Loading..

ಮಾಲೆಗಾಂವ್ ತೀರ್ಪು : ಸತ್ತವರು ಹಲವರು, ಅಪರಾಧಿಗಳಿಲ್ಲ ಯಾರೂ......

2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳಾಗಿದ್ದ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಸೇರಿದಂತೆ ಎಲ್ಲಾ ಏಳು ಜನರನ್ನು ಖುಲಾಸೆಗೊಳಿಸಿರುವುದು, ಈ ಪ್ರಕರಣದ ವಿಚಾರಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದವರಿಗೆ ಏನೂ ಆಶ್ಚರ್ಯವನ್ನುಂಟು ಮಾಡಲಿಲ್ಲ. ಈ ಪ್ರಕರಣದ ತನಿಖೆ ಮತ್ತು ವಿಚಾರಣೆಗಳು ಆರಂಭದಿಂದಲೂ ಹಲವು ತಿರುವುಗಳನ್ನು ಕಂಡವು.
ಘಟನೆಯ ಹಿನ್ನೆಲೆಯನ್ನು ನೆನಪಿಸಿಕೊಂಡರೆ. . .
ಸೆಪ್ಟೆಂಬರ್ 2008ರಲ್ಲಿ, ನವರಾತ್ರಿಯೊಂದಿಗೆ ರಂಜಾನ್ ತಿಂಗಳೂ ಜೊತೆಗೂಡಿ ಬಂದಿತ್ತು. ಆಗ ಮಹಾರಾಷ್ಟ್ರದ ಮಾಲೆಗಾಂವ್‌ನ ಭಿಕ್ಕು ಚೌಕಿನಲ್ಲಿ ಬಾಂಬ್ ಸ್ಫೋಟಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ನಮಾಜ್ ಸಮಯದಲ್ಲಿ ಕೋಮು ಸೌಹಾರ್ದತೆಯನ್ನು ಕದಡಲು ಎಲ್‌ಎಂಎಲ್ ಫ್ರೀಡಂ ಮೋಟಾರ್ ಸೈಕಲ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನ(ಐಇಡಿ)ವನ್ನು ಇರಿಸಲಾಗಿತ್ತು ಎಂದು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ದೃಢಪಡಿಸಿತ್ತು. ಈ ಸ್ಫೋಟದಲ್ಲಿ 10 ವರ್ಷದ ಬಾಲಕಿ ಫರ್ಹೀನ್ ಮತ್ತು 19 ವರ್ಷದ ಯುವಕ ಅಜರ್ ಸೇರಿದಂತೆ ಆರು ಜನರು ಸಾವನ್ನಪ್ಪಿ, 101 ಜನರು ಗಾಯಗೊಂಡಿದ್ದರು. ಸ್ಥಳೀಯ ಪೊಲೀಸರೊಂದಿಗೆ ಜೊತೆಗೂಡಿ ಮಹಾರಾಷ್ಟ್ರ ಎಟಿಎಸ್, ‘ಮೊಕಾ’ (ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅಡಿ ಮಾಲೆಗಾಂವ್ ಮತ್ತು ಮುಂಬೈನ ಒಂಬತ್ತು ಮುಸ್ಲಿಂ ಪುರುಷರನ್ನು ಬಂಧಿಸಿ, ಅವರು ಸಿಮಿಯಂತಹ ನಿಷೇಧಿತ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿ ತಕ್ಷಣ ಅವರನ್ನು ಜೈಲಿಗೆ ಕಳುಹಿಸಿತ್ತು. ಈ ಮಾಲೆಗಾಂವ್ ಸ್ಫೋಟಕ್ಕಿಂತ ಮುಂಚೆ ಫೆಬ್ರವರಿ 2007ರಲ್ಲಿ ಪಾಣಿಪತ್‌ನಲ್ಲಿ ಪಾಕಿಸ್ತಾನಕ್ಕೆ ತೆರಳುತ್ತಿದ್ದ ಸಂಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ, ಮೇ 2007ರಲ್ಲಿ ಹೈದರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ಮತ್ತು ಅಕ್ಟೋಬರ್ 2007ರಲ್ಲಿ ಅಜ್ಮೀರ್ ದರ್ಗಾದಲ್ಲಿ ಸರಣಿ ಸ್ಫೋಟಗಳು ನಡೆದಿದ್ದವು. ಎಲ್ಲೆಡೆ ಉಂಟಾದ ಭಾರೀ ಸಾವು-ನೋವುಗಳಲ್ಲಿ ಹೆಚ್ಚಿನವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಎಲ್ಲಾ ಪ್ರಕರಣಗಳಲ್ಲಿ ಕಂಡುಬರುವ ಒಂದು ಸಾಮಾನ್ಯ ಮಾದರಿಯು ಇದೆಲ್ಲವೂ ಒಂದು ನಿರ್ದಿಷ್ಟ ಗುಂಪು ಅಥವಾ ಸಂಘಟನೆಯ ಕೈವಾಡವಾಗಿರಬಹುದು ಎಂದು ಸೂಚಿಸುತ್ತಿತ್ತು.
ಮಾಲೆಗಾಂವ್ ಸ್ಫೋಟವಾಗುವ ಒಂದು ವರ್ಷ ಮೊದಲು, ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಹಿಂದೂ ಉಗ್ರಗಾಮಿ ಗುಂಪುಗಳ ಸದಸ್ಯರ ಮನೆಗಳಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದವು ಎಂಬುದು ಗಮನಾರ್ಹ. ನಾಂದೇಡ್‌ನಲ್ಲಿ ಸ್ಫೋಟಕಗಳನ್ನು ಜೋಡಿಸುವಾಗ ಇಬ್ಬರು ಬಜರಂಗದಳ ಕಾರ್ಯಕರ್ತರು ಸಾವನ್ನಪ್ಪಿದ್ದರು. ಪರ್ಭಾನಿ, ಪೂರ್ಣಾ ಮತ್ತು ಜಲ್ನಾದಲ್ಲಿ ಕೆಲವು ನಿಗೂಢ ಸ್ಫೋಟಗಳು ನಡೆದಾಗ, ಬಹುಶಃ ಹಿಂದುತ್ವ ಕಾರ್ಯಕರ್ತರು ಯಾವುದೋ ಕಾರ್ಯಾಚರಣೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ 2008 ಮುಗಿಯುವ ಮೊದಲು ಯಾವುದೇ ನಿರ್ಣಾಯಕ ಪ್ರಗತಿಯಾಗಲಿಲ್ಲ. ಮಾಲೆಗಾಂವ್ ಸ್ಫೋಟಗಳ ಸುಳಿವುಗಳನ್ನು ಆಧರಿಸಿ ಮಹಾರಾಷ್ಟ್ರ ಎಟಿಎಸ್, ಆರ್‌ಎಸ್‌ಎಸ್ ನಾಯಕಿ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್, ಸಂಘ ಪರಿವಾರದ ಅಂಗಸಂಸ್ಥೆಯಾದ ಅಭಿನವ್ ಭಾರತ್ ಸದಸ್ಯ ಸಮೀರ್ ಕುಲಕರ್ಣಿ ಮತ್ತು ಹಿಂದುತ್ವದ ಒಲವು ಹೊಂದಿರುವ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಅವರ ಮೇಲೆ ದಾಳಿ ಮಾಡಿತು. 2009ರಲ್ಲಿ, ಎಟಿಎಸ್ ನಿಜವಾದ ಸಂಚುಕೋರರ ವಿವರ, ಸ್ಫೋಟಗಳ ಯೋಜನೆ ಹಾಗೂ ಕಾರ್ಯಯೋಜನೆಯ ರೀತಿಯನ್ನೊಳಗೊಂಡ ವಿವರಗಳ 4,528 ಪುಟಗಳ ಚಾರ್ಜ್ ಶೀಟ್ ಅನ್ನು ಸಲ್ಲಿಸಿತು. ಕರ್ನಲ್ ಪುರೋಹಿತ್ ಬಾಂಬುಗಳಿಗೆ ಆರ್‌ಡಿಎಕ್ಸ್ ಒದಗಿಸಿದ್ದಾರೆ ಎಂದು ಶಂಕಿಸಲಾಗಿತ್ತು. ಆಗ್ನೇಯ ಗುಜರಾತ್‌ನಲ್ಲಿ ನಡೆದ 1998ರ ಕ್ರೈಸ್ತರ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತೊಬ್ಬ ಹಿಂದುತ್ವವಾದಿ, ಸ್ವಾಮಿ ಅಸೀಮಾನಂದ ಅವರನ್ನು ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟದ ಪ್ರಮುಖ ಶಂಕಿತ ಎಂದು ಸಿಬಿಐ ಹರಿದ್ವಾರದಲ್ಲಿ ಬಂಧಿಸಿತು. ಅಸೀಮಾನಂದ 42 ಪುಟಗಳ ಆಘಾತಕಾರಿ ತಪ್ಪೊಪ್ಪಿಗೆಯನ್ನು ನೀಡಿದ್ದು, ಅದರಲ್ಲಿ ಅವರು ಅಜ್ಮೀರ್ ದರ್ಗಾ, ಮೆಕ್ಕಾ ಮಸೀದಿ, ಮಾಲೆಗಾಂವ್ ಮತ್ತು ಸಂಜೋತಾ ಎಕ್ಸ್ ಪ್ರೆಸ್ ನಲ್ಲಿ ಭಯೋತ್ಪಾದಕ ದಾಳಿಗಳನ್ನು ಯೋಜಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಸ್ವತಃ ಆರ್‌ಎಸ್‌ಎಸ್ ನಾಯಕರಾಗಿರುವ ಅವರು, ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಸೇರಿದಂತೆ ಇತರ ಹಿರಿಯ ಆರ್‌ಎಸ್‌ಎಸ್ ಹಾಗೂ ಹಿಂದುತ್ವವಾದಿ ನಾಯಕರೊಂದಿಗೆ ಮುಸ್ಲಿಂ ಧಾರ್ಮಿಕ ಸ್ಥಳಗಳ ಮೇಲೆ ಸರಣಿ ಬಾಂಬ್ ದಾಳಿಗಳನ್ನು ಆಯೋಜಿಸುವ ಯೋಜನೆಗಳನ್ನು ರೂಪಿಸಲಾಗಿತ್ತು ಎಂದು ಬಹಿರಂಗಪಡಿಸಿದ್ದರು. ಆಶ್ಚರ್ಯಕರ ಸಂಗತಿಯೆಂದರೆ, ಪ್ರಕರಣವನ್ನು 2011ರಲ್ಲಿ ಎನ್‌ಐಎಗೆ ವರ್ಗಾಯಿಸಿದಾಗ, ಈಗಾಗಲೇ ಸಲ್ಲಿಸಲಾದ ಆರೋಪ ಪಟ್ಟಿಯನ್ನೇ ಮುಂದುವರಿಸುವ ಬದಲು ಈ ಸಂಸ್ಥೆ ಮರು ತನಿಖೆ ಮಾಡಲು ನಿರ್ಧರಿಸಿತು. 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಹೇಮಂತ್ ಕರ್ಕರೆ ನೇತೃತ್ವದ ಮಹಾರಾಷ್ಟ್ರ ಎಟಿಎಸ್ ಆರಂಭದಲ್ಲಿ ತನಿಖೆ ನಡೆಸಿ ಮಾಲೆಗಾಂವ್ ಸ್ಫೋಟಗಳಲ್ಲಿ ಸಾಧ್ವಿ ಪ್ರಜ್ಞಾ, ಕರ್ನಲ್ ಪುರೋಹಿತ್, ಮೇಜರ್ ರಣೇಶ್ ಉಪಾಧ್ಯಾಯ ಮತ್ತು ಇತರರು ಭಾಗಿಯಾಗಿರುವುದನ್ನು ಬಹಿರಂಗಪಡಿಸಿತ್ತು. ಆದರೆ ತನಿಖೆ ಮುಂದುವರಿಯುವ ಮೊದಲೇ ಕರ್ಕರೆ ಕೊಲ್ಲಲ್ಪಟ್ಟರು. ಮುಂಬೈ ದಾಳಿಯ ಸಮಯದಲ್ಲಿ ಭಯೋತ್ಪಾದಕರ ಮೇಲೆ ದಾಳಿ ನಡೆಸುವಾಗ ಅವರದೇ ಗುಂಡು ನಿರೋಧಕ ಜಾಕೆಟ್ ಬದಲಿಗೆ ಕಳಪೆ ಗುಂಡು ನಿರೋಧಕ ಜಾಕೆಟ್ ಅನ್ನು ಯಾರು ನೀಡಿದರು ಎಂಬ ಪ್ರಶ್ನೆಗಳು ಉದ್ಭವಿಸಿದವು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬದಲಾದ ತನಿಖೆಯ ದಿಕ್ಕು
ಸರಣಿ ಸ್ಫೋಟಗಳಲ್ಲಿ ಆರೋಪಿಗಳೆಂದು ಹಿಂದುತ್ವ ಕಾರ್ಯಕರ್ತರನ್ನು ಬಂಧಿಸಿದ ದಿನದಿಂದ ಇದರಲ್ಲಿ ಮೋಸ ನಡೆದಿದೆ ಎಂದು ಕೂಗಾಡುತ್ತಿದ್ದ ಬಿಜೆಪಿ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, ತನಿಖೆಯ ದಿಕ್ಕು ಬದಲಾಯಿತು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲಿಯನ್ ಪತ್ರಕರ್ತರ ಮುಂದೆ ಬಹಿರಂಗವಾಗಿ, ಮಹಾರಾಷ್ಟ್ರ ಎಟಿಎಸ್ ನಡೆಸಿದ್ದ ಗಂಭೀರ ತನಿಖೆಯು ಕುಸಿದಿದ್ದು ದುರ್ಬಲ ಸಾಕ್ಷ್ಯಾಧಾರಗಳಿಂದಾಗಿ ಅಲ್ಲ; ಆರೋಪಿಗಳಿಗೆ ಜಾಮೀನು ತಪ್ಪಿಸಲು ಕಾನೂನುಬದ್ಧ ಗಡುವನ್ನು ಪೂರೈಸಿದ 90 ದಿನಗಳಲ್ಲಿಯೇ ಎಟಿಎಸ್ ತನ್ನ ಆರೋಪ ಪಟ್ಟಿಯನ್ನು ಸಲ್ಲಿಸಿದೆ ಎಂದು ವಿವರಿಸಿದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ, ಎನ್‌ಐಎಯ ಹಿರಿಯ ಅಧಿಕಾರಿಗಳು ಆರೋಪಿಗಳ ಬಗ್ಗೆ “ಮೃದು” ಧೋರಣೆ ತಳೆಯುವಂತೆ ರೋಹಿಣಿ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಆದರೆ ಅವರು ರಾಜಿ ಮಾಡಿಕೊಳ್ಳಲು ನಿರಾಕರಿಸಿ ಪ್ರಕರಣದಿಂದ ತಾವೇ ಹಿಂದೆ ಸರಿದರು.
2016ರಲ್ಲಿ, ಆರು ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸಲು ಸಾಕಷ್ಟು ಪುರಾವೆಗಳಿವೆ ಎಂದು ಎನ್‌ಐಎ ಹೇಳಿದ್ದರೂ ಸಹ, ಅದು ಎಟಿಎಸ್ ತನಿಖೆಯನ್ನು ಟೀಕಿಸಿ ಪೂರಕ ಆರೋಪಪಟ್ಟಿ ಸಲ್ಲಿಸಿತು. ಅಪರಾಧ ನಡೆದ ಸ್ಥಳದಿಂದ ಯಾವುದೇ ಹೆಚ್ಚುವರಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ಎನ್‌ಐಎಯ ಆರೋಪಪಟ್ಟಿ ಸ್ಪಷ್ಟವಾಗಿ ಹೇಳಿದ್ದು, ಪ್ರಕರಣದ ವರ್ಗಾವಣೆಯಲ್ಲಿನ ಸಮಯದಲ್ಲಿನ ವಿಳಂಬವನ್ನು ದೂಷಿಸಿದೆ. ಎನ್‌ಐಎಯ ಆರೋಪಪಟ್ಟಿಯಲ್ಲಿ ಯಾವುದೇ ಹೊಸ ಸಾಕ್ಷಿಗಳನ್ನು ಸೇರಿಸಲಾಗಿಲ್ಲ. ಬದಲಿಗೆ 2008-09ರಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಗಳನ್ನು ನೀಡಿದ ಕೆಲವು ಸಾಕ್ಷಿಗಳ ಹೇಳಿಕೆಗಳನ್ನು ಮರು ದಾಖಲಿಸಿದಾಗ, ಅವರು ತಮ್ಮ ಹಿಂದಿನ ಹೇಳಿಕೆಗಳನ್ನು ನಿರಾಕರಿಸಿದರು.
