ಕೇರಳ ತೀವ್ರ ಬಡತನ ಮುಕ್ತ ರಾಜ್ಯ’ - ಸಿಪಿಐ (ಎಂ) ಸರ್ಕಾರದ ಸುಳ್ಳು ಘೋಷಣೆ
‘ಕೇರಳ ತೀವ್ರ ಬಡತನ ಮುಕ್ತ ರಾಜ್ಯ’ – ಸಿಪಿಐ (ಎಂ) ಸರ್ಕಾರದ ಸುಳ್ಳು ಘೋಷಣೆ
ಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರವು 2025ರ ನವೆಂಬರ್ 1ರಂದು, ರಾಜ್ಯವನ್ನು ಅತೀ ಬಡತನದಿಂದ ಮುಕ್ತಗೊಳಿಸಿದ್ದೇವೆ ಎಂದು ಅತ್ಯಂತ ಹೆಮ್ಮೆಯಿಂದ ಘೋಷಿಸಿದೆ. ಸರ್ಕಾರದ ಪ್ರಕಾರ, 2021ರಲ್ಲಿ ‘ಅತೀ ಬಡತನ ನಿರ್ಮೂಲನಾ ಕಾರ್ಯಕ್ರಮ (EPEP)’ ಆರಂಭಿಸುವ ಮೊದಲು 64,006 ಕುಟುಂಬಗಳು ಅತಿ ದಾರಿದ್ರ್ಯದಲ್ಲಿದ್ದು, ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಸಮೀಕ್ಷೆಯ ಆಧಾರದ ಮೇಲೆ ಗುರುತಿಸಲ್ಪಟ್ಟ ಈ ಕುಟುಂಬಗಳನ್ನು ವಿವಿಧ ಕಲ್ಯಾಣ ಯೋಜನೆಗಳ ಮೂಲಕ ಮೇಲಕ್ಕೆತ್ತಲಾಗಿದೆ.
ಆದರೆ ಈ ಘೋಷಣೆಯನ್ನು ಪರಿಶೀಲಿಸಿದರೆ ಅದು ವಾಸ್ತವಕ್ಕೆ ವಿರುದ್ಧವಾಗಿದೆ. ವಿಶ್ವ ಬ್ಯಾಂಕ್ ಪ್ರಕಾರ ದಿನಕ್ಕೆ $2.15 (ಸುಮಾರು ರೂ.193) ಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಅತಿ ಬಡವರು. ಭಾರತ ಸರ್ಕಾರದ ಮಾನದಂಡವು ಇದಕ್ಕಿಂತಲೂ ಕಡಿಮೆ – ದಿನಕ್ಕೆ $1.25 (ಸುಮಾರು ರೂ.112.50). ಇನ್ನೊಂದು ಮಾನದಂಡವಾದ ಕ್ಯಾಲೊರಿ ಸೇವನೆ ಪ್ರಕಾರ, ಪುರುಷರಿಗೆ ದಿನಕ್ಕೆ 2400 ಮತ್ತು ಮಹಿಳೆಯರಿಗೆ 2100 ಕ್ಯಾಲೊರಿಗಿಂತ ಕಡಿಮೆ ಆಹಾರ ಸೇವನೆಯಿದ್ದರೆ ಅವರು ದಾರಿದ್ರ್ಯರೇಖೆಗಿಂತ ಕೆಳಗಿರುವವರು. ಆದರೆ ದಿನಕ್ಕೆ ರೂ.200 ಗಳಿಸುವ ಸಾಮಾನ್ಯ ಕಾರ್ಮಿಕನಿಗೂ ಇಷ್ಟು ಕ್ಯಾಲೊರಿ ಆಹಾರ ಪಡೆಯುವುದು ಅಸಾಧ್ಯ. ಈ ಆದಾಯ ಆಧಾರಿತ ಮತ್ತು ಆಹಾರ ಆಧಾರಿತ ಮಾನದಂಡಗಳ ನಡುವಿನ ಈ ಭಾರೀ ಅಂತರವೇ ಸರ್ಕಾರದ ಘೋಷಣೆಯ ಬಲಹೀನತೆಯನ್ನು ಬಹಿರಂಗಪಡಿಸುತ್ತದೆ.
