Loading..

ವಿಕೃತಿಯ ಪರಾಕಾಷ್ಠೆಯನ್ನು ತಲುಪಿರುವ ಮಹಿಳೆಯರ ಮೇಲಿನ ಘೋರ ಪಾತಕಗಳು: ಕಡಿವಾಣಕ್ಕೆ ಬೇಕು ಪ್ರಬಲ ಜನಾಂದೋಲನ!

 

ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಅತ್ಯಂತ ವಿಕೃತ ರೂಪ ತಾಳುತ್ತಾ ತಮ್ಮ ಪರಾಕಾಷ್ಠೆಯನ್ನು ತಲುಪಿವೆ. ನಿರ್ಭಯಾ, ಅಸೀಫಾ, ಪ್ರಿಯಾಂಕಾ ರೆಡ್ಡಿ, ಅಭಯಾ, ಇವರೆಲ್ಲರ ಮೇಲೆ ನಡೆದ ಕ್ರೂರ ಅತ್ಯಾಚಾರ ಮತ್ತು ಕೊಲೆಗಳು, ಮಹಿಳಾ ಕುಸ್ತಿಪಟುಗಳ ಮೇಲಿನ ಅಗೌರವಗಳು, ಗುಜರಾತಿನ ಬಿಲ್ಕಿಸ್ ಬಾನು, ಉತ್ತರ ಪ್ರದೇಶದ ಉನ್ನಾವ್, ಹತ್ರಾಸ್ ಪ್ರಕರಣಗಳು, ಹಾಸನದ ಲೈಂಗಿಕ ಹಗರಣ, ಇವೆಲ್ಲವೂ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿವೆ. ಕರ್ನಾಟಕದಲ್ಲೂ ಸೌಜನ್ಯ, ದಾನಮ್ಮ, ನೇಹಾ ಹಿರೇಮಠ್, ಅಂಜಲಿ, ಮಹಾಲಕ್ಷ್ಮಿ, ಯಾಮಿನಿಯಂತವರ ಘೋರ ಸಾವುಗಳು ನಾಗರಿಕರನ್ನು ಆಘಾತಕ್ಕೀಡು ಮಾಡಿವೆ. ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಐದು ವರ್ಷದ ಕಂದಮ್ಮನ, ಮೈಸೂರು ದಸರಾದಲ್ಲಿ ಬಲೂನು ಮಾರಲು ಕುಟುಂಬದೊಂದಿಗೆ ಗುಳೆ ಬಂದ ಮಗುವಿನ ಮೇಲಿನ ಕ್ರೂರ ಅತ್ಯಾಚಾರ ಮತ್ತು ಕೊಲೆಗಳು ಹಾಗೂ ವಲಸೆ ಬಂದು ತೋರಣಗಲ್ಲಿನಲ್ಲಿ ನೆಲೆಸಿದ್ದ ಕುಟುಂಬದ ಆರು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಎಲ್ಲರ ಮನಸ್ಸನ್ನು ಕಲಕಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(NCRB)ದ ವರದಿಯ ಪ್ರಕಾರ 2022ರಲ್ಲಿ 4.45ಲಕ್ಷ ಮಹಿಳೆಯರ ಮೇಲಿನ ಅಪರಾಧಗಳು, 2019-2024ರ ಮೇ ವರೆಗೆ ಒಟ್ಟು 4.45 ಲಕ್ಷ ಮಕ್ಕಳ ಮೇಲಿನ ದೌರ್ಜನ್ಯ (POCSO) ಪ್ರಕರಣಗಳು ದಾಖಲಾಗಿವೆ. ಇನ್ನು ಕರ್ನಾಟಕದಲ್ಲಿ 2023-2025 ಜುಲೈ ವರೆಗಿನ ಅವಧಿಯಲ್ಲಿ 16,273 ಲೈಂಗಿಕ ದೌರ್ಜನ್ಯ, 5,456 ವರದಕ್ಷಿಣೆ ಕಿರುಕುಳ, 10510 ಪೋಕ್ಸೋ, 417 ಬಾಲ್ಯ ವಿವಾಹಗಳ ಜೊತೆಗೆ ಇತರೆ ಸೇರಿದಂತೆ ಒಟ್ಟು 43,052 ಪ್ರಕರಣಗಳು ದಾಖಲಾಗಿವೆ. ಮಂಡ್ಯ, ಮೈಸೂರು ಮತ್ತು ಬೆಂಗಳೂರು ಭಾಗಗಳಲ್ಲಿ ಕೇವಲ ಎರಡು ವರ್ಷಗಳಲ್ಲಿ 900 ಹೆಣ್ಣು ಭ್ರೂಣಗಳನ್ನು ಶಿಶುವಾಗಿ ಅರಳುವ ಮುನ್ನವೇ ಚಿವುಟಿ ಹಾಕಲಾಯಿತು. ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಪೋರ್ಟಲ್ ಪ್ರಕಾರ 80,813 ಕಿಶೋರಾವಸ್ತೆಯಲ್ಲಿನ ಗರ್ಭಿಣಿ ಪ್ರಕರಣಗಳು ದಾಖಲಾಗಿವೆ. ರಾಜ್ಯ ರಾಜಧಾನಿಯೇ ಈ ಕಿಶೋರ ಗರ್ಭಿಣಿಯರ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿದೆ. ಸಮಾಜದ ಭವಿಷ್ಯವನ್ನು ರೂಪಿಸುವಂತಹ ಮಕ್ಕಳ ಭವಿಷ್ಯವೇ ನಾಶವಾಗುತ್ತಿರುವ ದುರಂತ ನಮ್ಮ ಮುಂದಿದೆ! 2019-2021ರ ವರೆಗೆ ಕೇವಲ ಎರಡು ವರ್ಷಗಳಲ್ಲಿ 40 ಸಾವಿರ ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಇನ್ನು ದಾಖಲಾಗದ ಪ್ರಕರಣಗಳು ಎಷ್ಟೋ! ಇಂತಹ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗದ ದಿನವೇ ಇಲ್ಲ. ಸ್ತ್ರೀ ಭ್ರೂಣ ಹತ್ಯೆ, ಬಾಲ್ಯ ವಿವಾಹ, ಹದಿಹರೆಯದ ಗರ್ಭಧಾರಣೆ, ಲೈಂಗಿಕ ಕಿರುಕುಳ, ಅತ್ಯಾಚಾರ, ಗುಂಪು ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಮರ್ಯಾದೆಗೇಡು ಹತ್ಯೆಗಳು, ಸ್ಟಾಕಿಂಗ್, ಕೌಟುಂಬಿಕ ಹಿಂಸೆ, ಬೆತ್ತಲೆ ಮೆರವಣಿಗೆ, ಆಸಿಡ್ ದಾಳಿ, ಕಳ್ಳ ಸಾಗಾಣಿಕೆ, ಹೀಗೆ ಗರ್ಭದಿಂದ ಗೋರಿಯವರೆಗೆ ‘ಹೆಣ್ಣು’ ಎಂಬ ಏಕೈಕ ‘ಅಪರಾಧ’ಕ್ಕಾಗಿ ಅವಳು ಹಲವಾರು ರೀತಿಯ ಪೈಶಾಚಿಕ ದಾಳಿಗಳಿಗೆ ತುತ್ತಾಗುತ್ತಿದ್ದಾಳೆ. ಜೊತೆಗೆ ಯುದ್ಧ, ದ್ವೇಷ ಅಥವಾ ಜನಾಂಗೀಯ ಕಲಹಗಳಿಗೆ ಕೆಳ ವರ್ಗದ ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಮಹಿಳೆಯರ ದೇಹ ಕದನದ ಮೈದಾನವಾಗಿಬಿಟ್ಟಿದೆ. ಶತ್ರುವಿನ ಮೇಲಿನ ಸೇಡು ತೀರಿಸಿಕೊಳ್ಳಲೂ ಸುಲಭವಾಗಿ ಸಿಗುವ ಬೇಟೆಯೆಂದರೆ ಹೆಣ್ಣಲ್ಲವೇ!!
