Loading..

350ವರ್ಷದ ಬಂಡವಾಳವಾದ V/s 30 ವರ್ಷದ ಸಮಾಜವಾದ 350 ವರ್ಷಗಳಲ್ಲಿ ಬಂಡವಾಳವಾದ ಸಾಧಿಸಲಾಗದ್ದನ್ನು ಸಮಾಜವಾದಿ ಸೋವಿಯತ್ ಒಕ್ಕೂಟ ಕೇವಲ 30 ವರ್ಷಗಳಲ್ಲಿ ಸಾಧಿಸಿದ್ದು ಹೇಗೆ?

 

ಸುಮಾರು 25 ವರ್ಷಗಳ ಹಿಂದೆ, ನಾಗ್ಪುರದ ಹಿಂಗಣ ತಾಲ್ಲೂಕಿನ ನಲ್ಧೋಕ್ ಗ್ರಾಮದ ಕೈಗಾರಿಕಾ ಕಾರ್ಮಿಕ ಸುನಿಲ್ ಕಾಂಬ್ಳೆ ಅವರನ್ನು ಅವರ ಕೆಲಸದ ಸಮಯದ ಬಗ್ಗೆ ಕೇಳಿದಾಗ, “ನಾವು ಬೆಳಿಗ್ಗೆ 8 ಗಂಟೆಗೆ ಕಾರ್ಖಾನೆ ಪ್ರವೇಶಿಸುತ್ತೇವೆ, ಆದರೆ ಯಾವಾಗ ಕೆಲಸ ಮುಗಿಯುತ್ತದೆ ಎಂಬುದೇ ನಮಗೆ ಗೊತ್ತಿರುವುದಿಲ್ಲ. ಅದು 8 ಗಂಟೆಯೂ ಆಗಬಹುದು, 12 ಗಂಟೆಯೂ ಆಗಬಹುದು ಅಥವಾ 16 ಗಂಟೆಯೂ ಆಗಬಹುದು” ಎಂದು ಉತ್ತರಿಸಿದ್ದರು. ಆ ಕಾಲದಲ್ಲಿ ಮಹಾರಾಷ್ಟ್ರದ ಕೈಗಾರಿಕಾ ವಲಯದ ಪರಿಸ್ಥಿತಿ ಹೀಗಿತ್ತು. ಬಂಡವಾಳಶಾಹಿ ಆರ್ಥಿಕತೆಯ ಜಾಗತೀಕರಣದ ನಂತರ, ಇಂತಹ ಪರಿಸ್ಥಿತಿ ಭಾರತದಾದ್ಯಂತ ಸರ್ವೇಸಾಮಾನ್ಯವಾಗಿದೆ. ಕಾಲಗಳುರುಳುತ್ತಾ, ಖಾಯಂ ಉದ್ಯೋಗ ಬಹುತೇಕ ಕಣ್ಮರೆಯಾಗಿದೆ. ಅದರ ಬದಲಿಗೆ, ಖಾಯಂ ಕೆಲಸಗಳನ್ನೇ ಮಾಡಲು ಕಾರ್ಮಿಕರನ್ನು ಕಡಿಮೆ ಸಂಬಳಕ್ಕೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ. ಉದ್ಯೋಗದ ಭದ್ರತೆ ಇಲ್ಲದೇ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಕಾರ್ಮಿಕರು ಶ್ರಮವಹಿಸುತ್ತಿದ್ದಾರೆ. ಕಡಿಮೆ ಸಂಬಳದ ಈ ಗುತ್ತಿಗೆ ಕಾರ್ಮಿಕರ ಶೋಷಣೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಇಂದು ನಿರ್ದಯವಾಗಿ ಸಾಗಿದೆ.
ವಾರಕ್ಕೆ 70 ಅಲ್ಲ 90 ಗಂಟೆ ದುಡಿಯಿರಿ!
ಇತ್ತೀಚೆಗೆ, ಐಟಿ ದೈತ್ಯ ಇನ್ಫೋಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆಗಳ ಕೆಲಸ, ಅಂದರೆ ದಿನಕ್ಕೆ 12 ಗಂಟೆಗಳು ಕಾರ್ಮಿಕರು ಕೆಲಸ ಮಾಡಬೇಕೆಂದು ಹೇಳಿಕೆ ನೀಡಿದರು. ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಸಂಭಾಷಣೆಯೊಂದರಲ್ಲಿ, “ಭಾರತದ ಉತ್ಪಾದಕತೆ ವಿಶ್ವದಲ್ಲೇ ಅತ್ಯಂತ ಕಡಿಮೆ ಇದೆ. ಹಾಗಾಗಿ, ನಮ್ಮ ಯುವಕರು ‘ಇದು ನನ್ನ ದೇಶ; ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಇಷ್ಟಪಡುತ್ತೇನೆ’ ಎಂದು ಹೇಳಬೇಕು” ಎಂದರು. ಇನ್ನೊಬ್ಬ ಪ್ರಮುಖ ಕೈಗಾರಿಕೋದ್ಯಮಿ ಮತ್ತು ಭಾರತದ ಪ್ರಮುಖ ಬಹುರಾಷ್ಟ್ರೀಯ ಸಂಸ್ಥೆಯಾದ ಲಾರ್ಸೆನ್ ಮತ್ತು ಟೂಬ್ರೊದ ಅಧ್ಯಕ್ಷರಾದ ಎಸ್.ಎನ್. ಸುಬ್ರಮಣ್ಯನ್ ಒಂದು ಹೆಜ್ಜೆ ಮುಂದೆ ಹೋಗಿ, ವಾರಕ್ಕೆ 90 ಗಂಟೆಗಳು ಕೆಲಸ ಮಾಡಬೇಕು ಎಂದಿದ್ದಾರೆ. ಭಾನುವಾರದಂದು ಕಾರ್ಮಿಕರನ್ನು ದುಡಿಸಲು ಸಾಧ್ಯವಾಗದ ಬಗ್ಗೆ ವಿಷಾದ ವ್ಯಕ್ತಪಡಿಸಿ, 90 ಗಂಟೆಗಳು ಕಾರ್ಮಿಕರನ್ನು ದುಡಿಸಲು ಸಾಧ್ಯವಾಗುತ್ತಿದ್ದರೆ ತಮಗೆ ಮತ್ತಷ್ಟು ಸಂತೋಷವಾಗುತ್ತಿತ್ತು ಎನ್ನುತ್ತಾರೆ! ಅವರೂ ವಾರದಲ್ಲಿ 90 ಗಂಟೆ ಕೆಲಸ ಮಾಡುತ್ತಾರಂತೆ! “ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ನಿಮ್ಮ ಹೆಂಡತಿಯನ್ನಾಗಲಿ, ಮಕ್ಕಳನ್ನಾಗಲಿ ಎಷ್ಟು ಹೊತ್ತು ತಾನೇ ನೋಡುತ್ತೀರಿ? ಆಫೀಸಿಗೆ ಹೋಗಿ ಕೆಲಸ ಮಾಡಲು ಪ್ರಾರಂಭಿಸಿ… ನೀವು ವಿಶ್ವದಲ್ಲಿ ಅಗ್ರಸ್ಥಾನಕ್ಕೇರಬೇಕಿದ್ದರೆ, ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಲೇಬೇಕು” ಎನ್ನುತ್ತಾರೆ.