ಸರ್ಕಾರದ ಹೇಳಿಕೆಗೆ ವಿರುದ್ಧವಾಗಿ, ಅಧಿಕೃತ ದಾಖಲೆಗಳೇ ಅತೀ ಬಡತನ ವ್ಯಾಪಕವಾಗಿರುವುದನ್ನು ತೋರಿಸುತ್ತವೆ. 2024ರ ಸೆಪ್ಟೆಂಬರ್ನಲ್ಲಿ ಸಚಿವ ಜಿ.ಆರ್. ಅನಿಲ್ ಅವರು ವಿಧಾನಸಭೆಗೆ ನೀಡಿದ ಲಿಖಿತ ಉತ್ತರದ ಪ್ರಕಾರ, 5,91,194 ಅತಿ ಬಡ ವ್ಯಕ್ತಿಗಳಿಗೆ ಅಂತ್ಯೋದಯ ಅನ್ನ ಯೋಜನೆ (ಎಎವೈ) ಕಾರ್ಡ್ ನೀಡಲಾಗಿದೆ. ಕೇರಳದಲ್ಲಿ ಸುಮಾರು 4.5 ಲಕ್ಷ ಆದಿವಾಸಿ ಮತ್ತು ಬುಡಕಟ್ಟು ಜನರು ತೀವ್ರ ದಾರಿದ್ರ್ಯದಲ್ಲಿ ಬದುಕುತ್ತಿದ್ದಾರೆ. 2022ರ ಅಧ್ಯಯನದ ಪ್ರಕಾರ ವಯನಾಡ್ ಜಿಲ್ಲೆಯಲ್ಲಿ ಐದು ವರ್ಷದೊಳಗಿನ 54.8% ಮಕ್ಕಳು ಗಂಭೀರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಟ್ಟಪ್ಪಾಡಿಯಲ್ಲಿ 48 ಮಕ್ಕಳ ತೂಕ ಕಮ್ಮಿಯಾಗಿದ್ದು, 40% ಮಕ್ಕಳು ಬೆಳವಣಿಗೆಯಲ್ಲಿ ಕುಂಠಿತಗೊಂಡಿದ್ದಾರೆ. ಅಲ್ಲದೆ 91% ಮಕ್ಕಳು, 96% ಕಿಶೋರಿಯರು ಮತ್ತು 80% ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
ತೋಟಗಳಲ್ಲಿನ ಕಾರ್ಮಿಕರು, ಮೀನುಗಾರರು ಮತ್ತಿತರ ಯೋಜನಾ ಕಾರ್ಮಿಕರ ಸ್ಥಿತಿಯೇನೂ ಭಿನ್ನವಾಗಿಲ್ಲ. ನಬಾರ್ಡ್ ಸಮೀಕ್ಷೆಯ ಪ್ರಕಾರ, ಕೇರಳದ 65% ಜನರು ಗೌರವಯುತ ಜೀವನ ನಡೆಸಲು ಸಾಕಾಗುವಷ್ಟು ಆದಾಯ ಹೊಂದಿಲ್ಲ. ಆದರೂ ಸರ್ಕಾರ ಇವರನ್ನು “ಅತಿದಾರಿದ್ರ್ಯರು” ಎಂದು ಪರಿಗಣಿಸದೇ, ಕೇವಲ “ಬಡವರು” ಎಂದು ಗುರುತಿಸುತ್ತದೆ. ಸರ್ಕಾರ ರೂಪಿಸಿರುವ ಅತೀ ಕಠಿಣ ಮಾನದಂಡಗಳ ಪ್ರಕಾರ, ಸಂಪೂರ್ಣ ಆದಾಯವಿಲ್ಲದವರು, ದಿನಕ್ಕೆ ಎರಡು ಊಟವೂ ಸಾಧ್ಯವಾಗದವರು ಅಥವಾ ಸಂಪೂರ್ಣ ಆರೋಗ್ಯ ಹದಗೆಟ್ಟವರು ಮಾತ್ರ ಅತಿ ದಾರಿದ್ರ್ಯರು. ಹಾಗಾದರೆ ದಿನಕ್ಕೆ ಒಂದು ಊಟ ಮಾತ್ರ ಸಾಧ್ಯವಾಗುವವರು ಯಾವ ವರ್ಗಕ್ಕೆ ಸೇರುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ವಾಸ್ತವದಲ್ಲಿ, ಸರ್ಕಾರ ತೀವ್ರ ಬಡತನದ ವ್ಯಾಖ್ಯಾನವನ್ನು ಕಿರಿದುಗೊಳಿಸುವ ಮೂಲಕ ಅತೀ ಬಡವರ ಸಂಖ್ಯೆಯನ್ನು ಕೃತಕವಾಗಿ ಕಡಿಮೆ ಮಾಡಿದೆ. AAY ಕಾರ್ಡುದಾರರಿಗೆ ನೀಡಲಾಗುವ 35 ಕೆ.