ಮಹಿಳೆಯರ ಮೇಲಿನ ಅಪರಾಧಗಳು ನಡೆಯದ ಸ್ಥಳಗಳೇ ಇಲ್ಲ ಎಂದರೆ ತಪ್ಪಾಗಲಾರದು; ಮನೆಗಳಲ್ಲಿ, ಶಾಲಾ-ಕಾಲೇಜು, ಕಛೇರಿ-ಆಸ್ಪತ್ರೆ, ರೈಲು, ಬಸ್‌ಗಳು, ರಸ್ತೆ, ಹೀಗೆ ಯಾವ ಜಾಗವೂ ಸುರಕ್ಷಿತವಲ್ಲ; ಹಾಗೆಯೇ, ತಾತ, ತಂದೆ, ಸೋದರರು, ಪತಿ, ಇತರ ಸಂಬಂಧಿಗಳು, ಶಿಕ್ಷಕರು, ಸಹದ್ಯೋಗಿಗಳು, ಅಧಿಕಾರಿವರ್ಗ, ಕಾವಿಧಾರಿಗಳು, ಶಾಸಕರು, ಸಚಿವರು, ಪೊಲೀಸ್, ಮಿಲಿಟರಿ, ಹೀಗೆ ಯಾವ ಪುರುಷರೂ ಹೊರತಲ್ಲ.
ಪುರುಷ ಪ್ರಧಾನ ಸಮಾಜದ ಬಲಿ ಮಹಿಳೆ
ಹೆಣ್ಣನ್ನು ಹಲವಾರು ಅಲಂಕಾರ ಲೇಪಿತ ಪದಪುಂಜಗಳಿಂದ ಪೂಜಿಸಲ್ಪಡುವ ಈ ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಅತ್ಯಂತ ಹೀನಾಯ ಸ್ಥಿತಿಗೆ ತಲುಪುತ್ತಿರುವುದೇಕೆ? ಪ್ರಾಣಿ ಪ್ರಪಂಚದಲ್ಲೂ ಜರುಗದ ಇಂತಹ ವಿಕೃತಿಗಳು ಮನುಷ್ಯ ಸಮಾಜದಲ್ಲಿ ಏಕೆ ಜರುಗುತ್ತಿವೆ? ಏಕೆಂದರೆ, ನವೋದಯದ ಪರಿಕಲ್ಪನೆಗಳಾದ ಸ್ವಾತಂತ್ರö್ಯ, ಸಮಾನತೆ, ಸೋದರತೆ ಮತ್ತು ಮಹಿಳಾ ವಿಮೋಚನೆಯ ಚಿಂತನೆಗಳು ನೆಲೆಗೊಳ್ಳಲು ಅವಶ್ಯವಾದ ಸಾಮಾಜಿಕ-ಸಾಂಸ್ಕೃತಿಕ ಆಂದೋಲನ ದೇಶದ ಸ್ವಾತಂತ್ರö್ಯ ಹೋರಾಟದ ಸಂದರ್ಭದಲ್ಲಿ ನಡೆಯಲಿಲ್ಲ. ಹಾಗಾಗಿ, ಹೆಣ್ಣೆಂದರೆ ಪುರುಷನ ಆಸ್ತಿ, ಅವನ ಭೋಗದ ವಸ್ತು, ಎರಡನೇ ದರ್ಜೆ ಪ್ರಜೆ ಎಂಬ ಹಳೆಯ ಊಳಿಗಮಾನ್ಯ ಪುರುಷ ಪ್ರಧಾನ ವಿಚಾರಗಳೇ ಮುಂದುವರೆದವೇ ಹೊರತು, ಲಿಂಗ ಸಮಾನತೆಯ ಪ್ರಜಾತಾಂತ್ರಿಕ ಮೌಲ್ಯಗಳು ಇಲ್ಲಿ ಸ್ಥಾಪಿತಗೊಳ್ಳಲಿಲ್ಲ. ಸ್ವಾತಂತ್ರö್ಯವೆಂದರೆ, ವಾಸ್ತವದಲ್ಲಿ, ಬ್ರಿಟಿಷ್ ಸಾಮ್ರಾಜ್ಯಶಾಹಿ ಶೋಷಕ ವ್ಯವಸ್ಥೆಯ ಜಾಗದಲ್ಲಿ ಭಾರತದ ಶೋಷಕ ಬಂಡವಾಳಶಾಹಿ ವ್ಯವಸ್ಥೆ ಪ್ರತಿಷ್ಠಾಪನೆಗೊಂಡಿತಷ್ಟೇ. ಇಲ್ಲಿ, ಹೆಣ್ಣು ಸಹ ಒಂದು ಲಾಭದಾಯಕ ಸರಕು ಅಷ್ಟೇ. ಬಿಕ್ಕಟ್ಟು ಪೀಡಿತ ಬಂಡವಾಳಶಾಹಿ ವ್ಯವಸ್ಥೆಯ ಹಿತಾಸಕ್ತಿಯಲ್ಲಿ 1990ರ ದಶಕದಲ್ಲಿ ಜಾಗತೀಕರಣದ ನೀತಿಗಳು ಜಾರಿಗೆ ಬಂದ ನಂತರ ಈ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ, ಕೊಳೆತ ಪಾಶ್ಚಾತ್ಯ ಸಂಸ್ಕೃತಿಯ ದಾಳಿ ಯುವಜನರನ್ನು ದಿಕ್ಕು ತಪ್ಪಿಸಿದೆ. ಇತ್ತೀಚಿನ ಸೇರ್ಪಡೆಯೆಂದರೆ, ಸೈಬರ್ ಪಾತಕಗಳು.
ಅಶ್ಲೀಲತೆ-ಹಿಂಸೆ ಪ್ರಸಾರ-ಯುವಜನತೆಯ ನೈತಿಕ ಅಧ:ಪತನಕ್ಕೆ ದಾರಿ!
ಇಂದಿನ ಸಮೂಹ ಮಾಧ್ಯಮಗಳಲ್ಲಿ, ಅದರಲ್ಲೂ ವಿದ್ಯುನ್ಮಾನ ಮಾಧ್ಯಮದಲ್ಲಿ, ಅಂದರೆ ಟಿವಿ, ಮೊಬೈಲ್ ಇಂಟರ್ನೆಟ್‌ಗಳಲ್ಲಿ ಅವ್ಯಾಹತವಾಗಿ ಹರಿದಾಡುತ್ತಿರುವ ಅಶ್ಲೀಲತೆ, ಕ್ರೌರ್ಯ, ನೀಲಿ ಚಿತ್ರ ಹಾಗೂ ಶಾರ್ಟ್ಸ್, ರೀಲ್ಸ್, ಇನ್ಸ್ಟಾಗ್ರಾಂನಲ್ಲಿನ ಅಸಭ್ಯತೆ-ಅಶ್ಲೀಲತೆ, ಹದಿಹರೆಯದವರ ಮೇಲೆ ಕೆಟ್ಟ ಪ್ರಭಾವ ಬೀರಿವೆ. ಅವರಲ್ಲಿ ಮೂಲ ಪ್ರವೃತ್ತಿಯನ್ನು ಬಡಿದೆಬ್ಬಿಸಿ, ಅವರಲ್ಲಿ ಉಳಿದಿರುವ ಅಷ್ಟೋ, ಇಷ್ಟೋ ನೈತಿಕ ಮೌಲ್ಯಗಳನ್ನು ಹೊಸಕಿ ಹಾಕಿವೆ. ಜೊತೆಗೆ ಈ ಮಾಧ್ಯಮಗಳಲ್ಲಿ ಸತತವಾಗಿ ಬಿತ್ತರಗೊಳ್ಳುವ ಹಿಂಸೆ, ಪುರುಷರಲ್ಲಿ ಹಿಂಸಾನಂದ ಪ್ರವೃತ್ತಿಗೆ ಜನ್ಮ ಕೊಟ್ಟಿದೆ. ಅಷ್ಟಲ್ಲದೆ, ಎಲ್ಲೆಡೆ ಸುಲಭವಾಗಿ ದೊರಕುವ ಮದ್ಯ – ಮಾದಕ ವಸ್ತುಗಳು ಅವರಲ್ಲಿನ ವಿವೇಚನಾ ಶಕ್ತಿಗೆ ಕೊಡಲಿಯೇಟು ಹಾಕಿವೆ. ಇಂತಹ ಪರಿಸ್ಥಿತಿಯಲ್ಲಿ, ಪುರುಷರು ಹೆಣ್ಣುಮಕ್ಕಳನ್ನು ಲೈಂಗಿಕ ದೃಷ್ಟಿಯಿಂದ ಕಾಣುವುದು ಮಾತ್ರವಲ್ಲದೆ, ಹೆಚ್ಚೆಚ್ಚು ಆಕ್ರಮಣಕಾರಿಗಳಾಗುತ್ತಿದ್ದಾರೆ, ಹಿಂದೆಂದೂ ಕಂಡುಕೇಳರಿಯದಂತಹ ವಿಕೃತಿಯನ್ನು ಮೆರೆಯುತ್ತಿದ್ದಾರೆ. ವರದಿಯಾದಂತೆ, ಎಷ್ಟೋ ಅಪರಾಧಿಗಳು ತಾವು ಅತ್ಯಾಚಾರ ಎಸಗುವ ಮುನ್ನ ನೀಲಿ ಚಿತ್ರಗಳನ್ನು ವೀಕ್ಷಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಇಂದು ಅಶ್ಲೀಲ ನೀಲಿ ಚಿತ್ರಗಳ ತಯಾರಿಕೆ ಮತ್ತು ವಿತರಿಸುವಿಕೆ ಒಂದು ಬೃಹತ್ ಲಾಭದ ಉದ್ಯಮವಾಗಿ ಮಾರ್ಪಾಡಾಗಿದ್ದು, ಈ ಶೋಷಕ, ಲಾಭಾಧಾರಿತ ಬಂಡವಾಳಶಾಹಿ ವ್ಯವಸ್ಥೆಯ ಸೇವಕ ಸರ್ಕಾರಗಳು ತಮ್ಮ ಮಾಲೀಕರ ಪರವಾಗಿ ನಿಂತಿರುವುದು ಅಚ್ಚರಿಯ ವಿಷಯವೇನಲ್ಲ.
ಜೊತೆಗೆ, ಇದಕ್ಕೆ ಇನ್ನೊಂದು ಆಯಾಮವೂ ಇದೆ. ಉನ್ನತ ನೈತಿಕ ಮಟ್ಟ ಇರುವ ಯುವಜನರೇ ನ್ಯಾಯಯುತ, ಶೋಷಕ ವ್ಯವಸ್ಥೆಯ ವಿರುದ್ಧ ಹೋರಾಡುವುದು, ಎಂಬ ಪಾಠವನ್ನು ನಮ್ಮ ಆಳ್ವಿಕರು ಇತಿಹಾಸದಿಂದ ಚೆನ್ನಾಗಿಯೇ ಕಲಿತಿದ್ದಾರೆ. ಹಾಗಾಗಿ, ತಮ್ಮ ವಿರುದ್ಧ ಸಿಡಿದೇಳದಂತೆ ಅವರ ನೈತಿಕ ಬೆನ್ನೆಲುಬಿಗೇ ಪ್ರಹಾರ ಮಡುವ ಹುನ್ನಾರ ಇಲ್ಲಿ ಅಡಗಿದೆ.
ಕೊಳೆತ ಸಮಾಜದ ಮನಸ್ಥಿತಿ
ಅತ್ಯಾಚಾರಿಗಳ ಕ್ರೌರ್ಯಕ್ಕೆ ಬಲಿಯಾಗಿ ನರಳಾಡುತ್ತಿರುವ ಹೆಣ್ಣಿಗೆ ಸಾಂತ್ವನ, ಆತ್ಮವಿಶ್ವಾಸ, ಧೈರ್ಯ ನೀಡುವÀ ಬದಲಿಗೆ ಆ ಹೆಣ್ಣಿನ ಚಾರಿತ್ರö್ಯವನ್ನೇ ಪ್ರಶ್ನಿಸುವ ಸಮಾಜದ ಮನಸ್ಥಿತಿ ಅತ್ಯಂತ ವೇದನಾದಾಯಕವಾದದ್ದು. ಉನ್ನತ ಸ್ಥಾನದಲ್ಲಿರುವವರು ಕೂಡ ಯಾವುದೇ ಲಂಗು ಲಗಾಮಿಲ್ಲದೆ, ಸೂಕ್ಷ್ಮ ಸಂವೇದನೆಯಿಲ್ಲದೆ ಮಾತನಾಡುತ್ತಾರೆ. ಹೆಣ್ಣಿನ ಉಡುಪು, ಅವಳ ಓಡಾಟ, ಅವಳ ವರ್ತನೆ, ಇವುಗಳೇ ಅವಳ ಮೇಲಿನ ದೌರ್ಜನ್ಯಗಳಿಗೆ ಕಾರಣವೆಂದು ಆರೋಪಿಸುತ್ತಾರೆ. ಅಲ್ಲದೆ, ಅವಳ ಚಾರಿತ್ರ್ಯವಧೆಯೂ ನಡೆಯುತ್ತದೆ. ಇವೆಲ್ಲವನ್ನೂ ಮೀರಿ ಅವಳೇನಾದರೂ ಪೊಲೀಸರಿಗೆ ದೂರು ಕೊಟ್ಟರೂ, ನ್ಯಾಯ ಸಿಗುವ ಭರವಸೆ ಎಲ್ಲಿದೆ? ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದು ಇಂತಹ ಅಪರಾಧಗಳಿಗೆ ಕೊನೆ ಹಾಕುವಲ್ಲಿ ಇಂದಿನ ಪೊಲೀಸ್, ಆಡಳಿತಾಂಗ ಮತ್ತು ನ್ಯಾಯಾಂಗ ಸಂಪೂರ್ಣವಾಗಿ ಸೋತಿವೆ. ಅಲ್ಲದೆ, ಕೋರ್ಟಿನಲ್ಲಿ ನಡೆಯುವ ವಿಚಾರಣೆಯಲ್ಲೂ ಅವಳಿಗೆ ಎಷ್ಟು ಮಾನಸಿಕ ಹಿಂಸೆಯನ್ನು ಕೊಡಲಾಗುತ್ತದೆ ಎಂದರೆ, ಅದು ‘ಎರಡನೇ ಅತ್ಯಾಚಾರ’ ಕ್ಕೆ ಸಮನಾಗಿರುತ್ತದೆ. ಬದಲಿಗೆ, ಅಪರಾಧಿಗಳು ಕಿಂಚಿತ್ತೂ ಭಯವಿಲ್ಲದೆ ರಾಜಾರೋಷವಾಗಿ ಓಡಾಡಿಕೊಂಡು ಮೆರೆದಾಡುತ್ತಾರೆ. ಜೊತೆಗೆ, ಪಾತಕೀಕರಣಗೊಂಡ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ, ಕೀಳು ನೈತಿಕತೆಗೆ ಬಲಿಯಾದ ಯುವಕರನ್ನು ಗೂಂಡಾಗಳಾಗಿ ಬಳಸಿಕೊಳ್ಳುವುದೂ ಮಹಿಳೆಯರ ಮೇಲಿನ ಅತ್ಯಾಚಾರಗಳಿಗೆ ಎಡೆ ಮಾಡಿಕೊಡುತ್ತಿದೆ. ಇದರೊಟ್ಟಿಗೆ, ಭಾರತದ ರಾಜಕಾರಣದಲ್ಲಿ ಅಪರಾಧಿ ಹಿನ್ನೆಲೆಯುಳ್ಳ ಶಾಸಕರು ಮತ್ತು ಸಚಿವರ ಸಂಖ್ಯೆ ಹೆಚ್ಚುತ್ತಿದೆ. ಹೆಚ್ಚು ಕಡಿಮೆ ಎಲ್ಲಾ ರಾಜಕೀಯ ಪಕ್ಷಗಳು ಅಂತಹ ಅಭ್ಯರ್ಥಿಗಳಿಗೇ ಮಣೆ ಹಾಕುತ್ತಿವೆ.
