Loading..

ಹಿಟ್ಲರನ ಫ್ಯಾಸೀವಾದವನ್ನು ಸೋಲಿಸಿದ ವಿಜಯಕ್ಕೆ ಈಗ 80 ವರ್ಷ ಮಾನವಕುಲವನ್ನು ರಕ್ಷಿಸಿದ ಮಹಾನ್ ನಾಯಕ ಸ್ಟಾಲಿನ್!

ಭಾಗ-02

(1945ರ ಮೇ 2ರಂದು ಸೋವಿಯತ್ ಒಕ್ಕೂಟದ ಕೆಂಪು ಸೈನ್ಯವು ರಾಜಧಾನಿ ಬರ್ಲಿನ್ ತಲುಪಿ, ಜರ್ಮನಿಯನ್ನು ನಾಜಿ಼ ಆಳ್ವಿಕೆಯಿಂದ ಮುಕ್ತಗೊಳಿಸಿತು. ಹಿಮ್ಮೆಟ್ಟುತ್ತಿದ್ದ ಜರ್ಮನ್ ಸೈನ್ಯವನ್ನು ಬೆನ್ನಟ್ಟಿಕೊಂಡು ಬಂದ ಕೆಂಪು ಸೈನ್ಯವು ಅಲ್ಲಿನ ಸಂಸತ್ ಭವನ ‘ರೀಚ್‌ಸ್ಟಾö್ಯಗ್’ನ್ನು ವಶಪಡಿಸಿಕೊಂಡು ಅದರ ಗೋಪುರದ ಮೇಲೆ ಕೆಂಬಾವುಟವನ್ನು ಹಾರಿಸಿತು. ಇದರೊಂದಿಗೆ, ಜರ್ಮನಿ-ಇಟಲಿ-ಜಪಾನ್‌ಗಳ ಫ್ಯಾಸಿಸ್ಟ್ ದುಷ್ಟಕೂಟವು ಮಣ್ಣಾದಂತಾಯಿತು. 1945ರ ಮೇ ೮ರಂದು ಜರ್ಮನಿಯಲ್ಲಿ ಅಧಿಕಾರದಲ್ಲಿದ್ದವರು ಬೇಷರತ್ತಾಗಿ ಕೆಂಪು ಸೈನ್ಯಕ್ಕೆ ಶರಣಾದರು. 2025ರ ಮೇ 8 – ಈ ಅಮೋಘ ವಿಜಯದ 80 ನೇ ವಾರ್ಷಿಕ. ಈ ಲೇಖನದ ಮೊದಲ ಭಾಗವು ಕಾರ್ಮಿಕ ದೃಷ್ಟಿಕೋನದ 2025ರ ಜೂನ್ ಮಾಸಿಕದ ಸಂಚಿಕೆಯಲ್ಲಿ ಪ್ರಕಟವಾಗಿದೆ. ಭಾಗ 1 ರಲ್ಲಿ ಹಿಟ್ಲರ್ ಮತ್ತು ಫ್ಯಾಸೀವಾದದ ಉದಯದ ಹಿನ್ನೆಲೆಯನ್ನು ಚರ್ಚಿಸಲಾಗಿದೆ.)
ಯುದ್ಧದ ಕುರಿತು ಸ್ಟಾಲಿನ್‌ರ ಮುನ್ನೋಟ
ಆಗ ಮಹಾನ್ ಸ್ಟಾಲಿನ್ ಅವರ ನೇತೃತ್ವದಲ್ಲಿದ್ದ ಸೋವಿಯತ್ ಒಕ್ಕೂಟವು, ಸಾಮ್ರಾಜ್ಯಶಾಹಿ ಶಕ್ತಿಗಳಿಂದ ಯಾವುದೇ ಸಮಯದಲ್ಲಿ ಆಕ್ರಮಣಕ್ಕೊಳಗಾಗುವ ಆತಂಕವನ್ನು ಎದುರಿಸುತ್ತಿದ್ದ ಏಕೈಕ ಸಮಾಜವಾದಿ ರಾಷ್ಟ್ರವಾಗಿತ್ತು. ಆದ್ದರಿಂದ, ವಿದೇಶಿ ಆಕ್ರಮಣ ಮತ್ತು ಯುದ್ಧದಲ್ಲಿ ಸಿಲುಕಿಕೊಳ್ಳುವುದರಿಂದ ಸಮಾಜವಾದದ ಮುನ್ನಡೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂಬುದು ಸ್ಟಾಲಿನ್‌ರ ಅಭಿಮತವಾಗಿತ್ತು. ಹಾಗಾಗಿ, ಹಿಟ್ಲರ್‌ನನ್ನು ಎದುರಿಸಲು ಅವರು ಬ್ರಿಟನ್ ಮತ್ತು ಫ್ರಾನ್ಸ್ ನೊಂದಿಗೆ ಉಕ್ಕಿನಂತಹ ಮಿಲಿಟರಿ ಮೈತ್ರಿಗೆ ಮುಂದಾದರು. ಆದರೆ, ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ಶಕ್ತಿಗಳು ಕೈಕೊಸರಿಕೊಂಡವು. ಏಕೆಂದರೆ, ಸೋವಿಯತ್ ಸಮಾಜವಾದವನ್ನು ಹಿಟ್ಲರ್ ನಾಶ ಮಾಡುವುದನ್ನು ಅವು ಬಯಸಿದ್ದವು. ಅಂದು ಸೋವಿಯತ್ ಒಕ್ಕೂಟದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳದರ ಪರಿಣಾಮದಿಂದಾಗಿ ಅಂತಿಮವಾಗಿ ಇಡೀ ಮಾನವಕುಲವು ಬಹುದೊಡ್ಡ ಹಾನಿಯನ್ನು ಅನುಭವಿಸುವಂತಾಯಿತು.
ಈ ನಿಟ್ಟಿನಲ್ಲಿ, ಭಾರತದ ಸ್ವಾತಂತ್ರ್ಯ ಹೋರಾಟದ ರಾಜಿರಹಿತ ಪಂಥದ ನೇತಾರರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕಾಣ್ಕೆ ಗಮನಾರ್ಹವಾಗಿದೆ. 1939ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ತ್ರಿಪುರಿ ಅಧಿವೇಶನದಲ್ಲಿ, ಕಾಂಗ್ರೆಸ್ ಅಧ್ಯಕ್ಷರಾಗಿ, “ಜನತಾಂತ್ರಿಕ ಶಕ್ತಿಗಳೆಂದು ಕರೆಯಲ್ಪಡುವ ಫ್ರಾನ್ಸ್ ಮತ್ತು ಬ್ರಿಟನ್‌ಗಳು ಯುರೋಪಿಯನ್ ರಾಜಕೀಯದಿಂದ ಸೋವಿಯತ್ ರಷ್ಯಾವನ್ನು ಅಳಿಸಿಹಾಕಲು ಇಟಲಿ ಮತ್ತು ಜರ್ಮನಿ ನಡೆಸುತ್ತಿರುವ ಪಿತೂರಿಯಲ್ಲಿ ಸೇರಿಕೊಂಡಿವೆ.. ಹಿಟ್ಲರ್‌ವಾದದ ಸೋಲು ಎಂದರೆ ಕಮ್ಯುನಿಸಂನ ಸ್ಥಾಪನೆ” ಎಂದು ಸೋವಿಯತ್ ಒಕ್ಕೂಟವನ್ನು ನಾಶಮಾಡಲು ಸಾಮ್ರಾಜ್ಯಶಾಹಿ ಬಣವು ನಡೆಸುತ್ತಿದ್ದ ಪಿತೂರಿಯ ಬಗ್ಗೆ ಅವರು ತಮ್ಮ ಆತಂಕವನ್ನು ಹೀಗೆ ವ್ಯಕ್ತಪಡಿಸಿದ್ದರು (ಕ್ರಾಸ್‌ರೋಡ್ಸ್ ಕೃತಿಯಲ್ಲಿ).