ಹೀಗೆ, ಸಾಧ್ವಿ ಪ್ರಜ್ಞಾ ವಿರುದ್ಧ “ಸಾಕಷ್ಟು ಪುರಾವೆಗಳು ಸಿಕ್ಕಿಲ್ಲ” ಎಂದು ಎನ್‌ಐಎ ಅವರಿಗೆ ಕ್ಲೀನ್‌ಚಿಟ್ ನೀಡಿತು. ಆದರೆ, ಸ್ಫೋಟಕ್ಕೆ ಪ್ರಜ್ಞಾಸಿಂಗ್ ಹೆಸರಿನಲ್ಲಿದ್ದ ಎಲ್‌ಎಂಎಲ್ ಮೋಟಾರ್ ಸೈಕಲ್ ಅನ್ನು ಬಳಸಲಾಗಿದೆ ಎಂದು ಎಟಿಎಸ್ ಹೇಳಿತ್ತು. ಆದರೂ ಮುಂಬೈ ಹೈಕೋರ್ಟಿನಿಂದ ಅವರಿಗೆ ಜಾಮೀನು ದೊರೆತರೂ, ಈ ಸ್ಫೋಟದಲ್ಲಿ ಬಲಿಯಾದ ಒಬ್ಬರ ಕುಟುಂಬದ ವಿರೋಧದಿಂದಾಗಿ ಅವರನ್ನು ಪ್ರಕರಣದಿಂದ ಬಿಡುಗಡೆ ಮಾಡಲಾಗಲಿಲ್ಲ. ಅವರನ್ನು ಬಿಡುಗಡೆ ಮಾಡುವಂತೆ ಎನ್‌ಐಎ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಿದ ಅಂದಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಡಿ.ಟೆಕಲೆ ಅವರನ್ನು ವರ್ಗಾಯಿಸಲಾಯಿತು. ಎಟಿಎಸ್ 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಿದ ನಂತರವೂ, 10 ವರ್ಷಗಳ ಸುದೀರ್ಘ ವಿಳಂಬದ ನಂತರ 2018ರಲ್ಲಿ ಒಟ್ಟು 239 ಸಾಕ್ಷಿಗಳ ವಿಚಾರಣೆ ಪ್ರಾರಂಭವಾಯಿತು. ಗಮನಾರ್ಹವಾಗಿ, ನ್ಯಾಯಾಲಯದ 1,087 ವಿಚಾರಣೆಗಳಲ್ಲಿ ಪ್ರಜ್ಞಾ ಠಾಕೂರ್ ಕೇವಲ 34 ಬಾರಿ ಮಾತ್ರ ಹಾಜರಾಗಿದ್ದರು. ಅವರ ಗೈರುಹಾಜರಿಗೆ ಎನ್‌ಐಎ ನ್ಯಾಯಾಲಯದಲ್ಲಿ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ.
ನ್ಯಾಯಾಧೀಶರ ನಿರಂತರ ಬದಲಾವಣೆ: ಸುದೀರ್ಘ ನ್ಯಾಯಾಂಗ ಪ್ರಕ್ರಿಯೆ
ಒಟ್ಟಾರೆಯಾಗಿ, ಈ ಪ್ರಕರಣವನ್ನು ಐದು ನ್ಯಾಯಾಧೀಶರು ನಿರ್ವಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಷ್ಟೊಂದು ವರ್ಗಾವಣೆಗಳು ಏಕೆ ನಡೆದಿವೆ ಎಂಬ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲ. ತಮ್ಮ ತೀರ್ಪಿನಲ್ಲಿ, ನ್ಯಾಯಾಧೀಶರಲ್ಲಿ ಒಬ್ಬರು ಜನರನ್ನು ಕೊಲ್ಲುವ ಉದ್ದೇಶದಿಂದ ಸ್ಫೋಟವನ್ನು ನಡೆಸಲಾಗಿದೆ ಎಂದು ಸಾಬೀತಾಗಿದೆ ಎಂದು