ಸರ್ಕಾರಿ ಶಾಲೆಗಳ ಧ್ವಂಸಕ್ಕಾಗಿ ಕೆ.ಪಿ.ಎಸ್ ಮ್ಯಾಗ್ನೆಟ್ ಯೋಜನೆ!
ಏನಿದು ಕೆ.ಪಿ.ಎಸ್ ಮ್ಯಾಗ್ನೆಟ್ ಯೋಜನೆ?
ಹೆಸರು ಹೊಸದಿರಬಹುದು, ಆದರೆ ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಸರ್ಕಾರಿ ಶಾಲೆಗಳ ವಿಲೀನ ಯೋಜನೆಗೂ ಹಾಗೂ ಪ್ರಸಕ್ತ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿದ್ದ ‘ಹಬ್ ಅಂಡ್ ಸ್ಪೋಕ್’ ಮಾದರಿಗೂ ಏನೂ ವ್ಯತ್ಯಾಸವಿಲ್ಲ. ಸಾರ್ವಜನಿಕ ಒತ್ತಡಕ್ಕೆ ಮಣಿದು ಪ್ರತಿ ಬಾರಿಯೂ ಹಿಂಪಡೆದಿದ್ದ ಯೋಜನೆಗಳಿಗೆ ಈಗ ‘ಕೆ.ಪಿ.ಎಸ್ ಮ್ಯಾಗ್ನೆಟ್ ಶಾಲೆ’ ಎಂಬ ಹೊಸ ಹೆಸರಿಟ್ಟು ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಲಸಕ್ಕೆ ಸರ್ಕಾರವು ಅಸ್ತು ಎಂದಿದೆ.
ಸರ್ಕಾರದ ಆದೇಶ ಏನೆನ್ನುತ್ತದೆ?
1‘ಸಣ್ಣ ಗಾತ್ರದ ಶಾಲೆಗಳನ್ನು ಸಂಭಾವ್ಯ KPS ಶಾಲೆಗಳ ಆಯ್ಕೆಯಲ್ಲಿ ಸಮ್ಮಿಳಿತಗೊಳಿಸಿ, ಶಾಲಾ ಏಕೀಕರಣ ಪ್ರಕ್ರಿಯೆಗೆ ಆದ್ಯತೆ ನೀಡಬೇಕು’, ಎಂದು. ಸಣ್ಣ ಗಾತ್ರದ ಶಾಲೆಗಳ ಸಮಸ್ಯೆಗಳನ್ನು ಪರಿಹರಿಸಲು ಶಿಕ್ಷಣ ಇಲಾಖೆಯು ಕನಿಷ್ಠವೆಂದರೆ 1200 ವಿದ್ಯಾರ್ಥಿಗಳ ಸಾಮರ್ಥ್ಯದೊಂದಿಗೆ ಸಂಯುಕ್ತ ಹಾಗೂ ಸಂಪನ್ಮೂಲ ಶಾಲೆಗಳಾಗಿ ಕೆ.ಪಿ.ಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
2. 3 ರಿಂದ 5 ಕಿ.ಮೀ. ವ್ಯಾಪ್ತಿಯೊಳಗಿನ ಸಣ್ಣ ಗಾತ್ರದ ಶಾಲೆಗಳನ್ನು ಆಯ್ದ ಮ್ಯಾಗ್ನೆಟ್ ಶಾಲೆಗೆ ಜೋಡಿಸುವ ಸಂಭಾವ್ಯ ಶಾಲೆಗಳನ್ನು ಗುರುತಿಸಲಾಗಿದೆ.
