ವಿಬಿ ಜಿ ರಾಮ್ ಜಿ ಕಾಯ್ದೆ - ಗ್ರಾಮೀಣ ಜನರಿಗೆ ಉದ್ಯೋಗ ಖಾತರಿ ಖೋತಾ
ವಿಬಿ ಜಿ ರಾಮ್ ಜಿ ಕಾಯ್ದೆ – ಗ್ರಾಮೀಣ ಜನರಿಗೆ ಉದ್ಯೋಗ ಖಾತರಿ ಖೋತಾ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ ನಗರ ಉದ್ಯೋಗಸ್ಥರ ಬದುಕಿನಲ್ಲಿ ಉದ್ಯೋಗ ಅಭದ್ರತೆಯನ್ನು ಸೃಷ್ಟಿಸುತ್ತಿರುವ, ರಕ್ತಹರಿಸಿ ಗಳಿಸಿದ ಕಾರ್ಮಿಕ ಸಂಘದ ಹಕ್ಕುಗಳ ಹರಣವನ್ನು ನಡೆಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರವು ಈಗ ಈಗಾಗಲೇ ಉದ್ಯೋಗದ ಅವಕಾಶಗಳಿಲ್ಲದೆ ತತ್ತರಿಸುತ್ತಿರುವ ಗ್ರಾಮೀಣ ಬಡಜನರ, ಮುಖ್ಯವಾಗಿ ಕೃಷಿ ಕಾರ್ಮಿಕರ ಕನಿಷ್ಠ ಉದ್ಯೋಗ ಖಾತರಿಗೂ ಕತ್ತರಿ ಹಾಕುವ ‘ವಿಕಸಿತ್ ಭಾರತ್ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ್) ಕಾಯ್ದೆ-2025’ (ವಿಬಿ ಜಿ ರಾಮ್ ಜಿ ಕಾಯ್ದೆ) ಕಾಯ್ದೆಯನ್ನು ಜನಗಳ ವಿರೋಧದ ನಡುವೆಯೂ ಜಾರಿಗೊಳಿಸಿದೆ. ನರೆಗಾದಲ್ಲಿ ಇದ್ದ ನೂರು ದಿನಗಳ ಉದ್ಯೋಗದ ಜಾಗದಲ್ಲಿ 125 ದಿನಗಳ ಉದ್ಯೋಗದ ಮರೀಚಿಕೆ ತೋರಿಸುತ್ತಿದೆ. ಇದುವರೆಗೂ ಪಂಚಾಯಿತಿ, ರಾಜ್ಯ ಸರ್ಕಾರಗಳಿಗಿದ್ದ ಹಿಡಿತವನ್ನು ನಯವಾಗಿ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿದೆ. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಕಾರ್ಮಿಕರ ಶ್ರಮದಿಂದ ಸೃಷ್ಟಿಯಾದ ಸಂಪತ್ತು ಮಾಲೀಕನ ಖಜಾನೆ ಸೇರುತ್ತದೆ. ದುಡಿತಕ್ಕೆ ಪ್ರತಿಫಲ ಸಿಗದ ಜನರು ಕೊಂಡುಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುತ್ತದೆ. ಇದರ ಪರಿಣಾಮವಾಗಿ ಉತ್ಪಾದನೆ ಕುಸಿದು ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ಈ ಆರ್ಥಿಕ ನಿಯಮದಿಂದಾಗಿ ನಿರುದ್ಯೋಗ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಅದರಲ್ಲೂ ಗ್ರಾಮೀಣ ಜನತೆ ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದರಿಂದಾಗಿ ನಿರುದ್ಯೋಗಿಗಳಲ್ಲಿ ತೀವ್ರ ಅಸಮಾಧಾನ, ಆಕ್ರೋಶ ಮಡುಗಟ್ಟಿದೆ. ಬಂಡವಾಳಿಗರ ನೆಚ್ಚಿನ ಭಂಟನಾದ ಕಾಂಗ್ರೆಸ್ ಪಕ್ಷವು ನಿರುದ್ಯೋಗದ ಒತ್ತಡವನ್ನು ಇಳಿಸಲು, ಆಕ್ರೋಶವನ್ನು ತಾತ್ಕಾಲಿಕವಾಗಿ ಹಾಗೂ ಅಲ್ಪಮಟ್ಟದಲ್ಲಾದರೂ ಶಮನಗೊಳಿಸಲು ನರೆಗಾ ಯೋಜನೆಯನ್ನು ಜಾರಿಗೆ ತಂದಿತು. ಈಗ ಉದ್ಯೋಗ ಹಕ್ಕಲ್ಲ, ಸರ್ಕಾರದ ದಾನ ನರೆಗಾ ಮೂಲಭೂತವಾಗಿ ಗ್ರಾಮೀಣ ಜನರ ಬೇಡಿಕೆ ಆಧಾರಿತ ಯೋಜನೆ. ಗ್ರಾಮೀಣ ಪ್ರದೇಶದ ಯಾವುದೇ ಕುಟುಂಬ ಉದ್ಯೋಗ ಕೇಳಿದರೆ, ಅದನ್ನು ಒದಗಿಸುವುದು ಸರ್ಕಾರದ ಕಾನೂನುಬದ್ಧ ಕರ್ತವ್ಯವಾಗಿತ್ತು. ದುಡಿಯುವವರ ಬೇಡಿಕೆಗೆ ಅನುಗುಣವಾಗಿ ಹಣಕಾಸು ಒದಗಿಸಲಾಗುತ್ತಿತ್ತು. ನರೆಗಾ ಜನ ಕಲ್ಯಾಣವನ್ನು ದಾನದಿಂದ ಹಕ್ಕಾಗಿ ಪರಿವರ್ತನೆ ಮಾಡಿತ್ತು. ಜಿ ರಾಮ್ ಜಿ ಕಾಯ್ದೆ ಇದನ್ನು ತಿರುವು ಮುರುವು ಮಾಡಿತು. ಕೇಂದ್ರ ಸರ್ಕಾರವು ರಾಜ್ಯಗಳಿಗೆ ನಿಗದಿತ ಮೊತ್ತದ ಹಣಕಾಸು ಹಂಚಿಕೆ ಮಾಡುತ್ತದೆ; ಅದರ ಪ್ರಮಾಣ ಎಷ್ಟು ಜನರ ಬೇಡಿಕೆಯಿದೆ ಎನ್ನುವುದರ ಬದಲು ಎಷ್ಟು ಕೆಲಸ ಮಾಡಿಸಬೇಕು ಎನ್ನುವುದರ ಮೇಲೆ ಆಧಾರವಾಗಿರುತ್ತದೆ. ಈ ಮಿತಿಯನ್ನು ದಾಟಿದರೆ ಅದರ ಹಣಕಾಸಿನ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗುತ್ತದೆ. ಒಟ್ಟಾರೆ ಅರ್ಥದಲ್ಲಿ, ಉದ್ಯೋಗದ ಹಕ್ಕನ್ನು ಬಜೆಟ್ನ ಮರ್ಜಿಗೆ ಪರಿವರ್ತನೆ ಮಾಡಲಾಗಿದೆ. ಈ ಕಾಯ್ದೆಯು, ಉದ್ಯೋಗ ಖಾತರಿ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಹಣಕಾಸು ಒದಗಿಸುವ ಕೇಂದ್ರ ಸರ್ಕಾರದ ಯೋಜನೆಯನ್ನಾಗಿ ಪರಿವರ್ತಿಸಿದೆ. ಇದರ ಜೊತೆಗೆ ಸರಿಯಾದ ಸಮಯಕ್ಕೆ ಉದ್ಯೋಗ ನೀಡದಿದ್ದರೆ ನಿರುದ್ಯೋಗ ಭತ್ಯೆಯನ್ನು ನೀಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮೇಲೆ ಹೊರಿಸಿದೆ. ನಿರುದ್ಯೋಗವನ್ನು ಉದ್ಯೋಗ ಖಾತರಿಯಿಂದ ಬಗೆಹರಿಸುವುದಿಲ್ಲ. ಬಡಜನರು ಹಕ್ಕು ಹೊಂದಿದ ನಾಗರಿಕರಾಗುವ ಬದಲು ಸರದಿಗಾಗಿ ಕಾಯುವ ಜನರಾಗುತ್ತಾರೆ. ವಿಕಸಿತ ಭಾರತಕ್ಕೆ ಹಿಂದುತ್ವದ ಲೇಪ ಜನರನ್ನು ಗೊಂದಲದಲ್ಲಿಡಲು ಮತ್ತು ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳಲು ಹಾಗೂ ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಜನರ ಗಮನವನ್ನು ಅನಗತ್ಯ ಧಾರ್ಮಿಕ ವಿವಾದಗಳೆಡೆಗೆ ಸೆಳೆಯಲು ಕಾಯ್ದೆಯ ಹೆಸರಿನಲ್ಲಿ ‘ರಾಮ್ ಜಿ’ ಬರುವಂತೆ ಹೆಸರನ್ನು ಬದಲಿಸಲಾಗಿದೆ. ಅದಕ್ಕಾಗಿ, ಬೇರೆ ಕಾಯ್ದೆಗಳಲ್ಲಿ ಮಾಡುವಂತೆ ಕೇವಲ ತಿದ್ದುಪಡಿಗಳನ್ನು ತರದೆ, ಮಹಾತ್ಮ ಗಾಂಧಿ ಹೆಸರನ್ನು ತೆಗೆದು ಹಾಕಿ ಹೊಸ ಹೆಸರನ್ನು ನೀಡಲಾಗಿದೆ. ಕಲ್ಯಾಣ ಯೋಜನೆಯಲ್ಲಿ ಕಲ್ಯಾಣ ಕೈಬಿಡುವ ಕಾಯ್ದೆಗೆ ಹಿಂದುತ್ವದ ಲೇಪವನ್ನು ಹಚ್ಚಲಾಗಿದೆ. ಆದರೆ ವಾಸ್ತವದಲ್ಲಿ ಇದು ಕಾರ್ಪೊರೆಟ್ ಕಂಪೆನಿಗಳ ಕಲ್ಯಾಣ. ಏಕೆಂದರೆ ಈ ಕಾಯ್ದೆಯಲ್ಲಿ ವಿಕಸಿತ ಭಾರತದ ಹೆಸರು ತಂದಿರುವುದಕ್ಕೆ ಕಾರಣವೆಂದರೆ, ವಿಕಸಿತ ಭಾರತವು ಕಾರ್ಪೊರೆಟ್ ಕಂಪೆನಿಗಳಿಗೆ ನಿರಂತರ ಯಥೇಚ್ಛ ಲಾಭ ಹರಿಯುವುದನ್ನು ಖಚಿತಪಡಿಸಲು ಅವರಿಗೆ ಬೇಕಾದ ಸೌಕರ್ಯಗಳ ವ್ಯವಸ್ಥೆಯನ್ನು ಮಾಡುವುದು; ಅದರಂತೆ ಜಿ ರಾಮ್ ಜಿ ಕಾಯ್ದೆಯನ್ನು ವಿಕಸಿತ ಭಾರತದ ಕನಸಿಗೆ ಪೂರಕವಾಗಿ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯವನ್ನು ರೂಪಿಸುವುದಕ್ಕೆ ತರಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರ ಅಗತ್ಯಗಳಿಗೆ, ಅಲ್ಲಿನ ಅಭಿವೃದ್ಧಿಗೆ ತಕ್ಕಂತೆ ಕಾರ್ಯ ಯೋಜನೆಯನ್ನು ರೂಪಿಸುವುದಿಲ್ಲ. ನರೆಗಾದಡಿಯಲ್ಲಿ ಕೃಷಿ ಕೆಲಸಗಳು, ಶೌಚಾಲಯ, ಮಳೆ ನೀರು ಸಂಗ್ರಹಣೆ, ಕೃಷಿಗೆ ಪೂರಕವಾದ ಸೌಕರ್ಯಗಳು ಸೇರಿದ್ದವು; ಈಗ ಅದಕ್ಕೆ ಎಳ್ಳುನೀರು ಬಿಟ್ಟು ಕಾರ್ಪೊರೆಟ್ ಕಂಪೆನಿಗಳ ಅವಶ್ಯಕತೆಗೆ ತಕ್ಕಂತೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಯಾಗುತ್ತದೆ. ಜೊತೆಗೆ ಕೃಷಿ ಕೆಲಸಗಳು ಉತ್ತುಂಗದಲ್ಲಿರುವಾಗ ಉದ್ಯೋಗ ನಿರಾಕರಣೆಯು ಕೃಷಿ ಕಾರ್ಮಿಕರಿಗೆ ಪೂರಕವಲ್ಲ, ಮಾರಕ. ಏಕೆಂದರೆ ಈ ಕೆಲಸಗಳು ಯೋಜನೆಯಡಿ ಬರುವುದಿಲ್ಲ. ಒಂದು ಕಡೆ ಉದ್ಯೋಗದ ಸೃಷ್ಟಿಯಿಲ್ಲ. ಇನ್ನೊಂದು ಕಡೆ, ಯಂತ್ರ ಬಳಕೆಯಿಂದಾಗಿ ಕೊಯ್ಲಿನ ಸಂದರ್ಭದಲ್ಲಿ ಕೃಷಿ ಕಾರ್ಮಿಕರಿಗೆ ಸರಿಯಾಗಿ ಕೃಷಿ ಕೆಲಸವೂ ದೊರಕುವುದಿಲ್ಲ. ಇಲ್ಲವಾದರೆ ಕಡಿಮೆ ಕೂಲಿಗೆ ಕೆಲಸಕ್ಕೆ ಹೋಗಬೇಕು. ಇದರಿಂದ ದೊಡ್ಡ ಭೂಮಾಲೀಕರಿಗೆ, ಶ್ರೀಮಂತ ರೈತರಿಗೆ ಅನುಕೂಲ. ಹಕ್ಕೊತ್ತಾಯದಿಂದ ಬಜೆಟ್ ಹಂಚಿಕೆಯ ಕಡೆಗೆ ನರೆಗಾದಡಿಯಲ್ಲಿ ನಿರುದ್ಯೋಗವನ್ನು ನಿವಾರಿಸುವ ಜವಾಬ್ದಾರಿ, ಕಡೇ ಪಕ್ಷ ತಾತ್ವಿಕವಾಗಿಯಾದರೂ, ಕೇಂದ್ರ ಸರ್ಕಾರದ್ದಾಗಿತ್ತು. ಬಜೆಟ್ ಹಂಚಿಕೆ ಕಡಿಮೆಯಾದರೂ, ಹಣ ಬರುವುದು ನಿಧಾನವಾದರೂ ಜನರಿಗೆ ಕಾನೂನಿನ ಹಕ್ಕಿತ್ತು. ಜಿ ರಾಮ್ ಜಿ ಕಾಯ್ದೆಯು ಕಾನೂನು ಬದ್ಧತೆಯನ್ನೇ ತೆಗೆದು ಹಾಕಿದೆ. ಇದು ಕೇಂದ್ರ ಸರ್ಕಾರಕ್ಕೆ ಯಾವುದೇ ಕಾನೂನಿನ ಅಥವಾ ಬೆಲೆ ಏರಿಕೆಯ ಮಾನದಂಡವಿಲ್ಲದೆ ವೇತನ ನಿಗದಿಪಡಿಸಲು ಅನಿರ್ಬಂಧಿತ ಅಧಿಕಾರ ನೀಡಿದೆ. ವೇತನ ಪರಿಷ್ಕರಣೆಯ ಗ್ಯಾರಂಟಿಯಿಲ್ಲ. ಹಣದುಬ್ಬರದ ಪರಿಣಾಮಗಳಿಂದ ರಕ್ಷಣೆಯಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣ ನೀಡಿಕೆಯ 60:40 ಅನುಪಾತವು ಯೋಜನೆಯ ಜಾರಿಗೆ ದೊಡ್ಡ ಕಂಟಕವಾಗುತ್ತಿದೆ. ಈಗಾಗಲೇ ಜಿಎಸ್ಟಿ ಕೇಂದ್ರೀಕೃತವಾಗಿರುವುದರಿಂದ, ಕೇಂದ್ರದಿಂದ ಹಣ ವಾಪಸ್ ಬರುವುದರಲ್ಲಿ ವ್ಯತ್ಯಯವಾಗುತ್ತಿದೆ. ಒಂದು ಕಡೆ, ರಾಜ್ಯ ಸರ್ಕಾರದ ಪಾಲು ಕಡಿಮೆಯಾದರೆ, ಇನ್ನೊಂದು ಕಡೆ ಹಣ ವಾಪಸ್ ಬರುವುದು ತೀರಾ ನಿಧಾನವಾಗುತ್ತದೆ. ಆದ್ದರಿಂದ, ರಾಜ್ಯ ಸರ್ಕಾರ ಈಗಾಗಲೇ ಕಲ್ಯಾಣ ಯೋಜನೆಗಳನ್ನು ಕೈಬಿಡುತ್ತಿದೆ. ಇಂತಹ ಸಮಯದಲ್ಲಿ, ಹೊಸದಾಗಿ ಜಿ ರಾಮ್ ಜಿ ಕಾಯ್ದೆಯು ಹೊರಿಸುವ ಹೊರೆಯನ್ನು ರಾಜ್ಯ ಸರ್ಕಾರ ಭರಿಸುವುದಿಲ್ಲ. ಉದ್ಯೋಗ ಖಾತರಿ ಮರೀಚಿಕೆಯಾಗುತ್ತದೆ. ಇಬರಿಬ್ಬರ ಜಗಳದಲ್ಲಿ ಗ್ರಾಮೀಣ ಬಡಜನರು ಬಡವರಾಗುತ್ತಾರೆ. 125 ದಿನಗಳ ಉದ್ಯೋಗ ಖಾತರಿಯ ಮರೀಚಿಕೆ ಜಿ ರಾಮ್ ಜಿ ಕಾಯ್ದೆಯನ್ನು ತರುವಾಗ, ಬಿಜೆಪಿ ಸರ್ಕಾರ ವರ್ಷಕ್ಕೆ 125 ದಿನಗಳ ಉದ್ಯೋಗದ ಭರವಸೆಯನ್ನು ಭಾರಿ ಶಬ್ದದೊಂದಿಗೆ ಪ್ರಚಾರ ಮಾಡಿತು. ಆದರೆ ಬಿಜೆಪಿ ಭರವಸೆ ವಾಸ್ತವವಾಗುತ್ತದೆಯೇ ಅಥವಾ ಅದರ ಹಿಂದಿನ ಭರವಸೆಗಳಂತೆ ಇದೂ ಕೂಡ ಕೇವಲ ಮರೀಚಿಕೆಯಾಗುತ್ತದೆಯೇ ಎನ್ನುವುದು ಮುಖ್ಯ ಪ್ರಶ್ನೆ. ಒಂದು ವರ್ಷದ ಚೌಕಟ್ಟಿನಲ್ಲಿ ನರೆಗಾ ಯೋಜನೆಯಡಿಯಲ್ಲಿಯೇ ಅದು ಅಪರೂಪವಾಗಿ 50 ದಿನಗಳನ್ನು ದಾಟಿದೆ. ಬಜೆಟ್ ಕೊರತೆ, ರಾಜ್ಯ ಸರ್ಕಾರಕ್ಕೆ ಹಣಕಾಸಿನ ಹೊರೆ, ಕೃಷಿ ಕಾಲದಲ್ಲಿ ಉದ್ಯೋಗ ನಿರಾಕರಣೆ, ಕೇಂದ್ರದ ನಿಯಂತ್ರಣ, ಹಕ್ಕಾಗದ ಉದ್ಯೋಗ ಖಾತರಿ – ಇವುಗಳ ಹಿನ್ನೆಲೆಯಲ್ಲಿ ಉದ್ಯೋಗದ ದಿನಗಳು 125 ಕ್ಕೆ ಏರುವುದಿರಲಿ ಹಿಂದಿಗಿಂತಲೂ ಮತ್ತಷ್ಟು ಇಳಿಕೆಯಾಗುವುದು ಖಂಡಿತ. ಸಂಖ್ಯೆಗಳು ನಿಜವಾದ ಉದ್ದೇಶವನ್ನು ಮುಚ್ಚುವ ಮುಸುಕು. ಜಿ ರಾಮ್ ಜಿ ಕಾಯ್ದೆಯ ಹಿಂದಿರುವ ನಿಜವಾದ ಉದ್ದೇಶವೆಂದರೆ, ಯೋಜನೆ ಮತ್ತು ಹಣಕಾಸಿನ ವಿಷಯಗಳ ಮತ್ತಷ್ಟು ಕೇಂದ್ರೀಕರಣ. ಇದು ರಾಜ್ಯ ಸರ್ಕಾರಗಳ ಪಾತ್ರವನ್ನು ತಗ್ಗಿಸುತ್ತಾ ತನ್ನ ಬಿಗಿಹಿಡಿತವನ್ನು ಸಾಧಿಸುತ್ತದೆ. ನಮ್ಮ ದೇಶದಲ್ಲಿ ಆರ್ಥಿಕತೆಯ ಕೇಂದ್ರೀಕರಣ ತೀವ್ರವಾಗುತ್ತದೆ. ಬೆರಳೆಣಿಕೆಯಷ್ಟು ಜನರಲ್ಲಿ ಸಂಪತ್ತು ಕ್ರೋಢೀಕರಣವಾಗಿದೆ. ಪ್ರಾದೇಶಿಕ ಬಂಡವಾಳಿಗರು ಕ್ಷೀಣಿಸುತ್ತಿದ್ದಾರೆ. ಏಕಸ್ವಾಮ್ಯ ಬಂಡವಾಳಿಗರು ವೇಗವಾಗಿ ಬೆಳೆಯುತ್ತಿದ್ದಾರೆ ಇವರ ಹಿತಾಸಕ್ತಿಯನ್ನು