Loading..

ಸೂಡಾನ್‌ನಲ್ಲಿ ವಿಭಿನ್ನ ಜನಾಂಗಗಳ ಮಧ್ಯೆ ಗಲಭೆ ಸೃಷ್ಟಿಸಿದ ಸಾಮ್ರಾಜ್ಯಶಾಹಿಗಳು

ಸೂಡಾನ್‌ನಲ್ಲಿ ವಿಭಿನ್ನ ಜನಾಂಗಗಳ ಮಧ್ಯೆ ಗಲಭೆ ಸೃಷ್ಟಿಸಿದ ಸಾಮ್ರಾಜ್ಯಶಾಹಿಗಳು ಹೇರಳ ತೈಲ ನಿಕ್ಷೇಪ, ನೈಸರ್ಗಿಕ ಅನಿಲ, ಚಿನ್ನ ಸೇರಿದಂತೆ ಹಲವು ಖನಿಜ ಸಂಪತ್ತನ್ನು ಹೊಂದಿರುವ ಪೂರ್ವ ಆಫ್ರಿಕಾದ ದೇಶ ಸೂಡಾನ್. ಇಲ್ಲಿನ ಎಸ್‌ಎಎಫ್ ಹೆಸರಿನ ಸೇನೆ ಮತ್ತು ಅರೆಸೇನಾಪಡೆ ಆರ್‌ಎಸ್‌ಎಫ್‌ಗಳ ಮಧ್ಯೆ ಆಂತರಿಕ ಯುದ್ಧ 2023ರ ಏಪ್ರಿಲ್‌ನಿಂದ ನಡೆಯುತ್ತಿದ್ದು, ಹಲವು ತಿಂಗಳಿಂದ ಇದು ಮಿತಿ ಮೀರಿದೆ. ಜಂಜವೀಡ್ ಬಂಡುಕೋರರು ದಕ್ಷಿಣ ಸೂಡಾನ್‌ನ ದಾರ್‌ಫುರ್ ಎಂಬಲ್ಲಿ ಹತ್ಯಾಕಾಂಡ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವ ಮೂಲಕ ಆ ಪ್ರದೇಶದಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದ್ದಾರೆ. ಸೂಡಾನ್‌ನ ಮಿಲಿಟರಿ ಸರ್ಕಾರದ ಇಬ್ಬರು ಪ್ರಭಾವಿಗಳಾದ, ಸರ್ಕಾರದ ಭಾಗವಾಗಿ 2019ರಲ್ಲಿ ದಂಗೆಯ ಮೂಲಕ ಅಧಿಕಾರಕ್ಕೆ ಬಂದ ಜನರಲ್ ಅಬ್ದೆಲ್ ಫತಾಹ್ ಅಲ್ ಬುರ್ಹಾನ್ ಹಾಗೂ ಆರ್‌ಎಸ್‌ಎಫ್ ಪಡೆಯ ಮುಖ್ಯಸ್ಥ ಮುಹಮ್ಮದ್ ಹಮ್ದಾನ್ ಡಗಾಲೊ ಎಂಬುವವರ ಮಧ್ಯೆ ನಡೆದ ಕಲಹದಲ್ಲಿ ದೇಶದಾದ್ಯಂತ 1.50 ಲಕ್ಷ ಜನರು ಹತರಾಗಿದ್ದಾರೆ. 1.4 ಕೋಟಿ ಜನರು ತಮ್ಮ ಮನೆಗಳನ್ನು ತೊರೆದು ಜೀವ ಉಳಿಸಿಕೊಳ್ಳಲು ಬೇರೆ ಕಡೆ ಹೋಗಿದ್ದಾರೆ. ಆ ಪೈಕಿ 30 ಲಕ್ಷ ಜನರು ನೆರೆಯ ದೇಶಗಳಾದ ಚಾಡ್, ಇಥಿಯೋಪಿಯಾ ಮತ್ತು ದಕ್ಷಿಣ ಸೂಡಾನ್‌ನತ್ತ ತೆರಳಿದ್ದಾರೆ. ದೇಶದ ಅರ್ಧದಷ್ಟು ಜನಸಂಖ್ಯೆ ಅಂದರೆ 2.5 ಕೋಟಿ ಜನಸಂಖ್ಯೆಯು ತೀವ್ರ ಹಸಿವಿನಿಂದ ಬಳಲುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳು ಸಂಪೂರ್ಣ ಕುಸಿದು ಬಿದ್ದಿವೆ. ಇದಕ್ಕಿಂತ ಭೀಕರವೆಂದರೆ ಸುಮಾರು 1.2 ಕೋಟಿ ಬಾಲಕಿಯರು ಮತ್ತು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ. ಒಂದು ಕಾಲಕ್ಕೆ ವೈಭವದಿಂದ ಮೆರೆದಿದ್ದ ದೇಶದ ರಾಜಧಾನಿ ಖಾರ್ಟೋಮ್ ಕ್ಷಿಪಣಿಗಳ ದಾಳಿಯಿಂದ ಸುಟ್ಟು ಬೂದಿಯಾದ ನಗರವಾಗಿ ಉಳಿದಿದೆ. ಸಾಮ್ರಾಜ್ಯಶಾಹಿಗಳ ಚಿತಾವಣೆಗೆ ಸಿಲುಕಿರುವ ಪ್ಯಾಲೆಸ್ಟೈನಿನ ಗಾಜಾ ಪಟ್ಟಿಯಂತೆ ಈ ನಗರ ತೀವ್ರ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಾಮ್ರಾಜ್ಯಶಾಹಿ ತಿಮಿಂಗಿಲಗಳ ಗುರಿ ಸೂಡಾನ್ ದೇಶವು 1899ರಿಂದ 1956ರವರೆಗೆ ಬ್ರಿಟಿಷರ ವಸಾಹತಾಗಿತ್ತು. 1956ರ ಜನವರಿ 1ರಂದು ಸ್ವಾತಂತ್ರ್ಯ ಪಡೆಯಿತು. ವಿಭಿನ್ನ ಬುಡಕಟ್ಟು, ಸಂಸ್ಕೃತಿ ಹಿನ್ನೆಲೆಯ ಜನರು ಇಲ್ಲಿದ್ದರೂ ಶತಮಾನಗಳಿಂದ ಪರಸ್ಪರ ಸೌಹಾರ್ದದಿಂದ ವಾಸವಾಗಿದ್ದರು. ಹಲವು ಜನಾಂಗಗಳ ಮಧ್ಯೆ ಮದುವೆ ಸಂಬಂಧಗಳು ಏರ್ಪಡುತ್ತಿದ್ದವು. ಆ ಮೂಲಕ ಸಮಾನ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಂಶಗಳನ್ನು ಒಳಗೊಂಡಿದ್ದವು. ಆದರೆ, ದಶಕಗಳ ಕಾಲ ಬ್ರಿಟಿಷರ ವಸಾಹತಾಗಿ ಇದ್ದುದರಿಂದ ಭಾರಿ ಪ್ರಮಾಣದ ಸಂಪನ್ಮೂಲಗಳಿದ್ದರೂ ಸೂಡಾನಿಗರು ಬಡತನದಲ್ಲಿಯೇ ಬೆಂದು ಹೋಗುತ್ತಿದ್ದರು. ಭೀಕರ ಬರಗಾಲ, ಕ್ಷಾಮ ಮತ್ತು ಇತರ ನೈಸರ್ಗಿಕ ವಿಪತ್ತುಗಳಿಂದಾಗಿ ತೀವ್ರ ಸ್ವರೂಪದ ಹಸಿವು ಮತ್ತು ಅಪೌಷ್ಟಿಕತೆಯು ಇಲ್ಲಿನ ಜನರನ್ನು ಕಿತ್ತು ತಿನ್ನುತ್ತಿತ್ತು. ಸೂಡಾನ್ ದೇಶ ಸಾರ್ವಭೌಮತ್ವವನ್ನು ಪಡೆದುಕೊಂಡ ಬಳಿಕ ರಾಷ್ಟ್ರವಾದಿ ಚಿಂತನೆಯ ಮೂಲಕ ಆರ್ಥಿಕ ಅಭಿವೃದ್ಧಿಯತ್ತ ಹೊರಳುವ ನೀತಿಯನ್ನು ಅನುಸರಿಸಲು ಮುಂದಾಗಿತ್ತು. ಸೂಡಾನಿಗರ ಈ ಪ್ರಯತ್ನಗಳು ಅಮೆರಿಕ ಮತ್ತು ಇಂಗ್ಲೆಂಡ್ ದೇಶದ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಇರುಸು ಮುರುಸು ಉಂಟು ಮಾಡಿದವು. ಹಾಗಾಗಿ, ತಮ್ಮ ಒಡೆದು ಆಳುವ ತಂತ್ರಗಾರಿಕೆಯನ್ನು ಇಲ್ಲಿಯೂ ಅನುಸರಿಸಿದವು. ಸೂಡಾನ್‌ನ ಬುಡಕಟ್ಟು ಜನರಲ್ಲಿ ಇತರ ಸಮುದಾಯಗಳ ಬಗ್ಗೆ ವೈಮನಸ್ಸನ್ನು ಬೆಳೆಸುವಂತೆ ಪ್ರಚೋದಿಸಿದವು. ಬಡತನ, ಹಸಿವಿನಿಂದ ಕಂಗೆಟ್ಟಿದ್ದ ಜನ ಆಳ್ವಿಕರ ವಿರುದ್ಧ ಬಂಡೇಳದಂತೆ ಅವರು ತಮ್ಮತಮ್ಮಲ್ಲಿ ಕಚ್ಚಾಡುವಂತೆ ಸಂಚು ರೂಪಿಸಿದವು. ಸಾಮ್ರಾಜ್ಯಶಾಹಿ ತಿಮಿಂಗಿಲಗಳು ವಿವಿಧ ಬಂಡಾಯ ಗುಂಪುಗಳಿಗೆ ರಹಸ್ಯವಾಗಿ ಹಣಕಾಸು ಹಾಗೂ ಮಿಲಿಟರಿ ನೆರವು ನೀಡಿ ಸೂಡಾನಿನಲ್ಲಿ ಕೋಮುವಾದಿ-ಜನಾಂಗೀಯವಾದಿ ಸಂಘರ್ಷಗಳಿಗೆ ತುಪ್ಪ ಸುರಿದವು. ಇದರಿಂದಾಗಿ ಮುಸ್ಲಿಂ ಮತ್ತು ಅರಬ್ ಜನಾಂಗದ ಪ್ರಾಬಲ್ಯವಿರುವ ಉತ್ತರ ಸೂಡಾನ್ ಮತ್ತು ಆಫ್ರಿಕಾದ ಕ್ರೆೈಸ್ತ ಜನಾಂಗದ ಪ್ರಾಬಲ್ಯವಿರುವ ದಕ್ಷಿಣ ಸೂಡಾನ್, ಒಂದೇ ರಾಷ್ಟ್ರವಾಗಿದ್ದರೂ ವಾಸ್ತವದಲ್ಲಿ ಬೇರೆಯಾಗಿಯೇ ಉಳಿದವು. ಹೀಗೆ, ಸಾಮ್ರಾಜ್ಯಶಾಹಿ ಕುಟಿಲತಂತ್ರಕ್ಕೆ ಬಲಿಯಾದ ಸೂಡಾನ್ ಜನಾಂಗೀಯ ಸಂಘರ್ಷಗಳಿಗೆ ಸತತವಾಗಿ ಬಲಿಯಾಗುತ್ತಾ ನೆಮ್ಮದಿಯ ಜೀವನಕ್ಕೆ ಎರವಾಗಿದೆ. ಅಮೆರಿಕ ಸಾಮ್ರಾಜ್ಯಶಾಹಿಗಳಿಗೆ ಮಗ್ಗಲು ಮುಳ್ಳಾದ ಸೂಡಾನ್ ಅಧ್ಯಕ್ಷ ಅಲ್ ಬಷೀರ್ ಇಂತಹ ಸಂದರ್ಭದಲ್ಲಿ 1989ರಲ್ಲಿ ಸೂಡಾನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಒಮರ್ ಹಸನ್ ಅಲ್ ಬಷೀರ್ ಅವರು ಅಮೆರಿಕ ಹಾಗೂ ಇಂಗ್ಲೆಂಡಿನ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ತಮ್ಮ ದೇಶವನ್ನು ಲೂಟಿ ಮಾಡಲು ಅವಕಾಶ ನೀಡಲಿಲ್ಲ. ನಿರಂತರ ಒತ್ತಡಗಳ ಮಧ್ಯೆಯೂ ಬಷೀರ್ ಅವರು ತನ್ನ ದೇಶದ ತೈಲ ಬಾವಿಗಳನ್ನು ಇವರಿಗೆ ಬಿಟ್ಟುಕೊಡಲಿಲ್ಲ. ಅಲ್ಲದೇ, ಅಮೆರಿಕವು ಇರಾಕ್ ಮೇಲೆ ಯುದ್ದ ಸಾರಿದ ಕ್ರಮವನ್ನು ಬೆಂಬಲಿಸಲಿಲ್ಲ. ಇವರ ಕಠಿಣ ನಿಲುವು ಸಾಮ್ರಾಜ್ಯಶಾಹಿಗಳಿಗೆ ನುಂಗಲಾರದ ತುತ್ತಾಯಿತು. ಹೇಗಾದರೂ ಮಾಡಿ ದೇಶವನ್ನು ಅಸ್ಥಿರಗೊಳಿಸಲು ನಿರ್ಧರಿಸಿ 1998ರಲ್ಲಿ ಸೂಡಾನ್‌ನ ಅತಿ ದೊಡ್ಡ ಔಷಧ ತಯಾರಿಕಾ ಘಟಕದ ಮೇಲೆ ಕ್ಷಿಪಣಿ ದಾಳಿ ನಡೆಸಲಾಯಿತು. ಈ ಘಟಕವು ಇಡೀ ಸೂಡಾನ್ ದೇಶದ ಶೇ 60ರಷ್ಟು ಔಷಧದ ಬೇಡಿಕೆಯನ್ನು ನೀಗಿಸುತ್ತಿತ್ತು. ಆ ಘಟಕದಲ್ಲಿ ರಹಸ್ಯವಾಗಿ ರಾಸಾಯನಿಕ ಅಸ್ತ್ರಗಳನ್ನು ಉತ್ಪಾದಿಸಲಾಗುತ್ತಿದೆೆ ಎಂಬ ಸುಳ್ಳು ಕಾರಣ ನೀಡಿ ಈ ಕ್ಷಿಪಣಿ ದಾಳಿ ನಡೆಸಿದರು. ಹೇಗೆ ಪೆಂಟಗನ್ ಆಡಳಿತಗಾರರು ಇರಾಕ್‌ನಲ್ಲಿ ಸಮೂಹನಾಶಕ ಶಸ್ತ್ರಗಳಿವೆ ಎಂಬ ಕಾರಣ ನೀಡಿ ಅಲ್ಲಿನ ಅಧ್ಯಕ್ಷ ಸದ್ದಾಂ ಹುಸೇನ್ ಅವರನ್ನು ಬಂಧಿಸಿ ಗಲ್ಲಿಗೇರಿಸಿದರೋ, ಅದೇ ಮಾದರಿಯಲ್ಲಿ ಸೂಡಾನ್ ಸರ್ಕಾರ 2008ರಲ್ಲಿ ಪಶ್ಚಿಮ ಸೂಡಾನ್‌ನ ದರ್ಫುರ್ ಎಂಬಲ್ಲಿ ಭಾರಿ ಪ್ರಮಾಣದ ಹತ್ಯಾಕಾಂಡ ನಡೆಸಿದೆ ಎಂಬ ಆರೋಪ ಹೊರಿಸಿದರು. ಯುದ್ಧಾಪರಾಧ ಮಾಡಿದ ಕಾರಣಕ್ಕಾಗಿ ಸೂಡಾನ್ ಸರ್ಕಾರದ ವಿರುದ್ಧ ವಿಚಾರಣೆ ನಡೆಸಲು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು (ICC) ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದರು. ಹೇಗಾದರೂ ಮಾಡಿ ಸೂಡಾನ್‌ನ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯಲು ಕಾಯುತ್ತಿರುವ ಅಮೆರಿಕನ್ ಸಾಮ್ರಾಜ್ಯಶಾಹಿ ಕಳೆದ 30 ವರ್ಷಗಳಿಂದ ಆ ದೇಶದ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಹೇರಿ ದೇಶದ ಕತ್ತು ಹಿಸುಕಿದೆ. ಅಮೆರಿಕದ ತಾಳಕ್ಕೆ ತಕ್ಕಂತೆ ಕುಣಿಯುವ ವಿಶ್ವಸಂಸ್ಥೆಯೂ ದಾರ್ಫುರ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟುವ ನೆಪದಲ್ಲಿ ಶಸ್ತ್ರಗಳ ಪೂರೈಕೆಗೆ ತಡೆ, ಆಸ್ತಿಗಳ ಜಪ್ತಿ ಹಾಗೂ ಸೂಡಾನ್‌ಗೆ ತೆರಳುವವರ ಮೇಲೆ ಪ್ರಯಾಣ ನಿರ್ಬಂಧಗಳನ್ನು ಹೇರಿದೆ. ಮತ್ತೊಂದೆಡೆ, ಮತ್ತೊಂದು ಸಾಮ್ರಾಜ್ಯಶಾಹಿ ಶಕ್ತಿಯಾಗಿ (2004ರ ಪ್ರತಿಕ್ರಾಂತಿಯ ಬಳಿಕ) ಬದಲಾಗಿರುವ ಚೀನಾ ಮತ್ತು ರಷ್ಯಾಗಳು ತಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು, ಸೂಡಾನ್ ಅನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಸಲುವಾಗಿ ಅಮೆರಿಕ ಹೇರಿದ ಆರ್ಥಿಕ ದಿಗ್ಬಂಧನಗಳನ್ನು ಹಾಗೂ ಒಮರ್ ಅಲ್ ಬಷೀರ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಹೊರಡಿಸಿದ ಬಂಧನ ವಾರೆಂಟ್ ವಿರೋಧಿಸಿದವು. ಬಹಳ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಏನೆಂದರೆ ರಷ್ಯಾ, ಚೀನಾ ಮತ್ತು ಇರಾನ್ ಸೂಡಾನ್ ವ್ಯಾಪ್ತಿಯ ಬಂದರಿನಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿವೆ. ಚೀನಾ ಸೂಡಾನ್‌ನ ಮೂಲಸೌಕರ್ಯಗಳಿಗಾಗಿ ಮೇಲೆ ಭಾರಿ ಪ್ರಮಾಣದ ಹೂಡಿಕೆಯನ್ನು ಮಾಡಿದ್ದು, ಪೋರ್ಟ್ ಸೂಡಾನ್‌ನಲ್ಲಿ ನೆಲೆಯೂರಲು ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದೆ. ರಷ್ಯಾ ಸೂಡಾನ್ ಜಲಪ್ರದೇಶದಲ್ಲಿ ತನ್ನ ಸೇನಾ ನೆಲೆಯನ್ನು ಸ್ಥಾಪಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದಕ್ಕೆ ಪೂರಕವಾಗಿ ಪೋರ್ಟ್ ಸೂಡಾನ್‌ನಲ್ಲಿ ರಷ್ಯಾದ ಸೇನಾ ನೆಲೆಗೆ ತಮ್ಮಿಂದ ಯಾವುದೇ ಅಡ್ಡಿ ಇಲ್ಲ ಎಂದು ಸೂಡಾನ್ ವಿದೇಶಾಂಗ ಸಚಿವ ಅಲಿ ಯೂಸುಫ್ ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಯು ಪಶ್ಚಿಮದ ಸಾಮ್ರಾಜ್ಯಶಾಹಿಗಳನ್ನು ಚಿಂತೆಗೆ ದೂಡಿದೆ. ಈ ಒಪ್ಪಂದದ ಪ್ರಕಾರ ರಷ್ಯಾ 300ಕ್ಕೂ ಅಧಿಕ ಜನರಿರುವ ಸೇನಾಪಡೆಯನ್ನು ಅಲ್ಲಿ ನೆಲೆಗೊಳಿಸಿ ಯುದ್ಧ ನೌಕೆಯನ್ನು ನಿಲ್ಲಿಸಲಿದೆ. ಜೊತೆಗೆ ಜಲಾಂತರ್ಗಾರ್ಮಿಗಳ ಕಾರ್ಯಾಚರಣೆಯನ್ನು ಶುರು ಮಾಡಲಿದೆ. ಆ ಮೂಲಕ ತನ್ನ ಸೇನಾ ಶಕ್ತಿಯನ್ನು ಪ್ರದರ್ಶಿಸುವುದು ಹಾಗೂ ಪಶ್ಚಿಮದ ದೇಶಗಳ ಹಿತಾಸಕ್ತಿಗಳಿಗೆ ಎದಿರೇಟು ನೀಡುವುದು ಇದರ ಉದ್ದೇಶವಾಗಿದೆ. ದೇಶ ವಿಭಜನೆ ಅಮೆರಿಕಾ ಸಾಮ್ರಾಜ್ಯಶಾಹಿಯ ಕುಮ್ಮಕ್ಕಿನಿಂದ 2011 ರಲ್ಲಿ ಸೂಡಾನ್, ಉತ್ತರ ಮತ್ತು ದಕ್ಷಿಣ ಸೂಡಾನ್ ಆಗಿ ವಿಭಜಿತವಾಯಿತು. ಬಷೀರ್ ಉತ್ತರ ಸೂಡಾನ್‌ನ ಆಳ್ವಿಕರಾದರು. 2019ರಲ್ಲಿ ಅವರನ್ನು ಮಿಲಿಟರಿ ದಂಗೆಯ ಮೂಲಕ ಪದಚ್ಯುತಗೊಳಿಸಲಾಯಿತು. ನಂತರ ಅವರ ಮೇಲೆ ಹಲವಾರು ಆರೋಪಗಳನ್ನು ಮಾಡಿ ಜೈಲಿಗೆ ಹಾಕಲಾಗಿದೆ. ನಂತರ, ಅಮೆರಿಕಾ ಬೆಂಬಲಿತ ಅಬ್ದಲ್ಲಾ ಹಾಮ್ಟೊಕ್ ಉತ್ತರ ಸೂಡಾನಿನ ಪ್ರಧಾನಿಯಾದರೆ, ದಕ್ಷಿಣ ಸೂಡಾನ್ ಸಾಲ್ವಾಕೀರ್ ಮಯಾರ್ದಿತ್ ನೇತೃತ್ವದಲ್ಲಿ ಅಧ್ಯಕ್ಷೀಯ ಗಣರಾಜ್ಯವಾಗಿದೆ. ಸೂಡಾನ್‌ನ ಸದ್ಯದ ಚಿತ್ರಣ ಆದರೆ ಇದರಿಂದ ಸೂಡಾನಿನ ಸಮಸ್ಯೆ ಬಗೆಹರಿದಿಲ್ಲ. ಬದಲಿಗೆ 2019ರ ಮಿಲಿಟರಿ ದಂಗೆಯ ನೇತೃತ್ವ ವಹಿಸಿದ್ದ ಇಬ್ಬರು ನಾಯಕರ ನಡುವೆಯೇ ಕಲಹ ನಡೆಯುತ್ತಿದೆ. ಪ್ರಸ್ತುತ ಎಸ್‌ಎಎಫ್ ಹಾಗೂ ಆರ್‌ಎಸ್‌ಎಫ್ ಬಣಗಳ ನಡುವೆ 2023ರ ಏಪ್ರಿಲ್ 15ರಂದು ಮತ್ತೆ ಅಂತರ್ಯುದ್ಧ ಶುರುವಾಗಿದ್ದು, ಜಾಗತಿಕವಾಗಿ ಸೂಡಾನ್‌ನ ಈ ಅಂತಃಕಲಹ ಅತಿ ಭೀಕರ ಎಂದು ಭಾವಿಸಲಾಗಿದೆ. ಪಶ್ಚಿಮ ಸೂಡಾನ್‌ನ ದಾರ್ಫುರ್‌ನಲ್ಲಿ ವ್ಯಾಪಕವಾದ ಹತ್ಯಾಕಾಂಡ ಸಂಭವಿಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಯುದ್ಧಾಪರಾಧಗಳು ಭಾರಿ ಪ್ರಮಾಣದಲ್ಲಿ ಸಂಭವಿಸುತ್ತಿವೆ. ಎರಡೂ ಬಣಗಳು ಬಾಲಯೋಧರನ್ನು ಬಳಸಿಕೊಳ್ಳುತ್ತಿವೆ. ನಾಗರಿಕರ ಮೇಲೆ ಭಾರಿ ದೌರ್ಜನ್ಯ ಎಸಗುತ್ತಿವೆ. ಪತ್ರಕರ್ತರನ್ನು ಬಂಧಿಸಲಾಗುತ್ತಿದೆ. ನಾಗರಿಕರು ಮೇಲಿಂದ ಮೇಲೆ ದಾಳಿಗೊಳಗಾಗುತ್ತಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆಯೂ ಹೆಚ್ಚುತ್ತಿದೆ. ಔಷಧಿಗಳನ್ನು ತಲುಪಿಸುವ ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಾಳಿಯಿಂದಾಗಿ ಗಾಯಾಳುಗಳಿಗೆ ಸಕಾಲಕ್ಕೆ ವೈದ್ಯಕೀಯ ನೆರವು ಸಿಗದೇ ಇದ್ದುದರಿಂದ ಸೂಡಾನ್‌ನ ಆರೋಗ್ಯ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ದೇಶದ ಅತಿ ದೊಡ್ಡ ನಗರವಾದ ಅಲ್ ಫಾಷರ್‌ನಲ್ಲಿ 4 ಲಕ್ಷ ಜನರು ವಿವಿಧೆಡೆಯಿಂದ ಮನೆ ಮಠ ಕಳೆದುಕೊಂಡು ಇಲ್ಲಿ ನೆಲೆ ಕಂಡುಕೊಂಡಿದ್ದು, ಈ ನಗರವನ್ನು ಸೇರುವವರ ಸಂಖ್ಯೆ ಹೆಚ್ಚುತ್ತಿದೆ. ಸೂಡಾನ್‌ನ ಶೇ 70ರಷ್ಟು ಆಸ್ಪತ್ರೆಗಳನ್ನು ಧ್ವಂಸಗೊಳಿಸಲಾಗಿದೆ. ಇದರಿಂದಾಗಿ ಸಕಾಲಕ್ಕೆ ಆರೋಗ್ಯ ಸೇವೆ ಸಿಗದೇ ಲಕ್ಷಾಂತರ ಜನರು ಪರದಾಡುತ್ತಿದ್ದಾರೆ. ವೈದ್ಯಕೀಯ ನೆರವಿನ ಕೊರತೆಯ ಮಧ್ಯೆಯೇ ಆ ದೇಶದಲ್ಲಿ ಕಾಲರಾ ರೋಗ ಉಲ್ಬಣಗೊಂಡಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. 1.20 ಲಕ್ಷ ಜನರಲ್ಲಿ ಕಾಲರಾ ಕಾಣಿಸಿಕೊಂಡಿದ್ದು, ಅದರಲ್ಲಿ 3 ಸಾವಿರ ಜನರು ಕಾಯಿಲೆಯಿಂದ ಮೃತಪಟ್ಟಿದ್ದಾರೆ. 12 ದಶಲಕ್ಷ ಜನರು ತಮ್ಮ ನೆಲೆಗಳನ್ನು ಕಳೆದುಕೊಂಡು ಅನಾಥರಾಗಿದ್ದು, ಸೂಡಾನ್‌ನ ಅರ್ಧದಷ್ಟು ಜನರಿಗೆ ಮಾನವೀಯ ನೆಲೆಗಟ್ಟಿನ ನೆರವು ಅಗತ್ಯವಾಗಿ ಬೇಕಿದೆ. ಸಾಮ್ರಾಜ್ಯಶಾಹಿ ಶಕ್ತಿಗಳೇ ಕಾರಣ ತಮ್ಮ ಹಿತಾಸಕ್ತಿಯ ಬೇಳೆ ಬೇಯಿಸಿಕೊಳ್ಳಲು ಸಾಮ್ರಾಜ್ಯಶಾಹಿ ಶಕ್ತಿಗಳು ಉದ್ದೇಶಪೂರ್ವಕವಾಗಿ ಯುದ್ಧಗಳನ್ನು ಹುಟ್ಟುಹಾಕುತ್ತವೆ. ಇಡೀ ದೇಶದಲ್ಲಿ ಅಸ್ಥಿರತೆಯನ್ನು ಉಂಟು ಮಾಡಿ ತೀವ್ರ ಮಾನವೀಯ ಬಿಕ್ಕಟ್ಟುಗಳನ್ನು ಸೃಷ್ಟಿ ಮಾಡುತ್ತವೆ. ಸೂಡಾನ್‌ನ ನೈಸರ್ಗಿಕ ಸಂಪತ್ತಿನ ಲೂಟಿಯನ್ನು ತಡೆಯಲು ಮುಂದಾದ ಅಲ್ಲಿನ ಅಧ್ಯಕ್ಷರಾಗಿದ್ದ ಅಲ್ ಬಷೀರ್ ಮೇಲೆ ಕ್ರಮಕ್ಕೆ ಮುಂದಾದ ಅಮೆರಿಕ, ಇಂಗ್ಲೆಂಡ್ ನೇತೃತ್ವದ ಸಾಮ್ರಾಜ್ಯಶಾಹಿಗಳನ್ನು ಸೂಡಾನ್‌ನ ದೇಶಪ್ರೇಮಿ, ಶಾಂತಿಪ್ರೇಮಿ ಜನತೆ ಸೋಲಿಸಬೇಕು. ತಮ್ಮ ದೇಶವನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ಸೂಡಾನ್ ನಾಗರಿಕರು ನಿರ್ಧರಿಸಬೇಕೇ ಹೊರತು ಹೊರಗಿನವರಲ್ಲ. ಇಂತಹ ಬಂಡವಾಳಶಾಹಿ, ಸಾಮ್ರಾಜ್ಯಶಾಹಿ ಶಕ್ತಿಗಳನ್ನು ಸೋಲಿಸಲು ಸರಿಯಾದ ಕ್ರಾಂತಿಕಾರಿ ನಾಯಕತ್ವದಡಿಯಲ್ಲಿ ಎಲ್ಲರೂ ಒಂದಾಗಿ ಹೋರಾಟಗಳನ್ನು ನಡೆಸುವುದೊಂದೇ ಉಳಿದಿರುವ ಮಾರ್ಗವಾಗಿದೆ.