ಶಾಲೆ ತೊರೆಯುತ್ತಿರುವ ಮಕ್ಕಳ ಹೃದಯ ವಿದ್ರಾವಕ ಚಿತ್ರಣ
ಶಾಲೆ ತೊರೆಯುತ್ತಿರುವ ಮಕ್ಕಳ ಹೃದಯ ವಿದ್ರಾವಕ ಚಿತ್ರಣ 2015ಕ್ಕೆ ಅರೆಕ್ಷಣ ಹಿಂದಿರುಗೋಣ. ಆಗ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದು ಪ್ರಧಾನಿ ಮೋದಿ ಆಡಳಿತದ ಚುಕ್ಕಾಣಿ ಹಿಡಿದು ಒಂದು ವರ್ಷವಾಗಿತ್ತು. ಹೆಣ್ಣು ಶಿಶುಗಳನ್ನು ಪೋಷಿಸುವ ಪ್ರಧಾನಿ ಮೋದಿಯವರ ಕನಸಿನ ನಿರೂಪಣೆ – ‘ಬೇಟಿ ಪಡಾವೋ, ಬೇಟಿ ಬಚಾವೋ’ (ಹೆಣ್ಣುಮಕ್ಕಳನ್ನು ಓದಿಸಿ, ಹೆಣ್ಣುಮಕ್ಕಳನ್ನು ಉಳಿಸಿ) – ಇದು ಹೆಣ್ಣುಮಕ್ಕಳ ಬಗ್ಗೆ ತಮಗಿರುವ ಕಾಳಜಿಯನ್ನು ವಿವರಿಸಲು ಪ್ರಧಾನಿಯವರು ಆಯ್ಕೆ ಮಾಡಿದ ಮಧುರವಾದ ನಾಣ್ನುಡಿ. ಅಂದಿನಿಂದ ಇಂದಿನವರೆಗೆ ಈ ಮಾತನ್ನು ಅಸಂಖ್ಯಾತ ಬಾರಿ ಪುನರುಚ್ಛರಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಪ್ರಧಾನಿ ಮೋದಿ ಹೆಣ್ಣುಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವಂತೆಯೂ ಎಲ್ಲರಿಗೂ ಕರೆ ನೀಡಿದ್ದರು. ತಮ್ಮ ‘ಮನ್ ಕಿ ಬಾತ್’ನಲ್ಲಿ, ಪ್ರಧಾನಿಯವರು ಹೆಣ್ಣು ಮಕ್ಕಳ ಜನನ ಪ್ರಮಾಣ ಕುಸಿಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುವುದು, ಮಹಿಳಾ ಸಬಲೀಕರಣದ ಭರವಸೆ ನೀಡುವುದು ಮತ್ತು ಕಿಶೋರಿಯರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಒತ್ತು ನೀಡುವುದನ್ನು ನಾವು ಆಗಾಗ್ಗೆ ಕಾಣುತ್ತೇವೆ. ಆದರೆ ದುರದೃಷ್ಟವಶಾತ್, ಕಳೆದ 11 ವರ್ಷಗಳ ಪ್ರಗತಿಯ ವರದಿಯನ್ನು ಗಮನಿಸಿದರೆ, ಈ ಘೋಷಣೆಯು ಕೇವಲ ಅರ್ಥಹೀನ ಬಡಬಡಿಕೆಯಂತೆೆ ಕೇಳಿಸುತ್ತದೆ. ಪ್ರಧಾನಿ ಮೋದಿಯವರ ‘ಬೇಟಿ ಬಚಾವೋ’ ಘೋಷಣೆಗೆ ತದ್ವಿರುದ್ಧವಾಗಿ, ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಎಂಬುದಕ್ಕೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕಿರುಕುಳ, ವರದಕ್ಷಿಣೆ ಸಾವು, ಮರ್ಯಾದೆ ಹತ್ಯೆ, ಆಸಿಡ್ ದಾಳಿ, ಸ್ತ್ರೀ ಭ್ರೂಣಹತ್ಯೆ ಮತ್ತು ಶಿಶು ಹತ್ಯೆಗಳ ಭೀಕರ ಅಂಕಿಅಂಶಗಳೇ ಸ್ಪಷ್ಟ ಸಾಕ್ಷಿ ಹೇಳುತ್ತವೆ. ಸದ್ಯಕ್ಕೆ ಈ ಘೋರ ವಿಚಾರಗಳನ್ನು ಪಕ್ಕಕ್ಕಿಟ್ಟು, ನಾವು ‘ಬೇಟಿ ಪಡಾವೋ’ (ಹೆಣ್ಣುಮಕ್ಕಳನ್ನು ಓದಿಸಿ) ಅಭಿಯಾನದ ವಾಸ್ತವ ಚಿತ್ರಣದ ಕಡೆಗೆ ಗಮನ ಹರಿಸೋಣ. ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಲಭ್ಯವಿರುವ ಕೆಲವು ಅಂಕಿಅಂಶಗಳ ಮೇಲೆ ಕಣ್ಣು ಹಾಯಿಸೋಣ. ಕಳೆದ ಡಿಸೆಂಬರ್ನಲ್ಲಿ ಸಂಸತ್ತಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವರು ನೀಡಿದ ಮಾಹಿತಿಯ ಪ್ರಕಾರ, ಕಳೆದ 5 ವರ್ಷಗಳಲ್ಲಿ 65.7 ಲಕ್ಷ ಮಕ್ಕಳು ಶಾಲೆ ಬಿಟ್ಟಿದ್ದಾರೆ ಮತ್ತು ಅವರಲ್ಲಿ ಸುಮಾರು ಅರ್ಧದಷ್ಟು ಅಂದರೆ 29.8 ಲಕ್ಷ ಹೆಣ್ಣುಮಕ್ಕಳಿದ್ದಾರೆ. ಇದು ಅಧಿಕೃತ ಅಂಕಿಅಂಶ. ಆದರೆ ನಿಜವಾದ ಸಂಖ್ಯೆ ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿರಬಹುದು ಎಂದು ನಾವು ತಿಳಿಯಬೇಕು. ಎರಡನೆಯದಾಗಿ, ನಮ್ಮ ಗೌರವಾನ್ವಿತ ಪ್ರಧಾನಿಯವರು ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಪದೇ ಪದೇ ‘ಡಬಲ್ ಇಂಜಿನ್ ಸರ್ಕಾರ’ದ (ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರ್ಕಾರ) ಬಗ್ಗೆ ಪ್ರಚಾರ ಮಾಡುತ್ತಾರೆ. ಇಂತಹ ಡಬಲ್ ಇಂಜಿನ್ಗಳು ದೇಶದ ಪ್ರಗತಿ ಮತ್ತು ಸಮೃದ್ಧಿಯ ವೇಗವನ್ನು ಹೆಚ್ಚಿಸುತ್ತವೆ ಎಂಬುದು ಅವರ ವಾದ. ಆದರೆ ‘ಬೇಟಿ ಪಡಾವೋ’ ವಿಷಯಕ್ಕೆ ಬಂದರೆ, ಈ ಡಬಲ್ ಇಂಜಿನ್ಗಳ ದಾಖಲೆ ಅತ್ಯಂತ ನಿರಾಶಾದಾಯಕ. 2025-26 ರಲ್ಲೇ ಗುಜರಾತ್ನಲ್ಲಿ 2.4 ಲಕ್ಷ ಮಕ್ಕಳು ಶಾಲೆ ಬಿಟ್ಟಿದ್ದಾರೆ. ಅದರಲ್ಲಿ 1.1 ಲಕ್ಷ ಹೆಣ್ಣುಮಕ್ಕಳು. ಆದರೆ, 