ಐತಿಹಾಸಿಕ ಮಾಸ್ಕೋ ವಿಚಾರಣೆ
ಆದರೆ, ಯುದ್ಧಕ್ಕೆ ಮುಂಚಿನ ಸೋವಿಯತ್ ಒಕ್ಕೂಟದ ಪ್ರಗತಿ ಮತ್ತು ಅದರೊಂದಿಗೆ ಸ್ಟಾಲಿನ್‌ರ ಪಯಣವು ಸುಗಮವಾಗಿರಲಿಲ್ಲ ಹಾಗೂ ಶಾಂತಿಯುತವಾಗಿಯೂ ಇರಲಿಲ್ಲ. ಪ್ರಮುಖ ಸಮಿತಿಗಳಲ್ಲಿದ್ದ ಟ್ರಾಟ್‌ಸ್ಕಿ, ಬುಖಾರಿನ್, ಕಾಮೆನೆವ್, ಝಿನೋವೀವ್ ಮತ್ತಿತರ ಪಕ್ಷದ್ರೋಹಿಗಳು ತಮ್ಮ ಸ್ಥಾನದ ಪ್ರಭಾವವನ್ನು ಬಳಸಿಕೊಂಡು ಪಕ್ಷದೊಳಗೆ ಹಾಗೂ ಸರ್ಕಾರ ಮತ್ತು ಕೆಂಪು ಸೇನೆಯ ಒಳಗೂ ಸಹ ರಹಸ್ಯಮಯ ಗುಂಪುಗಳನ್ನು ಕಟ್ಟಿಕೊಂಡು, ಪಕ್ಷವಿರೋಧಿ ಹಾಗೂ ಪ್ರಭುತ್ವ ವಿರೋಧಿ ಚಟುವಟಿಕೆಗಳನ್ನು ಮಾಡಲಾರಂಭಿಸಿದರು. ಈ ಪಿತೂರಿಗಾರರು ಎರಡನೇ ಮಹಾಯುದ್ಧಕ್ಕೆ ಮುನ್ನ ನಾಜಿ಼ ಜರ್ಮನಿಯ ಜತೆಯಲ್ಲಿ ಗುಪ್ತ ಒಪ್ಪಂದವನ್ನು ಮಾಡಿಕೊಂಡಿದ್ದರು. ಸೋವಿಯತ್ ಒಕ್ಕೂಟದ ಮೇಲೆ ಹಿಟ್ಲರ್‌ನ ದಾಳಿಯ ಲಾಭವನ್ನು ಪಡೆದು, ಪಕ್ಷ ಮತ್ತು ಸರ್ಕಾರದ ನಾಯಕರನ್ನು ಹತ್ಯೆಗೈದು, ಮಿಲಿಟರಿ ಕ್ಷಿಪ್ರದಂಗೆಯ ಮೂಲಕ ಅಧಿಕಾರವನ್ನು ತಮ್ಮ ಕೈವಶ ಮಾಡಿಕೊಳ್ಳುವ ಕುತ್ಸಿತ ಯೋಜನೆಯ ಒಂದು ನೀಲನಕ್ಷೆಯನ್ನು ಅವರು ಸಿದ್ಧಪಡಿಸಿದ್ದರು. ಎರಡನೇ ಮಹಾಯುದ್ಧವು ಆರಂಭವಾಗುವ ಸ್ವಲ್ಪ ಮೊದಲು ಸ್ಟಾಲಿನ್‌ರ ವಿಶ್ವಾಸಾರ್ಹ ಒಡನಾಡಿಯಾಗಿದ್ದ ಮತ್ತು ಪಕ್ಷ ಹಾಗೂ ಸರ್ಕಾರದ ಪ್ರಮುಖ ನಾಯಕರಲ್ಲಿ ಮತ್ತು ನೀತಿ ನಿರೂಪಕರಲ್ಲಿ ಒಬ್ಬರಾದ ಕಿರೋವ್ ಅವರನ್ನು ಲೆನಿನ್‌ಗ್ರಾಡ್‌ನಲ್ಲಿ ಸಂರಕ್ಷಿತ ಪ್ರದೇಶದ ಒಳಗಡೆಯೇ ಹತ್ಯೆ ಮಾಡಲಾಯಿತು. ಆಗ, ಈ ಪಿತೂರಿಯು ಬಯಲಾಯಿತು. ತನಿಖೆಯಿಂದ ಪಕ್ಷ, ಸರ್ಕಾರ ಮತ್ತು ಕೆಂಪು ಸೇನೆಯ ವಿವಿಧ ಹಂತಗಳಲ್ಲಿ ಪ್ರತಿ-ಕ್ರಾಂತಿಕಾರಿ ಗುಪ್ತ ಗುಂಪುಗಳು ಸಕ್ರಿಯವಾಗಿದ್ದು, ಮುಂಬರಲಿದ್ದ ಯುದ್ಧದ ಲಾಭವನ್ನು ಪಡೆದು ಪ್ರತಿ-ಕ್ರಾಂತಿಯನ್ನು ಪ್ರಚೋದಿಸಲು ಹಲವು ಶಕ್ತಿಗಳು ಕಾಯುತ್ತಿದ್ದವು ಎಂದು ಬೆಳಕಿಗೆ ಬಂತು. ಆ ಸಂದರ್ಭದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಸ್ಟಾಲಿನ್‌ರ ಬಳಿ ಬೇರೆ ದಾರಿಯಿರಲಿಲ್ಲ.
