ನೇಪಾಳದಲ್ಲಿನ ಜೆನ್-ಝೀ ಬಂಡಾಯ
ಮೂರು ಡಜನ್ಗಿಂತಲೂ ಹೆಚ್ಚು ಯುವಕರು ಮತ್ತು ವಿದ್ಯಾರ್ಥಿಗಳ ಬಲಿದಾನದೊಂದಿಗೆ ನಡೆದ ರಕ್ತಸಿಕ್ತವಾದ ‘ಜೆನ್-ಝೀ’ ಚಳುವಳಿ, (1995 ರಿಂದ 2000 ರ ನಡುವೆ ಜನಿಸಿದ ಯುವ ಪೀಳಿಗೆಯನ್ನು ಜೆನ್-ಝೀ ಎಂದು ಕರೆಯುತ್ತಾರೆ) ಅಥವಾ ಐತಿಹಾಸಿಕ ಬನೇಶ್ವರ ದಂಗೆಯ ನಂತರ, ದಬ್ಬಾಳಿಕೆಯ ಓಲಿ ಸರ್ಕಾರವು ಪತನಗೊಂಡಿದೆ. ಪ್ರತಿಭಟನಕಾರರ ಬೇಡಿಕೆಯಂತೆ ಭಾದ್ರ ಸೆಪ್ಟೆಂಬರ್ 27 ರಂದು ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರವನ್ನು ರಚಿಸಲಾಗಿದೆ.
ಭ್ರಷ್ಟಾಚಾರ ಮತ್ತು ಭ್ರಷ್ಟ ಸರ್ಕಾರದ ವಿರುದ್ಧದ ಪ್ರತಿಭಟನೆ ಹಾಗೂ ಉತ್ತಮ ಆಡಳಿತದ ಬೇಡಿಕೆಯೊಂದಿಗೆ ಪ್ರಾರಂಭವಾವಾಯಿತು ಈ ಜನಾಂದೋಲನ. ಸೆಪ್ಟೆಂಬರ್ 8 (ಭಾದ್ರ 23) ರಂದು ಉಲ್ಬಣಗೊಂಡ ಈ ಜೆನ್-ಝೀ ಯುವ ಚಳುವಳಿಯು, ಮೂಲಭೂತವಾಗಿ ನೇಪಾಳದ ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟಿನ ವಿರುದ್ಧದ ಸ್ಫೋಟವಾಗಿದೆ. ಈ ಸ್ಫೋಟವನ್ನು ನೇಪಾಳದ ರಾಜಕೀಯದಲ್ಲಿ ಐತಿಹಾಸಿಕ ಯುವ ಮತ್ತು ವಿದ್ಯಾರ್ಥಿ ದಂಗೆ ಎಂದು ಗುರುತಿಸಲಾಗಿದೆ. ಓಲಿ ಸರ್ಕಾರದ ಹಿಂಸಾತ್ಮಕ ದಮನದಿಂದಾಗಿ ಇದುವರೆಗೆ 50 ಕ್ಕೂ ಹೆಚ್ಚು ಯುವಕರು ಹುತಾತ್ಮರಾಗಿದ್ದಾರೆ. ಇದರೊಟ್ಟಿಗೆ, ನೂರಾರು ಪ್ರತಿಭಟನಾಕಾರರು ಇನ್ನೂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಎಲ್ಲಾ ಹುತಾತ್ಮರಿಗೆ ನಮ್ಮ ಹೃತ್ಪೂರ್ವಕ ಗೌರವವನ್ನು ಸಲ್ಲಿಸುತ್ತೇವೆ ಮತ್ತು ಅವರ ಕುಟುಂಬಗಳಿಗೆ ನಮ್ಮ ಆಳವಾದ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ.
ಜನರ ಧ್ವನಿಗೆ ಕಿವಿಗೊಡಲು ನಿರಾಕರಿಸಿದ ಆಗಿನ ಕೆ.ಪಿ. ಓಲಿ ನೇತೃತ್ವದ ದಬ್ಬಾಳಿಕೆಯ ಸರ್ಕಾರವನ್ನು ಅಂತಿಮವಾಗಿ ಜನ ತಿರಸ್ಕರಿಸಿದ್ದಾರೆ. ಅಹಂಕಾರಿ, ಭ್ರಷ್ಟ ಮತ್ತು ನಿರಂಕುಶ ಸರ್ಕಾರವನ್ನು ಸ್ವಯಂಪ್ರೇರಿತ ಯುವ-ವಿದ್ಯಾರ್ಥಿ ಚಳುವಳಿಯು ಕಿತ್ತೆಸೆದಿದೆ. ಬಂಡವಾಳಶಾಹಿ ಸಂಸದೀಯ ಆಡಳಿತದಲ್ಲಿ ಒಮ್ಮೆ ಆಡಳಿತ ಪಕ್ಷವಾಗಿ ಮತ್ತು ಮತ್ತೊಮ್ಮೆ ವಿರೋಧ ಪಕ್ಷವಾಗಿ ಪರಮ ಭ್ರಷ್ಟಾಚಾರದಲ್ಲಿ ಮುಳುಗಿರುವ ಪ್ರಮುಖ ಪಕ್ಷಗಳ ಪ್ರಾಬಲ್ಯ ಮತ್ತು ಅಹಂಕಾರವನ್ನು ಈ ಚಳುವಳಿಯು ಸದ್ಯಕ್ಕೆ ನಾಶ ಮಾಡಿದೆ.
ಆದಾಗ್ಯೂ, ಒಬ್ಬ ಆಡಳಿತಗಾರನ ಪತನ ಅಥವಾ ಪದಚ್ಯುತಿ ಎಂದರೆ ಭ್ರಷ್ಟ ಆಡಳಿತದ ಅಂತ್ಯ ಎಂದರ್ಥವಲ್ಲ. ಏಕೆಂದರೆ ಭ್ರಷ್ಟಾಚಾರ, ಅವ್ಯವಹಾರಗಳು, ಹಣದುಬ್ಬರ, ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆಯ ಬೇರುಗಳು ಬಂಡವಾಳಶಾಹಿ ವ್ಯವಸ್ಥೆಯ ನೆಲದಲ್ಲಿ ಹುದುಗಿವೆ. 2008 ರಿಂದ ಈ ಬಂಡವಾಳಶಾಹಿ ವ್ಯವಸ್ಥೆಯ ಪ್ರವರ್ತಕರಾಗಿ, ಪರ್ಯಾಯವಾಗಿ ಅಧಿಕಾರದಲ್ಲಿರುವ ಪ್ರಮುಖ ಪಕ್ಷಗಳೆಂದರೆ ನೇಪಾಳಿ ಕಾಂಗ್ರೆಸ್, ಯುಎಂಎಲ್ (ನೇಪಾಳ ಕಮ್ಯುನಿಸ್ಟ್ ಪಾರ್ಟಿ-ಯುನೈಟೆಡ್ ಮಾರ್ಕ್ಸ್ಸಿಸ್ಟ್ ಲೆನಿನಿಸ್ಟ್) ಮತ್ತು ಸಿಪಿಎನ್ ಮಾವೋವಾದಿ ಸೆಂಟರ್ (ನೇಪಾಳ ಕಮ್ಯುನಿಸ್ಟ್ ಪಾರ್ಟಿ – ಮಾವೋವಾದಿ ಸೆಂಟರ್)
ಮಾವೋವಾದಿ ಸೆಂಟರ್ ಇತ್ತೀಚಿನ ದಿನಗಳಲ್ಲಿ ತನ್ನ ಭಾಷಣಗಳಲ್ಲಿ ಭ್ರಷ್ಟಾಚಾರ ವಿರೋಧಿ ಘೋಷಣೆಗಳನ್ನು ಮಾತ್ರ ಜೋರಾಗಿ ಕೂಗುತ್ತಿದೆ. ಆದರೆ ಅಧಿಕಾರ ಹಂಚಿಕೆ ಮತ್ತು ಭಾಗವಹಿಸುವಿಕೆಗಾಗಿ ತನ್ನ ಹಿಂದಿನ ಬದ್ಧತೆ, ಕ್ರಾಂತಿಕಾರಿ ನಿಷ್ಠೆ ಮತ್ತು ಆದರ್ಶಗಳನ್ನು ಬಲಿಕೊಟ್ಟಿದೆ. ಬಹಳ ಹಿಂದೆಯೇ ತನ್ನ ಸೈದ್ಧಾಂತಿಕ ಮತ್ತು ನೈತಿಕ ನೆಲೆಯನ್ನು ಕಳೆದುಕೊಂಡಿದೆ ಎಂಬುದು ಸ್ಪಷ್ಟವಾಗಿದೆ. ಈ ಹಿಂದೆ ನಡೆದ ಮಹಾಜನರ ದಂಗೆಗೆ ನೇತೃತ್ವ ನೀಡಿ ಅಧಿಕಾರಕ್ಕೆ ಬಂದ ನೇಪಾಳಿ ಕಾಂಗ್ರೆಸ್, ಯುಎಂಎಲ್ ಮತ್ತು ಮಾವೋವಾದಿ ಸೆಂಟರ್, ಈ ಮೂರು ಪಕ್ಷಗಳೂ ಇತ್ತೀಚಿನ ವಿಕೃತ ಸಂಸದೀಯ ರಾಜಕೀಯದಲ್ಲಿ ಪಾಲುದಾರರಾಗಿದ್ದು, ಭ್ರಷ್ಟ ಆಡಳಿತದಲ್ಲಿ ಭಾಗಿದಾರರಾಗಿದ್ದಾರೆ. ಅದಕ್ಕಾಗಿಯೇ ಸಾಮಾನ್ಯ ಜನತೆ ಮತ್ತು ಯುವ-ವಿದ್ಯಾರ್ಥಿಗಳು ಈ ಮೂರು ಪಕ್ಷಗಳ ಉನ್ನತ ನಾಯಕತ್ವದ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಸೆಪ್ಟೆಂಬರ್ 8 ರ ಯುವ ದಂಗೆಯನ್ನು (1) ‘ಅಧಿಕಾರ ಕೇಂದ್ರಗಳ ವಿನ್ಯಾಸ’ ಅಥವಾ ‘ಬಾಹ್ಯ ಪಿತೂರಿ’ ಎಂದು ಪರಿಗಣಿಸುವುದು. ಅಥವಾ (2) ಅದನ್ನು ‘ಪ್ರತಿಗಾಮಿಗಳ ಯೋಜನೆಗಳಿಂದ ಪ್ರೇರಿತವಾಗಿದೆ’ ಎಂದು ಅಪಮೌಲ್ಯಗೊಳಿಸುವುದು, ಪರೋಕ್ಷವಾಗಿ ಭ್ರಷ್ಟ ಆಡಳಿತ ಮತ್ತು ಭ್ರಷ್ಟ ಆಡಳಿತಗಾರರನ್ನು ಸಮರ್ಥಿಸಿಕೊಂಡಂತೆ. ದಂಗೆಯ ವಸ್ತುನಿಷ್ಠ ಕಾರಣಗಳತ್ತ ಗಮನ ಹರಿಸಲು ಇಚ್ಛಿಸದವರು, ಜನರ ಪ್ರತಿಯೊಂದು ದಂಗೆಯನ್ನೂ ‘ಪಿತೂರಿ ಸಿದ್ಧಾಂತದ’ ದೃಷ್ಟಿಕೋನದಿಂದ ವಿವರಿಸಲು ಪ್ರಯತ್ನಿಸುತ್ತಾರೆ.
ಖಂಡಿತ, ಈ ಚಳುವಳಿಯು ಸ್ಪಷ್ಟವಾಗಿ ಸಂಘಟಿತ ಶಕ್ತಿ ಮತ್ತು ಸುಚಿಂತಿತ ಹಾಗೂ ಕೇಂದ್ರೀಕೃತ ಸೈದ್ಧಾಂತಿಕ ನಾಯಕತ್ವದ ಕರೆಯೊಂದಿಗೆ ಪ್ರಾರಂಭವಾಗಲಿಲ್ಲ. ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿರುವಂತೆ, ಈ ಚಳುವಳಿಯು ಕೇವಲ ಒಂದು ಅಥವಾ ಎರಡು ಗುಂಪುಗಳ ಮನವಿಯಿಂದ ಪ್ರಾರಂಭವಾಗಲಿಲ್ಲ. ಆದಾಗ್ಯೂ, ಇಂತಹ ದಂಗೆಗಳು ಸೈದ್ಧಾಂತಿಕ, ಸಂಘಟನಾತ್ಮಕ ಮತ್ತು ಅಂತಿಮ ಗುರಿಗೆ ಸಂಬಂಧಿಸಿದ ಮಿತಿಗಳನ್ನು ಹೊಂದಿರುತ್ತವೆ ಎಂಬುದನ್ನು ವಿಶ್ವ ಇತಿಹಾಸದ ಅನೇಕ ಘಟನೆಗಳು ಪದೇ ಪದೇ ದೃಢಪಡಿಸಿವೆ. ಸ್ಪಷ್ಟ ರಾಜಕೀಯ ಕಾರ್ಯಕ್ರಮವಿಲ್ಲದ ಮತ್ತು ಪ್ರಬಲ ಸಂಘಟನೆಯ ಉಪಕ್ರಮವಿಲ್ಲದ ಇಂತಹ ದಂಗೆಗಳು ಸರ್ಕಾರವನ್ನು ಯಶಸ್ವಿಯಾಗಿ ಕೆಡವಿದರೂ, ಹೊಸ ಸರ್ಕಾರವನ್ನು ಸ್ಥಾಪಿಸುವಲ್ಲಿ ವಿಫಲವಾಗಿರುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಆಂತರಿಕ ಮತ್ತು ಬಾಹ್ಯ ಅಧಿಕಾರ ಕೇಂದ್ರಗಳು ಇಂತಹ ಜನಪ್ರಿಯ ದಂಗೆಗಳನ್ನು ತಮ್ಮ ಸ್ವಂತ ತಪ್ಪಾದ ಹಿತಾಸಕ್ತಿಗಳಿಗಾಗಿ ಬಳಸಲು ಅಥವಾ ವಿಭಜಿಸಲು ಪ್ರಯತ್ನಿಸುತ್ತವೆ ಎಂಬುದು ಅಷ್ಟೇ ಸತ್ಯ, ಮತ್ತು ಇದು ಈ ಚಳುವಳಿಯ ಸಮಯದಲ್ಲಿಯೂ ಸ್ಪಷ್ಟವಾಗಿ ಕಂಡುಬಂದಿದೆ.
ಆದಾಗ್ಯೂ, ಬನೇಶ್ವರ ದಂಗೆಯಲ್ಲಿ ಬಹಿರಂಗಗೊಂಡ ಪ್ರಮುಖ ಸತ್ಯವನ್ನು ನಾವು ಕಡಿಮೆ ಅಂದಾಜು ಮಾಡಬಾರದು. ಅದೆಂದರೆ, ಭ್ರಷ್ಟ ಆಡಳಿತ ವರ್ಗದ ವಿರುದ್ಧ ದಶಕಗಳಿಂದ ಜನಸಾಮಾನ್ಯರಲ್ಲಿ ಕುದಿಯುತ್ತಿದ್ದ ಕೋಪ.
ಜೆನ್-ಝೀ ಯುವ ದಂಗೆಯ ಯಶಸ್ಸಿನೊಂದಿಗೆ ದೇಶದಲ್ಲಿ ಹೊಸ ಮಧ್ಯಂತರ ಸರ್ಕಾರದ ರಚನೆಯ ಸಂದರ್ಭದಲ್ಲಿ, ಸರ್ಕಾರವು ಪ್ರಜಾತಾಂತ್ರಿಕ ಹಕ್ಕುಗಳು ಮತ್ತು ಜನರ ಸಾರ್ವಭೌಮತ್ವವನ್ನು ಸಂಪೂರ್ಣವಾಗಿ ಗೌರವಿಸಬೇಕು ಮತ್ತು ಪ್ರತಿಭಟನಾಕಾರರ ನ್ಯಾಯಯುತ ಬೇಡಿಕೆಗಳನ್ನು ಗರಿಷ್ಠ ಮಟ್ಟಿಗೆ ಈಡೇರಿಸಿ, ದೇಶವನ್ನು ಹೆಚ್ಚು ಪ್ರಗತಿಪರ ದಿಕ್ಕಿನಲ್ಲಿ ಕೊಂಡೊಯ್ಯಬೇಕು.
ಜೊತೆಗೆ, ಮಧ್ಯಂತರ ಸರ್ಕಾರವು ಆದಷ್ಟು ಬೇಗ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು:
1. ಸೆಪ್ಟೆಂಬರ್ 23 ಮತ್ತು 24 ರಂದು ಪ್ರಾಣ ಕಳೆದುಕೊಂಡ ಪ್ರತಿಭಟನಾಕಾರರನ್ನು ಹುತಾತ್ಮರು ಎಂದು ಘೋಷಿಸಬೇಕು. ಗಾಯಗೊಂಡ ಎಲ್ಲರಿಗೂ ಸಂಪೂರ್ಣ ಚಿಕಿತ್ಸೆ ಮತ್ತು ಆಹಾರವನ್ನು ಉಚಿತವಾಗಿ ಒದಗಿಸಬೇಕು.
