Loading..

ಜಿಮ್ಮರ್‌ವಾಲ್ಡ್ ಸಮ್ಮೇಳನದಲ್ಲಿ ಎಸ್‌ಯುಸಿಐ(ಸಿ) ಭಾಗಿ

 

1914ರಲ್ಲಿ ಸಾಮ್ರಾಜ್ಯಶಾಹಿಗಳ ಮೊದಲನೆಯ ಮಹಾಯುದ್ಧ ಪ್ರಾರಂಭವಾದಾಗ ಎರಡನೇ ಇಂಟರ್‌ನ್ಯಾಷನಲ್ (ಕಮ್ಯುನಿಸ್ಟ್ ಪಕ್ಷಗಳ ಅಂತರರಾಷ್ಟ್ರೀಯ ವೇದಿಕೆ) ನಾಯಕರು ಕಾರ್ಮಿಕ ವರ್ಗದ ಅಂತರರಾಷ್ಟ್ರೀಯ ತತ್ವವನ್ನು ಧಿಕ್ಕರಿಸಿ ಯುದ್ಧ ಪಿಪಾಸುಗಳ ಪರವಾಗಿ ಮತ ಚಲಾಯಿಸುವ ಮೂಲಕ ತಮ್ಮ ತಮ್ಮ ದೇಶಗಳ ಆಳುವ ಸಾಮ್ರಾಜ್ಯಶಾಹಿ ಬಂಡವಾಳಶಾಹಿಗಳನ್ನು ಬೆಂಬಲಿಸಿದರು. ಹಾಗಾಗಿ ಅವರು ‘ದೇಶದ್ರೋಹಿಗಳು, ಕಾರ್ಮಿಕ ವರ್ಗದ ವಂಚಕರು ಮತ್ತು ಬಂಡವಾಳಶಾಹಿಗಳ ಸೇವಕರು’ ಎಂದು ಸಾಬೀತಾಯಿತು. ಇವರ ವಿರುದ್ಧ ಕ್ರಮ ಕೈಗೊಳ್ಳಲು 1915ರಲ್ಲಿ ಯುದ್ಧವಿರೋಧಿ ಅಂತರರಾಷ್ಟ್ರೀಯ ಸಮಾಜವಾದಿಗಳು ಸ್ವಿಟ್ಜರ್‌ಲ್ಯಾಂಡ್‌ನ ಜಿಮ್ಮರ್‌ವಾಲ್ಡ್ ನಲ್ಲಿ ಸಮ್ಮೇಳನವನ್ನು ಆಯೋಜಿಸಿದರು. ಈ ಸಂದರ್ಭದಲ್ಲಿ ಮಹಾನ್ ನಾಯಕ ಲೆನಿನ್, ಸಮಾಜವಾದಿ ಪಕ್ಷಗಳ ಅವಕಾಶವಾದಿತನವನ್ನು ತೀವ್ರವಾಗಿ ಟೀಕಿಸುತ್ತಾ, ಸಮಾಜವಾದಿಗಳು ಯುದ್ಧಪಿಪಾಸುಗಳ ವಿರುದ್ಧ ಮತ ಚಲಾಯಿಸಬೇಕೆಂದು ಒತ್ತಾಯಿಸಿದರು. ಜೊತೆಗೆ ಸಮಾಜವಾದಕ್ಕಾಗಿ ಸಾಮ್ರಾಜ್ಯಶಾಹಿ ಯುದ್ಧವನ್ನು ಅಂತರ್ಯುದ್ಧವನ್ನಾಗಿ ಪರಿವರ್ತಿಸಲು ಕೆಲಸ ಮಾಡಬೇಕು ಮತ್ತು ಅಸ್ತಿತ್ವದಲ್ಲಿರುವ ಎರಡನೇ ಇಂಟರ್‌ನ್ಯಾಷನಲ್‌ ಅನ್ನು ವಿಸರ್ಜಿಸಿ ಮೂರನೇ ಇಂಟರ್‌ನ್ಯಾಷನಲ್ ರಚನೆ ಮಾಡಬೇಕೆಂದು ಕರೆ ನೀಡಿದರು.
