ರಾಜ್ಯ ಬಜೆಟ್: ಹುಸಿ ನಿರೀಕ್ಷೆಗಳ ಭ್ರಮೆ ಸೃಷ್ಟಿ
ರಾಜ್ಯ ಬಜೆಟ್: ಹುಸಿ ನಿರೀಕ್ಷೆಗಳ ಭ್ರಮೆ ಸೃಷ್ಟಿ ಮುಖ್ಯವಾಹಿನಿ ಮಾಧ್ಯಮಗಳು ಬಣ್ಣಿಸಿರುವಂತೆ ದಾಖಲೆಯ ಸತತ 17ನೇ ರಾಜ್ಯ ಬಜೆಟ್ಟನ್ನು ರಾಜ್ಯದ ವಿತ್ತ ಮಂತ್ರಿಗಳೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೇ ಮಾರ್ಚ್ ಆರರಂದು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಇದು ಸಿದ್ದರಾಮಯ್ಯನವರ ಪಾಲಿಗೆ ದಾಖಲೆ ಆಗಿದ್ದರೂ, ರಾಜ್ಯದ ಜನಗಳ ಪಾಲಿಗೆ ಯಾವ ಮೈಲಿಗಲ್ಲನ್ನೂ ನಿರ್ಮಿಸದ, ಜನಗಳ ಜೀವನದಲ್ಲಿ ಯಾವ ಸಣ್ಣ ಬದಲಾವಣೆಯನ್ನು ತರಲೂ ಶಖ್ಯವಿಲ್ಲದ ಒಂದು ವಾಡಿಕೆಯ ವಾರ್ಷಿಕ ಕಸರತ್ತಾಗಿ ಉಳಿಯಿತಷ್ಟೇ! ಈ ಬಜೆಟ್ಟನ್ನು ಯಥಾರೀತಿ ಆಡಳಿತ ಪಕ್ಷದವರು ‘ಅಭಿವೃದ್ಧಿಪರ’, ‘ದೂರದೃಷ್ಟಿ’, ‘ಜನ ಕಲ್ಯಾಣ’ ಇತ್ಯಾದಿ ಪದಪುಂಜಗಳಿಂದ ಬಣ್ಣಿಸಿದರೆ, ವಿರೋಧ ಪಕ್ಷದವರು, ‘ಅಭಿವೃದ್ಧಿ ವಿರೋಧಿ’, ‘ಆದಾಯದ ಕೊರತೆ ಇರುವ’, ‘ಅಂಕಿ ಅಂಶಗಳ ಕಸರತ್ತು’ ಇತ್ಯಾದಿಯಾಗಿ ಮೂದಲಿಸಿ ವಿರೋಧಿಸಿದ್ದಾರೆ. ಹತ್ತಾರು ವರ್ಷಗಳಿಂದ ಬಜೆಟ್ ಅಧಿವೇಶನದಲ್ಲಿ ಮಂಡಿಸುತ್ತಾ ಬಂದಿರುವ ಬಜೆಟ್ಗಳನ್ನು ಸಾಮಾನ್ಯ ಜನ ಮೆಲುಕು ಹಾಕಿದರೆ, ಮೇಲೆ ಹೇಳಿರುವ ಆಡಳಿತ – ವಿರೋಧ ಪಕ್ಷಗಳ ಹೇಳಿಕೆಗಳು ಅದಲು- ಬದಲಾಗಿರುವುದು ಬಿಟ್ಟರೆ, ಈ ಎಲ್ಲಾ ಪಕ್ಷಗಳು ರಾಜ್ಯದ ಜನತೆಯ ಮೇಲೆ ಹೊರಿಸಿರುವ ಸಾಲದ ಪ್ರಮಾಣ ಹೆಚ್ಚಿಸುತ್ತಲೇ ಬಂದಿವೆ, ಜನ ವಿರೋಧಿ ಬಜೆಟ್ ಗಳನ್ನು ಮಂಡಿಸುತ್ತಲೇ ಬಂದಿವೆ, ಜನಗಳ ಜೀವನವನ್ನು ನರಕಸದೃಶ ಮಾಡಿವೆ!! ‘ಆಡಳಿತ- ವಿರೋಧ’ ಪಕ್ಷಗಳ ಹಣೆಪಟ್ಟಿ ತೆಗೆದು ನೋಡಿದಾಗ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಎಲ್ಲಾ ಪಕ್ಷಗಳು ಜನ ವಿರೋಧಿ ಬಜೆಟ್ಗಳನ್ನು ಮಂಡಿಸಿ, ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಬಂಡವಾಳಶಾಹಿಗಳ ಆದಾಯವನ್ನು ಹಿಗ್ಗಿಸುತ್ತಾ ಬಂದಿರುವುದು ಸೂರ್ಯನ ಬೆಳಕಿನಷ್ಟೇ ಸ್ಪಷ್ಟವಾಗಿ ಗೋಚರಿಸುತ್ತದೆ. ಸಿದ್ದರಾಮಯ್ಯನವರ ದಾಖಲೆಯ ಬಜೆಟ್ ರಾಜ್ಯದ ದುಡಿಯುವ ಜನಗಳಿಗೆ ದ್ರೋಹ ಬಗೆಯುವಲ್ಲಿಯೂ ದಾಖಲೆ ನಿರ್ಮಿಸಿದೆ! ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡಿಸುವ ಮುನ್ನ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ಸಭಾಧ್ಯಕ್ಷರನ್ನು ಉದ್ದೇಶಿಸಿ, “ಪ್ರಗತಿಶೀಲ ರಾಜ್ಯದ ಜನರ ತೆರಿಗೆ ಹಣಕ್ಕೆ ಪ್ರಮುಖ ಟ್ರಸ್ಟಿಯಾದ ನಾನು ಸರ್ವರ ಏಳಿಗೆಯನ್ನು ಬಯಸಿ 17ನೇ ಆಯವ್ಯಯವನ್ನು ಮಂಡಿಸುತ್ತಿದ್ದೇನೆ. ನಾಡಿನ ಏಳು ಕೋಟಿ ಕನ್ನಡಿಗರ ನಿರೀಕ್ಷೆಗಳನ್ನು ಅರಿತಿದ್ದೇವೆ, ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಈ ಆಯವ್ಯಯವು ನಾಡಿನ ರೈತರ, ದಮನಿತರ, ಕಾರ್ಮಿಕರ, ಮಹಿಳೆಯರ, ಅಶಕ್ತರ, ಅಲ್ಪಸಂಖ್ಯಾತರ ವಿದ್ಯಾರ್ಥಿ-ಯುವಜನರ, ವ್ಯಾಪಾರ ಮತ್ತು ಕೈಗಾರಿಕೋದ್ಯಮಗಳಲ್ಲಿ ತೊಡಗಿಸಿಕೊಂಡವರ ಕನಸುಗಳು ಮತ್ತು ಆತ್ಮವಿಶ್ವಾಸವನ್ನು ಪ್ರತಿಧ್ವನಿಸುವ ಜೀವಂತ ದಾಖಲೆಯಾಗಿದೆ” ಎಂದು ಬಣ್ಣಿಸಿಕೊಂಡಿದ್ದಾರೆ. ಅವರ ಈ ಮಾತುಗಳನ್ನು ಪರಾಮರ್ಶಿಸಿ ನೋಡಿದಾಗ ಸ್ವತಃ ಮುಖ್ಯಮಂತ್ರಿಗಳಾಗಿ ತಮ್ಮ ನುಡಿ-ನಡೆಗಳಲ್ಲಿ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಮತ್ತು ಅವರ ನೇತೃತ್ವದ ಸರ್ಕಾರ ಜನ ವಿರೋಧಿಯಾಗಿ ಹಲವು ನೀತಿಗಳನ್ನು ಜಾರಿಗೊಳಿಸಿರುವುದು ಕಣ್ಣಿಗೆ ರಾಚುವಷ್ಟು ಸ್ಪಷ್ಟವಾಗಿದೆ. ರಾಜ್ಯದ ಜನಗಳ ಆರೋಗ್ಯ ರಕ್ಷಿಸಲು ಆರೋಗ್ಯ ಇಲಾಖೆಗೆ ಬೆನ್ನೆಲುಬಾಗಿ ನಿಂತಿರುವ ‘ಆಶಾ’ ಸಹೋದರಿಯರು ಜೀವನ ನಡೆಸಲು ಸಂಕಷ್ಟದ ದಿನಗಳನ್ನು ದೂಡುತ್ತಿರುವ ಹಿನ್ನೆಲೆಯಲ್ಲಿ ಸತತ ಹೋರಾಟ ಮಾಡುತ್ತಾ ಬಂದಿರುವುದನ್ನು ಗಮನಿಸಿದ್ದೇವೆ. ಅಂತಿಮವಾಗಿ ಕಳೆದ ವರ್ಷ ನಡೆದ ‘ಆಶಾ’ಗಳ ಅನಿರ್ದಿಷ್ಟ ಹೋರಾಟದ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸಿ ಆಶಾಗಳಿಗೆ ಪ್ರತಿ ತಿಂಗಳು 10 ಸಾವಿರ ಕನಿಷ್ಠ ವೇತನ ನೀಡುವುದಾಗಿ ಆಶಾಗಳಿಗೆ ವಾಗ್ದಾನ ಮಾಡಿದ ಘಟನೆಗೆ ಇಡೀ ರಾಜ್ಯದ ಜನತೆ ಸಾಕ್ಷಿಯಾಗಿದ್ದಾರೆ! ವರ್ಷ ಕಳೆದರೂ, ಬೇಡಿಕೆ ಕಾರ್ಯಗತಗೊಳ್ಳದಿದ್ದಾಗ, ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಮತ್ತೆ ಆಶಾಗಳು ಬೀದಿಗಿಳಿದರೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿವ್ಯ ಮೌನ ವಹಿಸಿದ್ದಷ್ಟೇ ಅಲ್ಲದೆ ಈಗ ಮಂಡಿಸಿರುವ ಬಜೆಟ್ನಲ್ಲಿ ಪುಡಿಗಾಸು ಒದಗಿಸದೇ ಇರುವುದು ಮುಖ್ಯಮಂತ್ರಿಗಳ ಬದ್ಧತೆಯನ್ನು ಸೂಚಿಸುತ್ತದೆಯೇ!? ಇದು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ‘ಆಶಾ’ ಗಳಿಗೆ ಮಾಡಿದ ದ್ರೋಹವಾಗುವುದಿಲ್ಲವೇ? ರಾಜ್ಯದ ವಿದ್ಯಾರ್ಥಿ ಸಮುದಾಯ, ಪಾಲಕರು, ಜನಪರ ಸಂಘಟನೆಗಳು, ಬುದ್ಧಿಜೀವಿಗಳು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ತೆರೆಯುವ ನೆಪದಲ್ಲಿ ಬಡವರ ಮಕ್ಕಳ ಶಿಕ್ಷಣಕ್ಕೆ ಆಧಾರಸ್ತಂಭಗಳಾದ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದೆಂದು ಬೀದಿಗಿಳಿದು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿಯೇ ಆ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಸರ್ಕಾರಿ ಶಾಲೆಗಳ ಮರಣ ಶಾಸನ ಬರೆಯುವ 800 ಕೆಪಿಎಸ್ ಶಾಲೆಗಳ ನಿರ್ಮಾಣಕ್ಕೆ ರೂ.3900 ಕೋಟಿ ಹೂಡಿಕೆ ಮಾಡಿ, ಉಳಿದೆಲ್ಲ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಜೂನಿಯರ್ ಕಾಲೇಜುಗಳ ಭೌತಿಕ ಅಭಿವೃದ್ಧಿಗೆ ಕೇವಲ ರೂ.800 ಕೋಟಿಯನ್ನು ದಯಪಾಲಿಸಿರುವುದು ರಾಜ್ಯದ ಏಳು ಕೋಟಿ ಕನ್ನಡಿಗರ ನಿರೀಕ್ಷೆಗಳನ್ನು ಅರಿತ ಲಕ್ಷಣವೇ? ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಉದ್ಯೋಗದ ಭಾಗ್ಯ ಕಾಣದೆ ಕಂಗಾಲಾಗಿರುವ ಉದ್ಯೋಗಾಕಾಂಕ್ಷಿಗಳು ಉದ್ಯೋಗಕ್ಕಾಗಿ ಸತತ ಹೋರಾಟ ನಡೆಸುತ್ತಾ ಬಂದಿರುವುದನ್ನು ರಾಜ್ಯದ ಜನ ಗಮನಿಸಿ ಬೆಂಬಲಿಸಿದ್ದಾರೆ. ಹೋರಾಟನಿರತರ ಮೇಲೆ ಪೊಲೀಸರು ಕೇಸ್ಗಳನ್ನು ದಾಖಲಿಸಿದರೂ, ಜೈಲಿಗೆ ತಳ್ಳುವ ಬೆದರಿಕೆಗಳನ್ನು ಒಡ್ಡಿದರೂ, ಛಲಬಿಡದೆ ಹೋರಾಟ ಮುಂದುವರೆಸಿದಾಗ ಅಂತಿಮವಾಗಿ ಬೆಳಗಾವಿ ಅಧಿವೇಶನದಲ್ಲಿ 56,832 ಹುದ್ದೆಗಳನ್ನು ಸರ್ಕಾರಿ ಇಲಾಖೆಗಳಲ್ಲಿ ಭರ್ತಿ ಮಾಡಿಕೊಳ್ಳುತ್ತೇವೆ ಎಂದು ಘೋಷಣೆ ಮಾಡಿದ್ದಕ್ಕೆ ಇಡೀ ರಾಜ್ಯ ಸಾಕ್ಷಿಯಾಗಿದೆ. ಆದರೆ ಈಗ ಬಜೆಟ್ನಲ್ಲಿ ಕೇವಲ 30,000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಘೋಷಣೆಗಳನ್ನು ಮಾಡಿರುವುದು ಬಿಟ್ಟರೆ, ನಿಗದಿತ ಕಾಲಮಿತಿಯೊಳಗೆ ಭರ್ತಿ ಮಾಡಿಕೊಳ್ಳುವ ನಿರ್ದಿಷ್ಟ ಯೋಜನೆಯನ್ನೇ ಪ್ರಕಟಿಸದೇ, ನೇಮಕಾತಿ ಅಧಿಸೂಚನೆ ಹೊರಡಿಸದೇ ಮತ್ತೆ ಕಾಲಹರಣ ಮಾಡುವ ಸರ್ಕಾರದ ಈ ನಡೆ ರಾಜ್ಯದ ‘ವಿದ್ಯಾರ್ಥಿ-ಯುವಜನರ’ ಕನಸುಗಳನ್ನು ನನಸು ಮಾಡುವ ದಿಕ್ಕಿನಲ್ಲಿ ಇದೆಯೇ? ರಾಜ್ಯದಲ್ಲಿ ಶೇ. 98 ರಷ್ಟಿರುವ ಅಸಂಘಟಿತ ಕಾರ್ಮಿಕರಿಗೆ, ಅವರ ಜೀವನ ಹಸನು ಮಾಡಲು ಯಾವ ನಿರ್ದಿಷ್ಟ ಕ್ರಮಗಳನ್ನು ಜರುಗಿಸದೇ, ಹತ್ತಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕನಿಷ್ಠ ಕೂಲಿ ಪರಿಷ್ಕರಣೆಯನ್ನು ಗಾಳಿಗೆ ತೂರಿರುವ ಸರ್ಕಾರದ ದಿವ್ಯ ನಿರ್ಲಕ್ಷ್ಯ ಬಜೆಟ್ನಲ್ಲಿ ಗೋಚರಿಸುತ್ತದೆ. ನರೇಗಾ ಯೋಜನೆಗೆ ತಿದ್ದುಪಡಿ ತಂದು ಹಣ ಕಡಿತಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿರುವ ಮುಖ್ಯಮಂತ್ರಿಗಳ ನಡೆ ಸರಿಯಾಗಿದೆ ಎಂದು ಭಾವಿಸುತ್ತಿರುವಾಗಲೇ, ಈ ಯೋಜನೆಗೆ ಈವರೆಗೆ ರಾಜ್ಯ ಸರ್ಕಾರ ಕೊಡುತ್ತಿದ್ದ ಕನಿಷ್ಠ ಅನುದಾನವನ್ನು ಈಗ ಮಂಡಿಸಿರುವ ಬಜೆಟ್ಟಿನಲ್ಲಿ ನಿಲ್ಲಿಸಿ ಕೇವಲ ಕಾನೂನು ಹೋರಾಟದ ಮಾತನಾಡಿರುವುದು ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ವಾಸ್ತವವಾಗಿ ಶಾಮೀಲಾದಂತಾಗುವುದಿಲ್ಲವೇ? ಅಂತಿಮವಾಗಿ ಗ್ರಾಮೀಣ ಕೂಲಿಕಾರರ ಕನಿಷ್ಠ ಕೆಲಸದ ದಿನಗಳ ಖಾತ್ರಿಗೆ ಕೊಡಲಿ ಪೆಟ್ಟು ಬೀಳಲು ಕಾರಣವಾಗುವುದಿಲ್ಲವೇ? ಅದೇ ರೀತಿ ಬಹು ದಿನಗಳಿಂದ ರೈತರು ಹೋರಾಟದ ಮೂಲಕ ಒತ್ತಾಯಿಸುತ್ತಿರುವ ಮಾರಕ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಸೊಲ್ಲೇ ಎತ್ತದಿರುವುದು ರಾಜ್ಯದ ಕಾರ್ಮಿಕ-ಕೃಷಿ ಕಾರ್ಮಿಕ, ರೈತರ ಆತ್ಮವಿಶ್ವಾಸ ಹೆಚ್ಚಿಸುವ ಕ್ರಮಗಳಾಗುತ್ತವೆಯೇ? 2025-26ರಲ್ಲಿ ರೂ.1.16ಲಕ್ಷ ಕೋಟಿ ಸಾಲ ಮಾಡಿದ್ದ ರಾಜ್ಯ ಸರ್ಕಾರ 2026-27ರಲ್ಲಿ ರೂ.1.32 ಲಕ್ಷ ಕೋಟಿ ಸಾಲ ಮಾಡುವ 97,449 ಕೋಟಿ ರೂಪಾಯಿಗಳ ವಿತ್ತೀಯ ಕೊರತೆಯ ಬಜೆಟ್ಟನ್ನು ಮಂಡಿಸಿದೆ. ಇದುವರೆಗೂ ಮಾಡಿದ ರಾಜ್ಯ ಸರ್ಕಾರದ ಸಾಲ 2026 ಮಾರ್ಚ್ ಅಂತ್ಯಕ್ಕೆ ರೂ.8.24 ಲಕ್ಷ ಕೋಟಿಗಳು ಇದ್ದದ್ದು 2027 ಮಾರ್ಚ್ ಅಂತ್ಯಕ್ಕೆ ರೂ.8.24 ಲಕ್ಷ ಕೋಟಿಗಳಾಗಲಿದೆ. ಬಜೆಟ್ಟಿನ ಬಹುದೊಡ್ಡ ವೆಚ್ಚ ಈ ಸಾಲದ ಮೇಲಿನ ಬಡ್ಡಿ ತೀರಿಸುವ ಬಾಬತ್ತಾಗಿದೆ. 2026-27ರಲ್ಲಿ ರಾಜ್ಯ ಸರ್ಕಾರ ಮಂಡಿಸಿರುವ ರೂ.4.48 ಲಕ್ಷ ಕೋಟಿಗಳಲ್ಲಿ ರಾಜಸ್ವ ಆದಾಯ ಸುಮಾರು ರೂ.3.15 ಲಕ್ಷ ಕೋಟಿಗಳಲ್ಲಿ ರಾಜ್ಯ ಸರ್ಕಾರ ಮಾಡಲೇಬೇಕಾದ ಬದ್ದ ವೆಚ್ಚಗಳಾದ ಸಂಬಳ, ಪಿಂಚಣಿ, ಘೋಷಿತ ಯೋಜನೆಗಳಿಗೆ ರೂ.2.77 ಲಕ್ಷ ಕೋಟಿಗಳು ಅಂದರೆ ಶೇಕಡ 88 ರಷ್ಟು ಖರ್ಚಾದರೆ ಉಳಿಯುವ ಅಲ್ಪ ಮೊತ್ತದಲ್ಲಿ ಯಾವ ಅಭಿವೃದ್ಧಿ ಸಾಧ್ಯ? ಉದ್ಯೋಗ ಸೃಷ್ಟಿ ಸಾಧ್ಯ? ನೇಮಕಾತಿಗೆ ಹಣ ಹೊಂದಿಸುವುದೆಲ್ಲಿ? ಸರ್ಕಾರ ಉತ್ತರಿಸಬೇಕು! ಆದರೆ ಇದೇ ವೇಳೆಗೆ ಸಾಲದ ರಾಮಯ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೂದಲಿಸುತ್ತಿರುವ ರಾಜ್ಯದ ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ತಾವು ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಸಾಲ ಮಾಡುವ ಇದೇ ಪ್ರವೃತ್ತಿಯನ್ನು ಮುಂದುವರೆಸಿದ್ದಲ್ಲವೇ? ರಾಜ್ಯ ಸರ್ಕಾರದ ಸಾಲದ ಬಗ್ಗೆ ಮಾತನಾಡುವ ಈ ಪಕ್ಷಗಳು ಸ್ವತಃ ಕೇಂದ್ರದಲ್ಲಿ ಅಧಿಕಾರದಲ್ಲಿವೆ. ಈ ವರ್ಷ ಕೇಂದ್ರದ ವಿತ್ತ ಮಂತ್ರಿಗಳು ಮಂಡಿಸಿದ ಬಜೆಟ್ಟಿನಲ್ಲಿ, ಕೇಂದ್ರ ಸರ್ಕಾರ ಈ ವರ್ಷ ಮಾಡಿದ ರೂ.17 ಲಕ್ಷ ಕೋಟಿ ಸಾಲ ಸೇರಿದಂತೆ ಒಟ್ಟು ದೇಶದ ಸಾಲವನ್ನು ರೂ.214 ಲಕ್ಷ ಕೋಟಿಗೆ ಏರಿಸಲಾಗಿರುವುದನ್ನು ಇವರು ಮರೆಮಾಚುತ್ತಾರೆ. 2014ರ ಮುಂಚೆ ರೂ.52 ಲಕ್ಷ ಕೋಟಿ ಇದ್ದ ದೇಶದ ಸಾಲವನ್ನು ಈಗ ಕೇವಲ 12 ವರ್ಷಗಳಲ್ಲಿ ರೂ.214 ಲಕ್ಷ ಕೋಟಿಗೆ ಏರಿಸಿದ ಕೀರ್ತಿ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಸಲ್ಲುತ್ತದೆ! ಆದ್ದರಿಂದ, ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಈ ಮೂರೂ ಪಕ್ಷಗಳು ಬಂಡವಾಳಶಾಹಿ-ಕಾರ್ಪೊರೇಟ್ ಮನೆತನಗಳ ಆಸ್ತಿ-ಲಾಭ ಹೆಚ್ಚಾಗಲು ಅನುಕೂಲ ಮಾಡಿಕೊಡುತ್ತಿದ್ದು, ಜನಗಳನ್ನು ದಿವಾಳಿಯ ಅಂಚಿಗೆ ತಂದಿರುವುದನ್ನು ಮನಗಂಡು ಈ ಪಕ್ಷಗಳ ಬದ್ಧತೆ ಬಂಡವಾಳಶಾಹಿ ಪದ್ಧತಿಯನ್ನು ಉಳಿಸಿ, ಬೆಳೆಸುವ ಬಂಡವಾಳಿಗರ ಪರವಾಗಿ ಇದೆ ಎನ್ನುವುದನ್ನು ಜನರು ಅರಿಯಬೇಕಾಗಿದೆ. ಹಾಗೂ ಈ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಪ್ರಬಲ ಹೋರಾಟ ಕಟ್ಟಲು ಬದ್ಧರಾಗುವುದೊಂದೇ ಜನಗಳ ಮುಂದಿರುವ ಏಕೈಕ ಮಾರ್ಗವಾಗಿದೆ.