2024ರ ದಾಖಲೆಯ ಪ್ರಕಾರ ಶಾಲೆ ಬಿಟ್ಟವರ ಸಂಖ್ಯೆ ಕೇವಲ 54,541 ಆಗಿತ್ತು. ಅಂದರೆ, ಗುಜರಾತ್ನಂತಹ ರಾಜ್ಯದಲ್ಲಿ ಕೇವಲ ಒಂದು ವರ್ಷದಲ್ಲಿ ಈ ಸಂಖ್ಯೆಯು 340% ರಷ್ಟು ಏರಿಕೆಯಾಗಿದೆ. ಇನ್ನು ಅಸ್ಸಾಂನಲ್ಲಿ 1,50,906 ಮಕ್ಕಳು ಶಾಲೆ ಬಿಟ್ಟಿದ್ದು, ಅದರಲ್ಲಿ 57,409 ಹೆಣ್ಣುಮಕ್ಕಳಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು 99,218 ಮಂದಿಯಲ್ಲಿ56,462 ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಹೀಗೆ, ಶಾಲೆ ಬಿಟ್ಟವರ ಸಂಖ್ಯೆಯಲ್ಲಿ (ಅದರಲ್ಲೂ ಗಣನೀಯ ಸಂಖ್ಯೆಯ ಹೆಣ್ಣುಮಕ್ಕಳು) ಡಬಲ್ ಇಂಜಿನ್ ಚಾಲಿತ ರಾಜ್ಯಗಳೇ ಮೊದಲ ಮೂರು ಸ್ಥಾನಗಳಲ್ಲಿವೆ. ಸಾಧನೆ ಹೀಗಿರುವಾಗ, ಈ ರಾಜ್ಯಗಳನ್ನು ಎಳೆಯುತ್ತಿರುವುದು ಎಂತಹ ಇಂಜಿನ್ಗಳು? ಆದರೆ ಇಷ್ಟೊಂದು ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಅರ್ಧದಲ್ಲೇ ಶಾಲೆ ಬಿಡುತ್ತಿರುವುದೇಕೆ? ಸರ್ಕಾರದ ವರದಿಗಳು ಮತ್ತು ಸಂಬಂಧಪಟ್ಟ ಅಧ್ಯಯನಗಳ ಪ್ರಕಾರ, ಶಾಲೆಯನ್ನು ತೊರೆಯಲು ಪ್ರಮುಖ ಕಾರಣಗಳೆಂದರೆ: ಬಡತನ (ಇದು ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿ ಅಥವಾ ಬಾಲ್ಯ ವಿವಾಹಕ್ಕೆ ತಳ್ಳುತ್ತದೆ), ಆಸಕ್ತಿ ಅಥವಾ ಪ್ರೇರಣೆಯ ಕೊರತೆ, ಶಾಲಾ ಶಿಕ್ಷಣದ ಕಳಪೆ ಗುಣಮಟ್ಟ ಮತ್ತು ಮೂಲಸೌಕರ್ಯಗಳ ಕೊರತೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳು (ಉದಾಹರಣೆಗೆ ಲಿಂಗ ತಾರತಮ್ಯ, ಬಾಲ್ಯ ವಿವಾಹ), ವಲಸೆ, ಹಾಗೂ ಪೋಷಕರ ಅಸಮರ್ಪಕ ಪಾಲ್ಗೊಳ್ಳುವಿಕೆ ಅಥವಾ ಬೆಂಬಲ. ಇದರೊಂದಿಗೆ ಆಪ್ತ ಸಮಾಲೋಚಕರ (counselors) ಕೊರತೆ ಮತ್ತು ವಿಕಲಚೇತನರಿಗೆ ಸೂಕ್ತ ಬೆಂಬಲ ಇಲ್ಲದಿರುವುದು ಕೂಡ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ನಮಗೆಲ್ಲರಿಗೂ ಈಗಾಗಲೇ ತಿಳಿದಿರುವ ವಿಷಯಗಳನ್ನೇ ಸರ್ಕಾರವು ತಿಳಿಸಿರುವುದು ಸಮಾಧಾನಕರ ಅಂಶ. ಆದರೆ, ಸರ್ಕಾರವು ಕೇವಲ ಕಾರಣಗಳನ್ನು ನೀಡದೆ, ಈ ಪರಿಸ್ಥಿತಿಯನ್ನು ಸುಧಾರಿಸಲು ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ, ಸರ್ಕಾರವು ಇದನ್ನು ಮರೆತಿಲ್ಲ; ಬದಲಿಗೆ ಹಲವಾರು ಪರಿಹಾರ ಕ್ರಮಗಳನ್ನು ರೂಪಿಸಿದೆ! ಉದಾಹರಣೆಗೆ, ವಿದ್ಯಾರ್ಥಿಗಳ ಸಂಖ್ಯೆ ಶೇ.50 ಕ್ಕಿಂತ ಕಡಿಮೆ ಇರುವ ಶಾಲೆಗಳನ್ನು ಮತ್ತೊಂದು ಶಾಲೆಯೊಂದಿಗೆ ವಿಲೀನಗೊಳಿಸಲಾಗುತ್ತಿದೆ. ಆದರೆ ಇಂತಹ ‘ವಿಲೀನ ಮತ್ತು ಮುಚ್ಚುವಿಕೆ’ಯ ಪರಿಣಾಮವೇನು? ಇದರಿಂದ ಶಾಲಾ ಸಾಂದ್ರತೆಯು (ಪ್ರತಿ ಚದರ ಮೈಲಿ ಅಥವಾ ಕಿಲೋಮೀಟರ್ಗೆ ಇರುವ ಶಾಲೆಗಳ ಸಂಖ್ಯೆ) ಕಡಿಮೆಯಾಗುತ್ತಿದೆ ಮತ್ತು ಎರಡು ಶಾಲೆಗಳ ನಡುವಿನ ಅಂತರವು ಹೆಚ್ಚಾಗುತ್ತಿದೆ. ಈ ಹೆಚ್ಚುತ್ತಿರುವ ಅಂತರದ ವಿದ್ಯಮಾನದ ಬಗ್ಗೆ ಚರ್ಚಿಸುವ ಮೊದಲು, ಅತ್ಯಂತ ವಿನಾಶಕಾರಿ ಎನ್ನಲಾದ ರಾಷ್ಟ್ರೀಯ ಶಿಕ್ಷಣ ನೀತಿ 2020 (NEP-20) ರಲ್ಲಿ ಸೂಚಿಸಲಾದ, ಅಬ್ಬರದಿಂದ ಪ್ರಚಾರ ಮಾಡಲಾದ ಈ ‘ವಿಲೀನ ಮತ್ತು ಮುಚ್ಚುವಿಕೆ’ ನೀತಿಯ ಫಲಿತಾಂಶದ ಮೇಲೆ ಒಂದು ಕ್ಷಣ ಕಣ್ಣು ಹಾಯಿಸೋಣ. ಈ ‘ವಿಲೀನ ಮತ್ತು ಮುಚ್ಚುವಿಕೆ’ಯ (merger and closure) ವಾಸ್ತವ ಚಿತ್ರಣ ಹೇಗಿದೆ? ಕೆಲವು ದಿನಗಳ ಹಿಂದಷ್ಟೇ, ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ರಾಜ್ಯದ 27000 ಶಾಲೆಗಳನ್ನು ಮುಚ್ಚಿ ಇತರ ಶಾಲೆಗಳೊಂದಿಗೆ ವಿಲೀನಗೊಳಿಸಲಾಗುವುದು ಎಂದು ಘೋಷಿಸಿದರು. ಈ ಸಂಖ್ಯೆ ರಾಜಸ್ಥಾನದಲ್ಲಿ 19500,, ಮಹಾರಾಷ್ಟ್ರದಲ್ಲಿ 15000, ಪಶ್ಚಿಮ ಬಂಗಾಳದಲ್ಲಿ 8207, ಗುಜರಾತ್ನಲ್ಲಿ 7000 ಛತ್ತೀಸ್ಗಢದಲ್ಲಿ 6,040, ಅಸ್ಸಾಂನಲ್ಲಿ 5,953 ಮತ್ತು ಕರ್ನಾಟಕದಲ್ಲಿ 3400 ಆಗಿದೆ. ರಾಜಕೀಯ ಸಿದ್ಧಾಂತಗಳು ಯಾವುದೇ ಇರಲಿ, ಎಲ್ಲಾ ರಾಜ್ಯ ಸರ್ಕಾರಗಳು ಶಾಲೆಗಳನ್ನು ಮುಚ್ಚುವ ವಿಷಯದಲ್ಲಿ ಪರಸ್ಪರ ಪೈಪೋಟಿ ನಡೆಸಿವೆ. ಇದೆಲ್ಲದರ ನಡುವೆಯೂ, ರಾಷ್ಟ್ರೀಯ ಶಿಕ್ಷಣ ನೀತಿ-2020 (NEP-20) ರಲ್ಲಿ ಹೇಳಿಕೊಂಡಂತೆ ದೇಶವು ‘ವಿಶ್ವಗುರು’ ಆಗಲಿದೆಯಂತೆ! ಕರ್ನಾಟಕ ಸರ್ಕಾರವು ಅಸ್ತಿತ್ವದಲ್ಲಿರುವ ಹಲವಾರು ಹಳ್ಳಿಯ ಶಾಲೆಗಳನ್ನು ವಿಲೀನಗೊಳಿಸಿ, ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಸುಮಾರು 6000 ಕೆಪಿಎಸ್ ಮ್ಯಾಗ್ನೆಟ್ (KPS Magnet) ಶಾಲೆಗಳನ್ನು ಸ್ಥಾಪಿಸಲು ಯೋಜಿಸಿದೆ. ಮೊದಲ ಹಂತದಲ್ಲಿ ಈಗಾಗಲೇ ೯೦೦ ಮ್ಯಾಗ್ನೆಟ್ ಶಾಲೆಗಳ ಸ್ಥಾಪನೆಗೆ ಆದೇಶ ಹೊರಡಿಸಲಾಗಿದೆ. ಒಂದು ಕಿಲೋಮೀಟರ್ನಿಂದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ಈ ಕೇಂದ್ರಗಳಲ್ಲಿ ವಿಲೀನಗೊಳಿಸಲಾಗುವುದು ಎಂದು ಸುತ್ತೋಲೆ ತಿಳಿಸಿದೆ. ಇದು ಶಿಕ್ಷಣ ಹಕ್ಕು ಕಾಯ್ದೆಯ (RTE) ಸ್ಪಷ್ಟ ಉಲ್ಲಂಘನೆಯಾಗಿದೆ. ಏಕೆಂದರೆ, ಸಾರ್ವತ್ರಿಕ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬ ಮಗುವಿನ ವಾಸಸ್ಥಳದಿಂದ ನಡಿಗೆಯ ದೂರದಲ್ಲಿ (ಸಾಮಾನ್ಯವಾಗಿ ಪ್ರಾಥಮಿಕ ಶಾಲೆಗೆ 1 ಕಿ.ಮೀ ಮತ್ತು ಹಿರಿಯ ಪ್ರಾಥಮಿಕಕ್ಕೆ 3 ಕಿ.ಮೀ) ಶಾಲೆಯನ್ನು ಸ್ಥಾಪಿಸಬೇಕು ಎಂದು ಈ ಕಾಯ್ದೆ ಹೇಳುತ್ತದೆ. ಕರ್ನಾಟಕದಲ್ಲಿ ಈ ಮ್ಯಾಗ್ನೆಟ್ ಯೋಜನೆಯ ವಿರುದ್ಧ ಪ್ರತಿಭಟನೆಯ ಅಲೆ ಎದ್ದಿದೆ. ಪೋಷಕರು, ಗ್ರಾಮಸ್ಥರು, ಶಿಕ್ಷಣ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಕೂಡ ಸಾರ್ವಜನಿಕ ಶಿಕ್ಷಣದ ಭವಿಷ್ಯದ ಬಗ್ಗೆ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯು ಸಣ್ಣ ಮತ್ತು ಮೂಲಸೌಕರ್ಯ ಕೊರತೆಯಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ದೊಡ್ಡದಾದ, ಕೇಂದ್ರೀಕೃತ ‘ಮ್ಯಾಗ್ನೆಟ್’ ಶಾಲೆಗಳಿಗೆ ಸೇರಿಸುವ ಗುರಿಯನ್ನು ಹೊಂದಿದೆ. ಈ ಶಾಲೆಗಳು ಸುಧಾರಿತ ಸೌಲಭ್ಯಗಳನ್ನು ನೀಡುತ್ತವೆ ಎಂದು ಹೇಳಲಾಗುತ್ತದೆಯಾದರೂ, ಇವು ವಿದ್ಯಾರ್ಥಿಗಳ ಮನೆಯಿಂದ ಹೆಚ್ಚಿನ ದೂರದಲ್ಲಿರುತ್ತವೆ. ವಿದ್ಯಾರ್ಥಿಗಳು ಮ್ಯಾಗ್ನೆಟ್ ಶಾಲೆಗೆ ಹೋಗಲು 10 ರಿಂದ 25 ಕಿ.ಮೀ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಇದು ವಿಶೇಷವಾಗಿ ಪಶ್ಚಿಮ ಕರ್ನಾಟಕದ ಮಲೆನಾಡು ಪ್ರದೇಶದ ಮಕ್ಕಳಿಗೆ ದೊಡ್ಡ ಸಂಕಷ್ಟ ತರಲಿದೆ. ಇದರಿಂದಾಗಿ ಅನೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನೇ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಅಲ್ಲದೆ, ಅನೇಕ ಕುಟುಂಬಗಳಲ್ಲಿ 6 ಅಥವಾ 7 ನೇ ತರಗತಿಯಲ್ಲಿ ಓದುತ್ತಿರುವ 10-12 ವರ್ಷದ ಹೆಣ್ಣುಮಕ್ಕಳು ಮನೆಗೆಲಸ ಹಾಗೂ ತಮ್ಮ ತಂಗಿ-ತಮ್ಮಂದಿರ ಆರೈಕೆಯನ್ನೂ ಮಾಡುತ್ತಾರೆ. ಮ್ಯಾಗ್ನೆಟ್ ಯೋಜನೆಯು ಇಂತಹ ಹೆಣ್ಣುಮಕ್ಕಳ ಶಾಲಾ ಶಿಕ್ಷಣದ ಮೇಲೆ ಕೊಡಲಿ ಪೆಟ್ಟು ನೀಡಲಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಸರ್ಕಾರದ ಈ ‘ವಿಲೀನ ಮತ್ತು ಮುಚ್ಚುವಿಕೆ’ ಎಂಬ ಆದೇಶದಿಂದಾಗಿ ಶಾಲೆ ತೊರೆಯುವವರ ಸಂಖ್ಯೆಯು ಇನ್ನಷ್ಟು ಉಲ್ಬಣಗೊಳ್ಳಲಿದೆ. ಇದು ಹೆಣ್ಣುಮಕ್ಕಳ ವಿಷಯದಲ್ಲಿ ಅತ್ಯಂತ ತೀವ್ರವಾಗಿರಲಿದೆ. ಇದರಿಂದಾಗಿ ಹೆಣ್ಣುಮಕ್ಕಳು ಬಾಲ್ಯ ವಿವಾಹಕ್ಕೆ ಬಲಿಯಾಗಬಹುದು ಅಥವಾ ಬಾಲಕಾರ್ಮಿಕರಾಗಿ ಕೆಲಸ ಮಾಡಬೇಕಾಗಬಹುದು, ಇಲ್ಲವೇ ಮಾನವ ಕಳ್ಳಸಾಗಣಿಕೆಯಂತಹ ಜಾಲಕ್ಕೆ ಸಿಲುಕಬಹುದು. ಹೀಗೆ ಹೆಣ್ಣುಮಕ್ಕಳು ಕೇವಲ ಶಿಕ್ಷಣದಿಂದ ಮಾತ್ರವಲ್ಲದೆ, ಗೌರವಯುತ ಜೀವನದಿಂದಲೂ ವಂಚಿತರಾಗುತ್ತಾರೆ. ‘ಬೇಟಿ ಪಡಾವೋ, ಬೇಟಿ ಬಚಾವೋ’ ಎಂಬ ಘೋಷಣೆ ಬಾಯುಪಚಾರವಷ್ಟೆ!