Loading..

ಎಸ್‌ಯುಸಿಐ(ಸಿ) ಕಾರ್ಯಕರ್ತರ ಬೆಳವಣಿಗೆಗೆ ಪ್ರೇರಣೆಯಾದ ದಕ್ಷಿಣ ಭಾರತ ಅಧ್ಯಯನ ಶಿಬಿರ

ಎಸ್‌ಯುಸಿಐ (ಸಿ) ಪಕ್ಷ ಮೈಸೂರಿನಲ್ಲಿ ಜುಲೈ ೧೮ ರಿಂದ ೨೧ ರವರೆಗೆ ಸಂಘಟಿಸಿದ್ದ ಅಧ್ಯಯನ ಶಿಬಿರದಲ್ಲಿ ಪಾಲ್ಗೊಳ್ಳಲು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಪುದುಚೇರಿಗಳಿಂದ ೧೦೦೦ಕ್ಕೂ ಹೆಚ್ಚು ಕಾರ್ಯಕರ್ತರು, ಅತ್ಯುತ್ಸಾಹದಿಂದ ಬಂದು ಸೇರಿದರು. ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರವಾಶ್ ಘೋಷ್ ಈ ಶಿಬಿರವನ್ನು ೪ ದಿನಗಳ ಕಾಲ ನಡೆಸಿಕೊಟ್ಟರು. ನಮ್ಮ ನಲ್ಮೆಯ ಪಕ್ಷವನ್ನು ಸ್ಥಾಪಿಸಿದ, ಈ ಯುಗದ ಓರ್ವ ಅಪ್ರತಿಮ ಮಾರ್ಕ್ಸ್ವಾದಿ ಚಿಂತಕರಲ್ಲಿ ಒಬ್ಬರಾದ ಕಾಮ್ರೇಡ್ ಶಿವದಾಸ್ ಘೋಷ್‌ರವರ ನೇರ ಮಾರ್ಗದರ್ಶನದಲ್ಲಿ ಬೆಳೆದ ಕಾಮ್ರೇಡ್ ಪ್ರವಾಶ್ ಘೋಷ್‌ರವರು ಇದೀಗ ಪಕ್ಷಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ೯೦ರ ಇಳಿವಯಸ್ಸಿನಲ್ಲಿ ಪಕ್ಷದ ಸಿದ್ಧಾಂತ, ತತ್ವಶಾಸ್ತ್ರ, ಸಂಘಟನಾತ್ಮಕ ಅಂಶಗಳ ಕುರಿತು ಕಾಮ್ರೇಡರೊಂದಿಗೆ ಚರ್ಚಿಸಲು ಕಲ್ಕತ್ತಾದಿಂದ ದಕ್ಷಿಣ ಭಾರತದ ಮೈಸೂರಿಗೆ ಆಗಮಿಸಿದ ಅವರನ್ನು ಭೇಟಿಯಾಗಿ, ವಿಚಾರಗಳನ್ನು ಅರಿತುಕೊಳ್ಳಲು, ಕ್ರಾಂತಿಕಾರಿ ಹೋರಾಟದ ಅವರ ಅಗಾಧ ಅನುಭವಗಳನ್ನು ಮೈದುಂಬಿಕೊಳ್ಳಲು ಕಾಮ್ರೇಡರು ಕಾತುರರಾಗಿದ್ದರು. ಮಾರ್ಕ್ಸ್‌ವಾದ-ಲೆನಿನ್‌ವಾದದ ತತ್ವಶಾಸ್ತ್ರದ ಕುರಿತು ಕಾ. ಶಿವದಾಸ್ ಘೋಷ್‌ರವರು ಚರ್ಚಿಸಿರುವ ಕೃತಿಗಳಾದ ‘ಮಾರ್ಕ್ಸ್‌ವಾದ ಹಾಗೂ ಮಾನವ ಸಮಾಜದ ಬೆಳವಣಿಗೆ’, ‘ಮಾರ್ಕ್ಸ್ವಾದ ಮತ್ತು ದ್ವಂದ್ವಾತ್ಮಕ ವಸ್ತುವಾದದ ಕೆಲವು ಅಂಶಗಳು’ ಹಾಗೂ ‘ಕಮ್ಯುನಿಸ್ಟ್ ನೀತಿ ಸಂಹಿತೆ’, ಇವುಗಳನ್ನು ಎಲ್ಲಾ ಕಾಮ್ರೇಡರು ಜಿಲ್ಲಾ ಮಟ್ಟದಲ್ಲಿ ಓದಿ, ಚರ್ಚಿಸಿ, ಇನ್ನೂ ಹೆಚ್ಚಿನ ತಿಳುವಳಿಕೆಗಾಗಿ ಪ್ರಶ್ನೆಗಳನ್ನು ಹೊತ್ತು ತಂದಿದ್ದರು.