ಸುದೀರ್ಘ ಸಂಗ್ರಾಮಕ್ಕೆ ಇಂದಿನ ಘಳಿಗೆಯ ಕರೆ!
ಇಂತಹ ಪಾತಕೀ ವ್ಯವಸ್ಥೆಯ ವಿರುದ್ಧ ಅವಶ್ಯ, ಒಂದು ಸುದೀರ್ಘ, ಸಮರಶೀಲ ಸಂಗ್ರಾಮ. ಮೊದಲಿಗೆ, ಹಳೆಯ ಊಳಿಗಮಾನ್ಯ ಸಮಾಜದ ಪಳೆಯುಳಿಕೆಯಾಗಿ ಉಳಿದಿರುವ ಮೌಲ್ಯ, ಸಂಸ್ಕೃತಿಯ ಬದಲಿಗೆ ಪ್ರಜಾತಾಂತ್ರಿಕ, ಧರ್ಮನಿರಪೇಕ್ಷ, ವೈಜ್ಞಾನಿಕ ಮನೋಧರ್ಮವನ್ನು ಸಮಾಜದಲ್ಲಿ ನೆಲೆಗೊಳಿಸುವ ಅತ್ಯಂತ ಜರೂರಿನ ಕಾರ್ಯದಲ್ಲಿ ಸ್ತ್ರೀ-ಪುರುಷರಿಬ್ಬರೂ ಜೊತೆಗೂಡಿ ನಿರತರಾಗಬೇಕಿದೆ. ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಎಲ್ಲಾ ರೀತಿಯ ಅಪರಾಧಗಳ ಪಾತಕಿಗಳಿಗೆ ಸೂಕ್ತ, ನಿದರ್ಶನಾತ್ಮಕ ಶಿಕ್ಷೆಯಾಗುವಂತೆ ಆಳುವವರ ಮೇಲೆ ಒತ್ತಡ ಹಾಕಬೇಕಿದೆ. ಎಲ್ಲಾ ರೀತಿಯ ಅಶ್ಲೀಲತೆಗೆ ಕೊನೆ ಹಾಕಿ ಉನ್ನತ ನೀತಿ-ಸಂಸ್ಕೃತಿ ಬೆಳೆಸಲು, ನವೋದಯದ ಹರಿಕಾರರಾದ ರಾಜಾ ರಾಮ್‌ಮೋಹನ್ ರಾಯ್, ಈಶ್ವರಚಂದ್ರ ವಿದ್ಯಾಸಾಗರ್, ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ ಫುಲೆ, ಶರತ್‌ಚಂದ್ರ ಚಟರ್ಜಿ, ಪಂಡಿತ್ ತಾರಾನಾಥ್, ಕುದ್ಮುಲ್ ರಂಗಾರಾವ್ ಜೊತೆಗೆ ನಮ್ಮ ಸ್ವಾತಂತ್ರö್ಯ ಸಂಗ್ರಾಮದ ಧೀರ ಸೇನಾನಿಗಳಾದ ನೇತಾಜಿ, ಭಗತ್‌ಸಿಂಗ್, ಪ್ರೀತಿಲತಾ ವದ್ದೇದಾರ್, ವಿಜ್ಞಾನಿಗಳಾದ ಐನ್‌ಸ್ಟೀನ್, ಮೇಡಂ ಕ್ಯೂರಿ ಮುಂತಾದವರ ಉದಾತ್ತ ಆದರ್ಶಗಳ ಮೂಲಕ ಯುವಪೀಳಿಗೆಯನ್ನು ಪ್ರೇರೇಪಿಸಬೇಕಾಗಿದೆ.