3. 3 ರಿಂದ 5 ಕಿ.ಮೀ. ವ್ಯಾಪ್ತಿಯ ಒಳಗಿನ ಸಣ್ಣ ಸರ್ಕಾರಿ ಶಾಲೆಗಳನ್ನು ಪ್ರಸ್ತಾಪಿತ ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಗಳೊಂದಿಗೆ ಸಮ್ಮಿಳಿತಗೊಳಿಸುವುದು. (ಅಂದರೆ, ಒಂದು ಕೆಪಿಎಸ್ ಮ್ಯಾಗ್ನೆಟ್ ಶಾಲೆಯ ಸುತ್ತಮುತ್ತಲಿನ 8 ರಿಂದ 10 ಸರ್ಕಾರಿ ಶಾಲೆಗಳು ಶಾಶ್ವತವಾಗಿ ಮುಚ್ಚುತ್ತವೆ)
ಈ ಆದೇಶದಲ್ಲಿ ಉಲ್ಲೇಖವಾಗಿರುವ ‘ಸಣ್ಣ ಗಾತ್ರದ ಶಾಲೆ, ಚಿಕ್ಕ ಶಾಲೆ’ ಎಂಬ ಶಬ್ದಗಳ ಅರ್ಥವನ್ನು ಹುಡುಕಿದರೆ ಆಘಾತವಾಗುತ್ತದೆ. ಉದಾ: ಚನ್ನಪಟ್ಟಣ ಜಿಲ್ಲೆಯ ಹೊಂಗನೂರು ಕೆಪಿಎಸ್ ಶಾಲೆಗೆ ವಿಲೀನವಾದ 7 ಶಾಲೆಗಳಲ್ಲಿ, ಒಂದು ಶಾಲೆಯಲ್ಲಿ 100 ಮಕ್ಕಳಿದ್ದಾರೆ. ಉಳಿದ ಶಾಲೆಗಳಲ್ಲಿ 82,80,77,31,20,2 ಮಕ್ಕಳಿದ್ದಾರೆ. 80-100 ಮಕ್ಕಳಿರುವ ಶಾಲೆಗಳು ಸಣ್ಣ ಗಾತ್ರದ ಶಾಲೆಗಳೇ? ಕಲಬುರಗಿ, ಯಾದಗಿರಿ, ಬೆಳಗಾವಿ ಜಿಲ್ಲೆಗಳಲ್ಲಿ 150-200ಮಕ್ಕಳಿರುವ, 70-80 ವರ್ಷದ ಹಳೆಯ ಶಾಲೆಗಳು ಮುಚ್ಚುವ ಶಾಲೆಗಳ ಪಟ್ಟಿಯಲ್ಲಿವೆ! ‘ಒಂದು ಮಗುವಿದ್ದರೂ ಶಾಲೆ ಮುಚ್ಚುವುದಿಲ್ಲ’ ಎಂಬ ಸಚಿವರ ಹೇಳಿಕೆಗೂ, ಅವರ ಇಲಾಖೆಯಿಂದಲೇ ಹೊರಡಿಸಲಾದ ಆದೇಶಕ್ಕೂ ತಾಳಮೇಳವಿಲ್ಲ! ವಿಲೀನಗೊಳಿಸಲಾಗುವ ಶಾಲೆಗಳ ಶಿಕ್ಷಕರನ್ನು ವರ್ಗಾವಣೆ ಮಾಡುವ ನಿರ್ದೇಶನವೂ ಈ ಆದೇಶದಲ್ಲಿದೆ!
ಕೆಪಿಎಸ್ ಶಾಲೆಗಳಿಗಾಗಿ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್(ಎಡಿಬಿ)ಯಿಂದ ರೂ.2,500 ಕೋಟಿ ಸಾಲವನ್ನು ಸರ್ಕಾರವು ಈಗಾಗಲೇ ಪಡೆದಿದೆ. ಈ ಹಣವನ್ನು ಪಡೆಯಲು ಯಾವಯಾವ ಷರತ್ತುಗಳಿಗೆ ರಾಜ್ಯ ಸರ್ಕಾರ ಸಹಿ ಹಾಕಿದೆ ಎಂಬ ಪ್ರಶ್ನೆಯ ಬಗ್ಗೆ ರಾಜ್ಯ ಸರ್ಕಾರವು ಮುಗುಮ್ಮಾಗಿದೆ, ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸುತ್ತಿಲ್ಲ. ಈ ಬೃಹತ್ ಸಾಲ ಹಾಗೂ ಬಡ್ಡಿಯನ್ನು ಮುಂದೆ ಜನರೇ ತೀರಿಸಬೇಕಾಗುತ್ತದೆಯಲ್ಲವೇ! ಕಲ್ಯಾಣ ಕರ್ನಾಟಕ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ 200 ಕೆಪಿಎಸ್ ಶಾಲೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಹೆಚ್ಚುವರಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶಾಲಾ ಶಿಕ್ಷಣ ಇಲಾಖೆಗೆ ಅಧಿಕಾರ ನೀಡಲಾಗಿದೆಯಂತೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಮೀಸಲಿಟ್ಟ ದುಡ್ಡನ್ನೂ ಕಬಳಿಸುವ ಹುನ್ನಾರ ಇದು. ಅಭಿವೃದ್ಧಿಯ ಹಣವನ್ನು ‘ಅತ್ಯಂತ ಹಿಂದುಳಿದ ಪ್ರದೇಶದ’ ಸುಮಾರು 2000 ಶಾಲೆಗಳನ್ನು ಮುಚ್ಚಲು ಬಳಸಲಾಗುತ್ತಿದೆ. ಇಷ್ಟೂ ಸಾಲದ್ದಕ್ಕೆ ಕೆಪಿಎಸ್ ಶಾಲೆಗಳ ಹೊಸ ಕಟ್ಟಡಗಳಿಗಾಗಿ ಸರ್ಕಾರವು ಖಾಸಗಿ ಕಂಪನಿಗಳತ್ತ ಕೈಚಾಚಿದೆ. 6 ನೇ ತರಗತಿಯಿಂದ ನೀಡಲಾಗುವ ವೃತ್ತಿಪರ ಶಿಕ್ಷಣದ ಪಠ್ಯಕ್ರಮವನ್ನೂ ಸಹ ‘ಉದ್ಯಮ ಪಾಲುದಾರರ’ ಸಹಾಯದಿಂದ ವಿನ್ಯಾಸಗೊಳಿಸಲಾಗುವುದಂತೆ. ‘ಶಾಲಾ ನಿರ್ವಹಣೆ ಹೊರಗುತ್ತಿಗೆ’ಗೆ, ಶಾಲೆಗಳು ತಮ್ಮ ಸ್ವಂತ ಮೂಲದಿಂದ ಆದಾಯವನ್ನು ಸಂಗ್ರಹಿಸಬೇಕಂತೆ. ಕೆ.ಪಿ.ಎಸ್ ಮ್ಯಾಗ್ನೆಟ್ ಶಾಲೆಗಳನ್ನು ಕ್ರಮೇಣವಾಗಿ ಖಾಸಗಿ ಕಂಪನಿಗಳಿಗೆ ಪರಭಾರೆ ಮಾಡುವ ಸಂಚು ಸ್ಪಷ್ಟವಾಗಿ ಕಾಣುವುದಲ್ಲವೇ!
ಕೆಪಿಎಸ್ ಶಾಲೆಗೆ ಮಕ್ಕಳನ್ನು ಕರೆತರಲು ಉಚಿತ ಬಸ್ ಸೌಲಭ್ಯ ಒದಗಿಸಲಾಗುವುದೆಂದು ಸರ್ಕಾರದ ಆದೇಶವಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ, ಬಸ್ ವ್ಯವಸ್ಥೆಯನ್ನು ಮಾಡುವ ಜವಾಬ್ದಾರಿಯನ್ನು ಎಸ್‌ಡಿಎಮ್‌ಸಿಗಳಿಗೆ ಸರ್ಕಾರವು ವಹಿಸಿದೆ. ಇದೇ ವಿರೋಧಾಭಾಸ! ರಾಜ್ಯದಲ್ಲಿ ಬಹುತೇಕ ಹಳ್ಳಿಗಳಿಗೆ ಸಮರ್ಪಕ ಬಸ್ ಸೌಲಭ್ಯಗಳೇ ಇಲ್ಲದಿರುವಾಗ, ಹಳ್ಳಿಹಳ್ಳಿಗಳಿಂದ ಮಕ್ಕಳನ್ನು ಕೆಪಿಎಸ್ ಶಾಲೆಗೆ ಕರೆದೊಯ್ಯಲು ಬೇಕಾಗುವ ಸಾವಿರಾರು ಬಸ್‌ಗಳ ಪೂರೈಕೆಯಾದರೋ ಹೇಗೆ?
ಅಮೇರಿಕದಲ್ಲಿ ವಿಫಲವಾಗಿ ತಿರಸ್ಕೃತವಾಗಿರುವ “ಮ್ಯಾಗ್ನೆಟ್ ಶಾಲೆ ಯೋಜನೆ”ಯ ಜಾರಿ ನಮ್ಮ ರಾಜ್ಯದಲ್ಲಿ…
ಶೈಕ್ಷಣಿಕ ಜಿಲ್ಲೆಗೊಂದು “ಮ್ಯಾಗ್ನೆಟ್ ಶಾಲೆ”ಯನ್ನು ಅಮೇರಿಕದಲ್ಲಿ 50 ವರ್ಷಗಳ ಹಿಂದೆ ಜಾರಿಗೆ ತರಲಾಯಿತು. ಅಲ್ಲಿ ವಿಫಲವಾದ “ಮ್ಯಾಗ್ನೆಟ್ ಶಾಲೆ ಯೋಜನೆಯ” ದುರಂತ ಅನುಕರಣೆಯೇ ಕರ್ನಾಟಕದ “ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳು” ಎಂಬ ಅತ್ಯಂತ ಆಘಾತಕಾರಿ ವಿಚಾರ ಗೌಪ್ಯವಾಗೇನೂ ಉಳಿದಿಲ್ಲ. ಅಮೇರಿಕದ ಅನುಭವವೇನೆಂದರೆ, ಅಲ್ಲಿ, ನೆರೆಹೊರೆಯ ಶಾಲೆಗಳು ಮುಚ್ಚಿ ಹೋದವು, ದೂರದ ಮ್ಯಾಗ್ನೆಟ್ ಶಾಲೆಗಳಿಗೆ ಹೋಗಿಬರುವ ಸಾರಿಗೆ ವೆಚ್ಚವನ್ನು ಭರಿಸುವುದು ಸಹಸ್ರಾರು ಬಡ ಕುಟುಂಬಗಳಿಗೆ ಅಸಾಧ್ಯವಾಯಿತು. ಹೀಗಾಗಿ, ಬಡಜನರು, ಕಪ್ಪುಜನರು, ಲ್ಯಾಟಿನ್ ಅಮೇರಿಕನ್ನರು ಮತ್ತು ದುಡಿಯುವ ಜನರ ಕುಟುಂಬಗಳಿಗೆ ಸೇರಿದ ಮಕ್ಕಳು ಕ್ರಮೇಣ ಶಿಕ್ಷಣದಿಂದ ವಂಚಿತರಾದರು. ನಂತರ, ಮ್ಯಾಗ್ನೆಟ್ ಶಾಲೆಗಳಿಗೆ ಧನಸಹಾಯ ನೀಡುವ ಜವಾಬ್ದಾರಿಯಿಂದ ಸರ್ಕಾರ ಕೈ ತೊಳೆದುಕೊಂಡಿತು ಮತ್ತು ಆಗ ಮ್ಯಾಗ್ನೆಟ್ ಶಾಲೆಗಳ ನಿರ್ವಹಣೆಯನ್ನು ಕಾರ್ಪೊರೇಟ್ ಉದ್ಯಮಪತಿಗಳಿಗೆ ವಹಿಸಲಾಯಿತು. ಈ ಶಾಲೆಗಳು ಈಗ, ದುಬಾರಿ ಶುಲ್ಕಗಳನ್ನು ಸಂಗ್ರಹಿಸುವ ಹಣವುಳ್ಳವರ ಶಾಲೆಗಳಾಗಿವೆ!
ಸಾರ್ವಜನಿಕ ಶಿಕ್ಷಣವನ್ನು ಧ್ವಂಸ ಮಾಡಿರುವ ಇತಿಹಾಸವುಳ್ಳ ಅಮೇರಿಕದ “ಮ್ಯಾಗ್ನೆಟ್ ಶಾಲೆ ಯೋಜನೆ” ಯನ್ನು ಕರ್ನಾಟಕದಲ್ಲಿ ಏಕೆ ಯಥಾವತ್ತಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ? ಒಟ್ಟಾರೆಯಾಗಿ, ಕೆಪಿಎಸ್ ಶಾಲೆಯ ಮೂಲಕ ಸಾರ್ವತ್ರಿಕ ಶಿಕ್ಷಣದ ಹರಣವಾಗುತ್ತಿದೆಯಲ್ಲವೇ! ಇದಕ್ಕೆ ಹೊಂದಿಕೊಂಡೇ ಸರ್ಕಾರವು ಕುತರ್ಕವೊಂದನ್ನು ಪ್ರಚಾರ ಮಾಡುತ್ತಿದೆ. ಅದೆಂದರೆ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯಲು ಕಾರಣವೇನು?
ಶಾಲೆಗಳ ವಾಸ್ತವ ಚಿತ್ರಣವು ಹೀಗಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 59000ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ರಾಜ್ಯದ 7000 ಸರ್ಕಾರಿ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ. ಶಾಲೆಯ ಮಕ್ಕಳಿಗೆ ಮೊಟ್ಟೆ ತರುವ, ಬಿಸಿ ಊಟಕ್ಕೆ ತರಕಾರಿ ತರುವ, ಪ್ರತಿನಿತ್ಯ ಮಾಡಿದ ಎಲ್ಲ ಕೆಲಸಗಳ ದಾಖಲೆಗಳನ್ನು ಬರೆಯುವ ಹಾಗೂ ಇಲಾಖೆಯ ಹತ್ತು ಹಲವಾರು ಆಡಳಿತಾತ್ಮಕ ಕೆಲಸಗಳನ್ನು ಶಾಲೆಯ ಶಿಕ್ಷಕರು ನಿರ್ವಹಿಸುತ್ತಾರೆ. ಅಂದರೆ, ಬೋಧನೆಯನ್ನು ಬಿಟ್ಟು ನಿಜಕ್ಕೂ 108 ಪಠ್ಯೇತರ ಕೆಲಸಗಳನ್ನು ಶಿಕ್ಷಕರು ಮಾಡುತ್ತಿದ್ದಾರೆ. ಇನ್ನು ಗುತ್ತಿಗೆ ಆಧಾರದಲ್ಲಿ ನೇಮಕಗೊಳ್ಳುವ ಶಿಕ್ಷಕರ ಜೀವನ ನಿರ್ವಹಣೆಯೇ ಕಷ್ಟಕರವಾಗಿರುವಾಗ ಗುಣಮಟ್ಟದ ಬೋಧನೆಯನ್ನು ಅವರಿಂದ ಬಯಸುವುದು ಸಾಧ್ಯವೇ? ರಾಜ್ಯದ 21000 ಕ್ಕೂ ಅಧಿಕ ಸರ್ಕಾರಿ ಶಾಲೆಗಳ ಕಟ್ಟಡಗಳು ದುರಸ್ತಿಗಾಗಿ ವರ್ಷಗಳಿಂದ ಕಾಯುತ್ತಿವೆ. 3500ಕ್ಕೂ ಅಧಿಕ ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಾಲಯವಿಲ್ಲ, 1000ಕ್ಕೂ ಅಧಿಕ ಶಾಲೆಗಳಲ್ಲಿ ಯೋಗ್ಯ ವಿದ್ಯುತ್ ಸೌಲಭ್ಯವಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿರುವ ನಮ್ಮೂರ ಶಾಲೆಗಳು ಪೋಷಕರ ಹೃದಯದಲ್ಲಿ ನಡುಕ ಹುಟ್ಟಿಸುತ್ತವೆ. ತಮ್ಮ ಮಕ್ಕಳ ಶಿಕ್ಷಣ ಹಾಗೂ ಭವಿಷ್ಯದ ಬಗೆಗಿನ ಆತಂಕದಿಂದಾಗಿ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಅಂಜುತ್ತಾರೆ. ಬೇರೆ ನಿರ್ವಾಹವಿಲ್ಲದೆ ಹೊಟ್ಟೆಬಟ್ಟೆ ಕಟ್ಟಿ ಪೋಷಕರು ತಮ್ಮ ಮಕ್ಕಳನ್ನು ಹತ್ತಿರದ ಖಾಸಗಿ ಶಾಲೆಗೆ ಸೇರಿಸಿದರೆ, ಬಡ ಕೂಲಿಕಾರರು, ರೈತರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ದುಡಿಮೆ ಮಾಡಲು ಜೊತೆಯಲ್ಲಿ ಕರೆದೊಯ್ಯುತ್ತಾರೆ. ಶಿಕ್ಷಣಕ್ಕೆ ಅವಶ್ಯಕ ಹಣಕಾಸನ್ನು ನೀಡಿ, ಕಾಲಕಾಲಕ್ಕೆ ಶಿಕ್ಷಕರನ್ನು ನೇಮಕ ಮಾಡಿಕೊಂಡು, ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದರೆ ನಮ್ಮೂರ ಶಾಲೆಗಳಿಗೆ ಈ ದುಸ್ಥಿತಿ ಖಂಡಿತ ಬರುತ್ತಿರಲಿಲ್ಲ ಅಲ್ಲವೇ! ಹೀಗೆ, ಶಿಕ್ಷಣ ನೀಡಬೇಕಿರುವ ತನ್ನ ಸಂವಿಧಾನಬದ್ಧ ಜವಾಬ್ದಾರಿಯಿಂದ ಸರ್ಕಾರವು ಕೈ ಕೊಡವಿಕೊಂಡಿದೆ.
ಈಗೇನಾಗಬೇಕು
ಭಾರತವನ್ನೂ ಸೇರಿದಂತೆ, ಜಗತ್ತಿನಾದ್ಯಂತ ಇಂದು ಏಕಸ್ವಾಮ್ಯ ಬಂಡವಾಳಗಾರರ ಹಿಡಿತದಲ್ಲಿ ಹೇರಳವಾಗಿ ಬಂಡವಾಳ ಶೇಖರಣೆಯಾಗಿದೆ. ಈ ಹೇರಳ ಬಂಡವಾಳವನ್ನು ಹೂಡಲು ಬಂಡವಾಳಶಾಹಿಗಳಿಗೆ ಲಾಭದಾಯಕ ಕ್ಷೇತ್ರಗಳ ಅವಶ್ಯಕತೆ ಇದೆ. ಜಾಗತೀಕರಣದ ಕಾಲದ ನಂತರದಲ್ಲಿ ಸಾಮ್ರಾಜ್ಯಶಾಹಿ – ಬಂಡವಾಳಶಾಹಿಗಳು ಸೇವಾ ಕ್ಷೇತ್ರಗಳಾದ ಬ್ಯಾಂಕ್, ವಿಮೆ, ಸಾರಿಗೆ, ಆರೋಗ್ಯ, ಶಿಕ್ಷಣ ಹಾಗೂ ಇತರ ಕ್ಷೇತ್ರಗಳನ್ನು ತಮ್ಮ ವ್ಯಾಪಕ ಹೂಡಿಕೆಗೆ ತೆರೆದಿಟ್ಟುಕೊಂಡು ಭೀಕರವಾಗಿ ಶೋಷಿಸುತ್ತಿದ್ದಾರೆ. ಇತರೆಲ್ಲಾ ಸೇವಾ ಕ್ಷೇತ್ರಗಳ ಮೇಲಾಗುತ್ತಿರುವ ದಾಳಿಯಂತೆ ಶಿಕ್ಷಣದ ಮೇಲೂ ಈಗ ಪ್ರಹಾರಗಳು ನಡೆಯುತ್ತಿವೆ. ಭಾರತದ ಸ್ವಾತಂತ್ರö್ಯ ಸಂಗ್ರಾಮದ ರಾಜಿರಹಿತ ಪಂಥದ ಹೋರಾಟಗಾರರು, ಮಹಾನ್ ಮಾರ್ಕ್ಸ್ವಾದಿ ಚಿಂತಕರು ಹಾಗೂ ನಮ್ಮ ಪಕ್ಷದ ಸ್ಥಾಪಕರೂ ಆದ ಕಾಮ್ರೇಡ್ ಶಿವದಾಸ್ ಘೋಷ್, “ವರ್ಗ ವಿಭಜಿತ ಸಮಾಜದಲ್ಲಿ, ಶೈಕ್ಷಣಿಕ ಸುಧಾರಣೆಗಳನ್ನು ಅರ್ಥ ಮಾಡಿಕೊಳ್ಳಲು ಎರಡು ದೃಷ್ಟಿಕೋನಗಳಿವೆ ಎಂಬುದನ್ನು ಮರೆಯಬೇಡಿ. ಒಂದು, ಬಂಡವಾಳಶಾಹಿ ವರ್ಗದ ವಿಶ್ವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ… ತರ್ಕ ಹಾಗೂ ವಿಜ್ಞಾನದ ಮೇಲೆ ಅವಲಂಬಿತವಾಗಿರದೆ, ನಂಬಿಕೆ, ಧರ್ಮದ ಮೇಲೆ ಅವಲಂಬಿತವಾಗಿ, ಕೊನೆಗೆ ಸಾಮಾಜಿಕ ಬದಲಾವಣೆಗೆ ಅಡ್ಡಿಯೊಡ್ಡುವ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿ, ರಚಿಸಿ, ಅದನ್ನು ಕಾರ್ಯರೂಪಕ್ಕೆ ತರುವುದು ಇದರ ಉದ್ದೇಶವಾಗಿದೆ. ಇನ್ನೊಂದು ದೃಷ್ಟಿಕೋನವೆಂದರೆ, ಅದು