ಕಾಮ್ರೇಡ್ ಪ್ರವಾಶ್ ಘೋಷ್‌ರವರು ಮೊದಲನೆಯ ಅಧಿವೇಶನದಲ್ಲಿ ಅಧ್ಯಯನ ಶಿಬಿರದ ಅವಶ್ಯಕತೆಯ ಕುರಿತು ವಿವರಿಸಿದರು. ‘ಮನುಷ್ಯನು ತನ್ನ ಸುತ್ತಲಿನ ಸಮಾಜ, ನಿಸರ್ಗ ಹಾಗೂ ಜೀವನದ ಎಲ್ಲಾ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಜ್ಞಾನ ಅವಶ್ಯಕ, ನಮ್ಮ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಗಳ ಕುರಿತು ವಸ್ತುನಿಷ್ಠವಾಗಿ ಅಧ್ಯಯನ ಮಾಡಿದರೆ, ಅದು ನಮ್ಮನ್ನು ಸತ್ಯದೆಡೆಗೆ ಕರೆದೊಯ್ಯುತ್ತದೆ, ಇದು ವೈಜ್ಞಾನಿಕ ವಿಧಾನ; ನಮ್ಮ ಭಾವನೆಗಳ ಆಧಾರದ ಮೇಲೆ ಅರ್ಥೈಸಲು ಪ್ರಯತ್ನಿಸಿದರೆ, ಅದು ಭಾವನಾವಾದವಾಗುತ್ತದೆ ಮತ್ತು ವಾಸ್ತವಿಕ ಸತ್ಯದಿಂದ ದೂರವಾಗುತ್ತದೆ. ಸಂಘಟನೆಯ ಒಳಗೂ ಸಹ ಯಾವುದೇ ವಿಷಯವನ್ನು ಚರ್ಚಿಸುವಾಗ ವೈಜ್ಞಾನಿಕ ವಿಧಾನ ಕ್ರಮವನ್ನು ಅನುಸರಿಸಬೇಕು. ಅದೇ ದ್ವಂದ್ವಾತ್ಮಕ ವಸ್ತುವಾದಿ ಅಧ್ಯಯನ ಕ್ರಮ – ಮಾರ್ಕ್ಸ್‌ವಾದಿ ತತ್ವಶಾಸ್ತ್ರದ ಅಡಿಪಾಯ. ಆದ್ದರಿಂದ ಇದನ್ನು ತಿಳಿಯುವುದಕ್ಕಾಗಿಯೇ ಈ ಅಧ್ಯಯನ ಶಿಬಿರ ಅಗತ್ಯವಿದೆ’ ಎಂದು ಹೇಳಿದರು.