1933 ಮತ್ತು 1938ರ ನಡುವೆ ನಡೆದ ವಿವಿಧ ಪ್ರಕರಣಗಳ ವಿಚಾರಣೆಗಳ ಸಮಯದಲ್ಲಿ ಈ ಪಿತೂರಿಯ ಭಯಾನಕ ಸ್ವರೂಪವು ಇಡೀ ಜಗತ್ತಿಗೆ ತಿಳಿಯಿತು. 1933 ರಿಂದ ಈ ಆರೋಪಿತ ದೇಶದ್ರೋಹಿಗಳ ವಿಚಾರಣೆಗಳು ಬಹಿರಂಗವಾಗಿ ಮತ್ತು ಸಾರ್ವಜನಿಕರ ಸಂಪೂರ್ಣ ವೀಕ್ಷಣೆಯಲ್ಲಿ ನಡೆದವು. ಸ್ಟಾಲಿನ್ ಆಗಲಿ ಅಥವಾ ಇತರರು ಯಾರೇ ಆಗಲಿ, ಯಾರ ಹಸ್ತಕ್ಷೇಪವೂ ಇಲ್ಲದ ಮತ್ತು ಆರೋಪಿಗಳಿಗೆ ತಮ್ಮ ವಾದಗಳನ್ನು ಮಂಡಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ ಇಂತಹ ವಿಚಾರಣೆಯು ಇಡೀ ಜಗತ್ತಿನಲ್ಲೇ ಅಭೂತಪೂರ್ವವಾಗಿತ್ತು. ದೇಶವಿದೇಶಗಳ ಪತ್ರಕರ್ತರು, ನ್ಯಾಯವಾದಿಗಳು, ರಾಜತಾಂತ್ರಿಕರು ಮತ್ತು ರಾಜಕೀಯ ನಾಯಕರನ್ನು ವಿಚಾರಣಾ ಕೊಠಡಿಗಳಲ್ಲಿ ಉಪಸ್ಥಿತರಿರಲು ಆಹ್ವಾನ ನೀಡಲಾಗಿತ್ತು ಮತ್ತು ಅನೇಕರು ಸಂಪೂರ್ಣ ವಿಚಾರಣಾ ಪ್ರಕ್ರಿಯೆಯನ್ನು ವೀಕ್ಷಿಸಿದರು. ದೇಶದ್ರೋಹಿಗಳ ಇಂತಹ ಬಹಿರಂಗ ವಿಚಾರಣೆ, ಅದೂ ವಿದೇಶಿ ಪ್ರಮುಖರ ಸಮ್ಮುಖದಲ್ಲಿ, ಈ ಹಿಂದೆ ಜಗತ್ತಿನ ಯಾವುದೇ ದೇಶದಲ್ಲಿ ನಡೆದ ಉದಾಹರಣೆಗಳು ಇಲ್ಲವೇ ಇಲ್ಲ. ವಿಚಾರಣೆಯನ್ನು ಗಮನಿಸಿದವರೆಲ್ಲರೂ ಇಷ್ಟು ಮುಕ್ತವಾಗಿ ಮತ್ತು ಜನತಾಂತ್ರಿಕ ರೀತಿಯಲ್ಲಿ ನಡೆಸಿದ ನ್ಯಾಯನಿರ್ಣಯವನ್ನು ಜಗತ್ತು ಹಿಂದೆಂದೂ ಕಂಡೇ ಇರಲಿಲ್ಲ ಎಂದು ಘೋಷಿಸಿದರು. ಆಗ ನಡೆದಿರುವ ಘಟನೆಗಳನ್ನು ಅವರಲ್ಲಿ ಅನೇಕರು ತಮ್ಮ ಹಲವಾರು ಪುಸ್ತಕಗಳಲ್ಲಿ ವಿವರವಾಗಿ ದಾಖಲಿಸಿದ್ದಾರೆ. ನಿಸ್ಸಂದೇಹವಾಗಿ ಅಲ್ಲಿ ಪ್ರಭುತ್ವದ ವಿರುದ್ಧ ಬಹುದೊಡ್ಡ ಪಿತೂರಿಯು ನಡೆದಿತ್ತು ಎಂದೂ ಅವರು ಹೇಳಿದರು.
ಆಗ ಸೋವಿಯತ್ ಒಕ್ಕೂಟದಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ಮತ್ತು ವಿಚಾರಣೆಗಳ ಪ್ರತ್ಯಕ್ಷದರ್ಶಿಯಾಗಿದ್ದ ಜೋಸೆಫ್ ಡೇವಿಸ್, ವಿಚಾರಣೆಯ ಕಲಾಪಗಳನ್ನು ಗಮನಿಸಿದ ನಂತರ, ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಯಾವುದೇ ಒತ್ತಾಯವಿರಲಿಲ್ಲ ಮತ್ತು ಆರೋಪಿಗಳ ಅಪರಾಧಗಳನ್ನು ಸೋವಿಯತ್ ಸರ್ಕಾರವು ಯಾವುದೇ ಸಂದೇಹಕ್ಕೆ ಆಸ್ಪದವಿಲ್ಲದಂತೆ ಸಾಬೀತುಪಡಿಸಲು ಸಾಧ್ಯವಾಯಿತು ಎಂದು ತಮಗೆ ಮನವರಿಕೆಯಾಯಿತು ಎಂದು ತಮ್ಮ ಪ್ರಸಿದ್ಧ ಪುಸ್ತಕ “ಮಿಷನ್ ಟು ಮಾಸ್ಕೋ”ದಲ್ಲಿ ಬರೆದಿದ್ದಾರೆ.
ವಿಚಾರಣೆಯ ನಂತರ ಬೋಲ್ಶೆವಿಕ್ ಪಕ್ಷವನ್ನು ದೇಶದ್ರೋಹಿಗಳಿಂದ ಮತ್ತು ಪಿತೂರಿಗಾರರಿಂದ ಸ್ವಚ್ಛಗೊಳಿಸಲು ಒಂದು ಪೂರ್ಣ ಶುದ್ಧೀಕರಣ (Purging) ಕ್ರಿಯೆಯು ನಡೆಯಿತು. ಈ ಶುದ್ಧೀಕರಣ ಪ್ರಕ್ರಿಯೆಯು ಸ್ಟಾಲಿನ್ ನಡೆಸಿದ ಕ್ರೌರ್ಯ ಮತ್ತು ದಬ್ಬಾಳಿಕೆ ಎಂದು ಹಲವರು ದೂಷಿಸಿದರು. ಆದರೆ ಕಠಿಣ ಕ್ರಮಗಳನ್ನು ಕೈಗೊಳ್ಳದೆ ಹೋಗಿರದಿದ್ದರೆ, ಸೋವಿಯತ್ ಸಮಾಜವಾದವು ತೀವ್ರ ಅಪಾಯಕ್ಕೆ ಸಿಲುಕುತ್ತಿತ್ತು ಮತ್ತು ಹಿಟ್ಲರ್‌ನ ಫ್ಯಾಸೀವಾದದ ವಿರುದ್ಧ ವೀರಾವೇಶದ ವಿಜಯಶಾಲಿ ಯುದ್ಧವನ್ನು ನಡೆಸಲು ಆಗ ಸಾಧ್ಯವಾಗುತ್ತಿರಲಿಲ್ಲ ಎಂದು ಇತಿಹಾಸವು ಸಾಬೀತುಪಡಿಸಿದೆ. ಆ ಸಂಪೂರ್ಣ ಕಾರ್ಯಾಚರಣೆಯು ದೋಷಗಳಿಂದ ಮುಕ್ತವಾಗಿರಲಿಲ್ಲ ಎಂದು ಸ್ವತ: ಒಪ್ಪಿಕೊಂಡ ಸ್ಟಾಲಿನ್, “ಈ ಶುದ್ಧೀಕರಣದಲ್ಲಿ ಗಂಭೀರವಾದ ತಪ್ಪುಗಳು ಆಗಿಲ್ಲವೆಂದು ಹೇಳಲಾಗುವುದಿಲ್ಲ. ದುರದೃಷ್ಟವಶಾತ್, ನಮ್ಮ ನಿರೀಕ್ಷೆಯನ್ನೂ ಮೀರಿ ತಪ್ಪುಗಳು ನಡೆದವು. ಆದಾಗ್ಯೂ, 1933-1936ರ ಶುದ್ಧೀಕರಣವು ಅನಿವಾರ್ಯವಾಗಿತ್ತು ಮತ್ತು ಒಟ್ಟಾರೆಯಾಗಿ, ಅದರ ಫಲಿಶ್ರುತಿಗಳು ಪ್ರಯೋಜನಕಾರಿಯಾಗಿದ್ದವು” ಎಂದು ನಂತರ ಹೇಳಿದರು. (ಪ್ರಾಬ್ಲಮ್ಸ್ ಆಫ್ ಲೆನಿನಿಸಂ ಕೃತಿಯಲ್ಲಿ)