ಬಂಡವಾಳಶಾಹಿ ವರ್ಗದ ಹಿತಾಸಕ್ತಿಯನ್ನು ಕಾರ್ಯರೂಪಕ್ಕೆ ತರುತ್ತಿರುವ ಬಿಜೆಪಿ
ಭಾರತದ ಬಂಡವಾಳಶಾಹಿ ವರ್ಗ ಹಿತಾಸಕ್ತಿಯನ್ನು ಪೂರೈಸಲು, ಕೇಂದ್ರದ ಬಿಜೆಪಿ ಸರ್ಕಾರ ಈಗಾಗಲೇ ಬಹುತೇಕ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ, ದಿನಕ್ಕೆ 8 ಗಂಟೆಗಳ ಕೆಲಸದ ಹಳೆಯ ನಿಯಮವನ್ನು ಅಮಾನ್ಯಗೊಳಿಸಿದೆ. ಕಾರ್ಮಿಕರ ಹಿತಾಸಕ್ತಿಗಾಗಿಯೇ ಈ ಕಾನೂನುಗಳನ್ನು ದುರ್ಬಲಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ! ಇವರಲ್ಲಿನ ದಾಷ್ಟ್ರ ನೋಡಿ! ಖಾಯಂ ಉದ್ಯೋಗಗಳು ಕ್ರಮೇಣ ಕಡಿಮೆಯಾಗಿ, ಯಾವುದೇ ನಿಗದಿತ ಸಮಯದ ನಿರ್ಬಂಧನೆ ಇಲ್ಲದ, ಕಡಿಮೆ ಸಂಬಳದ ಗುತ್ತಿಗೆ ಉದ್ಯೋಗಗಳು ಇಂದಿನ ವಾಡಿಕೆಯಾಗಿವೆ.
ಇಂದು ಭಾರತದ ಅತಿದೊಡ್ಡ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್) ತನ್ನ ಲಾಭ ಹೆಚ್ಚುತ್ತಿದ್ದರೂ ಸಹ, ತನ್ನ ಒಟ್ಟು ಉದ್ಯೋಗಿಗಳಲ್ಲಿ ಶೇ 2 ರಷ್ಟು ಅಂದರೆ 12,000 ಖಾಯಂ ನೌಕರರನ್ನು ವಜಾಗೊಳಿಸಲು ನಿರ್ಧರಿಸಿದೆ. ಜೂನ್ 2025ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅದು 12,760 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದೆ, ಇದು ಕಳೆದ ವರ್ಷದ ಇದೇ ಅವಧಿಯ 12,104 ಕೋಟಿಗಿಂತ ಹೆಚ್ಚಾಗಿದೆ. ಈ ಕಾರ್ಪೊರೇಟ್ ದೈತ್ಯರು ಕಾರ್ಮಿಕರ ವೇತನದ ಒಂದು ದೊಡ್ಡ ಭಾಗವನ್ನು ಲಪಟಾಯಿಸಿ ದೊಡ್ಡ ಲಾಭ ಗಳಿಸುತ್ತಿರುವಾಗ, ಹೊಸದಾಗಿ ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನದ ಸಹಾಯದಿಂದ ತಮ್ಮ ಉತ್ಪಾದಕತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿಲ್ಲವೇ? ಒಂದೆಡೆ ಯಾವ ಹಿಂಜರಿಕೆಯೂ ಇಲ್ಲದೆ ಕೆಲಸದ ಅವಧಿ ಹೆಚ್ಚಿಸಲು ವಾದಿಸುತ್ತಿದ್ದಾರೆ, ಇನ್ನೊಂದೆಡೆ ಭಾರಿ ಪ್ರಮಾಣದಲ್ಲಿ ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿದ್ದಾರೆ. ಟಿಸಿಎಸ್ ಮಾತ್ರವಲ್ಲ, ಐಬಿಎಂ, ಇಂಟೆಲ್, ಮೈಕ್ರೋಸಾಫ್ಟ್, ಪ್ಯಾನಸೋನಿಕ್, ಟೆಸ್ಲಾ, ಸೋನಿ, ಕಾಗ್ನಿಜೆಂಟ್, ಗೂಗಲ್, ಆಕ್ಸೆಂಚರ್‌ನಂತಹ ಎಲ್ಲಾ ಜಾಗತಿಕ ಐಟಿ ದೈತ್ಯರೂ ಇದನ್ನೇ ಮಾಡುತ್ತಿದ್ದಾರೆ. ಈ ಪ್ರವೃತ್ತಿ ಹೀಗೆಯೇ ಮುಂದುವರಿದರೆ, ಕೃತಕ ಬುದ್ಧಿಮತ್ತೆ (AI) ಭವಿಷ್ಯದಲ್ಲಿ ಐಟಿ ಉದ್ಯಮಗಳ ಜೊತೆಗೆ ಇತರ ಕೈಗಾರಿಕೆಗಳಲ್ಲೂ ಭಾರಿ ನಷ್ಟಕ್ಕೆ ಕಾರಣವಾಗಲಿದೆ. ವಿಶ್ವದಾದ್ಯಂತ ಲಕ್ಷಾಂತರ ಕಾರ್ಮಿಕರು ಮತ್ತು ನೌಕರರು ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ.
ಕೃತಕ ಬುದ್ಧಿಮತ್ತೆ ಆಧುನಿಕ ವಿಜ್ಞಾನದ ವರ ಎಂದರೆ ಅದೇನೂ ಸುಳ್ಳಲ್ಲ! ನಾಗರಿಕ ಸಮಾಜವು ಈ ತಂತ್ರಜ್ಞಾನ ಬಳಸಿ ಕಾರ್ಮಿಕರ ದೈಹಿಕ ಮತ್ತು ಬೌದ್ಧಿಕ ಶ್ರಮವನ್ನು ಕಡಿಮೆ ಮಾಡಿ, ಅವರಿಗೆ ಹೆಚ್ಚಿನ ವಿರಾಮದ ಸಮಯವನ್ನು ಒದಗಿಸಬೇಕಿತ್ತು. ಆದರೆ, ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಆಧುನಿಕ ವಿಜ್ಞಾನದ ಕೊಡುಗೆಯು ವಿಶ್ವದಾದ್ಯಂತ ಲಕ್ಷಾಂತರ ಕಾರ್ಮಿಕರಿಗೆ ಮತ್ತು ನೌಕರರಿಗೆ ಶಾಪವಾಗಿದೆ. ಈ ವ್ಯವಸ್ಥೆಯು ಕಾರ್ಮಿಕರ ಜೀವನ ಮತ್ತು ಜೀವನೋಪಾಯವನ್ನು ಬಲಿಕೊಟ್ಟು ಕೇವಲ ಬಂಡವಾಳಶಾಹಿ ಏಕಸ್ವಾಮ್ಯಾಧಿಪತಿಗಳ ಗರಿಷ್ಠ ಲಾಭವನ್ನು ಖಾತರಿಪಡಿಸುತ್ತದೆ. ವಂಚನೆ ಮತ್ತು ಅನ್ಯಾಯದ ಪರಾಕಾಷ್ಠೆ ಇದು!
ಬಂಡವಾಳವಾದದ ಕುರಿತಾಗಿ ಮಾರ್ಕ್ಸ್ ರವರ ಮುನ್ನೋಟ
ಸುಮಾರು 150 ವರ್ಷಗಳ ಹಿಂದೆ, ಕಾರ್ಮಿಕ ವರ್ಗದ ಮಹಾನ್ ನಾಯಕರಾದ ಕಾರ್ಲ್ ಮಾರ್ಕ್ಸ್ ಹೇಳಿದ್ದರು: “ಕನಿಷ್ಠ ಬಂಡವಾಳದಿಂದ ಗರಿಷ್ಠ ಮಿಗುತಾಯ ಮೌಲ್ಯ (Surplus Value) ಅಥವಾ ಮಿಗುತಾಯ ಉತ್ಪನ್ನವನ್ನು ಸೃಷ್ಟಿಸುವುದು ಬಂಡವಾಳಶಾಹಿ ಉತ್ಪಾದನೆಯ ನಿರಂತರ ಗುರಿಯಾಗಿದೆ; ಕಾರ್ಮಿಕರನ್ನು ಅತಿಯಾಗಿ ದುಡಿಸಿಕೊಳ್ಳುವ ಮೂಲಕ ಈ ಫಲಿತಾಂಶವನ್ನು ಸಾಧಿಸಲಾಗದಿದ್ದರೆ, ಅತೀ ಕಡಿಮೆ ವೆಚ್ಚದಲ್ಲಿ ಮತ್ತು ಶ್ರಮಶಕ್ತಿ ಹಾಗೂ ವೆಚ್ಚಗಳನ್ನು ಉಳಿಸುವ ಮೂಲಕ ಉತ್ಪಾದನೆಯನ್ನು ವಿಸ್ತರಿಸುವುದು ಬಂಡವಾಳವಾದದ ಪ್ರವೃತ್ತಿಯಾಗಿದೆ.” (ಮಿಗುತಾಯ ಮೌಲ್ಯದ ಸಿದ್ಧಾಂತಗಳು, ಅಧ್ಯಾಯ 18). ಈ ಬಂಡವಾಳಶಾಹಿ ವ್ಯವಸ್ಥೆಯು ಸಂಪೂರ್ಣವಾಗಿ ಪ್ರತಿಗಾಮಿಯಾಗಿ ಸಾಮಾಜಿಕ ಅಭಿವೃದ್ಧಿಗೆ ಅಡಚಣೆಯಾಗುವ ಮೊದಲು ಮಾರ್ಕ್ಸ್ ರವರು ಇದನ್ನು ಹೇಳಿದ್ದರು. ಬಂಡವಾಳವಾದಕ್ಕೆ ಆಗಿನ್ನೂ ಪ್ರಗತಿಪರ ಪಾತ್ರವಿತ್ತು ಮತ್ತು ಅದು ಏಕಸ್ವಾಮ್ಯ ಮತ್ತು ಸಾಮ್ರಾಜ್ಯಶಾಹಿಯ ಹಂತವನ್ನು ಇನ್ನೂ ತಲುಪಿರಲಿಲ್ಲ. ಆದರೂ, ಕಾರ್ಮಿಕರ ನಿರ್ದಯ ಶೋಷಣೆಯನ್ನು ಆಧರಿಸಿದ ಬಂಡವಾಳವಾದದ ಆಂತರಿಕ ನಿಯಮವನ್ನು