Loading..

ಎಪ್‌ಸ್ಟೀನ್ ಫೈಲ್ಸ್ - ಕೊಳೆತ ಬಂಡವಾಳವಾದದ ಪಾತಕ ಬಟಾಬಯಲು!

ಬಂಡವಾಳವಾದವು ತನ್ನ ಸಾವಿನಂಚಿನಲ್ಲಿದೆ. ಬಿಕ್ಕಟ್ಟು ಹೆಚ್ಚಾಗುತ್ತಿದ್ದಂತೆ ಅದು ಹೆಚ್ಚು ಹೆಚ್ಚು ಪ್ರತಿಗಾಮಿ ಹಾಗೂ ಅತ್ಯಂತ ಭ್ರಷ್ಟವಾಗುತ್ತದೆ ಹಾಗೂ ಅದರ ಕೆಸರು, ರಾಡಿ ಎಲ್ಲೆಡೆ ಹರಡಿಕೊಂಡು, ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಕೊಳೆತ ಬಂಡವಾಳಶಾಹಿ ವ್ಯವಸ್ಥೆಯ ಸೇವೆಗೈಯುತ್ತಿರುವ ಅಥವಾ ಅದಕ್ಕೆ ಬೆಂಬಲವಾಗಿ ನಿಂತಿರುವ ಎಲ್ಲರನ್ನೂ – ರಾಜಕಾರಣಿಗಳಿರಲಿ, ಶಿಕ್ಷಣ ಕ್ಷೇತ್ರದವರಿರಲಿ, ಇನ್ನಿತರ ಖ್ಯಾತ ಗಣ್ಯರೇ ಇರಲಿ, ಸಮಾಜದ ಮೇಲ್‌ಸ್ತರದ ಜನರ ಒಡನಾಡಿಗಳೇ ಇರಲಿ – ಇವರೆಲ್ಲರನ್ನೂ ತನ್ನ ತೆಕ್ಕೆಯೊಳಗೆ ಬಾಚಿಕೊಳ್ಳುತ್ತದೆ. ಇತ್ತೀಚಿನ ಎಪ್‌ಸ್ಟೀನ್ ಫೈಲ್ ಬಯಲು ಪಡಿಸಿರುವ ಅಂಶಗಳು ಈ ಜನರು ಇಳಿದಿರುವ ಕೀಳುಮಟ್ಟವನ್ನು ಸೂಚಿಸುತ್ತವೆ. ಈ ಕೊಳೆತ ಸಾಮಾಜಿಕ-ರಾಜಕೀಯ-ಆರ್ಥಿಕ ವ್ಯವಸ್ಥೆಯು ಹೇಗೆ ಇಂತಹ ವ್ಯಕ್ತಿಗಳು ಹುಟ್ಟುವುದಕ್ಕೆ ಕಾರಣವಾಗಿದೆ ಮತ್ತು ಹೇಗೆ ಅಪರಾಧಿಗಳಿಗೆ ಇದು ಶ್ರೀರಕ್ಷೆ ನೀಡುತ್ತದೆ ಎಂಬುದನ್ನು ಈ ಫೈಲ್‌ಗಳು ಎತ್ತಿ ತೋರಿಸುತ್ತವೆ.
ಎಪ್‌ಸ್ಟೀನ್- ಯಾರೀತ?
ಆತ ಪದವೀಧರನಾಗಿರಲಿಲ್ಲ, ಆದರೂ 1970ರಲ್ಲಿ ನ್ಯೂಯಾರ್ಕಿನ ಒಂದು ಖಾಸಗಿ ಶಾಲೆ, ಡಾಲ್ಟನ್ ಶಾಲೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರದ ಶಿಕ್ಷಕನಾಗಿದ್ದ. ಒಬ್ಬ ವಿದ್ಯಾರ್ಥಿಯ ತಂದೆ, ಈತನ ಬಗ್ಗೆ ಮೆಚ್ಚುಗೆ ಹೊಂದಿ, ವಾಲ್‌ಸ್ಟ್ರೀಟ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ – ಬೇರ್‌ಸ್ಟರ್ನ್ ನ ಒಬ್ಬ ಹಿರಿಯ ಪಾಲುದಾರನ ಪರಿಚಯ ಮಾಡಿಕೊಟ್ಟರು ಎನ್ನಲಾಗಿದೆ. ಅಲ್ಪ ಸಮಯದಲ್ಲಿಯೇ ಎಪ್‌ಸ್ಟೀನ್ ಆ ಕಂಪನಿಯ ಪಾಲುದಾರನಾದ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಬೇರ್‌ಸ್ಟರ್ನ್ಸ್ ಕಂಪನಿಯು ಆತ ತನ್ನ ಪದವಿಯ ಕುರಿತು ತನ್ನ ಅರ್ಜಿಯಲ್ಲಿ ಸುಳ್ಳು ಹೇಳಿರುವುದರ ಬಗ್ಗೆ ಹಾಗೂ ಕಂಪನಿಯ ಮೂಲಕ ತನ್ನ ಗೆಳತಿಗಾಗಿ ಕೊಂಡುಕೊಂಡ ದುಬಾರಿ ಆಭರಣಗಳ ಕುರಿತು ಹಲವಾರು ಬಾರಿ ಪ್ರಶ್ನೆ ಮಾಡಿದೆ ಎಂದು ಹೇಳಲಾಗಿದೆ. ಆದರೂ 1980ರಲ್ಲಿ ಆತ ಖ್ಯಾತಿಯ ಉತ್ತುಂಗದಲ್ಲಿದ್ದ. ಒಂದು ಆಂತರಿಕ ತನಿಖೆಯು ಎಪ್‌ಸ್ಟೀನ್, ಭದ್ರತೆ ಮತ್ತು ವಿನಿಮಯ ಆಯೋಗದ ನಿಬಂಧನೆಗಳನ್ನು ಉಲ್ಲಂಘಿಸಿದ್ದಾನೆಂದು ಹೇಳಿತು. ಆತನಿಗೆ ದಂಡ ವಿಧಿಸಿ ಅಮಾನತ್ತಿನಲ್ಲಿ ಇಡಲಾಯಿತು. ಆದರೆ ಆತ ತಾನು ತಪ್ಪು ಮಾಡಿಲ್ಲವೆಂದು ಹೇಳುತ್ತಾ ಸಂಸ್ಥೆಯಿಂದ ಹೊರ ನಡೆದ. ಸ್ಪಷ್ಟವಾಗಿ, ‘ಮೇಲಿ’ನವರೊಂದಿಗಿನ ಆತನ ‘ಸಂಬಂಧ’ವು ಆತನನ್ನು ಕಾಪಾಡಿತು.
ಎಪ್‌ಸ್ಟೀನನ ಅದೃಷ್ಟ ಖುಲಾಯಿಸಿ 1982ರ ವೇಳೆಗೆ ಆತ ತನ್ನದೇ ಕಂಪನಿಯನ್ನು – ಜೆ.ಎಪ್‌ಸ್ಟೀನ್ ಅಂಡ್ ಕೋ – ಸೃಷ್ಟಿಸಿಕೊಂಡ, ಅತಿ ವೇಗವಾಗಿ ಕೋಟ್ಯಧಿಪತಿಯಾದ. ಅತ್ಯಂತ ಶ್ರೀಮಂತ ವ್ಯಕ್ತಿಗಳ, ಪ್ರಮುಖ ರಾಜಕಾರಣಿಗಳ ಮತ್ತು ರಾಜ ಮನೆತನದವರೊಂದಿಗೆ ಸಾಮಾಜಿಕ ಸಂಬಂಧವನ್ನು ಬೆಳೆಸಿಕೊಂಡ. ಬೇರ್‌ಸ್ಟರ್ನ್ ಕಂಪನಿಯಲ್ಲಿ ಮೇಲೇರುತ್ತಿರುವಾಗಲೇ ಅವನು ನ್ಯೂಯಾರ್ಕ್ ಅಥವಾ ಅಮೆರಿಕ ಮಾತ್ರವಲ್ಲದೇ ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಗಳೊಡನೆ ಒಡನಾಟ ಹೊಂದಿದ್ದ. ಅವನ ಪ್ರಭಾವ 1980ರ ದಶಕದಾದ್ಯಂತ ವಿಶ್ವದೆಲ್ಲೆಡೆ ಹರಡಿತ್ತು. 1990ರಲ್ಲಿ ಎಪ್‌ಸ್ಟೀನ್ ತನ್ನ ವ್ಯಾಪಾರವನ್ನು ಅಮೆರಿಕಾದ ವರ್ಜಿನ್ ದ್ವೀಪ ಸಮೂಹದ ಸೇಂಟ್ ಥಾಮಸ್ ದ್ವೀಪದಿಂದ ನಡೆಸುತ್ತಿದ್ದ. ಈ ದ್ವೀಪವು ತೆರಿಗೆ ಧಾಮವಾಗಿತ್ತು (ಹೆಸರಿಗೆ ಮಾತ್ರ ಅಥವಾ ಶೂನ್ಯ ತೆರಿಗೆ ಹೊಂದಿರುವುದು). ಆತ ನಂತರ ಅಲ್ಲಿಯೇ ಹತ್ತಿರದಲ್ಲಿ ಮತ್ತೊಂದು ದ್ವೀಪ, ಗ್ರೇಟ್ ಸೇಂಟ್ ಜೇಮ್ಸ್ ದ್ವೀಪವನ್ನು ಕೊಂಡುಕೊಂಡ. ಆತ ಅನೇಕ ಖಾಸಗಿ ಜೆಟ್‌ಗಳನ್ನು ಸಹ ಹೊಂದಿದ್ದ
ಆತ ಶೇರು ಮಾರುಕಟ್ಟೆಯಲ್ಲಿ ಗರಿಷ್ಠ ಲಾಭ ಮಾಡಿಕೊಳ್ಳುತ್ತಿದ್ದನಷ್ಟೇ ಅಲ್ಲ, ಅಮೆರಿಕಾದ ಅತ್ಯಂತ ಬಲಿಷ್ಠ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್‌ರವರೊಡನೆ ಆತ್ಮೀಯ ಸಂಬಂಧಗಳನ್ನು ಕುದುರಿಸಿಕೊಂಡಿದ್ದ. ಅವನು, ತನ್ನ ಸಂಪರ್ಕದಲ್ಲಿರುವವರಿಗೆ ನಿಯಮಗಳಿಗೊಳಪಟ್ಟೋ, ನಿಯಮಬಾಹಿರವಾಗಿಯೋ ಆರ್ಥಿಕ ಲಾಭಗಳನ್ನು ಗಳಿಸಿಕೊಡುವುದರ ಜೊತೆಗೆ, ಅವರ ವಿಕೃತ ಕಾಮನೆಗಳನ್ನೂ ತೃಪ್ತಿಪಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಪಾಮ್ ಬೀಚಿನ 2005ರ ಪೊಲೀಸ್ ವರದಿಯು ಆತನ ಮೇಲಿದ್ದ ಕಳ್ಳ ಸಾಗಾಣಿಕೆ ಮತ್ತು ಲೈಂಗಿಕ ವ್ಯಾಪಾರದ ಮೇಲಿನ ಆರೋಪಗಳ ಬಗ್ಗೆ ಅಧಿಕೃತ ಪರಿಶೀಲನೆಗೆ ಚಾಲನೆ ನೀಡಿತು. ಅಪ್ರಾಪ್ತ ಬಾಲಕಿಯರಿಗೆ ಹಣ ನೀಡಿ (ಗಿರಾಕಿಗಳ ಗೋಪ್ಯತೆ ಕಾಪಾಡುವ ಸಲುವಾಗಿ) ಎಪ್‌ಸ್ಟೀನಿನ ಗಿರಾಕಿಗಳಿಗೆ ‘ಮಸಾಜ್’ ಮಾಡಲು ನಿಯೋಜಿಸಲಾಗಿತ್ತು ಹಾಗೂ ಅವರಿಂದ ಇತರರನ್ನು ಈ ಕೆಲಸಕ್ಕೆ ಸೇರಿಸಲು ಹಣ ನೀಡಿ ಪ್ರೇರೇಪಿಸಲಾಗಿತ್ತು ಎಂಬುದನ್ನು ತನಿಖೆಗಳು ಬಹಿರಂಗಗೊಳಿಸಿವೆ.