ನಂತರದ ಅಧಿವೇಶನಗಳಲ್ಲಿ, ‘ವಿಶ್ವದಾದ್ಯಂತ ಹಲವಾರು ತತ್ವಜ್ಞಾನಿಗಳು, ಚಿಂತಕರು ಉದಯಿಸಿದ್ದಾರೆ, ಅವರನ್ನು ನಾವು ಮೂಲಭೂತವಾಗಿ ವಸ್ತುವಾದಿಗಳು ಹಾಗೂ ಭಾವನಾವಾದಿಗಳೆಂದು ವಿಂಗಡಿಸಬಹುದು. ನಮ್ಮ ದೇಶದಲ್ಲಿಯೂ ಸಹ ಚಾರ್ವಾಕರು, ಲೋಕಾಯತರೆಂಬ ವಸ್ತುವಾದಿಗಳಿದ್ದರು. ಅಂತೆಯೇ ಶಂಕರಾಚಾರ್ಯರಂತಹ ಭಾವನಾವಾದಿಗಳನ್ನೂ ಕಾಣುತ್ತೇವೆ. ಪಾಶ್ಚಾತ್ಯ ತತ್ವಜ್ಞಾನಿಗಳಾದ ಹೆಗೆಲ್ ದ್ವಂದ್ವಾತ್ಮಕತೆಯನ್ನು ಕಂಡು ಹಿಡಿದರೂ ಅದು ದ್ವಂದ್ವಾತ್ಮಕ ವಿಚಾರದ ಪ್ರತಿಬಿಂಬವೆಂದು ಹೇಳಿದರು. ಫ್ಯುಯರ್‌ಬಕ್ ದ್ವಂದ್ವಾತ್ಮಕ ವಿಚಾರವನ್ನು ವಿರೋಧಿಸಿದರೂ ಕೂಡ ಸಂಸ್ಕೃತಿ, ಮೌಲ್ಯಗಳ ಪ್ರಶ್ನೆಯಲ್ಲಿ ಅದು ಬದಲಾಗುವುದಿಲ್ಲ ಎಂದು ಪ್ರತಿಪಾದಿಸಿದರು. ಆದ್ದರಿಂದ ಅವರಿಬ್ಬರೂ ಮೂಲಭೂತವಾಗಿ ದ್ವಂದ್ವಾತ್ಮಕತೆಯನ್ನು ಒಪ್ಪಿಕೊಂಡರೂ ಸಹ ಅಂತಿಮವಾಗಿ ಭಾವನಾವಾದದ ಬಣ ಸೇರುತ್ತಾರೆ. ಅವರ ನಂತರದ ಕಾಲದಲ್ಲಿ ವಿಜ್ಞಾನದ ಬೆಳವಣಿಗೆಯ ಪರಿಣಾಮದಿಂದ ವಸ್ತು ಜಗತ್ತು, ಮಾನವ ಸಮಾಜ, ಚಿಂತನೆ ಇವುಗಳ ಉಗಮವನ್ನು ವೈಜ್ಞಾನಿಕವಾಗಿ ಅರ್ಥೈಸಲು ಕಾರ್ಲ್ ಮಾರ್ಕ್ಸ್ ಹಾಗೂ ಫ್ರೆಡರಿಕ್ ಎಂಗೆಲ್ಸ್‌ರವರಿಗೆ ಸಾಧ್ಯವಾಗಿ, ವಿಶ್ವದಲ್ಲಿ ಮೊಟ್ಟಮೊದಲ ಬಾರಿಗೆ ದ್ವಂದ್ವಾತ್ಮಕ ವಸ್ತುವಾದದ ತತ್ವಶಾಸ್ತ್ರವನ್ನು ರೂಪಿಸಿದರು’ ಎಂದು ಹೇಳಿದರು.
