ಎಪಿಎಲ್ ಕಾರ್ಡುದಾರರಿಗೆ ಆಸ್ಪತ್ರೆಗಳಲ್ಲಿ ಶುಲ್ಕ ವಿಧಿಸುವ ಕ್ರಮಕ್ಕೆ ಎಸ್ಯುಸಿಐ(ಸಿ) ಖಂಡನೆ
ಪತ್ರಿಕಾ ಹೇಳಿಕೆ
ಎಪಿಎಲ್ ಕಾರ್ಡುದಾರರಿಗೆ ಆಸ್ಪತ್ರೆಗಳಲ್ಲಿ ಶುಲ್ಕ ವಿಧಿಸುವ ಕ್ರಮಕ್ಕೆ ಎಸ್ಯುಸಿಐ(ಸಿ) ಖಂಡನೆ
ರಾಜ್ಯದ 16 ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಇದೇ ಸೆಪ್ಟೆಂಬರ್ 23ರಿಂದ ಎಂಆರ್ಐ ಮತ್ತು ಸಿಟಿ ಸ್ಕ್ಯಾನ್ ಪರೀಕ್ಷೆಗಳಿಗೆ ಎಪಿಎಲ್ ಕಾರ್ಡುದಾರರು ಶೇ 70ರಷ್ಟು ಶುಲ್ಕ ನೀಡಬೇಕು ಎಂಬ ರಾಜ್ಯ ಆರೋಗ್ಯ ಇಲಾಖೆಯ ಆದೇಶವನ್ನು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಕೆ.ಉಮಾ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಬಿಪಿಎಲ್ ಆಗಿರಲಿ, ಎಪಿಎಲ್ ಆಗಿರಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ರೋಗ ಪರೀಕ್ಷೆಗಳನ್ನು ಮಾಡಬೇಕೆಂಬುದು ಒಂದು ಪ್ರಜಾತಾಂತ್ರಿಕ ಸರ್ಕಾರದ ಜವಾಬ್ದಾರಿ. ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವವರು ಯಾವುದೇ ವೈದ್ಯಕೀಯ ವಿಮಾ ಸೌಲಭ್ಯವಿಲ್ಲದ ಅಸಹಾಯಕರೇ ಆಗಿದ್ದಾರೆ. ಅಂತಹ ರೋಗಿಗಳ ಬಳಿ ಬಿಪಿಎಲ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಶೇ 70ರಷ್ಟು ಶುಲ್ಕ ವಸೂಲಿ ಮಾಡುವುದು ಅತ್ಯಂತ ಅಮಾನವೀಯ ಕ್ರಮ. ಈಗ ಎಂಆರ್ಐ, ಸಿಟಿ ಸ್ಕ್ಯಾನ್ ಅಂತಹ ಪರೀಕ್ಷೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸಾವಿರಾರು ರೂಪಾಯಿ ದರ ನಿಗದಿ ಮಾಡಲಾಗಿದೆ. ಸರ್ಕಾರಿ ಆರೋಗ್ಯ ಸೇವೆಯ ವ್ಯಾಪಾರೀಕರಣ ಅತ್ಯಂತ ಖಂಡನೀಯ.
ಪ್ರಪಂಚದ ಅತಿದೊಡ್ಡ ಆರೋಗ್ಯ ಯೋಜನೆ ಎಂದು ಕೊಚ್ಚಿಕೊಳ್ಳುವ ಕೇಂದ್ರದ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆ ಕೂಡ ಇದೇ 70:30 ಎಂಬ ಜನವಿರೋಧಿ ಸೂತ್ರವನ್ನು ಅಳವಡಿಸಿದೆ.
ರಾಜ್ಯ ಆರೋಗ್ಯ ಇಲಾಖೆಯು ಈ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳು ತಕ್ಷಣವೇ ಗಮನಹರಿಸಿ, ಪರಸ್ಪರ ದೂಷಿಸುವ ಬದಲು ಎಲ್ಲರಿಗೂ ಗುಣಮಟ್ಟದ ಉಚಿತ ಆರೋಗ್ಯ ಸೇವೆಯನ್ನು ಖಚಿತಪಡಿಸಲು ಮುಂದಾಗಬೇಕೆಂದು ಎಸ್ಯುಸಿಐ(ಸಿ) ಒತ್ತಾಯಿಸುತ್ತದೆ.
ಸುದ್ದಿ ಇವರಿಂದ,
ಬಿ.ರವಿ
ರಾಜ್ಯ ಕಚೇರಿ ಕಾರ್ಯದರ್ಶಿ
ಎಸ್ಯುಸಿಐ(ಸಿ)
25.09.2025