ಮಾರ್ಕ್ಸ್ ರವರು ಅರ್ಥಮಾಡಿಕೊಳ್ಳಬಲ್ಲವರಾಗಿದ್ದರು. ಆದ್ದರಿಂದಲೇ ಅಂತಹ ದಬ್ಬಾಳಿಕೆಯ ವ್ಯವಸ್ಥೆಯನ್ನು ಉರುಳಿಸಲು ಕರೆ ನೀಡಿದರು. ಇಂದು ಅವನತಿಗೊಂಡ ಬಂಡವಾಳಶಾಹಿ ವ್ಯವಸ್ಥೆಯ ಕೊನೆಯ ಹಂತದಲ್ಲಿ, ಕಾರ್ಮಿಕರ ಮೇಲಿನ ದಬ್ಬಾಳಿಕೆ ಮತ್ತು ನಿಗ್ರಹವು ಉತ್ತುಂಗಕ್ಕೇರಿದೆ. ಬಂಡವಾಳಶಾಹಿ ಮಾಲೀಕರ ಕೈಯಲ್ಲಿ, ಮಾನವಕುಲ ಮತ್ತು ನಾಗರಿಕತೆಯ ಅಭಿವೃದ್ಧಿಗೆ ಸಾಧನವಾಗಿದ್ದ ವಿಜ್ಞಾನವು ಇಂದು ಸಾಮಾಜಿಕ ಪ್ರಗತಿಗೆ ಅಡ್ಡಿಪಡಿಸಲು ಮತ್ತು ಲಕ್ಷಾಂತರ ಜನರನ್ನು ಮತ್ತಷ್ಟು ಬಡತನಕ್ಕೆ ನೂಕಲು ದುರುಪಯೋಗವಾಗುತ್ತಿದೆ, ಇದು ನಾಗರಿಕತೆಗೇ ಅಪಾಯವನ್ನುಂಟುಮಾಡುತ್ತಿದೆ.
8 ಗಂಟೆಗಳ ದುಡಿಮೆ
1880ರ ದಶಕದಲ್ಲಿ ದಿನಕ್ಕೆ 10-16 ಗಂಟೆಗಳ ಕಠಿಣ ದುಡಿಮೆಯ ವಿರುದ್ಧ ಕಾರ್ಮಿಕರ ರಕ್ತಸಿಕ್ತ ಹೋರಾಟದ ಪರಿಣಾಮವಾಗಿ ದಿನಕ್ಕೆ 8 ಗಂಟೆಗಳ ಕೆಲಸದ ಬೇಡಿಕೆಯನ್ನು ಸಾಧಿಸಲಾಯಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಮೇ 1, 1880 ರಿಂದು 8 ಗಂಟೆಗಳ ಕೆಲಸದ ದಿನವನ್ನು ಜಾರಿಗೊಳಿಸಲು ಐತಿಹಾಸಿಕ ಚಳುವಳಿಯು ಪ್ರಾರಂಭವಾಯಿತು, ಅದು ದಿನ ದಿನಕ್ಕೆ ತೀವ್ರಗೊಂಡು ಮೇ 4, 1886ರಂದು, ಶಿಕಾಗೋದ ಹೇ ಮಾರ್ಕೆಟ್ನಲ್ಲಿ ನಡೆದ ರ‍್ಯಾಲಿಯ ಸಂದರ್ಭದಲ್ಲಿ ಕಾರ್ಮಿಕರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿ ಅನೇಕರು ಅಸು ನೀಗಿದರು. 1889 ರಲ್ಲಿ ಕಮ್ಯುನಿಸ್ಟ್ ಪಕ್ಷಗಳ ಎರಡನೇ ಅಂತರರಾಷ್ಟ್ರೀಯ ಸಭೆಯ ನಿರ್ಧಾರದ ಪ್ರಕಾರ, ಮೇ 1 ಅನ್ನು ಐತಿಹಾಸಿಕ ‘ಮೇ ದಿನ’ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನ’ ಎಂದು ಆಚರಿಸಲಾಗುತ್ತದೆ. ಹೀಗಾಗಿ, 8 ಗಂಟೆಗಳ ಕೆಲಸದ ದಿನವು ಕಾರ್ಮಿಕರ ಕಠಿಣ ಹೋರಾಟದಿಂದ ಗಳಿಸಿದ ಹಕ್ಕು. ಆದರೆ ಈಗ ಬಂಡವಾಳಶಾಹಿ-ಸಾಮ್ರಾಜ್ಯಶಾಹಿಗಳು ಕಾರ್ಮಿಕರನ್ನು ಇನ್ನಷ್ಟು ಕ್ರೂರವಾಗಿ ಶೋಷಣೆ ಮಾಡುವ ಉದ್ದೇಶದಿಂದ ಆ ಹಕ್ಕನ್ನು ಬಹಿರಂಗವಾಗಿ ಮೊಟಕುಗೊಳಿಸುತ್ತಿದ್ದಾರೆ.
ಸಮಾಜವಾದಿ ಸೋವಿಯತ್ ಒಕ್ಕೂಟದ ಸ್ಥಿತಿ
ಮಾರ್ಕ್ಸ್ ಅವರು ಬಂಡವಾಳಶಾಹಿ ಸಮಾಜವು ಸಮಾಜವಾದಿ ಸಮಾಜವಾಗಿ ಪರಿವರ್ತನೆಗೊಳ್ಳುವ ಅನಿವಾರ್ಯತೆಯನ್ನು ಬಂಡವಾಳಶಾಹಿ ಸಮಾಜದ ಆರ್ಥಿಕ ಚಲನೆಯ ನಿಯಮದ ಮೂಲಕವೇ ತೋರಿಸಿಕೊಟ್ಟರು. (ವಿ.ಐ. ಲೆನಿನ್ ಸಮಗ್ರ ಕೃತಿಯಲ್ಲಿ ಉಲ್ಲೇಖಿಸಲಾಗಿದೆ). ಅಂದರೆ ಬಂಡವಾಳವಾದದ ಪ್ರಗತಿಯ ನಿಯಮದ ಪ್ರಕಾರ ಸಮಾಜವಾದದ ಐತಿಹಾಸಿಕ ಸಾಧ್ಯತೆಯು ಅದರ ಗರ್ಭದಿಂದಲೇ ಹೊರಹೊಮ್ಮುತ್ತದೆ. ಮಾರ್ಕ್ಸ್ ಅವರ ಮುನ್ನೋಟ ನೂರಕ್ಕೆ ನೂರು ನಿಜವೆಂದು ಸಾಬೀತುಪಡಿಸುತ್ತಾ, ಮಹಾನ್ ಲೆನಿನ್ ಅವರ ನಾಯಕತ್ವದಲ್ಲಿ 1917 ರಲ್ಲಿ ಐತಿಹಾಸಿಕ ನವೆಂಬರ್ ಕ್ರಾಂತಿಯ ನಂತರ ಸಮಾಜವಾದಿ ಸೋವಿಯತ್ ಒಕ್ಕೂಟವನ್ನು ಸ್ಥಾಪಿಸಲಾಯಿತು. ಮಾನವನಿಂದ ಮಾನವನ ಎಲ್ಲ ಶೋಷಣೆಯನ್ನು ಕೊನೆಗಾಣಿಸಲು ಕಾರ್ಮಿಕ ವರ್ಗದ ರಾಜ್ಯವನ್ನು ಸ್ಥಾಪಿಸಲಾಯಿತು. ಕ್ರಾಂತಿಯ ಮೊದಲು ಝಾರನ ಶೋಷಣೆಯಡಿ ಹಾಗೂ ತದನಂತರ 1917 ಫೆಬ್ರವರಿಯಿಂದ ನವೆಂಬರ್ ವರೆಗೆ ರಷ್ಯಾದ ಬಂಡವಾಳಶಾಹಿಗಳ ಸಂಕ್ಷಿಪ್ತ ಆಳ್ವಿಕೆಯಡಿ ರಷ್ಯಾದ ಕೈಗಾರಿಕಾ ಕಾರ್ಮಿಕರು ದಿನಕ್ಕೆ 12-13 ಗಂಟೆಗಳು ಅಥವಾ ಅದಕ್ಕೂ ಹೆಚ್ಚು ದುಡಿಯಬೇಕಿತ್ತು. ಬಟ್ಟೆ ಕಾರ್ಖಾನೆಗಳಲ್ಲಿ 15-16 ಗಂಟೆಗಳವರೆಗೆ ಅತ್ಯಂತ ಅಮಾನವೀಯ ಪರಿಸ್ಥಿತಿಗಳಲ್ಲಿ ಕಾರ್ಮಿಕರ ಶೋಷಣೆ ನಡೆಯುತ್ತಿತ್ತು. ನಿಯಮಿತವಾಗಿ ದೊರಕದ, ತೀರಾ ಕಡಿಮೆ ಸಂಬಳಕ್ಕೆ ಕಾರ್ಮಿಕರು ಜೀವ ತೇಯ್ದು ದುಡಿಯಬೇಕಿತ್ತು. ಅಪೌಷ್ಟಿಕತೆಯಿಂದ ಸಾವು ಸಾಮಾನ್ಯವಾಗಿತ್ತು. ಆದರೆ ಸಮಾಜವಾದಿ ಕ್ರಾಂತಿಯ ನಂತರ ಕಾರ್ಮಿಕರ ಸ್ಥಿತಿಯು ಮೂಲಭೂತವಾಗಿ ಬದಲಾಯಿತು. ಸೋವಿಯತ್ ಒಕ್ಕೂಟದಲ್ಲಿ, ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆಗಳು ಮತ್ತು ವಾರಕ್ಕೆ 6 ದಿನಗಳು ಎಂದು ನಿರ್ಧರಿಸಲಾಯಿತು. 1926 ರಲ್ಲಿ ಕೆಲಸದ ಅವಧಿಯನ್ನು ಏಳುವರೆ ಗಂಟೆಗಳಿಗೆ ಇಳಿಸಲಾಯಿತು ಮತ್ತು 1929 ರಲ್ಲಿ ಅದನ್ನು 7 ಗಂಟೆಗಳಿಗೆ ಮತ್ತು ವಾರಕ್ಕೆ 5 ದಿನಗಳಿಗೆ ಇಳಿಸಲಾಯಿತು. ಸೋವಿಯತ್ ಕಮ್ಯುನಿಸ್ಟ್ ಪಕ್ಷ ಮತ್ತು ಸಮಾಜವಾದಿ ಸೋವಿಯತ್ ರಾಜ್ಯದ ನಿರ್ಧಾರವನ್ನು ಎತ್ತಿಹಿಡಿಯುತ್ತಾ, ಮಹಾನ್ ಸ್ಟಾಲಿನ್ 1929ರಲ್ಲಿ ಪಕ್ಷದ ಸಭೆಯಲ್ಲಿ, “ದಿನಕ್ಕೆ 7 ಗಂಟೆಗಳ ದುಡಿಮೆ. ಇದು ಇತ್ತೀಚಿನ ದಿನಗಳಲ್ಲಿ ನಮ್ಮ ಪಕ್ಷ ಕೈಗೊಂಡ ಅತ್ಯಂತ ಕ್ರಾಂತಿಕಾರಿ ಕ್ರಮ ಎಂಬುವುದರಲ್ಲಿ ಯಾವ ಸಂಶಯವೂ ಇಲ್ಲ” ಎಂದು ಘೋಷಿಸಿದರು.