ಲೆನಿನ್ ಪ್ರತಿಪಾದಿಸಿದ ಕ್ರಾಂತಿಕಾರಿ ಮಾರ್ಗದ ಸಂಸ್ಮರಣೆಯಲ್ಲಿ, ಜರ್ಮನಿಯಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ‘ಫ್ಯಾಸೀವಾದ, ಯುದ್ಧ ಮತ್ತು ಪರಿಸರ ವಿನಾಶದ ವಿರುದ್ಧದ ಅಂತರರಾಷ್ಟ್ರೀಯ ಸಾಮ್ರಾಜ್ಯಶಾಹಿ ವಿರೋಧಿ ಯುನೈಟೆಡ್ ಫ್ರಂಟ್’ ಸಂಘಟನೆಯು ಸೆಪ್ಟೆಂಬರ್ 6-7, 2025ರಂದು ಜ್ಯುರಿಚ್‌ನಲ್ಲಿ ಜಿಮ್ಮರವಾಲ್ಡ್ ಸಮ್ಮೇಳನ 2.0ಅನ್ನು ಆಯೋಜಿಸಿತು. ಒಟ್ಟು 32 ದೇಶಗಳಿಂದ 403 ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಇದರಲ್ಲಿ 95 ಜನ ನೇರವಾಗಿ, 308 ಜನ ಆನ್‌ಲೈನ್ ಮೂಲಕ ಸೇರಿದ್ದರು. ಆಹ್ವಾನದ ಮೇರೆಗೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದ ವತಿಯಿಂದ ಪ್ರೊ. (ಡಾ.) ಧ್ರುವ ಮುಖರ್ಜಿಯವರನ್ನು ಈ ಸಮ್ಮೇಳನದಲ್ಲಿ ಭಾಗವಹಿಸಲು ಕಳುಹಿಸಲಾಯಿತು.
ಪೀಟರ್ ನೋವಾಕ್ (ಸ್ವತಂತ್ರ ಪತ್ರಕರ್ತ ಮತ್ತು ಕಮ್ಯುನಿಸ್ಟ್ ಕೌನ್ಸಿಲ್) ತಮ್ಮ ಸ್ವಾಗತ ಭಾಷಣದಲ್ಲಿ ಲೆನಿನ್ ಮತ್ತು ಬೋಲ್ಶೆವಿಕ್ ನೇತೃತ್ವದ ಜಿಮ್ಮರ್‌ವಾಲ್ಡ್ ಎಡಪಂಥೀಯ ಗುಂಪಿನ ಪಾತ್ರದ ಬಗ್ಗೆ ಮಾತನಾಡಿದರು. ಸಾಮ್ರಾಜ್ಯಶಾಹಿ ಯುದ್ಧದಲ್ಲಿ ಕಾರ್ಮಿಕ ವರ್ಗವು ತನ್ನದೇ ಸಾಮ್ರಾಜ್ಯಶಾಹಿ ದೇಶದ ಸೋಲಿಗೆ ಕೆಲಸ ಮಾಡಬೇಕು, ಯುದ್ಧವನ್ನು ಕ್ರಾಂತಿಕಾರಿ ಅಂತರ್‌ಯುದ್ಧವನ್ನಾಗಿ ಪರಿವರ್ತಿಸಬೇಕು ಮತ್ತು ಬಂಡವಾಳಶಾಹಿ ಸರ್ಕಾರವನ್ನು ಉರುಳಿಸಬೇಕು ಎಂಬ ಲೆನಿನ್ನರ ವಾದವನ್ನು ಬೆಂಬಲಿಸಿದರು. ಈ ತತ್ವವನ್ನು ನವೆಂಬರ್ ಕ್ರಾಂತಿಯಲ್ಲಿ ಸಾಕಾರಗೊಳಿಸಲಾಯಿತು. ಇದು