ಹೇಳಿದ್ದಾರೆ. ಅವರು ಮೃತರು ಮತ್ತು ಗಾಯಗೊಂಡವರ ಕುಟುಂಬಗಳಿಗೆ ಸಾಂಕೇತಿಕ ಪರಿಹಾರವನ್ನು ಸಹ ನೀಡಿದರು. ತನಿಖೆ ಮತ್ತು ನಂತರದ ಕಾನೂನು ಕ್ರಮಗಳು, ಅಕ್ರಮಗಳು ಮತ್ತು ದೋಷಪೂರಿತ ಕಾರ್ಯವಿಧಾನದಿಂದ ತುಂಬಿದ್ದವು. ಹಲವಾರು ವರದಿಗಳು, ಸಾಕ್ಷ್ಯಗಳ ದೋಷಪೂರಿತ ನಿರ್ವಹಣೆ ಮತ್ತು ಸರಿಯಾದ ಸುರಕ್ಷತಾ ಕ್ರಮಗಳ ಕೊರತೆಯನ್ನು ಎತ್ತಿ ತೋರಿಸಿವೆ. ರೋಹಿಣಿ ಸಾಲಿಯನ್ ಪತ್ರಿಕೆಗಳೊಂದಿಗೆ ಮಾತನಾಡುತ್ತಾ, “ಇದು ಹೀಗೆಯೇ ಆಗುತ್ತದೆ ಎಂದು ಗೊತ್ತಿತ್ತು. ನಿಜವಾದ ಸಾಕ್ಷ್ಯಗಳನ್ನು ಮಂಡಿಸದಿದ್ದರೆ ಏನಾಗಬೇಕಿತ್ತೋ ಅದೇ ಆಗುವುದು ನಿರೀಕ್ಷಿತ” ಎಂದು ಆರೋಪಿಸಿದ್ದಾರೆ. ತಾನು ಸಲ್ಲಿಸಿದ ಸಾಕಷ್ಟು ಪುರಾವೆಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು ಎಂದು ಹೇಳಿದ ಅವರು, ಆರೋಪಿಗಳ ಪಿತೂರಿ ಸಭೆಗಳಿಗೆ ಸಂಬಂಧಿಸಿದ ಹದಿಮೂರು ಪ್ರಮುಖ ಸಾಕ್ಷಿಗಳ ಹೇಳಿಕೆಗಳು ನಾಪತ್ತೆಯಾಗಲು ಹೇಗೆ ಸಾಧ್ಯ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ನ್ಯಾಯಾಲಯಕ್ಕೆ ದೃಢವಾದ ಪುರಾವೆಗಳು ಸಿಗಲಿಲ್ಲ. ಮತ್ತು ಮೂಲ ಹೇಳಿಕೆಗಳಿಲ್ಲದೆ ಪ್ರಾಸಿಕ್ಯೂಷನ್ ಹೆಣಗಾಡಿತು. ನ್ಯಾಯಾಲಯವು ನಕಲು ಪ್ರತಿಗಳನ್ನು ಸ್ವೀಕರಿಸಲು ನಿರಾಕರಿಸಿತು ಮತ್ತು ಕಾಣೆಯಾದ ದಾಖಲೆಗಳನ್ನು ಹುಡುಕಲು ಮಾಡಿದ ಪ್ರಯತ್ನಗಳು ವಿಫಲವಾದವು. ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ಬದಲಾಯಿಸಿದರು ಅಥವಾ ಪ್ರತಿಕೂಲವಾಗಿ ಬದಲಾದರು. ಕೊನೆಗೆ, ನ್ಯಾಯಾಧೀಶರು ಹೇಳಿದಂತೆ, ಪ್ರಾಸಿಕ್ಯೂಷನ್ ತನ್ನ ಪ್ರಕರಣವನ್ನು ಸಾಬೀತುಪಡಿಸಲು ವಿಫಲವಾಯಿತು. ಅವರು, 2006ರ ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಎಲ್ಲಾ 12 ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನೂ ಉಲ್ಲೇಖಿಸಿದ್ದಾರೆ.