ಜಿ. ಧಾನ್ಯ ಅವರ ದಯನೀಯ ಜೀವನ ಸ್ಥಿತಿಯನ್ನು ಬದಲಾಯಿಸುವುದಿಲ್ಲ. ತಿಂಗಳಿಗೆ ಒಮ್ಮೆ ನೀಡುವ ಆಹಾರ ಧಾನ್ಯ ಕಿಟ್ಗಳೂ ಬಹುಸಲ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಮಾತ್ರ ತಲುಪುತ್ತವೆ. ಹೀಗಾದರೆ ಈ ಘೋಷಣೆ ಕ್ರೂರ ವ್ಯಂಗ್ಯವಲ್ಲವೇ? ಈ ಘೋಷಣೆಯ ಪರಿಣಾಮವಾಗಿ ಕೇಂದ್ರ ಸರ್ಕಾರದ ರೇಷನ್ ಸೌಲಭ್ಯಗಳು ಹಿಂಪಡೆಯಲ್ಪಟ್ಟರೆ ಪರಿಣಾಮ ಗಂಭೀರವಾಗಲಿದೆ. ಎಲ್.ಡಿ.ಎಫ್. ಸರ್ಕಾರ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ವಿಸರ್ಜಿಸಲು ದಾರಿ ಮಾಡಿಕೊಡುತ್ತಿದೆಯೇ?
ಈ ಸುಳ್ಳು ಸಾಧನೆಯನ್ನು ದಿನನಿತ್ಯವೂ ಭಾರೀ ವೈಭವದಿಂದ ಪ್ರಚಾರ ನಡೆಸಲಾಗುತ್ತಿದೆ. ಸುಮಾರು ರೂ.1.5 ಕೋಟಿ ವೆಚ್ಚ ಮಾಡಿ ಜಾಹೀರಾತು ಮಾಡಲಾಗಿದ್ದು, ಈ ಹಣವನ್ನು ಆಶ್ರಯ ಮನೆ ನಿರ್ಮಾಣಕ್ಕೆ ಮೀಸಲಿಟ್ಟ ನಿಧಿಯಿಂದಲೇ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಬೆರಳೆಣಿಕೆಯಷ್ಟು ಅತಿ ಶ್ರೀಮಂತರಿಂದ ಸುತ್ತುವರಿಯಲ್ಪಟ್ಟ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಬದುಕುಳಿಯಲು ಕನಿಷ್ಠ ಆಹಾರವಿಲ್ಲದ ಸಾವಿರಾರು ಬಡ ಜನರ ಮುಂದೆ ‘ಕೇರಳ ಅತಿ ದಾರಿದ್ರ್ಯ ಮುಕ್ತ ರಾಜ್ಯ’ವೆಂದು ಘೋಷಿಸಿರುವುದು ಒಂದು ದೊಡ್ಡ ಅಪಹಾಸ್ಯದಂತೆ ಕಾಣುತ್ತಿದೆ. ಅತಿ ಶ್ರೀಮಂತರ ಮೇಲೆ ಒಲವು ತೋರುವ, ಅವರಿಗಾಗಿ ಸಮಾವೇಶಗಳನ್ನು ಆಯೋಜಿಸುವ ಯೂಸುಫ್ ಅಲಿಯಂತಹ ಕಾರ್ಪೊರೇಟ್ ಉದ್ಯಮಿಯನ್ನು ರಾಜ್ಯದ ಬ್ರಾಂಡ್ ರಾಯಭಾರಿಯನ್ನಾಗಿ ನೇಮಿಸುವ ಸರ್ಕಾರದಿಂದ ಇನ್ನೇನು ತಾನೇ ನಿರೀಕ್ಷಿಸಬಹುದು?