ಈ ಎಲ್ಲಾ ನೀತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಕ್ರಾಂತಿಕಾರಿ ದೃಷ್ಟಿಕೋನ. ಬಂಡವಾಳಶಾಹಿಗಳನ್ನು ಅಧಿಕಾರದಿಂದ ಕೆಳಗುರುಳಿಸಿ, ಅವರ ಶೋಷಣೆಯಿಂದ ಸಮಾಜವನ್ನು ಮುಕ್ತಗೊಳಿಸಲು, ಕ್ರಾಂತಿಕಾರಿ ಚಳವಳಿಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕವಾದ ತಾರ್ಕಿಕತೆ, ವೈಜ್ಞಾನಿಕ ಮನೋಭಾವವನ್ನು ಆಧರಿಸಿರುವ ಇದು ಇನ್ನೊಂದು ದೃಷ್ಟಿಕೋನ” ಎಂದು ಸಮಾಜ ಬದಲಾವಣೆಯ ವಿಷಯದಲ್ಲಿ ಸರಿಯಾದ ದೃಷ್ಟಿಕೋನವನ್ನು ಪಡೆದುಕೊಳ್ಳುವ ದಿಕ್ಕಿನಲ್ಲಿ ಶಿಕ್ಷಣದ ಮಹತ್ವವನ್ನು ಹೀಗೆ ವಿವರಿಸಿದ್ದಾರೆ. ಈ ಕ್ರಾಂತಿಕಾರಿ ದೃಷ್ಟಿಕೋನ ಮಾತ್ರವೇ ನಮ್ಮನ್ನು ಇಂದಿನ ಶೈಕ್ಷಣಿಕ ಸಂಕಟದಿಂದ ಹೊರತರಬಲ್ಲದು. ಶಿಕ್ಷಣ, ಆರೋಗ್ಯ, ಕನಿಷ್ಠ ಬದುಕುವ ಹಕ್ಕನ್ನೂ ಕಸಿಯುವ ಸರ್ಕಾರಗಳ, ಅಧಿಕಾರದಲ್ಲಿರುವವರ ಷಡ್ಯಂತ್ರವನ್ನು ಜನರು ಅರಿಯಬೇಕು. ತಮ್ಮ ಹಕ್ಕುಗಳಿಗಾಗಿ ಜನತೆ ಇಂದು ಕ್ರಾಂತಿಕಾರಿ ದೃಷ್ಟಿಕೋನದೊಂದಿಗೆ ಸಂಘಟಿತ ಹೋರಾಟಗಳಿಗಾಗಿ ಬೀದಿಗಿಳಿಯುವ ಅವಶ್ಯಕತೆಯಿದೆ. ಇದು ಬಂಡವಾಳಶಾಹಿ ಸರ್ಕಾರಗಳ ನಿರಂತರ ಆಕ್ರಮಣಗಳಿಗೆ ಉತ್ತರ ಹೇಳಲು ದುಡಿಯುವ ಜನರ ಬಳಿ ಇರುವ ಏಕೈಕ ಅಸ್ತ್ರವಾಗಿದೆ.
Blarb
ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆ ಈಗ ಜಾಗತೀಕ ವಿದ್ಯಮಾನ
• ಚೀನಾದಲ್ಲಿ ೨೦೦೨-೨೦೧೦ರ ನಡುವೆ ಕೇಂದ್ರೀಕೃತ ವಸತಿ ಶಾಲೆಗಳ ಹೆಸರಿನಲ್ಲಿ ಶೇ.೫೨ರಷ್ಟು ಗ್ರಾಮೀಣ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಯಿತು.
• ಅಮೇರಿಕದಲ್ಲಿ ಟ್ರಂಪ್ ೨ನೇ ಬಾರಿಗೆ ಅಧಿಕಾರವನ್ನು ವಹಿಸಿಕೊಂಡ ನಂತರ ಶಿಕ್ಷಣ ಇಲಾಖೆಯನ್ನೇ ಮುಚ್ಚಲಾಯಿತು.
• ಸ್ವೀಡನ್, ಮೆಕ್ಸಿಕೊಗಳಲ್ಲಿಯೂ ವಿಶ್ವ ಬ್ಯಾಂಕ್ ಸಾಲ ಪಡೆದು ಮಾದರಿ ಕೇಂದ್ರೀಕೃತ ಶಾಲೆಗಳನ್ನು ಸ್ಥಾಪಿಸಿ ಸಾವಿರಾರು ಗ್ರಾಮೀಣ ಶಾಲೆಗಳನ್ನು ಮುಚ್ಚಲಾಗಿದೆ.
• ಭಾರತದಲ್ಲಿ ಬಹುತೇಕ ಎಲ್ಲ ರಾಜ್ಯಗಳಲ್ಲೂ ಅಘೋಷಿತ “ಶಾಲಾ ಮುಚ್ಚುವ ಅಭಿಯಾನ” ಚಾಲ್ತಿಯಲ್ಲಿದೆ! ಕಳೆದ ೧೦ ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ ೨೯,೪೦೦, ಉತ್ತರ ಪ್ರದೇಶದಲ್ಲಿ ೨೫,೧೦೦ ಸೇರಿದಂತೆ ಸುಮಾರು ೮೯,೪೦೦ಗಿಂತಲೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗಿದೆ.
ಶಿಕ್ಷಣದಲ್ಲಿ ಇಂದು ಸೃಷ್ಟಿಸಲಾಗುತ್ತಿರುವ ಅಸಮಾನತೆಯು ಆರ್ಥಿಕ ಅಸಮಾನತೆಯ ಮತ್ತೊಂದು ಮುಖ
ಸರ್ಕಾರಗಳು ಶಿಕ್ಷಣವನ್ನು ಕೇವಲ ಉಳ್ಳವರ ಸ್ವತ್ತಾಗಿಸುತ್ತಿವೆ. ಆರ್ಥಿಕ ಬಲದ ಆಧಾರದ ಮೇಲೆ ಪ್ರತಿ ಮಗುವಿನ ಶೈಕ್ಷಣಿಕ ಭವಿಷ್ಯ ನಿರ್ಧಾರವಾಗುತ್ತಿದೆ. 1990ರ ನಂತರ ಜಾರಿಗೆ ಬಂದ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿ ಶಿಕ್ಷಣವನ್ನು ಮಾರುಕಟ್ಟೆಯ ಸರಕನ್ನಾಗಿಸಿತು. ವಿಶ್ವ ಬ್ಯಾಂಕ್ ಪ್ರಾಯೋಚಿತ ಡಿಪಿಇಪಿಯಾಗಲಿ, ಅದರ ಮುಂದುವರಿಕೆಯಾದ ಸರ್ವ ಶಿಕ್ಷಣ ಅಭಿಯಾನ್(ಎಸ್‌ಎಸ್‌ಎ) ಆಗಲಿ, ಅವು ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಧ್ವಂಸ ಮಾಡಿದವು. ವಿಶ್ವ ಬ್ಯಾಂಕ್ ಸಾಲ ಹಾಗೂ ಎಸ್‌ಎಸ್‌ಎ ಹಣ ಕೇವಲ ಕಟ್ಟಡ ನಿರ್ಮಾಣಕ್ಕೆ ಮೀಸಲಾಗಿತ್ತು. ಖಾಯಂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬಾರದು ಹಾಗೂ ಮೂಲಭೂತ ಸೌಕರ್ಯಗಳನ್ನು ಶಾಲೆಗಳಿಗೆ ಒದಗಿಸಬಾರದು ಎಂಬುದೇ ಆ ಕಾರ್ಯಕ್ರಮಗಳ ಮೂಲ ಷರತ್ತಾಗಿದ್ದವು.