ಎಪ್‌ಸ್ಟೀನ್ ಚಟುವಟಿಕೆಗಳ ಕುರಿತಾದ ತನಿಖೆ
2007ರಲ್ಲಿ ಎಪ್‌ಸ್ಟೀನಿನ ವಿರುದ್ಧ ಸಾಕಷ್ಟು ಸಾಕ್ಷಿಗಳು ದೊರೆತರೂ ಕಠಿಣ ಶಿಕ್ಷೆಯಿಂದ ಆತ ತಪ್ಪಿಸಿಕೊಂಡ. ಕಳ್ಳ ಸಾಗಾಣಿಕೆಯಾದ ಹುಡುಗಿಯರು ತಮ್ಮ ಹಕ್ಕುಗಳಿಂದ ವಂಚಿತರಾಗಿರುವ ಬಗ್ಗೆ ನ್ಯಾಯಾಲಯವೇ ಹೇಳಿಕೆ ನೀಡಿತು! 2018ರಲ್ಲಿ ಎಪ್‌ಸ್ಟೀನ್ ಅಥವಾ ಆತನ ಸಹಚರರಿಂದ ಲೈಂಗಿಕ ದೌರ್ಜನ್ಯಗಳಿಗೆ ಒಳಗಾಗಿದ್ದಾರೆ ಎನ್ನಲಾದ ಸುಮಾರು 80 ಸಂತ್ರಸ್ತೆಯರನ್ನು (ಬಹುತೇಕ ಹದಿಹರೆಯದ ಹುಡುಗಿಯರು) ಒಬ್ಬ ತನಿಖಾ ವರದಿಗಾರ ಗುರುತಿಸಿದ ಬಳಿಕ, ಮತ್ತೊಮ್ಮೆ ಆತನ ಮೇಲೆ ತನಿಖೆ ಶುರುವಾಗಿ ಆತ, ಲೈಂಗಿಕ ಕಳ್ಳ ಸಾಗಾಣಿಕೆಯ ಆಪಾದನೆಯ ಮೇಲೆ ಬಂಧನಕ್ಕೊಳಗಾದ. ಆದರೆ, ವಿಚಾರಣೆ ಪ್ರಾರಂಭವಾಗುವುದಕ್ಕೆ ಮುನ್ನವೇ ಆತ ಆಗಸ್ಟ್ 10, 2019ರಂದು ಮ್ಯಾನ್‌ಹಟನ್ ಕಾರಾಗೃಹದಲ್ಲಿ ನಿಗೂಢವಾಗಿ ಸಾವಿಗೀಡಾಗಿರುವುದು ಕಂಡುಬಂದಿತು. ಅದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಎಪ್‌ಸ್ಟೀನ್ ಫೈಲ್ಸ್ ಬಿಡುಗಡೆ
ಈ ಫೈಲ್‌ಗಳ ದಾಖಲೆಗಳನ್ನು ಬಿಡುಗಡೆ ಮಾಡದಿರುವಂತೆ ಸಾಕಷ್ಟು ಒತ್ತಡಗಳಿದ್ದವು. 2025ರಲ್ಲಿ ಅಂತಿಮವಾಗಿ 1000 ಕ್ಕೂ ಹೆಚ್ಚು ಹುಡುಗಿಯರ, ಎಪ್‌ಸ್ಟೀನಿನ ದುರಾಕ್ರಮಣಕ್ಕೆ ಬಲಿಯಾದವರ ಒತ್ತಡದ ಮೇರೆಗೆ ಈ ದಾಖಲೆಗಳನ್ನು ಬಿಡುಗಡೆ ಮಾಡಲಾಯಿತು. ಎಪ್‌ಸ್ಟೀನ್ ಫೈಲ್ಸ್ ನಲ್ಲಿ ಹಲವಾರು ವರ್ಷಗಳ ತನಿಖಾ ದಾಖಲೆಗಳು – ಫೋಟೋಗಳು, ಹಣಕಾಸಿಗೆ ಸಂಬಂಧಿಸಿದ ದಾಖಲೆಗಳು, ಇತ್ಯಾದಿ ಇವೆ. ಇದರ ಬಿಡುಗಡೆಯ ನಂತರ ಸಾರ್ವಜನಿಕ ಒತ್ತಡ ಹೆಚ್ಚಾಗಿದೆ, ಶಾಸನ ಕ್ರಮಗಳು ಜಾರಿಯಾಗಿವೆ. ಎಲ್ಲಾ ದಾಖಲೆಗಳು ಬಿಡುಗಡೆಯಾಗಿವೆಯೇ ಎಂಬುದರ ಕುರಿತು ಪ್ರಶ್ನೆಗಳಿವೆ. ಎಪ್‌ಸ್ಟೀನನ ಜೊತೆ ಹೆಸರು ತಳಕು ಹಾಕಿಕೊಂಡಿರುವವರೆಲ್ಲರೂ ತಪ್ಪಿತಸ್ಥರೆಂದು ಹೇಳಲಾಗದೆಂದು ವಾದಿಸಲಾಗಿದೆ. ಆದರೂ ಮೇಲ್‌ಸ್ತರದ ಜನರ ಹೆಸರು ಅಂಟಿಕೊಂಡಿರುವ ಅಂಶವು ಸಾಮಾಜಿಕವಾಗಿ ಮುಖ್ಯವಾಗುತ್ತದೆ. ಈ ಲೈಂಗಿಕ ಅಪರಾಧಿಯ ಜೊತೆ ಸಹಜ ರೀತಿಯಲ್ಲಿ ಸಂಬಂಧ ಹೊಂದಿರುವ ಪಟ್ಟಿಯಲ್ಲಿ ಮಾಜಿ ರಾಜಕೀಯ ನಾಯಕರು, ಉದ್ಯಮಿಗಳು, ಶಿಕ್ಷಣ ಕ್ಷೇತ್ರದ ಜನರು – ಎಲ್ಲರೂ ಇದ್ದಾರೆ. ಹಾಗೂ ಸಾಂದರ್ಭಿಕ ಸಾಕ್ಷಿಗಳು ಈ ಕಳ್ಳ ಸಾಗಾಣಿಕೆಗೊಳಪಟ್ಟ ಹುಡುಗಿಯರನ್ನು ಮೇಲ್‌ಸ್ತರದ ಜನರಿಗೆ ‘ಮನರಂಜನೆ’ ನೀಡಲು ಬಳಸಿಕೊಳ್ಳಲಾಗಿತ್ತು ಎಂಬುದನ್ನು ಸೂಚಿಸುತ್ತವೆೆ. ಈ ಪಟ್ಟಿಯಲ್ಲಿ ಅಮೆರಿಕಾದ ಅಧ್ಯಕ್ಷ ಟ್ರಂಪ್, ಉದ್ಯಮಿ ಎಲಾನ್ ಮಸ್ಕ್ ಮತ್ತು ಜಗತ್ತಿನ ಪ್ರಮುಖ ರಾಜಕೀಯ ವ್ಯಕ್ತಿಗಳ ಹೆಸರುಗಳೂ ಇವೆ. ಬ್ರಿಟನ್ನಿನ ಮಾಜಿ ಸೋಷಲೈಟ್ ಹಾಗೂ ಎಪ್‌ಸ್ಟೀನಿನ ಸಹಚರ ಗಿಸ್ ಲೇನ್ ನೋಯಲ್ ಮಾರಿಯನ್ ಮ್ಯಾಕ್ಸ್ ವೆಲ್‌ಗೆ ಮಕ್ಕಳ ಮೇಲೆ ನಡೆಸಲಾಗಿರುವ ಲೈಂಗಿಕ ಅಪರಾಧಗಳಿಗೆ 20 ವರ್ಷ ಕಾರಾಗೃಹದ ಶಿಕ್ಷೆ ಘೋಷಣೆಯಾಗಿದೆ. ಅಮೆರಿಕ ಮಾತ್ರವಲ್ಲದೆ ಇಂಗ್ಲೆಂಡ್, ಆಸ್ಟ್ರೇಲಿಯಾ, ನಾರ್ವೆ, ಸ್ಲೋವಾಕಿಯಾ ಮತ್ತು ಭಾರತದ ಶ್ರೀಮಂತ ಹಾಗೂ ಬಲಿಷ್ಠ ವ್ಯಕ್ತಿಗಳ ಜೊತೆ ಎಪ್‌ಸ್ಟೀನ್‌ಗೆ ಸಂಬಂಧವಿದ್ದುದನ್ನು ಇತ್ತೀಚೆಗೆ ಬಿಡುಗಡೆಯಾದ ಮತ್ತಷ್ಟು ದಾಖಲೆಗಳು ಹೇಳುತ್ತವೆ.
ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಲಾಭ, ಶೋಷಣೆ, ಸಾಂಸ್ಕೃತಿಕ ಅವನತಿಯ ಪರಿಣಾಮವಾಗಿ ಹಿಂದೆಯೂ ನಾವು ಅನೇಕ ಲೈಂಗಿಕ ಅಪರಾಧಗಳ ಘಟನೆಗಳನ್ನು ಕಂಡಿದ್ದೇವೆ. ಆದರೆ ಈಗ ಇದು ಜಾಗತೀಕರಣಗೊಂಡು ತನ್ನ ಬಾಹುಗಳನ್ನು ಎಲ್ಲೆಡೆ ಚಾಚಿದೆ. ಹಣ ಜಾಗತಿಕವಾಗಿ ವ್ಯಾಪಿಸಿಕೊಂಡು ಅಪರಾಧವು ಜಾಗತೀಕರಣಗೊಂಡಿದೆ. ಖಾಸಗಿ ಜೆಟ್ ಹಾಗೂ ದ್ವೀಪಗಳನ್ನು ಹೊಂದುವುದು ಕೇವಲ ಪ್ರತ್ಯೇಕ ಘಟನೆಗಳಲ್ಲ. ಇವು ಅಪರಾಧ ಹಾಗೂ ಅಪರಾಧಿಗಳಿಗೆ ನೀಡುವ ಶ್ರೀರಕ್ಷೆಗಳಾಗಿವೆ.
ಭಾರತದ ನಂಟು
ಪ್ರಧಾನಮಂತ್ರಿಗೆ ಹತ್ತಿರದವರೆಂದು ಹೇಳಲಾಗಿರುವ ರಿಲಯನ್ಸ್ ಗುಂಪಿನ ಅನಿಲ್ ಅಂಬಾನಿ ಮತ್ತು ಎಪ್‌ಸ್ಟೀನ್ ನಡುವೆ ನಡೆದಿರುವ ಸಂಭಾಷಣೆಗಳ ದಾಖಲೆಗಳು ಬಿಡುಗಡೆಯಾಗಿವೆ. ಈ ಎಲ್ಲಾ ಸಂಭಾಷಣೆಗಳು 2008ರಲ್ಲಿ, ಎಪ್‌ಸ್ಟೀನ್ ಮೊದಲ ಬಾರಿ ಲೈಂಗಿಕ ಅಪರಾಧಗಳಿಗೆ ಬಂಧಿಸಲ್ಪಟ್ಟ ಅವಧಿಯಲ್ಲಿವೆ. ಎಪ್‌ಸ್ಟೀನ್ ಫೈಲ್ಸ್ ನಲ್ಲಿ ಕಂಡುಬರುವ ಮತ್ತೊಂದು ಹೆಸರೆಂದರೆ ಹರದೀಪ್ ಸಿಂಗ್ ಪುರಿ. ಇವರು ಐಎಫ್‌ಎಸ್ ಅಧಿಕಾರಿಯಾಗಿದ್ದು, 2014 ರಲ್ಲಿ ಬಿಜೆಪಿ ಸೇರಲು ನಿವೃತ್ತಿ ಪಡೆದು ನಂತರ ಸಚಿವರಾದರು. 2014 ರಲ್ಲಿ ಇ-ಮೇಲ್ ಮೂಲಕ ಎಪ್‌ಸ್ಟೀನ್ ಜೊತೆ ಸಂಭಾಷಣೆ ನಡೆಸಿದ್ದಾರೆ. ಮ್ಯಾನ್‌ಹಟನ್‌ನಲ್ಲಿರುವ ಎಪ್‌ಸ್ಟೀನ್ ನಿವಾಸಕ್ಕೆ 2015, 2016 ಹಾಗೂ 2017ರಲ್ಲಿ ಭೇಟಿ ನೀಡಿದ್ದಾರೆ, ಭಾರತದ ಮಾಧ್ಯಮಗಳಿಗೆ ಇವೆಲ್ಲವೂ ಕಟ್ಟುನಿಟ್ಟಾಗಿ ವ್ಯಾಪಾರಕ್ಕೆ ಸಂಬಂಧಿಸಿದ್ದು ಎಂದು ಹೇಳಿದ್ದಾರೆ.
ಈ ಎಪ್‌ಸ್ಟೀನ್ ಫೈಲುಗಳು ಕೇವಲ ಒಂದು ಹಗರಣದ ವಿಷಯವಲ್ಲ. ಇದು, ಭಾರತವೂ ಸೇರಿದಂತೆ ವಿವಿಧ ದೇಶಗಳ ರಾಜಕೀಯ ನಾಯಕರಲ್ಲಿ ಕಂಡುಬರುವಂತಹ, ಹಣ, ರಾಜಕೀಯ ಅಧಿಕಾರ ಮತ್ತು ಅವನತಿ ಹೊಂದಿರುವ ಬೂರ್ಜ್ವಾ ಸಂಸ್ಕೃತಿಗಳ ನಡುವಣ ಅಪವಿತ್ರ ಮೈತ್ರಿಯ ದ್ಯೋತಕವಾಗಿದೆ. ಇದು ಅಪ್ರಾಪ್ತ ಬಾಲಕಿಯರ ಕಳ್ಳ ಸಾಗಾಣಿಕೆ ಹಾಗೂ ಲೈಂಗಿಕ ವ್ಯಾಪಾರ ಜಾಲವು ಹೇಗೆ ಒಂದು ದೊಡ್ಡ ವ್ಯಾಪಾರವಾಗಿದೆ ಎಂಬುದನ್ನು ಬಯಲು ಮಾಡಿದೆ. ಆಳುವ ಬಂಡವಾಳಶಾಹಿ ವರ್ಗ ಮತ್ತು ಅದರ ಸೇವೆಗೈವ ರಾಜಕೀಯ ನಾಯಕರು ದಕ್ಷತೆ ಮತ್ತು ಪ್ರಗತಿಯ ಭರವಸೆ ನೀಡುತ್ತಾರೆ. ಆದರೆ ಸಂಪತ್ತು ಕೆಲವರಲ್ಲೇ ಕ್ರೋಡೀಕರಣಗೊಂಡು, ಅಧಿಪತ್ಯ ಗಳಿಸಿದಾಗ, ಅದು ಕನಿಷ್ಠ ಕಾನೂನೆಡೆಗಿನ ಉತ್ತರದಾಯಿತ್ವವನ್ನೂ ಕಳೆದುಕೊಳ್ಳುತ್ತದೆ, ಪಾತಕವನ್ನೂ, ನೈತಿಕ ಅಧಃಪತನವನ್ನೂ ಕಾಪಾಡುತ್ತದೆ. ಎಪ್‌ಸ್ಟೀನ್ ತೀರಿಹೋಗಿದ್ದಾನೆ, ಮ್ಯಾಕ್‌ವೆಲ್ ಬಂಧಿತನಾಗಿದ್ದಾನೆ, ಆದರೆ ಅವರು ಹೀಗಾಗಲು ಬೆಂಬಲ ನೀಡಿದ ಆರ್ಥಿಕ, ಸಾಮಾಜಿಕ ಸಂರಚನೆಗಳು ಸುಭದ್ರವಾಗಿವೆ. ಈ ಫೈಲ್‌ಗಳು ನಮಗೆ ಈ ಮರಣಾಸನ್ನ, ಜೀವ ವಿರೋಧಿ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೊಗೆಯಲು ಪ್ರೇರೇಪಿಸಬೇಕು. ಇಲ್ಲದಿದ್ದರೆ ಇದು ಕೇವಲ ಈ ದುಷ್ಟ ವ್ಯವಸ್ಥೆಯ ಭೀಕರ ದಾಖಲೆಯಾಗಿ ಮಾತ್ರ ಉಳಿಯುತ್ತದೆ.