2. ಪ್ರಸ್ತುತ ಸಂವಿಧಾನಕ್ಕೆ ತನ್ನದೇ ಆದ ಮಿತಿಗಳಿವೆ, ಆದಾಗ್ಯೂ, ಅದು ಸಂಸ್ಥೀಕರಿಸಿರುವ ಗಣರಾಜ್ಯ ವ್ಯವಸ್ಥೆ, ಜಾತ್ಯತೀತತೆ, ಒಕ್ಕೂಟ ವ್ಯವಸ್ಥೆ, ಒಳಗೊಳ್ಳುವಿಕೆ (Inclusiveness) ಮತ್ತು ಮೂಲಭೂತ ಹಕ್ಕುಗಳ ಮೂಲಭೂತ ಲಕ್ಷಣಗಳಲ್ಲಿ ಖಾತರಿಪಡಿಸಲಾದ ಗರಿಷ್ಠ ನಿಬಂಧನೆಗಳನ್ನು ಜಾರಿಗೆ ತರಬೇಕು.
3. ದೇಶದಲ್ಲಿ ಪ್ರಚಲಿತದಲ್ಲಿರುವ ಭ್ರಷ್ಟಾಚಾರ, ಆರ್ಥಿಕ ಅಸಮಾನತೆ, ನಿರುದ್ಯೋಗ, ಹಣದುಬ್ಬರ, ಸಾಮಾಜಿಕ ತಾರತಮ್ಯ ಮತ್ತು ಅವುಗಳಿಂದ ಉಂಟಾಗುತ್ತಿರುವ ಬಿಕ್ಕಟ್ಟಿನ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರಕ್ಕಾಗಿ ಆಮೂಲಾಗ್ರ ಆರ್ಥಿಕ ಮತ್ತು ರಾಜಕೀಯ ಪುನರ್ರಚನೆ ಅಗತ್ಯವಿದೆ. ಇದಕ್ಕಾಗಿ, ವ್ಯಾಪಕ ರಾಜಕೀಯ ಒಮ್ಮತದ ಆಧಾರದ ಮೇಲೆ ನೇರವಾಗಿ ಚುನಾಯಿತರಾದ ಕಾರ್ಯಕಾರಿ ಅಧ್ಯಕ್ಷರಿಗೆ ಅವಕಾಶ ಕಲ್ಪಿಸುವ ಮೂಲಕ ಸಂವಿಧಾನಕ್ಕೆ ಪ್ರಗತಿಪರ ತಿದ್ದುಪಡಿಯನ್ನು ತರಬೇಕು ಮತ್ತು ಚಳುವಳಿಯ ಮನೋಭಾವಕ್ಕೆ ಅನುಗುಣವಾಗಿ ಸಮಗ್ರ ಆರ್ಥಿಕ ಮತ್ತು ರಾಜಕೀಯ ಪುನರ್ರಚನೆಯನ್ನು ಕೈಗೊಳ್ಳಬೇಕು.
4. ಭ್ರಷ್ಟಾಚಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು, ಎಲ್ಲಾ ರಾಜಕೀಯ ಮುಖಂಡರು, ನೌಕರರು, ಮುಖಂಡರ ಹತ್ತಿರದ ಸಂಬಂಧಿಕರು, ಉದ್ಯಮಿಗಳು ಇತ್ಯಾದಿಗಳ ಆಸ್ತಿಗಳನ್ನು ತನಿಖೆ ಮಾಡಲು ಸಂಪೂರ್ಣ ಅಧಿಕಾರವನ್ನು ಹೊಂದಿರುವ ಉನ್ನತ ಮಟ್ಟದ ಆಯೋಗವನ್ನು ರಚಿಸಬೇಕು.
5. ಸರ್ಕಾರಿ ಕಚೇರಿಗಳಲ್ಲಿನ ಲಂಚ ಮತ್ತು ವಿಳಂಬ ನೀತಿಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ತೊಡೆದುಹಾಕುವುದು; ಅಧಿಕ ಮತ್ತು ನಿಯಂತ್ರಣವಿಲ್ಲದ ಮಾರುಕಟ್ಟೆ ಬೆಲೆಗಳನ್ನು ನಿಯಂತ್ರಿಸುವುದು; ಮತ್ತು ವಿವಿಧ ಹಂತಗಳಲ್ಲಿ ಜನರ ಸಂಕಷ್ಟಗಳನ್ನು ನಿವಾರಿಸುವುದು ಮುಖ್ಯ ಗಮನವಾಗಿರಬೇಕು.
6. ಚುನಾವಣೆಗಳಲ್ಲಿ ಹಣಕಾಸು ದುರುಪಯೋಗ ಮತ್ತು ಚುನಾವಣೆ ಗೆದ್ದ ನಂತರ ರಾಜ್ಯ ಸಂಪನ್ಮೂಲಗಳು ಹಾಗೂ ಸಾರ್ವಜನಿಕ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡು ಗೆಲ್ಲುವ ಪ್ರವೃತ್ತಿಯನ್ನು ಕೊನೆಗೊಳಿಸಲು, ಚುನಾವಣಾ ಪ್ರಕ್ರಿಯೆ, ವ್ಯವಸ್ಥೆ ಮತ್ತು ವಿಧಾನಗಳಲ್ಲಿ ಪ್ರಗತಿಪರ ಸುಧಾರಣೆಗಳನ್ನು ತರಬೇಕು.
7.ಚುನಾವಣೆ ಗೆದ್ದ ನಂತರ ತಪ್ಪು ಮಾಡುವ ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಯುವ (right to recall) ಕಾನೂನು ವ್ಯವಸ್ಥೆಯನ್ನು ಖಚಿತಪಡಿಸಬೇಕು. ಹೀಗಾದಲ್ಲಿ, ಭ್ರಷ್ಟ ಅಥವಾ ನಿರಂಕುಶ ಆಡಳಿತಗಾರನನ್ನು ಕಾನೂನುಬದ್ಧವಾಗಿ ತೆಗೆದುಹಾಕಲು ಸಾಧ್ಯವಾಗುತ್ತದೆ. ಇದು ಯುವಕರ ಹೋರಾಟ ಮತ್ತು ಚೆಲ್ಲಿದ ರಕ್ತಕ್ಕೆ ಗೌರವ ತರುತ್ತದೆ.
8.ಇತಿಹಾಸದ ಈ ನಿರ್ಣಾಯಕ ಘಟ್ಟದಲ್ಲಿ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಪ್ರತಿನಿಧಿ ಸಭೆ) ಅಧ್ಯಕ್ಷರ ಸ್ಥಾನಕ್ಕೆ ನೇರ ಚುನಾವಣೆಯನ್ನು ನಡೆಸಬೇಕು. ‘ಕಷ್ಟಕಾಲದಲ್ಲಿ ಸ್ವಾರ್ಥ ಸಾಧಿಸು’ವ ಅವಕಾಶವಾದಿ ಶಕ್ತಿಗಳ ಬಗ್ಗೆ ಎಚ್ಚರವಾಗಿರಬೇಕು. ಬಾಹ್ಯ ಶಕ್ತಿಗಳು ಮತ್ತು ಜನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಮತ್ತು ಪ್ರತಿಗಾಮಿ ಗುಂಪುಗಳ ಬಗ್ಗೆ ಜಾಗರೂಕತೆಯೊಂದಿಗೆ, ಕಾರ್ಯನಿರ್ವಹಿಸ ಬೇಕು.
9..ಜೆನ್-ಝೀ ದಂಗೆಯ ಆಶಯಕ್ಕೆ ವಿರುದ್ಧವಾದ ಯಾವುದೇ ಕೆಲಸವನ್ನು ಮಾಡದಂತೆ ನಾವು ಮಧ್ಯಂತರ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಬಯಸುತ್ತೇವೆ.
ಇದಲ್ಲದೆ, ನಾವು ಎಲ್ಲಾ ಪ್ರಗತಿಪರ ಶಕ್ತಿಗಳು ಮತ್ತು ಪ್ರಜ್ಞಾವಂತ ರಾಜಕಾರಣಿಗಳಿಗೂ ಸಹ ಹೊಸ ಪರಿಸ್ಥಿತಿಗೆ ಅನುಗುಣವಾಗಿ ಪರಿವರ್ತನಾ ರಾಜಕೀಯದ ಸಂಘಟನಾತ್ಮಕ ಉಪಕ್ರಮದಲ್ಲಿ ಒಗ್ಗೂಡಿ, ದೇಶಕ್ಕೆ ಪ್ರಗತಿಪರ ಪರಿಹಾರವನ್ನು ಒದಗಿಸುವಂತೆ ಪ್ರಾಮಾಣಿಕವಾಗಿ ಮನವಿ ಮಾಡುತ್ತೇವೆ.