ಬ್ರಿಟನ್ನಿನ ಪ್ರಧಾನಿಯಾಗಿದ್ದ ಚರ್ಚಿಲ್, ಸ್ವಯಂ ಒಬ್ಬ ಕಟ್ಟಾ ಸಾಮ್ರಾಜ್ಯಶಾಹಿ ಮತ್ತು ತೀವ್ರ ಕಮ್ಯುನಿಸ್ಟ್ ವಿರೋಧಿಯಾಗಿದ್ದರೂ ಸಹ, 1942ರ ಫೆಬ್ರವರಿ 16ರಂದು ಮಾಡಿದ ರೇಡಿಯೋ ಭಾಷಣದಲ್ಲಿ, ಹಿಟ್ಲರ್‌ಗೆ, ಅವನು ನಿರಾಶನಾಗುವಂತೆ, ರಷ್ಯಾದಲ್ಲಿ ಒಬ್ಬನೇ ಒಬ್ಬ ‘ಫಿಫ್ತ್ ಕಾಲಮ್ನಿಸ್ಟ್’ (ನಾಜಿ಼ ಗೂಢಚಾರ) ಕೂಡ ಉಳಿದಿರಲಿಲ್ಲ ಎಂದು ಹೇಳಿದರು. ಹಿಟ್ಲರ್‌ನ ಮುಖ್ಯ ಹಿಂಬಾಲಕನಾಗಿದ್ದ ಗೋರಿಂಗ್ ಕೂಡ ‘ನಾನು ನಿರೀಕ್ಷಿಸಿದ್ದ ಕುಸಿತವು ಕೆಂಪು ಸೇನೆಯಲ್ಲಿ ಸಂಭವಿಸಲಿಲ್ಲ’ ಎಂದು ಹಿಟ್ಲರ್ ವಿಷಾದದಿಂದ ತನಗೆ ತಿಳಿಸಿದ್ದಾಗಿ 1942ರ ಮೇ 8ರಂದು ತನ್ನ ದಿನಚರಿಯಲ್ಲಿ ಬರೆದಿದ್ದಾನೆ. ಹಾಗೇಕಾಯಿತು? ಏಕೆಂದರೆ, ತಮ್ಮ ಕ್ರಾಂತಿಕಾರಿ ಜ್ಞಾನವನ್ನು ಬಳಸಿ ಸ್ಟಾಲಿನ್, ‘ಫಿಫ್ತ್ ಕಾಲಂ’ಗಳನ್ನು ಸಂಘಟಿಸುವ ಎಲ್ಲಾ ವಿಷಬೇರುಗಳನ್ನು ಬುಡಸಮೇತ ಕೀಳುವಲ್ಲಿ ಯಶಸ್ವಿಯಾಗಿದ್ದರು.
“ಅಂದ ಹಾಗೆ, ರಷ್ಯಾದ ವಿಚಾರಣೆಗಳು ನಕಲಿಯಲ್ಲ, ಬದಲಿಗೆ ಕ್ರಾಂತಿಯ ವಿಚಾರಗಳಿಗೆ ದ್ರೋಹ ಬಗೆದವರ ನಡುವೆ ಸ್ಟಾಲಿನ್ ಅವರನ್ನು ಮೂರ್ಖ ಪ್ರತಿಗಾಮಿ ಎಂದು ನೋಡುವವರ ನಡುವೆ ಒಂದು ಪಿತೂರಿ ನಡೆದಿದೆ ಎಂಬುದಕ್ಕೆ ಹೆಚ್ಚು ಹೆಚ್ಚು ಪುರಾವೆಗಳು ಸಿಗುತ್ತಿವೆ… ಆರಂಭದಲ್ಲಿ, ಇದು ಸುಳ್ಳು ಮತ್ತು ವಂಚನೆಯನ್ನು ಆಧರಿಸಿದ ಸರ್ವಾಧಿಕಾರಿಯ ದಬ್ಬಾಳಿಕೆಯ ಕೃತ್ಯಗಳೆಂದು ನಾನು ದೃಢವಾಗಿ ನಂಬಿದ್ದೆ, ಆದರೆ ಅದು ಭ್ರಮೆಯಾಗಿತ್ತು” ಎಂದು ಆಲ್ಬರ್ಟ್ ಐನ್‌ಸ್ಟೆೈನ್ ಕೂಡ ಹೇಳಿದ್ದಾರೆ.(ಹ್ಯಾಸ್ ಸೈನ್ಸ್ ಡಿಸ್ಕವರ್ಡ್ ಗಾಡ್ – ಎ. ಕೆ. ಕಾಟನ್ ಕೃತಿಯಲ್ಲಿ)
ಜರ್ಮನಿಯೊಂದಿಗೆ ಒಪ್ಪಂದದ ತಂತ್ರ
ಸೋವಿಯತ್ ಒಕ್ಕೂಟವು ದುರ್ಬಲವಾಗಿದೆ ಎಂದು ಹಿಟ್ಲರ್ ಬಗೆದಿದ್ದನ್ನು ಮತ್ತು ಆರಂಭದಲ್ಲಿ, ತನ್ನ ಶಕ್ತಿಶಾಲಿ ಪಾಶ್ಚಿಮಾತ್ಯ ಶತ್ರುಗಳನ್ನು ಸೋಲಿಸಲು ಅವನು ಹೆಚ್ಚು ಉತ್ಸುಕನಾಗಿರುವುದನ್ನು ಸ್ಟಾಲಿನ್ ಗ್ರಹಿಸಿದರು. ಆದರೆ, ಕೊನೆಗೆ ಸೋವಿಯತ್ ಒಕ್ಕೂಟದ ಮೇಲೆ ಹಿಟ್ಲರ್ ತನ್ನ ಬಂದೂಕನ್ನು ತಿರುಗಿಸುತ್ತಾನೆ ಎಂದು ಅವರಿಗೆ ಖಚಿತವಾಗಿತ್ತು. ಏಕೆಂದರೆ ನಾಜಿಗಳು ಸಮಾಜವಾದವನ್ನು ಉಳಿಯಲು ಬಿಡಲಾರರು ಎಂದು ಅವರಿಗೆ ಅರಿವಿತ್ತು. ಆದ್ದರಿಂದ, ಈ ಅದ್ಭುತ ದೂರದೃಷ್ಟಿಯೊಂದಿಗೆ, ನಾಜಿ಼ ಜರ್ಮನಿಯೊಂದಿಗೆ ಪರಸ್ಪರರ ಮೇಲೆ ದಾಳಿ ಮಾಡದಂತೆ ಒಂದು ಒಪ್ಪಂದವನ್ನು (Non Agression Pact) ಸ್ಟಾಲಿನ್ ಮಾಡಿಕೊಂಡರು. 1939ರ ಆಗಸ್ಟ್ 23ರಂದು ಮೊಲೊಟೊವ್-ರಿಬ್ಬೆನ್‌ಟ್ರಾಪ್ ದಾಳಿಯನ್ನು ನಿಷೇಧಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ಅಂದು, ಹಿಟ್ಲರ್‌ಗೆ ಇದು ಅನುಕೂಲಕರವಾಗಿತ್ತು. ಏಕೆಂದರೆ, ಆಗ ಅವನ ಕಣ್ಣು ಪಾಶ್ಚಿಮಾತ್ಯ ರಂಗದ ಮೇಲಿತ್ತು. ಸಮಯ ವ್ಯರ್ಥ ಮಾಡದೆ, ಜರ್ಮನಿಯು ಸೆಪ್ಟೆಂಬರ್ 1, 1939ರಂದು ಪೋಲೆಂಡ್ ಮೇಲೆ ಆಕ್ರಮಣ ಮಾಡಿತು. ನಂತರ, ಬ್ರಿಟನ್ ಮತ್ತು ಫ್ರಾನ್ಸ್ ಗಳು ಸೆಪ್ಟೆಂಬರ್ 3, 1939ರಂದು ಜರ್ಮನಿಯ ಮೇಲೆ ಯುದ್ಧ ಸಾರಿದವು ಹೀಗೆ ಎರಡನೇ ಮಹಾಯುದ್ಧವು ಅಧಿಕೃತವಾಗಿ ಶುರುವಾಯಿತು.