ಸರ್ಕಾರ, ಕೇರಳವನ್ನು ಶ್ರೀಮಂತ ರಾಜ್ಯವೆಂದು ತಪ್ಪಾಗಿ ಚಿತ್ರಿಸಲು ಯತ್ನಿಸಿದೆ. ಇಂತಹ ಘೋಷಣೆಗಳು ಚುನಾವಣಾ ಪೂರ್ವ ರಾಜಕೀಯ ಲಾಭಕ್ಕಾಗಿ ಮಾಡಲ್ಪಟ್ಟವು ಎಂದು ಕಾಣುತ್ತಿದೆ. ಇತ್ತೀಚಿನ ನಗರಸಭಾ ಚುನಾವಣೆಗಳಲ್ಲಿ ಸಿಪಿಐ(ಎಂ) ಸೋಲುಂಡಿರುವುದರಿಂದ, ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಸತ್ಯವನ್ನು ಮುಚ್ಚಿಡುವ ಪ್ರಯತ್ನ ನಡೆಸುತ್ತಿದೆ. ಇದು ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರೆ ಬಂಡವಾಳಶಾಹಿ ಸರ್ಕಾರಗಳಿಗಿಂತ ಯಾವ ರೀತಿಯಲ್ಲಿಯೂ ಭಿನ್ನವಾಗಿಲ್ಲ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿಯೂ ಕೇರಳ ಅಪಾರ ಪ್ರಗತಿ ಕಂಡಿದೆ ಎಂಬ ಸರ್ಕಾರದ ಹೇಳಿಕೆ ಜನರ ದೈನಂದಿನ ಅನುಭವಗಳಿಗೆ ವಿರುದ್ಧವಾಗಿದೆ. 201 ಶಾಲೆಗಳು ಮುಚ್ಚಲ್ಪಟ್ಟಿವೆ, 70%ಕ್ಕೂ ಹೆಚ್ಚು ಕಾಲೇಜುಗಳು ಖಾಸಗಿ ವಲಯದ ನಿಯಂತ್ರಣದಲ್ಲಿವೆ. ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಖಾಸಗೀಕರಣಗೊಳಿಸುವುದರೆಡೆಗೆ ಒತ್ತು ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಜನರು ತಮ್ಮ ಜೇಬಿನಿಂದ ಹೆಚ್ಚು ವೆಚ್ಚ ಭರಿಸಬೇಕಾದ ಸಂಕಷ್ಟದಲ್ಲಿದ್ದಾರೆ.
ಪಿಣರಾಯಿ ವಿಜಯನ್ರವರು ಬಡತನ ಮುಕ್ತ ರಾಜ್ಯ ‘ಸಾಮೂಹಿಕ ಇಚ್ಛಾಶಕ್ತಿಯ ಫಲ’ ಮತ್ತು ‘ನವ ಕೇರಳ’ ಯೋಜನೆಯ ಗುರಿ ಅಭಿವೃದ್ಧಿಶೀಲ ರಾಷ್ಟ್ರಗಳ ಜೀವನಮಟ್ಟವನ್ನು ತಲುಪುವುದೆಂದು ಹೇಳಿದ್ದಾರೆ. ಅವರ ಪ್ರಕಾರ, ಕೇರಳ ಅನೇಕ ವಿಷಯಗಳಲ್ಲಿ ಅಮೆರಿಕಕ್ಕಿಂತಲೂ ಮುಂದಿದೆ. ತಮ್ಮದು “ಸಮಾನತಾವಾದಿ ಅಭಿವೃದ್ಧಿ ಮಾದರಿ”ಎಂದು ಸಮರ್ಥಿಸಿಕೊಂಡಿದ್ದಾರೆ. ಸರ್ಕಾರದ ಸುಧಾರಣೆಗಳಿಂದ ಬಂಡವಾಳಶಾಹಿ ಸಮಾಜದೊಳಗೇ ಸಮಾನತೆ ತರಬಹುದೆಂದೂ ಹೇಳಿದ್ದಾರೆ. ಆದರೆ ಮಾರ್ಕ್ಸ್, ಎಂಗೆಲ್ಸ್ ಮತ್ತು ಲೆನಿನ್ ಪ್ರಕಾರ ಅದು ಸಾಧ್ಯವಿಲ್ಲ. ಮಹಾನ್ ಮಾರ್ಕ್ಸ್ರವರು, ಬಂಡವಾಳಶಾಹಿ ರಾಜ್ಯವನ್ನು ಬಂಡವಾಳಶಾಹಿ ಆರ್ಥಿಕ ಹಿತಾಸಕ್ತಿಗಳ ಉತ್ಪನ್ನವೆಂದು ವಿವರಿಸಿದ್ದಾರೆ. ಹೀಗಿರುವಾಗ, ಬಂಡವಾಳಶಾಹಿ ವ್ಯವಸ್ಥೆಯೊಳಗೇ ಸುಧಾರಣೆಗಳ ಮೂಲಕ ಬಡತನ ನಿರ್ಮೂಲನೆ ಸಾಧ್ಯವೆಂಬ ಭ್ರಮೆಯನ್ನು ಸೃಷ್ಟಿಸುವುದು ಮಾರ್ಕ್ಸ್-ಲೆನಿನ್ ತತ್ವಗಳಿಗೆ ಸಂಪೂರ್ಣ ವಿರೋಧವಾಗಿದೆ.