾರಾಟಗಾರರು ಆನ್ಲೆೈನ್ ವ್ಯವಹಾರಗಳನ್ನು ಮಾಡಲಾರರು. ಹೀಗೆ, ಕೃಷಿ ಆಧಾರಿತ ಚಟುವಟಿಕೆಗಳನ್ನು ನಡೆಸುವ ಲಕ್ಷೋಪಲಕ್ಷ ಜನರು ಭೀಕರ ಅನಾಹುತಕ್ಕೆ ತುತ್ತಾಗಲಿದ್ದಾರೆ. ಈ ಕರಡು ಮಸೂದೆಯು ವಿದೇಶಿ ಸಂಸ್ಥೆಗಳಿಗೆ ಬೀಜದ ಗುಣಮಟ್ಟ ಅಳೆಯಲು ಅವಕಾಶ ನೀಡುತ್ತದೆ. ಇದರಿಂದಾಗಿ ವಿದೇಶಿ ಅಳತೆಗೋಲಿನಿಂದ ನಿರ್ಧರಿತವಾಗುವ ಕುಲಾಂತರಿ ಬೀಜಗಳು ಅಥವಾ ಹಕ್ಕುಸ್ವಾಮ್ಯ ಹೊಂದಿರುವ ಬೀಜಗಳು ಭಾರತದೊಳಕ್ಕೆ ಬರಲು ಅವಕಾಶವಾಗುತ್ತದೆ. ಇದು ಮಾನವನ ಹಾಗೂ ಪ್ರಕೃತಿಯ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ ಮತ್ತು ಸಣ್ಣ ರೈತರು ನಿರ್ನಾಮವಾಗುತ್ತಾರೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದ ಕೃಷಿಗೆ ಸಂಬಂಧಿಸಿದ ಸಂಶೋಧನೆ ಹಾಗೂ ಬೆಳವಣಿಗೆಯ ಕಾರ್ಯಗಳು ನೇಪಥ್ಯಕ್ಕೆ ಸರಿಯುತ್ತವೆ. ಈ ಮಸೂದೆಯ ಮೂಲಕ ಬಿಜೆಪಿ ಸರ್ಕಾರವು ಈಗ ರಾಜ್ಯ ಪಟ್ಟಿಯಲ್ಲಿರುವ ಪ್ರಮುಖ ಕ್ಷೇತ್ರವಾದ ಕೃಷಿ ಅಡಿಯಲ್ಲಿರುವ ಬೀಜ ವಲಯಕ್ಕೆ ಸಂಬಂಧಿಸಿದಂತೆ ಇರುವ ಒಕ್ಕೂಟ ವ್ಯವಸ್ಥೆಯ ಸ್ವರೂಪವನ್ನು ತಿರುಗುಮುರುಗಾಗಿಸುತ್ತಿದೆ. ಈ ಎಲ್ಲಾ ನಿಬಂಧನೆಗಳಿಂದಾಗಿ, ಬಹುತೇಕ ಸಣ್ಣ ಹಾಗೂ ಮಧ್ಯಮ ರೈತರು ವಿಪತ್ತಿಗೆ ಒಳಗಾಗುತ್ತಾರೆ. ರೈತರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ ಕೇಂದ್ರ ಸರ್ಕಾರವು ದೆಹಲಿಯಲ್ಲಿ ನಡೆದ ಐತಿಹಾಸಿಕ ರೈತರ ಹೋರಾಟವು ನೊಂದ ರೈತ ಸಮುದಾಯದಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದೆ. ಈಗ ರೈತರು ಸಂಘಟಿತರಾಗಿ ಎಲ್ಲಾ ರೈತ ವಿರೋಧಿ, ಕೃಷಿ ವಿರೋಧಿ ನೀತಿಗಳ ವಿರುದ್ಧ ಸಿಡಿದೇಳುತ್ತಿದ್ದಾರೆ. ಅವರು ಮತ್ತೆ ಇನ್ನೊಂದು ದೀರ್ಘಕಾಲೀನ ಸಮರಶೀಲ ಹೋರಾಟವನ್ನು ಕಟ್ಟುತ್ತಾ ಸರ್ಕಾರವನ್ನು ಮಣಿಸುತ್ತಾರೆ ಎಂಬ ದೃಢ ವಿಶ್ವಾಸ ಇರಿಸಿಕೊಳ್ಳಬಹುದು.