ಇಂದು ಶೋಷಕ ಬಂಡವಾಳಶಾಹಿ ವ್ಯವಸ್ಥೆಯು ತನ್ನ ಆಳ್ವಿಕೆಯನ್ನು ನಿರಾತಂಕವಾಗಿ ಮುಂದುವರೆಸಿಕೊಂಡು ಹೋಗುವ ಸಲುವಾಗಿ, ಒಂದೆಡೆ, ವಿದ್ಯಾರ್ಥಿ -ಯುವಜನರನ್ನು ಅನೈತಿಕತೆ – ಕುಸಂಸ್ಕೃತಿಗಳ ಪ್ರಪಾತಕ್ಕೆ ತಳ್ಳುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆ. ಇನ್ನೊಂದೆಡೆ ಇತಿಹಾಸ ಕಂಡ ಆದರ್ಶ ಮಹನೀಯರ ಜೀವನ ಚಿತ್ರಗಳನ್ನು ಅವರಿಂದ ಮರೆಮಾಚಲು ಯತ್ನಿಸುತ್ತದೆ. ಕೆಲವೇ ವರ್ಷಗಳ ಹಿಂದೆಯಷ್ಟೇ ಅಂದಿನ ಕರ್ನಾಟಕ ರಾಜ್ಯ ಸರ್ಕಾರವು ಶಾಲಾ ಪಠ್ಯಗಳಿಂದ ಬಸವಣ್ಣ, ಭಗತ್‌ಸಿಂಗ್, ಅಂಬೇಡ್ಕರ್, ಕುವೆಂಪು ಮುಂತಾದ ಮಹಾನ್ ಚೇತನಗಳ ಪಠ್ಯಗಳನ್ನು ತೆಗೆದು ಹಾಕಲು ಯತ್ನಿಸಿದುದು, ನಂತರ, ನಮ್ಮ ವಿದ್ಯಾರ್ಥಿ ಸಂಘಟನೆ, ಎಐಡಿಎಸ್‌ಓ ನೇತೃತ್ವದ ವಿದ್ಯಾರ್ಥಿ ಹೋರಾಟಕ್ಕೆ ಮಣಿದು ಅವನ್ನು ಉಳಿಸಿಕೊಂಡದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಮಹಿಳೆಯರ ಮೇಲಿನ ದೌರ್ಜನ್ಯ-ಅತ್ಯಾಚಾರಗಳು ಈ ಕೊಳೆತ ಬಂಡವಾಳವಾದದ ಒಂದು ಚಿಹ್ನೆ ಮಾತ್ರ. ಹಾಗಾಗಿ, ಈ ಇಡೀ ವ್ಯವಸ್ಥೆಯನ್ನೇ ಬದಲಾಯಿಸಿ, ನೈಜ ಸಮಾನತೆ, ಸ್ವಾತಂತ್ರ್ಯ ಖಚಿತಪಡಿಸುವ ಸಮಾಜವಾದಿ ಸಮಾಜದ ಸ್ಥಾಪನೆಗೆ ಸ್ತ್ರೀ-ಪುರುಷರಿಬ್ಬರೂ ಒಂದಾಗಿ ಹೋರಾಡುವ ಕಾಲವೀಗ ಸನ್ನಿಹಿತವಾಗಿದೆ.