ಸಂಜೋತಾ ಎಕ್ಸ್ ಪ್ರೆಸ್ ಮತ್ತು ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಗಳ ಗತಿಯೂ ಹೀಗೆ ಆಗಿತ್ತು. ಅಲ್ಲಿ ಸಿಬಿಐ, ಎನ್‌ಐಎ ಮತ್ತು ಎಸ್‌ಟಿಎಫ್‌ನಂತಹ ತನಿಖಾ ಸಂಸ್ಥೆಗಳು ಸಹ ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಲು ವಿಫಲವಾದವು. ಪರಿಣಾಮ: ಆರ್‌ಎಸ್‌ಎಸ್-ಬಿಜೆಪಿ-ಸಂಘ ಪರಿವಾರದೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ಮೆಕ್ಕಾ ಮಸೀದಿ ಪ್ರಕರಣದಲ್ಲಿ, ನ್ಯಾಯಾಧೀಶ ರವೀಂದ್ರ ರೆಡ್ಡಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ನಂತರ ಕೋಪ ಮತ್ತು ದುಃಖದಿಂದ ರಾಜೀನಾಮೆ ನೀಡಿದರು. ಅಂದರೆ, ಸ್ಫೋಟ ಸಂಭವಿಸಿದೆ, ವಿಧ್ವಂಸಕ ಕೃತ್ಯಗಳಿಂದ ಸಾವು ನೋವುಗಳು ಸಂಭವಿಸಿವೆ. ಆದರೆ ಅದನ್ನು ಮಾಡಿದವರು ಯಾರೂ ಇಲ್ಲ!
ಹಿಂದುತ್ವವಾದಿ ಗುಂಪುಗಳು ಹಾಗೂ ಅಧಿಕಾರಸ್ಥರು, ಪೊಲೀಸ್ ಆಡಳಿತದ ಸಹಾಯದಿಂದ ಸಾಕ್ಷ್ಯಗಳನ್ನು ಮುಚ್ಚಿಹಾಕುವ ಮೂಲಕ, ಕೆಲವು ಸಾಕ್ಷಿಗಳನ್ನು ಹಣದಿಂದ ಖರೀದಿಸುವ ಮೂಲಕ ಅಥವಾ ಬೆದರಿಕೆ ಹಾಕುವ ಮೂಲಕ ಮಾಲೆಗಾಂವ್‌ನಲ್ಲಿ ಅಮಾಯಕ ಜನರನ್ನು ಕೊಂದವರನ್ನು ಖುಲಾಸೆಗೊಳಿಸಿ, ಅವರನ್ನು ಬಿಡುಗಡೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜನಾಂದೋಲನವೇ ಭಯೋತ್ಪಾದನೆಗೆ ಪರಿಹಾರ
ಭಯೋತ್ಪಾದಕರಿಗೆ ಯಾವುದೇ ಒಂದು ಜನಾಂಗ, ಧರ್ಮವಿಲ್ಲ ಎಂಬುದು ಸುಸ್ಪಷ್ಟ. ಅವರು ಭಯೋತ್ಪಾದಕರಷ್ಟೇ. ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಲಕ್ಷಾಂತರ ಜನರನ್ನು ಹೆದರಿಸಲು, ತಮ್ಮ ನಿರ್ದಯ ದಬ್ಬಾಳಿಕೆ ಮತ್ತು ಶೋಷಣೆಯ ವಿರುದ್ಧ ದುಡಿಯುವ ಜನಸಾಮಾನ್ಯರ ಒಗ್ಗಟ್ಟಿನ ಚಳುವಳಿಯನ್ನು ತಡೆಯಲು, ಆಳುವ ಸಾಮ್ರಾಜ್ಯಶಾಹಿ-ಬಂಡವಾಳಶಾಹಿ ವರ್ಗ ಭಯೋತ್ಪಾದಕರನ್ನು ಹುಟ್ಟುಹಾಕಿ ಮತಿಹೀನ ಹಿಂಸಾಚಾರದ ಮೂಲಕ ನಡೆಸುವ ಸಂಚು ಇದು. ಭಯೋತ್ಪಾದನೆಯ ವಿರುದ್ಧ ಹೋರಾಟದ ನಿಜವಾದ ಅಸ್ತ್ರವೆಂದರೆ, ಅದು ತೀವ್ರ ಕೋಮುವಾದಿ ಹಿಂದೂ ಮೂಲಭೂತವಾದಿ ಗುಂಪುಗಳಾಗಲಿ ಅಥವಾ ಇಸ್ಲಾಮಿಕ್ ಮೂಲಭೂತವಾದಿ ಗುಂಪುಗಳಾಗಲಿ, ಅವುಗಳ ವಿರುದ್ಧ ಸರಿಯಾದ ಕ್ರಾಂತಿಕಾರಿ ನಾಯಕತ್ವದಲ್ಲಿ ಜನರಲ್ಲಿ ಉನ್ನತ ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕತೆಯನ್ನು ಬೆಳೆಸಿ ಜಾಗೃತಿಯನ್ನು ಉಂಟು ಮಾಡುವುದೇ ಆಗಿದೆ.