20 ವರ್ಷಗಳಲ್ಲೇ ಅಮೆರಿಕವನ್ನು ಹಿಂದಿಕ್ಕಿದ ಸೋವಿಯತ್ ರಷ್ಯಾ
ಯೋಜಿತ ಸಮಾಜವಾದಿ ಆರ್ಥಿಕತೆಯಿಂದಾಗಿ, ಸೋವಿಯತ್ ಒಕ್ಕೂಟದಲ್ಲಿ ಕೈಗಾರಿಕೀಕರಣದ ಗತಿ ಬದಲಾಯಿತು. ಕೆಲವೇ ವರ್ಷಗಳಲ್ಲಿ, ಸೋವಿಯತ್ ಒಕ್ಕೂಟದಲ್ಲಿ ನಿರುದ್ಯೋಗವು ಸಂಪೂರ್ಣವಾಗಿ ನಿರ್ಮೂಲನೆಯಾಯಿತು. ಇಡೀ ಬಂಡವಾಳಶಾಹಿ ಜಗತ್ತು ‘ಮಹಾ ಆರ್ಥಿಕ ಕುಸಿತ’ದಿಂದ ಬಳಲುತ್ತಿದ್ದಾಗ ಮತ್ತು ಉತ್ಪಾದನಾ ಸಾಮರ್ಥ್ಯವು ಬಹುಪಾಲು ನಿಷ್ಕ್ರಿಯವಾಗಿದ್ದಾಗ, ಸೋವಿಯತ್ ಒಕ್ಕೂಟ ವೇಗವಾಗಿ ಮುನ್ನಡೆಯುತ್ತಿತ್ತು. 1ನೇ ಮಹಾಯುದ್ಧದ ಆರಂಭಕ್ಕೆ ಹೋಲಿಸಿದರೆ, ಸೋವಿಯತ್ ರಷ್ಯಾದಲ್ಲಿ ಕೈಗಾರಿಕಾ ಉತ್ಪಾದನೆಯು 10 ವರ್ಷಗಳ ಅವಧಿಯಲ್ಲಿ, ಅಂದರೆ 1922 ರಿಂದ 1932 ರವರೆಗೆ 334% ರಷ್ಟು ಹೆಚ್ಚಾಗಿತ್ತು. ಸೋವಿಯತ್ ಒಕ್ಕೂಟದ ಕಾರ್ಮಿಕರ ಸಂಬಳವು 5 ವರ್ಷಗಳ ಅವಧಿಯಲ್ಲಿ (1925-1932) 4 ಪಟ್ಟು ಹೆಚ್ಚಾಯಿತು. ಉದಾತ್ತ ಸಮಾಜವಾದಿ ಸಿದ್ಧಾಂತದಿಂದ ಪ್ರೇರೇಪಿತರಾಗಿದ್ದ ಕಾರ್ಮಿಕ ವರ್ಗ ತಮ್ಮ ಪ್ರಾಮಾಣಿಕತೆ, ಸೃಜನಶೀಲತೆಯಿಂದ ಅಸಾಧ್ಯವಾದದ್ದನ್ನು ಮಾಡಿ ತೋರಿಸಿದರು.
ಶ್ರಮ ಹಾಗೂ ವರ್ಗವಿಭಜಿತ ವ್ಯವಸ್ಥೆ
ವರ್ಗ-ವಿಭಜಿತ ಸಮಾಜವು ಶ್ರಮವನ್ನು ಕಾರ್ಮಿಕರಿಂದ ಪ್ರತ್ಯೇಕಿಸುತ್ತದೆ. ಜೀವನೋಪಾಯಕ್ಕಾಗಿ ಶ್ರಮ ಅನಿವಾರ್ಯತೆಯಾಗುತ್ತದೆ. ದಮನಕಾರಿ ವ್ಯವಸ್ಥೆಯಾದ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಶ್ರಮ ತನ್ನ ಘನತೆ ಕಳೆದುಕೊಳ್ಳುತ್ತದೆ.
‘ದಮನಕಾರಿ ವ್ಯವಸ್ಥೆಯಲ್ಲಿ ಶ್ರಮವು ಶ್ರಮಿಕನಿಂದ ಬೇರ್ಪಟ್ಟು ಅವನು ಉತ್ಪಾದಿಸುವ ವಸ್ತುವಿನಲ್ಲಿ ಅಭಿವ್ಯಕ್ತವಾಗುತ್ತದೆ. ಹೀಗೆ ಶ್ರಮವು ಉತ್ಪಾದಿಸುವ ವಸ್ತುವಿನ ರೂಪ ಪಡೆದುಕೊಳ್ಳುತ್ತದೆ’ ಎಂದು ಮಾರ್ಕ್ಸ್ ವಿವರಿಸುತ್ತಾರೆ. (1844ರ ಆರ್ಥಿಕ ಮತ್ತು ತಾತ್ವಿಕ ಹಸ್ತಪ್ರತಿಗಳು, ಪುಟ 68)
ಪರಿಣಾಮವಾಗಿ, ಶ್ರಮವನ್ನು ಶ್ರಮಿಕನ ಮೇಲೆ ಹೇರುವಂತಾಗುತ್ತದೆ. ಆದ್ದರಿಂದಲೇ ಕಾರ್ಮಿಕನಿಗೆ ಕೆಲಸದಲ್ಲಿರುವಾಗ ನೆಮ್ಮದಿ ಕಾಣುವುದಿಲ್ಲ ಬದಲಾಗಿ ಕೆಲಸವಿಲ್ಲದಿದ್ದಾಗ ನೆಮ್ಮದಿಯಾಗಿರುತ್ತಾನೆ.
ಆದರೆ, ಕಾರ್ಮಿಕನು ತನ್ನ ಶ್ರಮವನ್ನು ಪ್ರೀತಿಸುವ ಹೊಸ ಪರಿಸ್ಥಿತಿಯನ್ನು ಸಮಾಜವಾದವು ಸೃಷ್ಟಿಸುತ್ತದೆ. ಶ್ರಮವನ್ನು ಯಾರೊಬ್ಬ ಮಾಲೀಕನು ಅವನ ಲಾಭಕ್ಕಾಗಿ ಲಪಟಾಯಿಸುತ್ತಿಲ್ಲ. ಬದಲಾಗಿ ಸಮಾಜವಾದಿ ನಿರ್ಮಾಣದ ಕೇಂದ್ರ ಬಿಂದುವಾಗಿರುವುದು ಅವನಲ್ಲಿ ಸ್ಫೂರ್ತಿ ತುಂಬುತ್ತದೆ. ತನ್ನನ್ನೂ ಸೇರಿದಂತೆ ಇಡೀ ಸಮಾಜದ ಹಿತಕ್ಕಾಗಿ ಭೌತಿಕ ಸಂಪತ್ತನ್ನು ಸೃಷ್ಟಿಸುತ್ತಿದ್ದೇನೆ ಎಂದು ಕಾರ್ಮಿಕರು ಅರಿತುಕೊಳ್ಳುತ್ತಾರೆ. ಉತ್ಪಾದನೆ ಯಥೇಚ್ಛವಾದಾಗಲೇ ಶ್ರಮವನ್ನು ಈ ಸಂಕೋಲೆಯಿಂದ ಬಿಡಿಸುವುದು ಸಾಧ್ಯ. ಇದರೊಂದಿಗೆ ಸಮಾಜದ ಸಾಂಸ್ಕೃತಿಕ ಮಟ್ಟ ಹಾಗೂ ಶ್ರಮ ಕುರಿತಾದ ದೃಷ್ಟಿಕೋನ ಬದಲಾಗಬೇಕು, ದೈಹಿಕ – ಬೌದ್ಧಿಕ ಶ್ರಮ, ಉದ್ಯಮ- ಕೃಷಿ, ಪಟ್ಟಣ ಮತ್ತು ಹಳ್ಳಿ, ಇಂತಹ ಭೇದಗಳು ಸಮಾಜದಿಂದ ತೊಲಗಬೇಕು.
ಸೋವಿಯತ್ ಸಮಾಜವಾದ ಸೃಷ್ಟಿಸಿದ ಅದ್ಭುತಗಳು
1935ರಲ್ಲಿ ಅಲೆಕ್ಸಿ ಸ್ಟಾಖಾನೋವ್ ಎಂಬ ಗಣಿ ಕಾರ್ಮಿಕ ಒಂದು ಪಾಳಿಯಲ್ಲಿ 102 ಟನ್ ಕಲ್ಲಿದ್ದಲನ್ನು, ಅಂದರೆ ಆತ ದಿನವೂ ಉತ್ಪಾದಿಸುವುದರ 14 ಪಟ್ಟು ಗಣಿಗಾರಿಕೆ ಮಾಡಿ ದಾಖಲೆ ನಿರ್ಮಿಸಿದ. ಈ ಅಸಾಧಾರಣ ಸಾಧನೆಯು ಅನೇಕ ಕಾರ್ಮಿಕರನ್ನು ಪ್ರೇರೇಪಿಸಿತು. ಈ ಚಳುವಳಿಯಿಂದ ಕಲ್ಲಿದ್ದಲು ಉತ್ಪಾದನೆಯಲ್ಲಿ ಎಂದಿಲ್ಲದ ದಾಖಲೆ ಸೃಷ್ಟಿಯಾಯಿತು. ಶ್ರಮದ ಘನತೆಯು ಗೌರವಿಸಲ್ಪಟ್ಟಾಗ ಕಾರ್ಮಿಕರು ಎಂತಹ ಸಾಧನೆ ಮಾಡಬಲ್ಲರು ಎಂಬುದಕ್ಕೆ ಇದೊಂದು ಉದಾಹರಣೆ. ಶ್ರಮದಿಂದ ವಿಮುಖಗೊಳ್ಳುವ ಬದಲು, ಮೊಟ್ಟ ಮೊದಲ ಬಾರಿಗೆ ಕಾರ್ಮಿಕರು ಸಮಾಜವಾದಿ ಆರ್ಥಿಕತೆಯನ್ನು ಬಲಪಡಿಸಲು ಹಾಗೂ ತಮ್ಮ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ಸಂತೋಷವಾಗಿ ಸ್ವಯಂಪ್ರೇರಿತರಾಗಿ ಕೆಲಸಮಾಡಲು ಮುಂದಾದರು.