ಜರ್ಮನಿಯೊಂದಿಗೆ ಒಪ್ಪಂದ ಮಾಡಿಕೊಂಡ ಸ್ಟಾಲಿನ್‌ರ ಉಪಾಯವನ್ನು ದುರುದ್ದೇಶದಿಂದ ದೂಷಿಸಿದ ಮತ್ತು ಅದನ್ನು ಇಂದಿಗೂ ಖಂಡಿಸುತ್ತಿರುವವರಿಗೆ ತಕ್ಕ ಉತ್ತರ ನೀಡುತ್ತಾ, ಸ್ಟಾಲಿನ್, “ಸೋವಿಯತ್ ಸರ್ಕಾರವು ಅಂತಹ ನಂಬಿಕೆದ್ರೋಹಿಗಳು ಮತ್ತು ಹಿಟ್ಲರ್ ಹಾಗೂ ರಿಬ್ಬನ್‌ಟ್ರಾಪ್‌ರಂತಹ ರಕ್ಕಸರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಹೇಗೆ ಒಪ್ಪಿಕೊಂಡಿತು ಎಂದು ನೀವು ಕೇಳಬಹುದು….. ಯಾವುದೇ ಶಾಂತಿಪ್ರಿಯ ರಾಷ್ಟ್ರವು ತನ್ನ ನೆರೆಯ ದೇಶದೊಂದಿಗೆ ಶಾಂತಿ ಒಪ್ಪಂದವನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ, ಅಂತಹ ದೇಶಕ್ಕೆ ಹಿಟ್ಲರ್ ಮತ್ತು ರಿಬ್ಬನ್‌ಟ್ರಾಪ್‌ನಂತಹವರೇ ಮುಖ್ಯಸ್ಥರಾಗಿದ್ದರೂ ಸಹ. ಆದರೆ, ಆ ಶಾಂತಿ ಒಪ್ಪಂದವು ನೇರವಾಗಿ ಅಥವಾ ಪರೋಕ್ಷವಾಗಿ ಶಾಂತಿಪ್ರಿಯ ರಾಷ್ಟ್ರದ ಪ್ರಾದೇಶಿಕ ಸಮಗ್ರತೆ, ಸ್ವಾತಂತ್ರ್ಯ ಮತ್ತು ಗೌರವಕ್ಕೆ ಅಪಾಯ ತಂದೊಡ್ಡುವಂತೆ ಇರಬಾರದು ಎಂಬ ಏಕೈಕ ಅನಿವಾರ್ಯ ಷರತ್ತಿನ ಮೇಲೆ ಮಾತ್ರ ಇದು ಸಾಧ್ಯ. ಜರ್ಮನಿಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವುದರಿಂದ ನಾವು ಏನನ್ನು ಗಳಿಸಿದೆವು? ನಾವು ನಮ್ಮ ದೇಶಕ್ಕೆ ಒಂದೂವರೆ ವರ್ಷಗಳ ಕಾಲ ಶಾಂತಿಯನ್ನು ಗಟ್ಟಿ ಮಾಡಿಕೊಂಡೆವು ಮತ್ತು ಒಪ್ಪಂದದ ಹೊರತಾಗಿಯೂ ಫ್ಯಾಸಿಸ್ಟ್ ಜರ್ಮನಿ ನಮ್ಮ ದೇಶದ ಮೇಲೆ ದಾಳಿ ಮಾಡಲು ಹವಣಿಸಿದರೆ ಅದನ್ನು ಹಿಮ್ಮೆಟ್ಟಿಸಲು ನಮ್ಮ ಸೈನ್ಯವನ್ನು ಸಿದ್ಧಪಡಿಸಿಕೊಳ್ಳುವ ಅವಕಾಶವನ್ನು ಗಳಿಸಿಕೊಂಡೆವು. ಇದು ನಮಗೆ ಒಂದು ಖಚಿತವಾದ ಲಾಭವಾಗಿತ್ತು ಮತ್ತು ಫ್ಯಾಸಿಸ್ಟ್ ಜರ್ಮನಿಗೆ ಒಂದು ಅನನುಕೂಲವಾಗಿತ್ತು…..ಇದು ಫ್ಯಾಸಿಸ್ಟ್ ಜರ್ಮನಿಯೊಂದಿಗಿನ ಯುದ್ಧದಲ್ಲಿ ಕೆಂಪು ಸೈನ್ಯದ ನಿರ್ಣಾಯಕ ಯಶಸ್ಸಿಗೆ ಮುಖ್ಯ ಕಾರಣವೆಂಬುದು ಖಚಿತ.” (ಆನ್ ದಿ ಗ್ರೇಟ್ ಪೇಟ್ರಿಯಾಟಿಕ್ ವಾರ್ SW ಸಂಪುಟ ಕೃತಿಯಲ್ಲಿ….)
ಬ್ರಿಟನ್ ಮತ್ತು ಫ್ರಾನ್ಸ್ ವಿರುದ್ಧ ಜರ್ಮನಿ ಯುದ್ಧ ಆರಂಭ – ಮಿಲಿಟರಿ ಬಲ ವೃದ್ಧಿಸಿಕೊಂಡ ಸೋವಿಯತ್ ಒಕ್ಕೂಟ
ಕೇವಲ 2 ವರ್ಷಗಳ ಅವಧಿಯಲ್ಲಿ ಪೂರ್ವ ಮತ್ತು ಮಧ್ಯ ಯುರೋಪಿನ ಹಲವು ದೇಶಗಳು ನಾಜಿ಼ ಬ್ಲಿಟ್ಜ್ಕ್ರೀಗ್(ಹಠಾತ್ ಅಚ್ಚರಿಯ ದಾಳಿ ನಡೆಸುವ ಹಿಟ್ಲರ್ ತಂತ್ರ)ಗೆ ಸಿಲುಕಿದವು. ಬ್ರಿಟನ್ ಮತ್ತು ಫ್ರಾನ್ಸ್ ವಿರುದ್ಧ ಯುದ್ಧ ಘೋಷಿಸಿದಾಗ ಮುಸೊಲಿನಿ ನೇತೃತ್ವದ ಇಟಲಿಯು ಅಧಿಕೃತವಾಗಿ ಜರ್ಮನಿಯೊಂದಿಗೆ ಸೇರಿಕೊಂಡಿತು. ಪ್ರಮುಖ ಸಾಮ್ರಾಜ್ಯಶಾಹಿ ಮತ್ತು ಮಿಲಿಟರಿ ಶಕ್ತಿಗಳಲ್ಲಿ ಒಂದಾದ ಫ್ರಾನ್ಸ್ಗೂ ಕೂಡ ಎರಡು ವಾರಗಳಿಗಿಂತ ಹೆಚ್ಚು ಕಾಲ ಫ್ಯಾಸೀವಾದಿ ಜರ್ಮನಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಅಂದು ಫ್ರಾನ್ಸ್ ನ ಬಂಡವಾಳಶಾಹಿ ಆಳ್ವಿಕರು ಅಧಿಕಾರವನ್ನು ಹಸ್ತಾಂತರಿಸಿ ನಾಜಿ಼ಗಳಿಗೆ ಶರಣಾದರು. ಇಟಲಿಯು ದಕ್ಷಿಣ ಯುರೋಪ್ ಮತ್ತು ಉತ್ತರ ಆಫ್ರಿಕಾದಲ್ಲಿ ಈ ಯುದ್ಧವನ್ನು ಆರಂಭಿಸಿತು. ಸೆಪ್ಟೆಂಬರ್ 27, 1940ರಂದು ಜಪಾನ್ ಫ್ಯಾಸೀವಾದಿ ಕೂಟವನ್ನು ಸೇರಿಕೊಂಡಿತು.