ಕಾಪಾಡಬೇಕೆಂದರೆ ಆರ್ಥಿಕತೆಯ ಜೊತೆಗೆ ಅಧಿಕಾರವೂ ಕೇಂದ್ರೀಕೃತವಾಗಬೇಕು. ಇದು ಫ್ಯಾಸೀವಾದದ ಲಕ್ಷಣಗಳು. ಫ್ಯಾಸೀವಾದಿ ಆಡಳಿತ ನಡೆಸದೆ ಇಂದಿನ ಸರ್ಕಾರಗಳಿಗೆ ಬಂಡವಾಳಿಗರ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಿಲ್ಲ. ಆದ್ದರಿಂದಲೇ ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ಸಂಸ್ಥಾಪಕರು ಮತ್ತು ಅಸಾಮಾನ್ಯ ಮಾರ್ಕ್ಸ್ ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್ರವರು ಬಹಳ ಹಿಂದೆಯೇ ಫ್ಯಾಸೀವಾದವು ಮುಂದುವರೆದ ಅಥವಾ ಹಿಂದುಳಿದ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿದೆ ಎಂದು ತೋರಿಸಿದರು. ಅವರು ಹೇಳಿದರು: “ಚಾರಿತ್ರಿಕ ಪರಿಸ್ಥಿತಿಗಳು ಫ್ಯಾಸೀವಾದಕ್ಕೆ ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು ಕೊಡುತ್ತವೆ; ಅವುಗಳು ಫ್ಯಾಸೀವಾದದ ವಿಶಿಷ್ಟ ಗುಣಲಕ್ಷಣಗಳು. ಅವುಗಳು ಮುಖ್ಯವಾಗಿ, ಆರ್ಥಿಕತೆಯ ಕೇಂದ್ರೀಕರಣ, ಪ್ರಭುತ್ವಕ್ಕೆ ಅತ್ಯಧಿಕ ರಾಜಕೀಯ ಅಧಿಕಾರದ ಕೇಂದ್ರೀಕರಣ, ಅತ್ಯಂತ ಬಿಗಿ ಆಡಳಿತ – ಇದೆಲ್ಲವೂ ಪ್ರಭುತ್ವದ ಹಿತಾಸಕ್ತಿಯು ಹೆಚ್ಚು ಏಕಸ್ವಾಮ್ಯಾಧಿಪತಿಗಳ ಹಿತಾಸಕ್ತಿಗೆ ಮತ್ತು ಸಾಂಸ್ಕೃತಿಕ ಅಂಧ-ಚಿಂತನಾಕ್ರಮಕ್ಕೆ ದಾರಿ ಮಾಡಿಕೊಡುತ್ತವೆ.” (ಸಂಗ್ರಹ ಕೃತಿಗಳು, ಸಂಪುಟ-2) ಹೀಗೆ, ಆರ್ಥಿಕ ಹಾಗೂ ರಾಜಕೀಯ ಅಧಿಕಾರಗಳ ಕೇಂದ್ರೀಕರಣದ ಮೂಲಕ ಫ್ಯಾಸಿಸ್ಟ್ ನಿರಂಕುಶಾಡಳಿತವು ದೇಶದ ಮೇಲೆ ತನ್ನ ಬಿಗಿಹಿಡಿತವನ್ನು ಸಾಧಿಸುತ್ತದೆ. ಅದಕ್ಕೆ ಪೂರಕವಾಗಿ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ. ಇದೇ ದುರುದ್ದೇಶದಿಂದ ಬಿಜೆಪಿ ಸರ್ಕಾರವು ಜಿ ರಾಮ್ ಜಿ ಕಾಯ್ದೆಯೂ ಸೇರಿದಂತೆ ಹಲವಾರು ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದೆ.