Loading..

ಬಾಲ್ಯದಲ್ಲೇ ಮಕ್ಕಳಿಗೆ ಮಿಲಿಟರಿ ತರಬೇತಿ ಮಹಾರಾಷ್ಟ್ರ ಸರ್ಕಾರದ ಅಪಾಯಕಾರಿ ಯೋಜನೆ

ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ದೈಹಿಕ ಕ್ಷಮತೆಯನ್ನು ಬೆಳೆಸುವ ಹೆಸರಿನಲ್ಲಿ ಆರು ವರ್ಷದ ಎಳೆಯ ವಯಸ್ಸಿನಲ್ಲೇ ಮಕ್ಕಳಿಗೆ ಮೂಲಭೂತ ಮಿಲಿಟರಿ ತರಬೇತಿಯನ್ನು ಜಾರಿಗೊಳಿಸಲು ಯೋಜನೆ ಮಾಡುತ್ತಿದೆ. ಒಂದನೇ ತರಗತಿಯಿಂದಲೇ ಅಂತಹ ತರಬೇತಿಯನ್ನು ಕೊಡುವುದರಿಂದ ಚಿಕ್ಕ ಮಕ್ಕಳಿಗೆ ರಚನಾತ್ಮಕ ತರಬೇತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ; ಈ ತರಬೇತಿಯು ದೈಹಿಕ ವ್ಯಾಯಾಮ, ಮೂಲಭೂತ ಕವಾಯತು ಮತ್ತು ಪಾಠಗಳನ್ನು ಒಳಗೊಂಡಿರುತ್ತದೆ. ಬಹಳ ಕಾಲದಿಂದಲೂ ಆರ್‌ಎಸ್‌ಎಸ್, ಕಲ್ಪಿತ ವೈರಿಯ ವಿರುದ್ಧ ಸಜ್ಜಾಗಿರುವಂತೆ ‘ಹಿಂದೂ ಸಮಾಜವನ್ನು ಮಿಲಿಟರೀಕರಣ’ಗೊಳಿಸಬೇಕು ಎಂದು ಪ್ರತಿಪಾದಿಸುತ್ತಲೇ ಬಂದಿದೆ. ಒಂದು ಕಾಲದಲ್ಲಿ ಮುಕ್ತ ಚಿಂತನೆಯ ಜಾಗವಾಗಿದ್ದ ತರಗತಿಗಳಿಗೆ ಈಗ ಅಂತಹ ಸೈದ್ಧಾಂತಿಕ ಶಸ್ತ್ರಾಗಾರಗಳನ್ನು ಜೋಡಿಸಲಾಗುತ್ತಿದೆ.
ನಿಜ, ‘ಆಪರೇಷನ್ ಸಿಂಧೂರ್’ ಆದಮೇಲೆ ಇಂತಹ ಪ್ರಸ್ತಾಪಕ್ಕೆ ದೇಶದ ಬೇರೆ ಕಡೆಗಳಿಂದಲೂ ಸಾಕಷ್ಟು ಬೆಂಬಲ ಪಡೆಯಲು ಸಾಧ್ಯವಾಗುತ್ತದೆ. ಬಿಜೆಪಿ ನೇತೃತ್ವದ ರಾಜ್ಯಗಳು ಸ್ವಲ್ಪವೂ ವಿಳಂಬ ಮಾಡದೆ ಅಂತಹ ಯೋಜನೆಗಳನ್ನು ಜಾರಿಗೊಳಿಸಬಹುದು. ಈಗಾಗಲೇ ಸರ್ಕಾರದ ಶಿಕ್ಷಣ ವ್ಯವಸ್ಥೆಯು ಗಂಭೀರ ಸ್ಥಿತಿಯಲ್ಲಿದೆ; ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಮೂಲಸೌಕರ್ಯಗಳು, ಶಿಕ್ಷಕರ ವಿಪರೀತ ಕೊರತೆ, ಶೌಚಾಲಯದಂತಹ ಮೂಲಭೂತ ಸೌಕರ್ಯಗಳ ಅಲಭ್ಯತೆ, ಕಡಿಮೆಯಿರುವ ಮತ್ತು ಶಿಥಿಲವಾಗುತ್ತಿರುವ ತರಗತಿಗಳು, ಪದೇಪದೇ ಬದಲಾಗುವ ಪಠ್ಯಕ್ರಮ, ಫೇಲು ಮಾಡಬಾರದ ನೀತಿ, ವಿದ್ಯಾರ್ಥಿಗಳ ಬೆಳವಣಿಗೆಯನ್ನು ವಾಸ್ತವಿಕವಾಗಿ ವಿಶ್ಲೇಷಿಸುವ ಪರೀಕ್ಷಾ ಪದ್ಧತಿಯ ಆಪಮೌಲ್ಯೀಕರಣ – ಪರಿಸ್ಥಿತಿ ಹೀಗಿರುವಾಗ ಮೇಲಿನ ಕ್ರಮವು ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುತ್ತದೆ. ಏಕೆಂದರೆ ಈಗಾಗಲೇ ವಿರಳವಾಗಿರುವ ಮೂಲಭೂತ ಸೌಕರ್ಯ ಹಾಗೂ ವಿದ್ಯಾಭ್ಯಾಸಕ್ಕೆ ಎಂದು ಮೀಸಲಾದ ಸಮಯ – ಇವುಗಳ ಒಂದು ಭಾಗವು ಈ ಯೋಜನೆಗೆ ಹೋಗುತ್ತದೆ.
ಇದರ ಜೊತೆಗೆ, ಮೂಲಭೂತ ಸೌಕರ್ಯಗಳ ಕೊರತೆ, ಹಾಗೆಯೇ ಇನ್ನಿತರ ಬದಲಾದ ನೀತಿಗಳ ಕಾರಣಗಳಿಂದಾಗಿ, ಕಳೆದ ದಶಕದಿಂದ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇದು ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುವುದನ್ನು ವಂಚಿಸುವುದರಿಂದ ಶಿಕ್ಷಣದ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಈಗಾಗಲೇ ಶಿಕ್ಷಣದ ವಾರ್ಷಿಕ ಸ್ಥಿತಿಗತಿಯ ವರದಿಯು (ಂSಇಖ), ಮಹಾರಾಷ್ಟ್ರದ ಶಾಲಾ ಶಿಕ್ಷಣದ ಕೆಟ್ಟ ಚಿತ್ರಣವನ್ನು ವರದಿ ಮಾಡಿದೆ. ಮೇಲಿನ ಪ್ರಸ್ತಾಪವು ಶಾಲಾ ಶಿಕ್ಷಣಕ್ಕೆ ತಗುಲಿರುವ ಮೂಲ ರೋಗವನ್ನು ಮುಚ್ಚಿಹಾಕುವ ಪ್ರಯತ್ನವೆನ್ನುವಂತೆ ಕಾಣುತ್ತದೆ. ಒಂದನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಮಿಲಿಟರಿ ಶೈಲಿಯ ಕವಾಯತುಗಳನ್ನು ಕಲಿಸಬೇಕೆನ್ನುವ ಸುಮಾರು 2,50,000 ಮಾಜಿ ಸೈನಿಕರ ಬೆಂಬಲ ಪಡೆದ ಈ ನಿರ್ಧಾರವು ಭಾರತದಲ್ಲಿ ಸಾರ್ವಜನಿಕ ಚರ್ಚೆಗೆ ಜೋರು ಶಬ್ದದೊಂದಿಗೆ ಬರದೇ ಕಳ್ಳ ಧ್ವನಿಯಲ್ಲಿ ಬರುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದೊಂದು ಶಾಲಾ ವೇಳಾಪಟ್ಟಿಯಲ್ಲಿ ಮಾಡಿಕೊಳ್ಳುವ, ಸದುದ್ದೇಶದಿಂದ ಕೂಡಿದ ಹೊಂದಾಣಿಕೆಯಲ್ಲ. ಇದು ಶಿಕ್ಷಣಕ್ಕೆ ರಚನಾತ್ಮಕ ಮರು ರೂಪ ಕೊಡುವುದು; ಇದರರ್ಥ ಪ್ರಶ್ನಿಸುವ ಜಾಗದಲ್ಲಿ ವಿಧೇಯತೆಯನ್ನು, ಸ್ವಯಂಶಿಸ್ತಿನ ಜಾಗದಲ್ಲಿ ಯಾಂತ್ರಿಕ ಶರಣಾಗತಿಯನ್ನು ಮತ್ತು ಸಹಾನುಭೂತಿಯ ಜಾಗದಲ್ಲಿ ರಾಷ್ಟ್ರವಾದದ ನೆಪವೊಡ್ಡಿ ಬೇರೆಯವರನ್ನು ದ್ವೇಷಿಸುವುದನ್ನು ತಂದಿಡುವುದು. ಸುಲಭವಾಗಿ ಪ್ರಭಾವಿತವಾಗುವ ಈ ವಯಸ್ಸಿನಲ್ಲಿ ಇಂತಹ ವಿಚಾರಗಳು ದೀರ್ಘಕಾಲ ತಮ್ಮ ಪ್ರಭಾವವನ್ನು ಬೀರುತ್ತವೆ. ಈ ಯೋಜನೆಯು ಶಿಕ್ಷಣದ ಉದ್ದೇಶವನ್ನೇ ಸೋಲಿಸಿ ಬಿಡುತ್ತದೆ. ಇಲ್ಲಿ ಬಲ್ಬ್, ಪೋನೋ ಗ್ರಾಫ್ ಮತ್ತು ಚಲನಚಿತ್ರ ಕ್ಯಾಮರಾ ಕಂಡುಹಿಡಿದ ವಿಶ್ವವಿಖ್ಯಾತ ಥಾಮಸ್ ಅಲ್ವಾ ಎಡಿಸನ್ ಹೇಳಿದ ಮಾತುಗಳನ್ನು ಉಲ್ಲೇಖಿಸುವುದು ಸೂಕ್ತವಾಗುತ್ತದೆ: “ನಾಗರಿಕತೆ ಮಾಡಬೇಕಾದ ಅತ್ಯಂತ ಅಗತ್ಯವಾದ ಕೆಲಸವೆಂದರೆ, ಜನರಿಗೆ ಹೇಗೆ ಆಲೋಚನೆ ಮಾಡಬೇಕೆಂದು ಹೇಳಿಕೊಡುವುದು. ಇದು ನಮ್ಮ ಸಾರ್ವಜನಿಕ ಶಾಲೆಗಳ ಮೂಲ ಉದ್ದೇಶವಾಗಬೇಕು… ನಮ್ಮ ಶಿಕ್ಷಣ ಪದ್ಧತಿಯಲ್ಲಿರುವ ಸಮಸ್ಯೆ ಎಂದರೆ ಅದು ಬದಲಾವಣೆಗೆ ಒಗ್ಗುವ ಮನಸ್ಥಿತಿಯನ್ನು ಕೊಡುವುದಿಲ್ಲ. ಅದು ಮೆದುಳನ್ನು ಒಂದು ಅಚ್ಚಿಗೆ ಹಾಕುತ್ತದೆ. ಅದನ್ನು ಮಗು ಒಪ್ಪಿಕೊಳ್ಳಲೇಬೇಕೆಂದು ಒತ್ತಾಯಿಸುತ್ತದೆ. ಅದು ಮೂಲ ಚಿಂತನೆ ಅಥವಾ ವಿವೇಚನೆಗೆ ಪ್ರೋತ್ಸಾಹ ಕೊಡುವುದಿಲ್ಲ ಮತ್ತು ಲಕ್ಷ್ಯಕ್ಕಿಂತ ಹೆಚ್ಚಾಗಿ ನೆನಪಿನ ಶಕ್ತಿಗೆ ಒತ್ತು ಕೊಡುತ್ತದೆ.”
ಅಂದರೆ, ಪರೇಡ್‌ಗಳಲ್ಲಿ ಹೆಜ್ಜೆ ಹಾಕುವ ಮತ್ತು ಸಲ್ಯೂಟ್ ಹೊಡೆಯುವ ಸೈನಿಕರನ್ನು ಅಥವಾ ವಿಧೇಯ ಜನರನ್ನು ತಯಾರು ಮಾಡುವುದು ಶಿಕ್ಷಣದ ಉದ್ದೇಶವಲ್ಲ; ಅದಕ್ಕೆ ತಿಳುವಳಿಕೆಯುಳ್ಳ, ಹುಡುಕಾಟದ ಮನಸ್ಸಿನ ಮತ್ತು ವಿರೋಧಿಸಬಲ್ಲ ನಾಗರೀಕರನ್ನು ತಯಾರು ಮಾಡುವ ಕರ್ತವ್ಯವಿದೆ. ಇಲ್ಲವಾದರೆ ಅದೊಂದು ಶಿಕ್ಷಣವಲ್ಲ. ಬದಲಿಗೆ, ರಹಸ್ಯವಾಗಿ ತಮಗೆ ಬೇಕಾದ ಸಿದ್ಧಾಂತವೊಂದನ್ನು ತಲೆಗೆ ತುರುಕಿದಂತೆ ಆಗುತ್ತದೆ.
ಬಹಳ ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಮಿಲಿಟರಿ ಶಿಸ್ತನ್ನು ಹೇರುವ ವಿಚಾರಕ್ಕೆ ನಿಜವಾದ ಶಿಕ್ಷಣಕ್ಕೆ ವಿರುದ್ಧವಾಗಿರುವ ಉದ್ದೇಶವಿದೆ. ಅದು ಸೃಜನಶೀಲತೆಯನ್ನು ಹೊಸಕಿ ಹಾಕುವುದಷ್ಟೇ ಅಲ್ಲದೇ, ರವೀಂದ್ರನಾಥ ಟಾಗೂರರು “ಜನರ ಚಿಂತನೆಯನ್ನು ಮೊಟಕುಗೊಳಿಸುವ, ಅವರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಸರ್ಕಾರಕ್ಕೆ ಜನರೆಲ್ಲರೂ ಸ್ವಯಿಚ್ಛೆಯಿಂದ ತಲೆಬಾಗುವುದು” ಎಂದು ಯಾವ ಅಪಾಯದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರೋ ಅಲ್ಲಿಗೆ ನಿಧಾನವಾಗಿ ತೆಗೆದುಕೊಂಡು ಹೋಗುತ್ತದೆ. ಆರನೇ ವಯಸ್ಸಿನಲ್ಲಿ ಮಕ್ಕಳು ಕಥೆ, ಹಾಡು ಮತ್ತು ನಾಟಕಗಳ ಮೂಲಕ ಚೆನ್ನಾಗಿ ಕಲಿಯುತ್ತವೆ. ಆದರೆ ಮಹಾರಾಷ್ಟ್ರದ ಪ್ರಸ್ತಾಪವು ಶಾಲೆಗಳನ್ನು ಮಕ್ಕಳು ಪಥ ಸಂಚಲನ, ಸೆಲ್ಯೂಟ್ ಮಾಡುವುದಕ್ಕೆ ಮತ್ತು ಆದೇಶಗಳನ್ನು ಅನುಸರಿಸುವುದಕ್ಕೆ ತರಬೇತಿ ಕೊಡುವ ಪರೇಡ್ ಮೈದಾನವನ್ನಾಗಿ ಪರಿವರ್ತಿಸುತ್ತದೆ.
ಅದು ಅಜ್ಞಾತ ವೈರಿಯ ವಿರುದ್ಧ ಮಕ್ಕಳ ಮನಸ್ಸಿನಲ್ಲಿ ಅನಗತ್ಯ ಭಯವನ್ನು ಸೃಷ್ಟಿಸುತ್ತದೆ; ಜೊತೆಗೆ ಸುಲಭವಾಗಿ ಪ್ರಭಾವಿತವಾಗುವ ಮನಸ್ಸುಗಳನ್ನು ಮತ್ತಷ್ಟು ಕುಗ್ಗಿಸುತ್ತದೆ ಮತ್ತು ವಿವಿಧ ಬಗೆಯ ಮಾನಸಿಕ ಸಮಸ್ಯೆಗಳಲ್ಲಿ ಅಂತ್ಯವಾಗುತ್ತದೆ. ಈ ಹಂತದಲ್ಲಿ ಮಿಲಿಟರಿ ವಿಧಾನಗಳನ್ನು ವೈಭವವೀಕರಿಸುವುದೆಂದರೆ, ಅದು ಇರುವುದು ವಿಧೇಯತೆಯಲ್ಲಿಯೇ ಹೊರತು ಹೊರತು ಕಲ್ಪನೆಯಲ್ಲಲ್ಲ ಮತ್ತು ಪೌರತ್ವವು ಅನುಸರಣೆಯಿಂದ ಆರಂಭವಾಗುತ್ತದೆಯೇ ಹೊರತು ಸಹಾನುಭೂತಿಯಿಂದಲ್ಲ ಎನ್ನುವುದನ್ನು ಸೂಚಿಸುತ್ತದೆ. ಮಕ್ಕಳಿಗೆ ಓದುವ ಮೊದಲೇ ಸಲ್ಯೂಟ್ ಮಾಡುವುದನ್ನು ಕಲಿಸುವುದೆಂದರೆ, ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ಪ್ರಭುತ್ವವು ದೇಶಪ್ರೇಮವನ್ನು ಮೂಡಿಸುವುದೆಂದಲ್ಲ – ಅದು ತನ್ನ ಆದೇಶಗಳಿಗೆ ವಿಧೇಯವಾಗಿರುವ ಭವಿಷ್ಯದ ಪದಾತಿ ಸೈನಿಕರನ್ನು ತಯಾರು ಮಾಡುತ್ತಿದೆ ಎಂದರ್ಥ. ವೈಚಾರಿಕ ಮನೋಭಾವ ಮತ್ತು ಧರ್ಮನಿರಪೇಕ್ಷ, ವೈಜ್ಞಾನಿಕ, ಪ್ರಜಾತಾಂತ್ರಿಕ ಶಿಕ್ಷಣವನ್ನು ಕೊಡುವ ಬಯಕೆಗೆ ವಿರುದ್ಧವಾಗಿ ರಾಷ್ಟ್ರಾಂಧಾಭಿಮಾನದ ಮಾರ್ಗದಲ್ಲಿ ಕರೆದೊಯ್ಯುವ ಜೊತೆಗೆ ಮಕ್ಕಳ ಆಲೋಚನಾ ಪ್ರಕ್ರಿಯೆಯನ್ನು ಒಂದು ಅಚ್ಚಿಗೆ ಹಾಕುವುದರ ಹಿಂದೆ ಸೈದ್ಧಾಂತಿಕ ಪಲ್ಲಟವಿದೆ. ಇದರೊಳಗೆ ಭಾರತದಲ್ಲಿ ಶಿಕ್ಷಣ, ಬಾಲ್ಯ ಮತ್ತು ಪೌರತ್ವವನ್ನು ಮರು ವ್ಯಾಖ್ಯಾನ ಮಾಡುವ ಸೈದ್ಧಾಂತಿಕ ಪಲ್ಲಟವಿದೆ. ಇದು ಶೈಕ್ಷಣಿಕ ನೀತಿಯಲ್ಲಿನ ಕೇವಲ ತಪ್ಪು ಹೆಜ್ಜೆಯಲ್ಲ, ಅದಕ್ಕಿಂತಲೂ ಹೆಚ್ಚಿನದು.
ಇಲ್ಲಿ ಗಮನಿಸಿರುವ ಮತ್ತೊಂದು ಅಂಶವೇನೆಂದರೆ, ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಅಂತಹ ಗುಣಾತ್ಮಕವಾದ ದೊಡ್ಡ ಹೆಜ್ಜೆಯನ್ನಿಡುವ ಮೊದಲು ಮಹಾರಾಷ್ಟ್ರ ಸರ್ಕಾರವು ಸಮಾಜದಲ್ಲಿ ಅದರ ಬಗ್ಗೆ ವಿಶಾಲವಾದ ಚರ್ಚೆಗೆ ಅನುವು ಮಾಡಿಕೊಡಲಿಲ್ಲ; ಅಂತಹ ಕ್ರಮದ ಸಾಧಕ ಬಾಧಕಗಳನ್ನು ನೋಡಲಿಲ್ಲ. ಈ ಯೋಜನೆಯು ಕಾರ್ಯಸಾಧುವೇ ಎನ್ನುವುದರ ಬಗ್ಗೆ ಶಿಕ್ಷಣ ತಜ್ಞರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆದು ನಂತರ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುವ ರೀತಿಯನ್ನು ಅನುಸರಿಸಲಿಲ್ಲ.
ಸಾರ್ವಜನಿಕ ವಲಯದಲ್ಲಿ ಅಂತಹ ಯಾವುದೇ ಚರ್ಚೆ ಅಥವಾ ವಿಶಾಲ ಮಟ್ಟದಲ್ಲಿ ಮಾತುಕತೆಗಳು ನಡೆದ ಸುದ್ದಿ ಇಲ್ಲ. ಕೆಲವು ವರ್ಷಗಳ ಹಿಂದೆ ಪ್ರಧಾನಮಂತ್ರಿಯ ಕಛೇರಿಯು ‘ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ’ಗಾಗಿ ಕೇಂದ್ರೀಯ ವಿದ್ಯಾಲಯಗಳು ಮತ್ತು ಜವಾಹರ್ ನವೋದಯ ವಿದ್ಯಾಶಾಲೆಗಳು ಸೇರಿದಂತೆ ಇನ್ನಿತರ ಶಾಲೆಗಳಲ್ಲೂ, ಸೈನಿಕ್ ಶಾಲೆ ಮಾದರಿಯ ಅಂಶಗಳನ್ನು ಸೇರಿಸಿಕೊಳ್ಳಬೇಕೆಂದು ತನ್ನ ಮುನ್ನೋಟವನ್ನು ಪ್ರಸ್ತಾಪಿಸಿತ್ತು; ಈ ಯೋಜನೆಯು ಅದೇ ಮುನ್ನೋಟದ ವಿಸ್ತರಣೆ ಮತ್ತು ಅನುಷ್ಠಾನವೆಂದು ಕಾಣಿಸುತ್ತದೆ.
ಅದು ಸೈನಿಕ್ ಶಾಲೆಗಳಲ್ಲಿ ಸಾಮಾನ್ಯವಾಗಿ ಇರುವ ದೈಹಿಕ ತರಬೇತಿ, ಶಿಸ್ತು ಮತ್ತು ದೇಶಪ್ರೇಮದ ಮೌಲ್ಯಗಳನ್ನು ಬೇರೆ ಶಾಲೆಗಳಲ್ಲೂ ತರಬೇಕು ಎಂದು ಸಲಹೆ ನೀಡಿದೆ. ಇದು ವಾಸ್ತವದಲ್ಲಿ ಶೇ.67 ಕ್ಕೂ ಹೆಚ್ಚು ಸೈನಿಕ್ ಶಾಲೆಗಳನ್ನು ಆರ್‌ಎಸ್‌ಎಸ್-ಬಿಜೆಪಿ-ಸಂಘ ಪರಿವಾರ ಮತ್ತು ಅದರ ಅಂಗಸಂಸ್ಥೆಗಳ ಸುಪರ್ದಿಗೆ ಕೊಡಬೇಕೆನ್ನುವ ಕೇಂದ್ರ ಸರ್ಕಾರದ ಯೋಜನೆಯನ್ನು ಅನುಷ್ಠಾನಗೊಳಿಸುವ ಕಡೆಗೆ ಇಟ್ಟ ಇನ್ನೊಂದು ಹೆಜ್ಜೆ. ಇಲ್ಲೊಂದು ಘಟನೆಯನ್ನು ನೆನಪಿಸಿಕೊಳ್ಳಬೇಕು; ಜವಾಹರಲಾಲ್ ವಿಶ್ವವಿದ್ಯಾನಿಲಯದ (ಜೆಎನ್‌ಯು) ಉಪಕುಲಪತಿಗಳು ‘ಕಾರ್ಗಿಲ್ ದಿವಸ’ ಆಚರಣೆಯ ಸಂದರ್ಭದಲ್ಲಿ ಒಂದು ರಾಜಕೀಯ ಕಾರ್ಯಕ್ರಮವನ್ನು ಸಂಘಟಿಸಿದ್ದರು: ಅಲ್ಲಿ ಉಪಸ್ಥಿತರಿದ್ದ ಇಬ್ಬರು ಕೇಂದ್ರ ಸಚಿವರನ್ನು, ವಿದ್ಯಾರ್ಥಿಗಳಲ್ಲಿ ಸೈನ್ಯದ ಬಗ್ಗೆ ಪ್ರೀತಿಯನ್ನು ತುಂಬಲು ಸೈನ್ಯವು ಉಪಯೋಗಿಸದ ಸೈನ್ಯದ ಟ್ಯಾಂಕರ್ ಒಂದನ್ನು ವಿಶ್ವವಿದ್ಯಾನಿಲಯಕ್ಕೆ ಕೊಡುಗೆಯಾಗಿ ಕೊಡಬೇಕೆಂದು ಕೇಳಿದರು. ಜೆಎನ್‌ಯುನಲ್ಲಿ ಸೈನ್ಯದ ಟ್ಯಾಂಕರ್ ಸ್ಥಾಪಿಸುವ ಈ ವಿವಾದಿತ ಪ್ರಸ್ತಾಪಕ್ಕೆ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಹಾಗೆ ಕಾಳಜಿಯುಳ್ಳ ವಿಶಾಲ ಜನ ಸಮೂಹದಿಂದ ತೀವ್ರ ಖಂಡನೆ ಬಂದಿತ್ತು.
ನಾವು ಶಿಕ್ಷಣದ ಉದ್ದೇಶದಲ್ಲಿ ಸ್ಫೋಟಕ ಪಲ್ಲಟಕ್ಕೆ ಸಾಕ್ಷಿಯಾಗುತ್ತಿದ್ದೇವೆ. ಒಂದು ಕಾಲದಲ್ಲಿ ಸ್ವಾತಂತ್ರö್ಯ, ಕುತೂಹಲ ಮತ್ತು ವಿಮರ್ಶಾತ್ಮಕ ಚಿಂತನೆಗಳಿಗಾಗಿ ನಿಂತ ಶಿಕ್ಷಣವು ಈಗ ಕಡ್ಡಾಯ ರಾಷ್ಟ್ರ ನಿರ್ಮಾಣದೆಡೆಗೆ ಸಾಗುತ್ತಿದೆ. ಜ್ಞಾನದ ಹೆಸರಿನಲ್ಲಿ ಮಾನಸಿಕ ಅಂಧಾನುಕ್ರಮವೆಂದರೆ (Mental Regimentation) ಯಾವುದರ ಬಗ್ಗೆಯೂ ಪ್ರಶ್ನೆಯನ್ನು ಕೇಳಬಾರದು, ಬದಲಿಗೆ ಪ್ರಭುತ್ವ ಮಾನ್ಯತೆ ನೀಡಿದ ಉತ್ತರಗಳನ್ನು ಕಂಠಪಾಠ ಮಾಡುವುದು. ಅನ್ಯಾಯವನ್ನು ಪ್ರಶ್ನಿಸುವ ವಿದ್ಯಾರ್ಥಿಯು ಅಪಾಯಕಾರಿಯಾಗುತ್ತಾನೆ. ಭಿನ್ನ ಅಭಿಪ್ರಾಯ ಹೊಂದಿದ ಶಿಕ್ಷಕರು ಕಣ್ಮರೆಯಾಗುವ ಅಪಾಯವಿದೆ. ಯುವ ಮನಸ್ಸುಗಳನ್ನು ಮಿಲಿಟರೀಕರಣಗೊಳಿಸುವುದೆಂದರೆ ನಿರೂಪಣೆಗಳು ಮಾತ್ರ ಉಳಿದುಕೊಳ್ಳುವ ಮತ್ತು ಬೇರೆಲ್ಲವೂ ದೇಶದ್ರೋಹವಾಗುವ ವ್ಯವಸ್ಥೆಯ ಕಾವಲುಗಾರನಾಗುವುದು.
ಈ ಹೆಜ್ಜೆಯನ್ನು ಪ್ರಶ್ನಿಸದಿದ್ದರೆ ಇದರ ಪರಿಣಾಮವು ಮಹಾರಾಷ್ಟ್ರದಿಂದಾಚೆಗೂ ವಿಸ್ತರಿಸುತ್ತದೆ. ಕೇಸರಿ ಪಡೆಯು ಸೂಚಿಸಿದ ವಿಜ್ಞಾನ ವಿರೋಧಿ, ಇತಿಹಾಸ ವಿರೋಧಿ ವಿಷಯಗಳ ಮೇಲಾಧಾರಿತವಾಗಿರುವ ಪಠ್ಯಕ್ರಮಗಳನ್ನು ತಯಾರು ಮಾಡುವುದರ ಮೂಲಕ, ಪ್ರಾಥಮಿಕ ಶಾಲಾ ಹಂತದಿಂದಲೇ ವಿದ್ಯಾರ್ಥಿಗಳ ಚಿಂತನಾ ಪ್ರಕ್ರಿಯೆಯನ್ನು ಅಂಧಾನುಕ್ರಮಕ್ಕೆ ಒಗ್ಗಿಸುವ ಪ್ರಯತ್ನವು ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ-20 ಅನ್ನು ಅನುಷ್ಠಾನಕ್ಕೆ ತರುವ ಮೂಲಕ ನಡೆಯುತ್ತಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ, ಶಾಲಾ ಶಿಕ್ಷಣದ ಆರಂಭದಿಂದಲೇ ಮಿಲಿಟರಿ ತರಬೇತಿಯನ್ನು ಕಡ್ಡಾಯವೆಂದು ಸೇರಿಸಿದರೆ ಆಗ ಅಂಧಾನುಕ್ರಮದ ಪ್ರಕ್ರಿಯೆಯು ತೀವ್ರಗೊಳ್ಳುತ್ತದೆ; ಮಕ್ಕಳನ್ನು ಯಾಂತ್ರಿಕ ಚಿಂತನಾ ಪ್ರಕ್ರಿಯೆಯು ಆವರಿಸಿಕೊಳ್ಳುತ್ತದೆ ಮತ್ತು ತಮ್ಮ ಬಂಡವಾಳಶಾಹಿ ಮಾಲೀಕರ ಅಜ್ಞಾನಸಾರವಾಗಿ ಹಿಂದುತ್ವ ಆಳ್ವಿಕರಿಂದ ಆರಂಭಗೊಂಡ ಯಾಂತ್ರೀಕರಣದ ಪ್ರಕ್ರಿಯೆಯು ಸಂಪೂರ್ಣವಾಗುತ್ತದೆ. ಅದು ಪರಿಪೂರ್ಣ ವ್ಯಕ್ತಿತ್ವದ, ಜ್ಞಾನಭರಿತ, ಸುಚಿಂತನಾಶೀಲ ವ್ಯಕ್ತಿಯನ್ನು ರೂಪಿಸುವುದಿಲ್ಲ. ಇದು ಶಾಲಾ ಮಕ್ಕಳಿಗೆ ಮಿಲಿಟರಿ ಶಿಕ್ಷಣ ನೀಡುವುದರ ಹಿಂದಿರುವ ಅಪಾಯ!