ಹಂಗೇರಿ, ಜರ್ಮನಿ ಮತ್ತು ಇತರೆ ಹಲವು ದೇಶಗಳಲ್ಲಿ ಕ್ರಾಂತಿಕಾರಿ ಕಾರ್ಮಿಕ ವರ್ಗದ ಚಳುವಳಿಗೆ ಕಾರಣವಾಯಿತು. ಜಿಮ್ಮರ್‌ವಾಲ್ಡ್ ನಿಂದ ಕಲಿತ ಪಾಠವೆಂದರೆ ಇಂದು ಬಂಡವಾಳಶಾಹಿಗಳು ನಡೆಸುವ ಯುದ್ಧದಲ್ಲಿ ಕಾರ್ಮಿಕರು ಯಾರ ಪರವೂ ವಹಿಸಲಾಗದು. ಬದಲಿಗೆ, ಬಂಡವಾಳಶಾಹಿ ಯುದ್ಧಗಳ ವಿರುದ್ಧ ಅಂತರರಾಷ್ಟ್ರೀಯ ವರ್ಗ ಹೋರಾಟಗಳನ್ನು ಬೆಳೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಜರ್ಮನಿಯ ಎಂಎಲ್‌ಪಿಡಿ ಪಕ್ಷದ ಅಧ್ಯಕ್ಷೆ ಗ್ಯಾಬಿ ಫೆಕ್ಟ್ನರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಇದು ಮೂರನೇ ವಿಶ್ವಯುದ್ಧದ ವಿರುದ್ಧ ದೃಢ ನಿಶ್ಚಯದಿಂದ ಹೋರಾಡುವ ಶಕ್ತಿಗಳ ಸಮ್ಮೇಳನವಾಗಿದೆ ಮತ್ತು ಜಿಮ್ಮರ್‌ವಾಲ್ಡ್ ಸ್ಫೂರ್ತಿಯನ್ನು ಎತ್ತಿ ಹಿಡಿಯುತ್ತದೆ. ಆದ್ದರಿಂದ ಬೇರೆ ಬೇರೆ ಲೆನಿನ್‌ವಾದಿ ಸಂಘಟನೆಗಳ ದೃಷ್ಟಿಕೋನ ಮತ್ತು ಅಭಿಪ್ರಾಯಗಳ ವಿನಿಮಯದ ಅಗತ್ಯವಿದೆ ಎಂದು ಎಲ್ಲರಿಗೂ ಅನಿಸಿದೆ ಎಂದು ಹೇಳಿದರು.
‘ಸಾಮ್ರಾಜ್ಯಶಾಹಿ, ಫ್ಯಾಸೀವಾದ ಮತ್ತು ಜನರ ಪ್ರತಿರೋಧ’ ಎಂಬ ವಿಷಯದ ಕುರಿತು ಮುಖ್ಯ ಭಾಷಣಕಾರರಲ್ಲಿ ಒಬ್ಬರಾದ ಪ್ರೊ. ಮುಖರ್ಜಿಯವರು ಮಾತನಾಡುತ್ತಾ, ಎರಡನೇ ಮಹಾಯುದ್ಧದಲ್ಲಿ ಫ್ಯಾಸೀವಾದಿ ಶಕ್ತಿಗಳನ್ನು ಸೋಲಿಸಿದ ಕೀರ್ತಿ ಮಹಾನ್ ಸ್ಟಾಲಿನ್ ನೇತೃತ್ವದ ಸಮಾಜವಾದಿ ಸೋವಿಯತ್ ರಾಜ್ಯಕ್ಕೆ ಸಲ್ಲುತ್ತದೆ; ಆದರೆ ಫ್ಯಾಸೀವಾದವು ಮುಂದುವರೆದ ಅಥವಾ ಅಭಿವೃದ್ಧಿಶೀಲ ಸಾಮ್ರಾಜ್ಯಶಾಹಿ ಬಂಡವಾಳಶಾಹಿ ದೇಶಗಳ ರಾಜಕೀಯ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಒಂದು ಸಾಮಾನ್ಯ ಗುಣಲಕ್ಷಣವಾಗಿ ಉಳಿದುಕೊಂಡಿದೆ ಎಂದು ಎಸ್‌ಯುಸಿಐ(ಸಿ)ನ ಸಂಸ್ಥಾಪಕರು, ಈ ಯುಗದ ಅಪ್ರತಿಮ ಮಾರ್ಕ್ಸ್ ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್ ರವರು 60 ವರ್ಷಗಳ ಹಿಂದೆಯೇ ಎಚ್ಚರಿಸಿದ್ದರು. ಫ್ಯಾಸೀವಾದ ಎಂಬುದು ಐತಿಹಾಸಿಕವಾಗಿ ಹದಗೊಂಡ ಪ್ರತಿಕ್ರಾಂತಿಯ ಸ್ವರೂಪ, ಇದರಲ್ಲಿ ಬಂಡವಾಳಶಾಹಿಯು ಎಚ್ಚರಿಕೆಯ ನಡೆಯ ಮೂಲಕ ಕ್ರಾಂತಿಯನ್ನು ತಡೆಯಲು ಪ್ರಯತ್ನಿಸುತ್ತದೆ ಎಂದು ಅವರು ಸ್ಪಷ್ಟವಾಗಿ ತೋರಿಸಿದ್ದರು. ಆರ್ಥಿಕತೆಯ ಕೇಂದ್ರೀಕರಣ, ಪ್ರಭುತ್ವದಲ್ಲಿ ರಾಜಕೀಯ ಅಧಿಕಾರದ ಗರಿಷ್ಠ ಕ್ರೋಢೀಕರಣ ಮತ್ತು ಆಧ್ಯಾತ್ಮಿಕ ಹಾಗೂ ವಿಜ್ಞಾನದ ತಾಂತ್ರಿಕ ಅಂಶಗಳ ವಿಶಿಷ್ಟ ಮಿಶ್ರಣದ ಮೂಲಕ ಸಂಸ್ಕೃತಿಯ ಏಕರೂಪೀಕರಣ (cultural regimentation ) ಸಾಧಿಸುವುದು ಫ್ಯಾಸೀವಾದದ ವಿಶಿಷ್ಟ ಗುಣಲಕ್ಷಣಗಳಾಗಿವೆ.
ಫ್ಯಾಸಿವಾದವು ಸಂಸದೀಯ ಪ್ರಜಾಪ್ರಭುತ್ವದ ಮುಖವಾಡವನ್ನಿಟ್ಟುಕೊಂಡು ‘ಪ್ರಜಾಪ್ರಭುತ್ವದ ರೂಪ’ದಲ್ಲಿ ಕಾಣಿಸಿಕೊಳ್ಳುವುದು ಅತ್ಯಂತ ವಂಚಕವಾಗಿದೆ ಎಂದು ಕಾಮ್ರೇಡ್ ಶಿವದಾಸ್ ಘೋಷ್ ಹೇಳಿದ್ದರು. ಪ್ರಸ್ತುತ ಜಗತ್ತಿನಲ್ಲಿ, ಉದಾಹರಣೆಗೆ ಅಮೆರಿಕ, ಯುರೋಪ್, ಜಿಯೋನಿಸ್ಟ್ ಇಸ್ರೇಲ್, ಭಾರತ, ಬಾಂಗ್ಲಾದೇಶ ಮತ್ತು ಇತರ ಹಲವು ದೇಶಗಳಲ್ಲಿ ಉಗ್ರ ಬಲಪಂಥೀಯ ಫ್ಯಾಸೀವಾದಿ ಶಕ್ತಿಗಳು ಅಧಿಕಾರದಲ್ಲಿವೆ ಎಂದು ಪ್ರೊ. ಮುಖರ್ಜಿಯವರು ಒತ್ತಿ ಹೇಳಿದರು. ಜನರ ಒಗ್ಗಟ್ಟಿನ ಪ್ರತಿರೋಧವು ಬೆಳ್ಳಿರೇಖೆಯಂತೆ ಆಶಾದಾಯಕವಾಗಿದೆ. ಉದಾಹರಣೆಗೆ ಭಾರತದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ಬಲಿಷ್ಠ ಒಗ್ಗಟ್ಟಿನ ರೈತ ಚಳುವಳಿಯು ರೈತ ವಿರೋಧಿ ಕಾನೂನುಗಳನ್ನು ಸರ್ಕಾರ ಹಿಂತೆಗೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಬಂಡವಾಳಶಾಹಿ ಶೋಷಣೆ, ಸಾಮ್ರಾಜ್ಯಶಾಹಿ ಯುದ್ಧ ತಂತ್ರಗಾರಿಕೆ, ಫ್ಯಾಸಿಸ್ಟ್ ಸಂಸ್ಕೃತಿ ಮತ್ತು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಫ್ಯಾಸಿಸ್ಟ್ ದಾಳಿಯ ವಿರುದ್ಧ ಎಲ್ಲಾ ದೇಶಗಳಲ್ಲಿ ಕಮ್ಯುನಿಸ್ಟರನ್ನು ಕೇಂದ್ರವಾಗಿಟ್ಟುಕೊಂಡು ಸಾಮ್ರಾಜ್ಯಶಾಹಿ ವಿರೋಧಿ, ಫ್ಯಾಸಿಸ್ಟ್ ವಿರೋಧಿ ಶಕ್ತಿಗಳ ವಿಶಾಲ ವೇದಿಕೆಗಳನ್ನು ನಿರ್ಮಿಸಿ ಬಲಿಷ್ಠ ಸಮೂಹ ಚಳುವಳಿಗಳನ್ನು ಕಟ್ಟುವುದು ಈ ಘಳಿಗೆಯ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಪ್ರತಿಯೊಂದು ಅಧಿವೇಶನದ ನಂತರ ಸ್ಫೂರ್ತಿದಾಯಕ ಚರ್ಚೆಗಳು ನಡೆದವು. ಪ್ರಪಂಚದ ಪುನರ್ವಿಂಗಡನೆ ಬಗ್ಗೆ ಸಾಮ್ರಾಜ್ಯಶಾಹಿ ದೇಶಗಳ ನಡುವೆ ಸಂಘರ್ಷಗಳು ತೀಕ್ಷ್ಣವಾಗುತ್ತಿವೆ ಎಂದು ಒತ್ತಿ ಹೇಳಲಾಯಿತು. ಚೀನಾ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ – ಲೆನಿನ್‌ವಾದಿ -ಮಾವೋವಾದಿ)ದ ಪ್ರತಿನಿಧಿ, ಚೀನಾ ಒಂದು ಸಾಮ್ರಾಜ್ಯಶಾಹಿ ದೇಶವಾಗಿದ್ದು, ಅಮೆರಿಕ ನೇತೃತ್ವದ ಸಾಮ್ರಾಜ್ಯಶಾಹಿ ಬಣಕ್ಕೆ ವಿರುದ್ಧವಾಗಿ ರಷ್ಯಾದೊಂದಿಗೆ ಒಂದು ಬಣವನ್ನು ರಚಿಸುತ್ತಿದೆ ಎಂದು ವಿಶ್ಲೇ಼ಷಿಸಿದರು. ಅದೇ ರೀತಿ ರಷ್ಯಾದ ಪ್ರತಿನಿಧಿಯು ರಷ್ಯಾದ ಸಾಮ್ರಾಜ್ಯಶಾಹಿ ಆಕ್ರಮಣಶೀಲತೆಯನ್ನು