ಫ್ಯಾಸೀವಾದಿ ಮಿಲಿಟರಿ ಶಕ್ತಿಯ ಬೂಟುಗಳ ಅಡಿಯಲ್ಲಿ ಸಿಲುಕಿದ ರಾಷ್ಟ್ರಗಳ ಗೊಂದಲದ ನಡುವೆ, ಮಹಾನ್ ಸ್ಟಾಲಿನ್ ನಾಯಕತ್ವದಲ್ಲಿ 24 ವರ್ಷ ತುಂಬಿದ್ದ ಯುವ ಸಮಾಜವಾದಿ ಸೋವಿಯತ್ ಒಕ್ಕೂಟವು, ತನ್ನ ಸಮರಶಕ್ತಿಯನ್ನು ಬಲಪಡಿಸುವಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿತ್ತು ಮತ್ತು ಎಲ್ಲಾ ಪ್ರಮುಖ ಕೈಗಾರಿಕೆಗಳನ್ನು ದೇಶದ ಒಳಕ್ಕೆ ಅಂದರೆ ಸೈಬೀರಿಯಾಕ್ಕೆ ಸ್ಥಳಾಂತರಿಸಿತು. ಇದರಿಂದಾಗಿ, ಉತ್ಪಾದನೆಯ ಮೇಲೆ ಯುದ್ಧದ ದುಷ್ಪರಿಣಾಮವಾಗದಂತೆ ಎಚ್ಚರ ವಹಿಸಿತು. ಕೆಂಪು ಸೈನ್ಯವು ಸಂಪೂರ್ಣವಾಗಿ ಆಕ್ರಮಣ ಮತ್ತು ರಕ್ಷಣಾ ತಂತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ತನ್ನ ವಾಯು ಪಡೆಯನ್ನು ಸುಧಾರಿಸುವಲ್ಲಿ ಅದು ಗಮನಹರಿಸಿತು.
1940ರ ಮೇ ತಿಂಗಳಲ್ಲಿ ಫ್ರಾನ್ಸ್, ನಾಜಿ಼ಗಳ ಕೈವಶವಾಗುವ ವೇಳೆಗೆ ಸೋವಿಯತ್ ಒಕ್ಕೂಟವು ತನ್ನ ತಂತ್ರಗಳು ಮತ್ತು ಮಿಲಿಟರಿ ಬಲದೊಂದಿಗೆ ಸಿದ್ಧವಾಗಿತ್ತು. ಸ್ಟಾಲಿನ್ ಇಡೀ ಸೋವಿಯತ್ ಜನರನ್ನು ಒಂದಾಗಿ ಫ್ಯಾಸೀವಾದಿ ಆಕ್ರಮಣವನ್ನು ಎದುರಿಸಲು ಪ್ರೇರೇಪಿಸಿದರು. ಸ್ಟಾಲಿನ್, ಕೆಂಪು ಸೈನ್ಯದ ಸರ್ವೋಚ್ಛ ಕಮಾಂಡರ್ ಆದಾಗ, ಅವರು ಸೋವಿಯತ್ ಒಕ್ಕೂಟವನ್ನು ವಿಜಯದತ್ತ ಮುನ್ನಡೆಸಲು ಯುದ್ಧ ತಂತ್ರಗಳನ್ನು ಸಂಪೂರ್ಣವಾಗಿ ಕಲಿಯಲು ಪ್ರಾರಂಭಿಸಿದರು. ಆರಂಭದಲ್ಲಿ, ತನ್ನ ಹಠಾತ್ತಾದ ಅಚ್ಚರಿಯ ದಾಳಿಯಲ್ಲಿ ಒಂದೂವರೆ ಅಥವಾ ಎರಡು ತಿಂಗಳಲ್ಲಿ ಸೋವಿಯತ್ ಒಕ್ಕೂಟವನ್ನು ಕಬಳಿಸಲು ಸಾಧ್ಯವಾಗುತ್ತದೆ ಎಂದು ನಂಬಿದ್ದ ಜರ್ಮನಿ, ಸೋವಿಯತ್ ದೇಶದ ಹೊರಭಾಗಗಳನ್ನು ವಶಪಡಿಸಿಕೊಳ್ಳುತ್ತಾ ಮುನ್ನಡೆಯುವ ಬದಲಿಗೆ ಒಳಭಾಗಕ್ಕೇ ನುಗ್ಗಿತು. ಆದರೆ, ಅತಿಶೀಘ್ರದಲ್ಲೇ ತಾನು ಮಾಡಿದ್ದು ಎಂತಹ ತಪ್ಪು ಎಂದು ಅದಕ್ಕೆ ಅರಿವಾಗತೊಡಗಿತು.