ಎರಡನೇ ಮಹಾಯುದ್ಧದ ನಂತರ ಸೋವಿಯತ್ ಸಮಾಜದ ಬೃಹತ್ ಪುನರ್ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದಾಗ ಮಹಾನ್ ಸ್ಟಾಲಿನ್ ಅವರು ಬಹುಮುಖ್ಯ ಪರಿಪಾಠ ನೀಡಿದರು: ‘ಶ್ರಮದ ಕುರಿತಾಗಿ ನಮ್ಮ ಧೋರಣೆಯಲ್ಲಿ ಬದಲಾವಣೆ ಬರದ ಹೊರತು ಸಮಾಜದ ಸಾಂಸ್ಕೃತಿಕ ಮಟ್ಟವನ್ನು ಹೆಚ್ಚಿಸುವುದು ಹಾಗೂ ಸಮಾಜದ ಪ್ರತಿಯೊಬ್ಬರ ದೈಹಿಕ-ಮಾನಸಿಕ ಬೆಳವಣಿಗೆಯನ್ನು ಖಾತ್ರಿಪಡಿಸುವುದು ಸಾಧ್ಯವಿಲ್ಲ. ಅದಕ್ಕಾಗಿ ಮೊಟ್ಟಮೊದಲು ದುಡಿಮೆಯ ಸಮಯವನ್ನು ದಿನಕ್ಕೆ 6 ಗಂಟೆಗಳಿಗೆ ಇಳಿಸಬೇಕು. ಇನ್ನು ಕೆಲವು ದಿನಗಳಲ್ಲಿ ಅದನ್ನು 5 ಗಂಟೆಗಳಿಗೆ ಇಳಿಸಬೇಕು. ಆ ಮೂಲಕ ಸಮಾಜದ ಸದಸ್ಯರಿಗೆ ಸರ್ವತೋಮುಖ ಶಿಕ್ಷಣವನ್ನು ಪಡೆಯಲು ಅಗತ್ಯವಿರುವ ಸಮಯ ದೊರಕುವಂತಾಗಬೇಕು’ (ಯುಎಸ್‌ಎಸ್‌ಆರ್‌ನಲ್ಲಿ ಸಮಾಜವಾದದ ಆರ್ಥಿಕ ಸಮಸ್ಯೆಗಳು 1951) ಈ ಕ್ರಮಗಳನ್ನು ಅಳವಡಿಸಿಕೊಂಡಾಗ ಮಾತ್ರವೇ ಸಮಾಜವಾದದ ಉನ್ನತ ಹಂತವನ್ನು ತಲುಪಲು ಸಾಧ್ಯ ಎಂದಿದ್ದರು.
ಬಂಡವಾಳವಾದವು 350 ವರ್ಷಗಳಲ್ಲಿ ಸಾಧಿಸಲಾಗದ್ದನ್ನು, ಸೋವಿಯತ್ ಸಮಾಜವಾದವು ಕೇವಲ 30 ವರ್ಷಗಳಲ್ಲಿ ಸಾಧಿಸಿದ್ದು ಮಹಾನ್ ಸ್ಟಾಲಿನ್‌ರ ಈ ಬಹುಮುಖ್ಯ ಪಾಠದಿಂದಲೇ.
ಆದ್ದರಿಂದ, ಕಾರ್ಮಿಕ ವರ್ಗವು ಬಂಡವಾಳಶಾಹಿ ದಬ್ಬಾಳಿಕೆಯಿಂದ ಮುಕ್ತವಾಗಬೇಕೆಂದರೆ, ಕೆಲಸದ ಅವಧಿ ಹೆಚ್ಚಿಸುವ ಬಂಡವಾಳವಾದದ ಶೋಷಣೆಯ ವಿರುದ್ಧ, ಸರಿಯಾದ ಕ್ರಾಂತಿಕಾರಿ ನಾಯಕತ್ವದ ಅಡಿಯಲ್ಲಿ ಬಂಡವಾಳಶಾಹಿ-ವಿರೋಧಿ ಸಮಾಜವಾದಿ ಕ್ರಾಂತಿಗೆ ಮುನ್ನುಗ್ಗುವಂತಹ ವರ್ಗ ಮತ್ತು ಸಾಮೂಹಿಕ ಹೋರಾಟಗಳನ್ನು ತೀವ್ರಗೊಳಿಸಬೇಕು. ಈ ಮೂಲಕ ದಬ್ಬಾಳಿಕೆಯ ಬಂಡವಾಳಶಾಹಿ ವ್ಯವಸ್ಥೆಯನ್ನು ಉರುಳಿಸಿ, ಕಾರ್ಮಿಕರ ನಿರ್ದಯ ಶೋಷಣೆಯ ನೊಗದಿಂದ ಕಾರ್ಮಿಕರು ತಮ್ಮನ್ನು ವಿಮುಕ್ತಿಗೊಳಿಸಿಕೊಳ್ಳಬೇಕು.