ನಂತರ ಮಾನವ ಸಮಾಜ ಬೆಳೆದು ಬಂದ ದಾರಿಯನ್ನು ವಿವರಿಸುತ್ತಾ, ‘ಆದಿಮಾನವ ಸಮಾಜದಲ್ಲಿ ಎಲ್ಲರೂ ಸಮಾನವಾಗಿ ಬೇಟೆಯಾಡುತ್ತಾ, ಗೆಡ್ಡೆ ಗೆಣಸು ಸಂಗ್ರಹಿಸುತ್ತಾ ಜೀವನ ಸಾಗಿಸುತ್ತಿದ್ದರು, ಕೃಷಿಯ ಉಗಮದೊಂದಿಗೆ ಸ್ಥಿರಾಸ್ತಿಯ ಜೊತೆ ಖಾಸಗಿ ಆಸ್ತಿಯ ಉಗಮವಾಯಿತು ಮತ್ತು ಸಮಾಜ ವರ್ಗ ವಿಭಜಿತವಾಯಿತು. ಆಲ್ಲಿಂದ ಮಾನವನಿಂದ ಮಾನವನ ಶೋಷಣೆ ಆರಂಭವಾಯಿತು ಎಂಬುದನ್ನು ತಿಳಿಸಿದರು. ಮುಂದುವರೆಯುತ್ತಾ, ಈ ಶೋಷಣೆಯೇ ಗುಲಾಮ ವ್ಯವಸ್ಥೆ, ತದನಂತರ ಊಳಿಗಮಾನ್ಯ ವ್ಯವಸ್ಥೆ ಹಾಗೂ ಪ್ರಸ್ತುತ ಬಂಡವಾಳಶಾಹಿ ವ್ಯವಸ್ಥೆಯ ಸ್ಥಾಪನೆಗೆ ಕಾರಣವಾಯಿತು; ಇದೀಗ ಬಂಡವಾಳಶಾಹಿ ಶೋಷಣೆಯು ಸಾಮ್ರಾಜ್ಯಶಾಹಿ ಘಟ್ಟವನ್ನು ಮುಟ್ಟಿದೆ. ಈ ವ್ಯವಸ್ಥೆಯ ನಿರ್ದಯ ಶೋಷಣೆಯ ವಿರುದ್ಧ ಕಾರ್ಮಿಕರು ಒಗ್ಗೂಡಿ ಮೊದಲಿಗೆ ರಷ್ಯಾದಲ್ಲಿ ಹಾಗೂ ತದನಂತರ ಪೂರ್ವ ಯೂರೋಪಿನ ಅನೇಕ ರಾಷ್ಟ್ರಗಳಲ್ಲಿ ಸಮಾಜವಾದವನ್ನು ಸ್ಥಾಪಿಸಿದರು. ಆದರೆ ಸಮಾಜವಾದವು ಒಂದು ಸ್ಥಿತ್ಯಂತರ ವ್ಯವಸ್ಥೆಯಾದ ಕಾರಣ ಕಾರ್ಮಿಕವರ್ಗದ ನೇತೃತ್ವದಲ್ಲಿ ಸಾಂಸ್ಕೃತಿಕ ಕ್ರಾಂತಿಯು ನೆರವೇರದಿದ್ದರೆ, ಬಂಡವಾಳಶಾಹಿ ವ್ಯವಸ್ಥೆಯ ವ್ಯಕ್ತಿ ಕೇಂದ್ರಿತ ನೀತಿ-ನೈತಿಕತೆಯು ಸಾಮೂಹಿಕತ್ವದ ನೀತಿ ಸಂಸ್ಕೃತಿಗೆ ಧಕ್ಕೆಯುಂಟು ಮಾಡಿ ಪ್ರತಿಕ್ರಾಂತಿಗೆ ಅವಕಾಶ ನೀಡುತ್ತದೆ. ಇದಕ್ಕೆ ವಿಶ್ವ ಸಾಮ್ರಾಜ್ಯಶಾಹಿಗಳ ಕುಮ್ಮಕ್ಕೂ ಇರುತ್ತದೆ. ಈ ವೇದನಾದಾಯಕ ಬೆಳವಣಿಗೆಯನ್ನು ನಾವು ಸೋವಿಯತ್ ಒಕ್ಕೂಟ, ಚೀನಾ ಹಾಗೂ ಇನ್ನಿತರ ಹಿಂದಿನ ಸಮಾಜವಾದಿ ರಾಷ್ಟ್ರಗಳಲ್ಲಿ ಕಾಣುತ್ತೇವೆ. ಇದನ್ನು ನಿಯಂತ್ರಿಸಲು ಆ ದೇಶಗಳಲ್ಲಿನ ಕಮ್ಯುನಿಸ್ಟ್ ಪಕ್ಷಗಳು ಕಾರ್ಯೋನ್ಮುಖವಾಗಬೇಕಿತ್ತು. ಆದರೆ ಆ ಪಕ್ಷಗಳು ಪರಿಷ್ಕರಣವಾದಕ್ಕೆ ತುತ್ತಾದವು, ಎಂದರೆ ಮಾರ್ಕ್ಸ್‌ವಾದದ ಮೂಲತತ್ವಗಳಿಂದ ದೂರವಾದವು. ಈ ಪರಿಷ್ಕರಣವಾದವು ತಲೆಯೆತ್ತಲು ಕಾರಣ ಆ ಪಕ್ಷಗಳಲ್ಲಿನ ವೈಚಾರಿಕ ಮಟ್ಟದಲ್ಲಿನ ಕುಸಿತ ಮತ್ತು ಯಾಂತ್ರಿಕ ಆಲೋಚನಾ ಕ್ರಮಗಳು ಎನ್ನುವುದನ್ನು ಮಹಾನ್ ಮಾರ್ಕ್ಸ್‌ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್ ತೋರಿಸಿಕೊಟ್ಟರು. ಈ ಪಾಠವನ್ನು ಅರಿತುಕೊಂಡು ನಾವಿಂದು ವೈಚಾರಿಕ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ ಮತ್ತು ದ್ವಂದ್ವಾತ್ಮಕ ಚಿಂತನಾ ಕ್ರಮಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ’ ತಿಳಿಸಿದರು.