“ಇದು ಇಡೀ ಜನತೆಯ ಯುದ್ಧ. ಅಜೇಯ ಸೇನೆಗಳು ಇರಲಿಲ್ಲ ಮತ್ತು ಎಂದಿಗೂ ಇರುವುದಿಲ್ಲ. ಜರ್ಮನಿ ಅಚ್ಚರಿಯ ದಾಳಿಯ ಮೂಲಕ ಪ್ರಮುಖ ಯಶಸ್ಸನ್ನು ಗಳಿಸಿದೆ. ಆದರೆ, ತಾನೊಂದು ರಕ್ತಪಿಪಾಸು ದಾಳಿಕೋರ ಎಂದು ಬಯಲಾಗಿದ್ದು, ರಾಜಕೀಯವಾಗಿ ಸೋತಿದೆ. ಕೆಂಪು ಸೈನ್ಯವು ಸೋವಿಯತ್ ದೇಶದ ಪ್ರತಿ ಇಂಚು ಭೂಮಿಗಾಗಿ ಹೋರಾಡಬೇಕು. ಆದರೆ, ಹಿಂದಡಿಯಿಡುವುದು ಅನಿವಾರ್ಯವಾದ ಸಂದರ್ಭದಲ್ಲಿ, ಅಮೂಲ್ಯವಾಗಿರುವ ಎಲ್ಲವನ್ನೂ ಸ್ಥಳಾಂತರಿಸಬೇಕು ಅಥವಾ ನಾಶಪಡಿಸಬೇಕು. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನಾವು ಸೆಣಸುವ ಯುದ್ಧವು, ಜನತಾಂತ್ರಿಕ ಸ್ವಾತಂತ್ರ್ಯಕ್ಕಾಗಿ ಯುರೋಪ್ ಮತ್ತು ಅಮೆರಿಕದ ಜನರ ಹೋರಾಟದೊಂದಿಗೆ ಬೆಸೆದುಕೊಳ್ಳುತ್ತದೆ” (‘ದಿ ಸ್ಟಾಲಿನ್ ಎರಾ’ – ಅನ್ನಾ ಲೂಯಿಸ್ ಸ್ಟ್ರಾಂಗ್) ಎಂದು ಮಹಾನ್ ಸ್ಟಾಲಿನ್ ಕರೆ ನೀಡಿದರು. ಅದರಂತೆ, ಸೋವಿಯತ್ ಸೈನ್ಯ ಮತ್ತು ಜನಸಾಮಾನ್ಯರು ಮೊದಲಿಗೆಯೇ ತಮ್ಮ ಮನೆ, ಆಸ್ತಿಪಾಸ್ತಿಗಳನ್ನು ಬಿಟ್ಟು ಹೊರಡುವಾಗ, ಜರ್ಮನ್ ಸೇನೆಗೆ ಏನೂ ಸಹ ಲಭ್ಯವಾಗದಂತೆ ಎಲ್ಲಾ ಬೆಳೆಗಳನ್ನು ಸುಟ್ಟುಹಾಕಿದರು ಮತ್ತು ನೀರಿನ ಮೂಲಗಳನ್ನು ವಿಷಪೂರಿತಗೊಳಿಸಿದರು, ಸೇತುವೆಗಳು ಮತ್ತು ರೈಲು ಮಾರ್ಗಗಳಂತಹ ಮೂಲಸೌಕರ್ಯಗಳನ್ನು ತಾವೇ ಧ್ವಂಸ ಮಾಡಿದರು. ಕೆಂಪು ಸೈನ್ಯವು ಫ್ಯಾಸೀವಾದಿ ಜರ್ಮನ್ ಪಡೆಗಳನ್ನು ಒಳಕ್ಕೆ ಬಿಟ್ಟುಕೊಂಡು ನಂತರ ಅವರನ್ನು ಹಿಂದಿನಿಂದಲೂ ಸುತ್ತುವರಿಯಿತು. ಇದು ಸ್ಟಾಲಿನ್‌ರ ಒಂದು ಮಾಸ್ಟರ್ ಪ್ಲಾನ್(ಸ್ಕಾರ್ಚ್ಡ್ ಅರ್ಥ್ ಸ್ಟ್ರಾಟಜಿ) ಆಗಿತ್ತು.
ಮತ್ತೊಂದೆಡೆ, ಸೋವಿಯತ್ ಒಕ್ಕೂಟದ ಪ್ರತಿರೋಧವು ಒಂದು ತಿಂಗಳ ದಾಳಿಯಲ್ಲಿ ನಾಶವಾಗುತ್ತದೆ ಎಂದು ಬ್ರಿಟನ್ ಮತ್ತು ಅಮೆರಿಕ ಭಾವಿಸಿದ್ದವು. ಆದರೆ, “ಜರ್ಮನ್ನರು ಈವರೆಗೂ ಎದುರಿಸದಿದ್ದ ಪ್ರಬಲ ಪ್ರತಿರೋಧವನ್ನು ರಷ್ಯನ್ನರು ಒಡ್ಡಿದ್ದಾರೆ” ಎಂದು ನಂತರ ಅಮೆರಿಕ ಒಪ್ಪಿಕೊಂಡಿತು. ಆರು ವಾರಗಳಲ್ಲಿ, ಬ್ರಿಟಿಷ್ ಪ್ರಧಾನಿ ಚರ್ಚಿಲ್ ಕೆಂಪು ಸೈನ್ಯದ ‘ಅದ್ಭುತ ಶ್ರದ್ಧೆ’ಯನ್ನು ಪ್ರಶಂಸಿಸಿದರು ಮತ್ತು ಅವರ ಮಿಲಿಟರಿ ಕಾರ್ಯಾಚರಣೆಯ ದಕ್ಷತೆಯನ್ನು ಕಂಡು ಬೆರಗಾದರು.
ಪಾಶ್ಚಿಮಾತ್ಯ ಭಾಗದಲ್ಲಿ ಮಿತ್ರ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ಅಮೆರಿಕಾ, ಜರ್ಮನಿಯನ್ನು ಎದುರಿಸಿದರೆ, (ಎರಡನೇ ಮುಂದಳದ ಕ್ರಿಯಾಶೀಲತೆ) ಆಗ ಪೂರ್ವ ಭಾಗದಲ್ಲಿ ಸೋವಿಯತ್ ಒಕ್ಕೂಟದೊಂದಿಗೆ ಯುದ್ಧನಿರತ ಜರ್ಮನಿಯು ಕಂಗೆಡುತ್ತದೆ ಎಂದು ಸ್ಟಾಲಿನ್ ಮಿತ್ರರಾಷ್ಟ್ರಗಳನ್ನು ಪದೇಪದೇ ಆಗ್ರಹಿಸಿದರು. ಆದರೆ, ನಾಜಿ಼ಗಳ ದಾಳಿಯಿಂದ ಸೋವಿಯತ್ ಒಕ್ಕೂಟ ಸೋಲುವುದನ್ನು ಕಾಣಲು ಬಯಸುತ್ತಿದ್ದ ‘ಮಿತ್ರರಾಷ್ಟ್ರಗಳು’, ಯುದ್ಧದ ಕೊನೆಯ ದಿನಗಳವರೆಗೂ ಪಶ್ಚಿಮ ಯುರೋಪ್‌ನಲ್ಲಿ ಎರಡನೇ ಮುಂದಳದ ಕ್ರಿಯಾಶೀಲತೆಯ ಕಾರ್ಯವನ್ನು ಮುಂದೂಡಿದವು ಮತ್ತು ಯುದ್ಧಕ್ಕೆ ಕೈಜೋಡಿಸುವ ತಮ್ಮ ಈ ನೈತಿಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಎಲ್ಲಾ ರೀತಿಯ ಕುತಂತ್ರಗಳನ್ನು ಬಳಸಿದರು. ಹಾಗಾಗಿ, ಸೋವಿಯತ್ ಒಕ್ಕೂಟವು ಫ್ಯಾಸೀವಾದಿಗಳ ಸಂಯುಕ್ತ ಮಿಲಿಟರಿ ಶಕ್ತಿಯ(ಜರ್ಮನಿ, ಇಟಲಿ ಮತ್ತು ಜಪಾನ್) ವಿರುದ್ಧ ಏಕಾಂಗಿಯಾಗಿ ಹೋರಾಡಿತು. ಮುಂದೆ, ಕೆಂಪು ಸೈನ್ಯದ ಆರಂಭಿಕ ಕಾಲದ ತಾತ್ಕಾಲಿಕ ಹಿನ್ನಡೆಗೆ ಕಾರಣಗಳನ್ನು ಉಲ್ಲೇಖಿಸಿ, ಸ್ಟಾಲಿನ್, “ಕೆಂಪು ಸೈನ್ಯದ ಹಿನ್ನಡೆಗೆ ಒಂದು ಕಾರಣವೆಂದರೆ ಜರ್ಮನ್ ಫ್ಯಾಸೀವಾದಿ ಸೈನ್ಯದ ವಿರುದ್ಧ ಯುರೋಪ್‌ನಲ್ಲಿ ಎರಡನೇ ಮುಂದಳದ ಅನುಪಸ್ಥಿತಿ. ವಾಸ್ತವವೆಂದರೆ, ಪ್ರಸ್ತುತ ಸಮಯದಲ್ಲಿ ಜರ್ಮನ್ ಫ್ಯಾಸೀವಾದಿ ಸೈನ್ಯದ ವಿರುದ್ಧ ಹೋರಾಡಲು ಯುರೋಪಿಯನ್ ಖಂಡದಲ್ಲಿ ಗ್ರೇಟ್ ಬ್ರಿಟನ್ ಅಥವಾ ಅಮೆರಿಕದ ಯಾವುದೇ ಸೇನೆ ಲಭ್ಯವಿಲ್ಲ. ಇದರ ಪರಿಣಾಮವಾಗಿ, ಜರ್ಮನ್ನರ ಮೇಲೆ ತಮ್ಮ ಸೈನ್ಯವನ್ನು ವಿಭಜಿಸಲು ಹಾಗೂ ಪಶ್ಚಿಮ ಮತ್ತು ಪೂರ್ವದಲ್ಲಿ ಎರಡು ರಂಗಗಳಲ್ಲಿ ಏಕಕಾಲಕ್ಕೆ ಯುದ್ಧ ಮಾಡಲು ಒತ್ತಡವಿಲ್ಲ” ಎಂದು ಹೇಳಿದರು. (ಅವರ್ ಗ್ರೇಟ್ ಪೇಟ್ರಿಯಾಟಿಕ್ ವಾರ್ ಕೃತಿಯಲ್ಲಿ)
ಸ್ಟಾಲಿನ್‌ಗ್ರಾಡ್ ಕದನ ಮತ್ತು ನಾಜಿ ಜರ್ಮನಿಯ ಅಂತಿಮ ಸೋಲು
ನಂತರ, ಜಗತ್ತು ಕಂಡ ಅತ್ಯಂತ ಉಗ್ರ ಸಮರವಾದ ಸ್ಟಾಲಿನ್‌ಗ್ರಾಡ್ ಸಮರ ಪ್ರಾರಂಭವಾಯಿತು. “3,30,000 ಸೈನಿಕರ ಜರ್ಮನ್ ಸೈನ್ಯದ ಸುತ್ತುವರಿಯುವಿಕೆಯನ್ನು ಎದುರಿಸುವ ಅದ್ಭುತ ಕಾರ್ಯಾಚರಣೆಯನ್ನು ಕೈಗೊಳ್ಳಲು ಕೆಂಪು ಸೇನೆಯ ನಾಯಕತ್ವದ ಸರಿಯಾದ ತಂತ್ರ ಮತ್ತು ನಮ್ಮ ಸೇನಾ ಕಮಾಂಡರ್‌ಗಳ ಉತ್ತಮ ಕಾರ್ಯತಂತ್ರಗಳಿಂದ ಮಾತ್ರವೇ ಸಾಧ್ಯವಾಯಿತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ… ಜರ್ಮನ್ನರು ಖಾರ್ಕೊವ್ ಪ್ರದೇಶದಲ್ಲಿ ಸೋವಿಯತ್ ಸೈನ್ಯವನ್ನು ಸುತ್ತುವರಿಯಲು ಹಾಗೂ ತಮಗೆ ಅಲ್ಲಿ “ಜರ್ಮನ್ ಸ್ಟಾಲಿನ್‌ಗ್ರಾಡ್” ಅನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಿದ್ದರು. …… ಸ್ಟಾಲಿನ್‌ಗ್ರಾಡ್ ಕದನವು ಜರ್ಮನ್ ಫ್ಯಾಸೀವಾದಿ ಸೈನ್ಯದ ಅವನತಿಯನ್ನು ಮುನ್ಸೂಚಿಸಿದರೆ, ಕುರ್ಸ್ಕ್ ಕದನವು ಅದನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿತು… ನಮ್ಮ ಸೈನ್ಯವು ವಿದೇಶಿ ದರೋಡೆಕೋರರ ಗುಂಪುಗಳನ್ನು ತಡೆದು ನಿಲ್ಲಿಸಿ, ನಂತರ, ಸ್ಟಾಲಿನ್‌ಗ್ರಾಡ್‌ನಲ್ಲಿ ಅವರನ್ನು ಸೋಲಿಸಿ, ಅವರನ್ನು ಪಶ್ಚಿಮಕ್ಕೆ ಹಿಂದೆ ತಳ್ಳಿತು…..ನಮ್ಮ ಈ ಮಹಾನ್ ದೇಶಪ್ರೇಮಿ ಯುದ್ಧವು ಸೋವಿಯತ್ ಜನರು ಪವಾಡಗಳನ್ನು ಮಾಡಲು ಮತ್ತು ಕಠಿಣವಾದ ಪರೀಕ್ಷೆಗಳಿಂದ ವಿಜಯಶಾಲಿಯಾಗಿ ಹೊರಹೊಮ್ಮಲು ಸಮರ್ಥರಾಗಿದ್ದಾರೆ ಎಂಬುದನ್ನು ತೋರಿಸಿದೆ. ಕಾರ್ಮಿಕರು, ರೈತರು ಮತ್ತು ಸೋವಿಯತ್ ಬುದ್ಧಿಜೀವಿಗಳು, ಇಡೀ ಸೋವಿಯತ್ ಜನರು, ಶತ್ರುಗಳ ಸೋಲನ್ನು ತ್ವರಿತಗೊಳಿಸಲು, ಫ್ಯಾಸೀವಾದಿಗಳು ನಾಶಪಡಿಸಿದ ನಮ್ಮ ಆರ್ಥಿಕತೆಯನ್ನು ಸಂಪೂರ್ಣವಾಗಿ ಪುನ:ಸ್ಥಾಪಿಸಲು, ನಮ್ಮ ದೇಶವನ್ನು ಎಂದಿಗಿಂತಲೂ ಹೆಚ್ಚು ಶಕ್ತಿಶಾಲಿ ಮತ್ತು ಸಮೃದ್ಧಗೊಳಿಸಲು ದೃಢಸಂಕಲ್ಪವನ್ನು ಹೊಂದಿದ್ದಾರೆ. ಕೆಂಪು ಸೇನೆಯ ಹೊಡೆತಗಳಿಂದಾಗಿ ಫ್ಯಾಸೀವಾದಿ ರಾಷ್ಟ್ರಗಳ ಬಣವು ಛಿದ್ರವಾಗುತ್ತಿದೆ, ತುಂಡು ತುಂಡಾಗಿ ಕುಸಿಯುತ್ತಿದೆ…..ಜರ್ಮನಿಯು ಯುದ್ಧದಲ್ಲಿ ಸೋತಿದೆ ಎಂಬುದನ್ನು ಈಗ ಕಾಣದೆ ಇರಲು ಸಾಧ್ಯವಿಲ್ಲ” ಎಂದು ಅದನ್ನು ಸ್ಟಾಲಿನ್ ವಿವರಿಸಿದರು.(ಅವರ್ ಗ್ರೇಟ್ ಪೇಟ್ರಿಯಾಟಿಕ್ ವಾರ್ ಕೃತಿಯಲ್ಲಿ)
ಸಶೇಷ
(ಮುಂದಿನ ಹಾಗೂ ಕೊನೆಯ ಭಾಗ ನವೆಂಬರ್ ಸಂಚಿಕೆಯಲ್ಲಿ)