ಟೀಕಿಸಿದರು. ಈಗ ಆಸ್ಟ್ರಿಯಾದಲ್ಲಿ ವಾಸಿಸುತ್ತಿರುವ ಕಾರ್ಲ್ ಲೆಬ್ನೆಕ್ಟ್ (ಕಾರ್ಲ್ ಮಾರ್ಕ್ಸ್ ಅವರ ಸಮಕಾಲೀನ ಕಾಮ್ರೇಡ್) ಅವರ ಮೊಮ್ಮಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಹಲವಾರು ಹಂತಗಳ ಚರ್ಚೆಯ ನಂತರ ಬಹುಮತದ ಮತದಾನದ ಮೂಲಕ 20 ಅಂಶಗಳ ಗೊತ್ತುವಳಿಯನ್ನು ಅಂಗೀಕರಿಸಲಾಯಿತು. ಪ್ರೊ. ಮುಖರ್ಜಿಯವರು ಒತ್ತುಕೊಟ್ಟು ಕಾಮ್ರೇಡ್ ಶಿವದಾಸ್ ಘೋಷ್‌ರವರ ಬೋಧನೆಯನ್ನಾಧರಿಸಿದ ಮೂರು ಪ್ರಮುಖ ಅಂಶಗಳನ್ನು ಗೊತ್ತುವಳಿಯಲ್ಲಿ ಸೇರಿಸಿಕೊಂಡಿರುವುದು ಹರ್ಷದಾಯಕವಾಗಿದೆ. ಮಹಾನ್ ಸ್ಟಾಲಿನ್ ಅವರ ಪಾತ್ರದ ಕುರಿತು ನಮ್ಮ ವಿಶ್ಲೇಷಣೆಯ ಬಗ್ಗೆ ಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ತೋರಿಸಿದರು. ‘ಕ್ರುಶ್ಚೇವ್‌ಗೆ ಬಹಿರಂಗ ಪತ್ರ’ ಎಂಬ ಕಾಮ್ರೇಡ್ ಶಿವದಾಸ್ ಘೋಷ್‌ರವರ ಕಿರು ಪುಸ್ತಕ ಮತ್ತು ಸ್ಟಾಲಿನ್ ಕುರಿತು
ಕಾಮ್ರೇಡ್ ಪ್ರವಾಶ್ ಘೋಷ್ ರವರ ಪುಸ್ತಕದ ಲಭ್ಯವಿರುವ ಎಲ್ಲಾ ಪ್ರತಿಗಳು ಖಾಲಿಯಾದವು. ಇಟಲಿಯ ಒಬ್ಬ ಕಾಮ್ರೇಡರು, ತಾವು ಹೊಸ ಪಕ್ಷವನ್ನು ರಚಿಸುತ್ತಿರುವುದಾಗಿ ಹೇಳಿದರು ಮತ್ತು ಅವರು ‘ಎಸ್‌ಯುಸಿಐ(ಸಿ) ಭಾರತದ ಏಕೈಕ ನೈಜ ಕಮ್ಯುನಿಸ್ಟ್ ಪಕ್ಷ ಏಕೆ?’ ಎಂಬ ನಮ್ಮ ಪ್ರಕಟಣೆಯನ್ನು ಓದಲು ಉತ್ಸುಕರಾಗಿದ್ದರು. ಎಂಎಲ್‌ಪಿಡಿ ಯ ಸಂಘಟನಾಕಾರರು ನಿರ್ದಿಷ್ಟವಾಗಿ ಕಾಮ್ರೇಡ್ ಪ್ರವಾಶ್ ಘೋಷ್ ಅವರ ಸ್ಟಾಲಿನ್ ಕುರಿತ ಕಿರು ಪುಸ್ತಕ ಮತ್ತು ಜೆಕೋಸ್ಲೋವಾಕೀಯಾ ಕುರಿತಾದ ಕಾಮ್ರೇಡ್ ಶಿವದಾಸ್ ಘೋಷ್ ಅವರ ಪುಸ್ತಕವನ್ನು ಪಡೆಯಲು ಉತ್ಸುಕರಾಗಿದ್ದರು.