‘ಕ್ರಾಂತಿ ನೆರವೇರಲು ಒಂದು ಪ್ರಮುಖವಾದ ಪೂರ್ವ ನಿಬಂಧನೆಯೆಂದರೆ ನೈಜ ಕ್ರಾಂತಿಕಾರಿ ಪಕ್ಷದ ಸ್ಥಾಪನೆ. ಈ ನೆಲದಲ್ಲಿ ಕಮ್ಯುನಿಸ್ಟ್ ನಾಮಧಾರಿ ಪಕ್ಷಗಳಾದ ಸಿಪಿಐ, ಸಿಪಿಐ(ಎಂ) ಇತ್ಯಾದಿ ಪಕ್ಷಗಳಿದ್ದರೂ, ಅವುಗಳು ಭಾರತದ ನೆಲದಲ್ಲಿ ಮಾರ್ಕ್ಸ್‌ವಾದವನ್ನು ಅಳವಡಿಸುವುದರಲ್ಲಿ ವಿಫಲರಾಗಿ, ನೈಜ ಕಮ್ಯುನಿಸ್ಟ್ ರಣನೀತಿ ಮತ್ತು ಸಂಸ್ಕೃತಿಯ ಆಧಾರದ ಮೇಲೆ ನೈಜ ಕಮ್ಯುನಿಸ್ಟ್ ಪಕ್ಷವಾಗಿ ಬೆಳೆಯಲು ಸಾಧ್ಯವಾಗಲಿಲ್ಲ ಎನ್ನುವುದನ್ನು ಮನಗಂಡು ಕಾಮ್ರೇಡ್ ಶಿವದಾಸ್ ಘೋಷ್‌ರವರು ಕೆಲವೇ ಸಂಗಾತಿಗಳೊಂದಿಗೆ ಯಾವುದೇ ಅಂತರರಾಷ್ಟ್ರೀಯ ಮನ್ನಣೆ ಇಲ್ಲದೆಯೇ, ಹಣ, ಮಾಧ್ಯಮಗಳ ಬೆಂಬಲವಿಲ್ಲದೆ, ಕಡುಕಷ್ಟದಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷವನ್ನು ಸ್ಥಾಪಿಸಿದರು. ಆದರೆ ಉದಾತ್ತ ಚಿಂತನೆ, ನೀತಿ-ನೈತಿಕತೆಯ ಆಧಾರದ ಮೇಲೆ ದಿನ ಕಳೆದಂತೆ ಪಕ್ಷ ಬೆಳೆದು ಬಂದಿದೆ, ಬಲಿಷ್ಠವಾದ ಹೋರಾಟದ ಶಕ್ತಿಯಾಗಿದೆ. ಕಮ್ಯುನಿಸ್ಟ್ ನೀತಿ ಸಂಹಿತೆಯ ಆಧಾರದ ಮೇಲೆ ಪಕ್ಷದ ಆಂತರಿಕ ಹೋರಾಟವನ್ನು ನಡೆಸಬೇಕು, ಆತ್ಮವಿಮರ್ಶೆ ಮತ್ತು ವಿಮರ್ಶೆಯ ಆಧಾರದ ಮೇಲೆ ನಮ್ಮ ಒಗ್ಗಟ್ಟು ನಿಲ್ಲಬೇಕು, ನಮ್ಮಲ್ಲಿ ತಲೆದೋರುವ ಬಂಡವಾಳಶಾಹಿ ಸಂಸ್ಕೃತಿಯ ಎಲ್ಲಾ ಅವಗುಣಗಳನ್ನು ಮಟ್ಟಹಾಕಬೇಕು, ವ್ಯಕ್ತಿವಾದಕ್ಕೆ ವಿರುದ್ಧವಾಗಿ ಸಾಮೂಹಿಕ ಸಂಸ್ಕೃತಿ ಅಳವಡಿಸಿಕೊಳ್ಳಬೇಕು’ ಎಂದು ವಿವರಿಸಿದರು.
ಕಾಮ್ರೇಡ್ ಶಿವದಾಸ್ ಘೋಷ್‌ರವರು ತಾವು ಪ್ರಾರಂಭಿಸಿದ ಹೋರಾಟವನ್ನು ಮುನ್ನಡೆಸಿಕೊಂಡು ಹೋಗಲು ಅವರ ಕೊನೆಯ ದಿನಗಳಲ್ಲಿ ಕಾಮ್ರೇಡರಿಗೆ ನೀಡಿದ ಕರೆಯನ್ನು ಕಾಮ್ರೇಡ್ ಪ್ರವಾಶ್ ಘೋಷ್‌ರವರು ಭಾವುಕರಾಗಿ ನೆನಪಿಸಿದರು. ‘ಕಾಮ್ರೇಡ್ ಶಿವದಾಸ್ ಘೋಷ್‌ರವರು ತೋರಿಸಿಕೊಟ್ಟಿರುವ ಸತ್ಯವನ್ನು ಜನರ ಮುಂದಿರಿಸಿದಾಗ, ಚಪ್ಪಾಳೆ ದೊರೆಯುತ್ತದೆ. ಆದರೆ ಅದಷ್ಟೇ ಸಾಲದು. ಜನರ ಸಂಕಷ್ಟಗಳ ಕುರಿತು ಅವರ ಹೃದಯದಾಳದಿಂದ ಬಂದ ಮಾತುಗಳ ಹಿಂದಿನ ನೈಜ ಕಳವಳ, ಸಂಕಟವನ್ನು ನಾವು ಅರಿಯಬೇಕು, ಅವರು ಪ್ರಾರಂಭಿಸಿದ ಹೋರಾಟವನ್ನು ನಾವೆಲ್ಲರೂ ಮುಂದುವರೆಸಬೇಕು’ ಎಂದು ಕರೆ ನೀಡಿದರು.
ಇಡೀ ಸಭಾಂಗಣವು ಕಾಮ್ರೇಡ್ ಪ್ರವಾಶ್ ಘೋಷ್‌ರವರ ಕರೆಗೆ ಓಗೊಟ್ಟು ಹೋರಾಟವನ್ನು ನಡೆಸುತ್ತೇವೆಂದು ಪಣ ತೊಟ್ಟಿತು. ಕಾರ್ಮಿಕ ವರ್ಗದ ಅಂತರರಾಷ್ಟ್ರೀಯ ಗೀತೆಯೊಂದಿಗೆ ಅಧ್ಯಯನ ಶಿಬಿರವು ಮುಕ್ತಾಯವಾಯಿತು. ಎಲ್ಲಾ ೬ ರಾಜ್ಯಗಳ ವಿಭಿನ್ನ ಭಾಷೆಗಳ ಮಾತನಾಡುವ ಕಾಮ್ರೇಡರೆಲ್ಲರ ಭಾವನೆಯು ಒಂದೇ ಭಾಷೆಯಲ್ಲಿಯೇ ವ್ಯಕ್ತವಾಯಿತು – ಅದುವೇ ಹೋರಾಟದ ಭಾಷೆ! ಹೋರಾಟವನ್ನು ದೃಢವಾಗಿ ಮುನ್ನಡೆಸುವ ಸಂಕಲ್ಪದ ಭಾಷೆ!!