Loading..

ನೇತಾಜಿ ಸುಭಾಷ್‌ಚಂದ್ರ ಬೋಸ್ ಜನ್ಮದಿನ: 23 ಜನವರಿ 2026

ನೇತಾಜಿ ಸುಭಾಷ್‌ಚಂದ್ರ ಬೋಸ್ ಜನ್ಮದಿನ: 23 ಜನವರಿ 2026
ಅವರ ಕೃತಿ ‘ಕ್ರಾಸ್‌ರೋಡ್ಸ್’ನಿಂದ ಕೆಲವು ಉಲ್ಲೇಖಗಳು
ಸ್ವಾತಂತ್ರ್ಯ ಮತ್ತು ಸಮಾಜವಾದಕ್ಕಾಗಿ ನಡೆವ ಹೋರಾಟಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ
…1917ರಲ್ಲಿ ರಷ್ಯಾದ ಜಾ಼ರ್ ಚಕ್ರಾಧಿಪತ್ಯವು ಕೆಳಗುರುಳಿತು; ಆದರೆ ಅದರ ಅವಶೇಷಗಳಿಂದ ಯೂನಿಯನ್ ಆಫ್ ಸೋವಿಯತ್ ಸೋಷಲಿಸ್ಟ್ ರಿಪಬ್ಲಿಕ್ ತಲೆಯೆತ್ತಿತು. ರಷ್ಯಾದ ಇತಿಹಾಸದಿಂದ ಪಾಠ ಕಲಿಯಲು ಬ್ರಿಟಿಷರಿಗೆ ಇನ್ನೂ ಸಮಯವಿದೆ. ಆದರೆ ಅವರು ಕಲಿಯುವರೆ?…
…ಬ್ರಿಟಿಷ್ ಸಾಮ್ರಾಜ್ಯಕ್ಕೆ ದಿಟ್ಟ ಹೆಜ್ಜೆಯಿಟ್ಟು ತನ್ನನ್ನು ಒಂದು ಸ್ವತಂತ್ರ ರಾಷ್ಟ್ರಗಳ ಒಕ್ಕೂಟವನ್ನಾಗಿ ಪರಿವರ್ತಿಸಿಕೊಳ್ಳಲು ಸಾಧ್ಯವೇ? ಇದಕ್ಕೆ ಉತ್ತರವನ್ನು ಬ್ರಿಟಷ್ ಜನರೇ ನೀಡಬೇಕು. ಒಂದು ವಿಷಯವಂತೂ ಬಹಳ ಸ್ಪಷ್ಟವಾಗಿದೆ. ಬ್ರಿಟಿಷ್ ಜನತೆ ತಮ್ಮ ಸ್ವಂತ ನೆಲದಲ್ಲೇ ಸ್ವತಂತ್ರರಾದರೆ, ಗ್ರೇಟ್ ಬ್ರಿಟನ್ ದೇಶವು ಸಮಾಜವಾದಿ ರಾಷ್ಟ್ರವಾದರೆ ಮಾತ್ರ ಅಂತಹ ಪರಿವರ್ತನೆ ಸಾಧ್ಯ. ಗ್ರೇಟ್ ಬ್ರಿಟನ್‌ನಲ್ಲಿರುವ ಬಂಡವಾಳಶಾಹಿ ಆಳ್ವಿಕರಿಗೂ ಮತ್ತು ಹೊರದೇಶಗಳ ವಸಾಹತುಗಳಿಗೂ ಅವಿಭಾಜ್ಯ ಸಂಬಂಧವಿದೆ. ಬಹಳ ಕಾಲದ ಹಿಂದೆಯೇ ಲೆನಿನ್ ತೋರಿಸಿಕೊಟ್ಟಂತೆ, “ಹಲವು ದೇಶಗಳ ಗುಲಾಮಗಿರಿಯಿಂದ ಬ್ರಿಟನ್ ದೇಶದಲ್ಲಿ ವಿಗತಿಗೆ ಬಲ ಬಂದಿದೆ ಮತ್ತು ಪುಷ್ಟಿ ಸಿಕ್ಕಿದೆ.” ಬ್ರಿಟಿಷ್ ಅರಸೊತ್ತಿಗೆಗೆ ಮತ್ತು ಬಂಡವಾಳಶಾಹಿಗಳಿಗೆ ಬದುಕಿರಲು ಮೂಲಾಧಾರವೆಂದರೆ, ಅವರಿಗೆ ಶೋಷಣೆ ಮಾಡಲು ವಸಾಹತುಗಳು ಮತ್ತು ಅದನ್ನು ಅವಲಂಬಿಸಿರುವ ಪರದೇಶಗಳು ಇರುವುದು. ವಸಾಹತು ಮತ್ತು ಅವಲಂಬಿತ ದೇಶಗಳ ವಿಮುಕ್ತಿಯು ಗ್ರೇಟ್ ಬ್ರಿಟನ್ನಿನಲ್ಲಿರುವ ಬಂಡವಾಳಶಾಹಿ ಆಳ್ವಿಕರ ಅಸ್ತಿತ್ವಕ್ಕೇ ಹೊಡೆತ ನೀಡುತ್ತದೆ ಮತ್ತು ಆ ದೇಶದಲ್ಲಿ ಸಮಾಜವಾದಿ ರಾಜ್ಯದ ಸ್ಥಾಪನೆಗೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ, ಇದೊಂದು ವಿಷಯವಂತೂ ಸ್ಪಷ್ಟವಾಗಬೇಕು; ವಸಾಹತುಗಳನ್ನು ಕೊನೆಗೊಳಿಸದೆ ಗ್ರೇಟ್ ಬ್ರಿಟನ್ನಿನಲ್ಲಿ ಸಮಾಜವಾದಿ ವ್ಯವಸ್ಥೆಯನ್ನು ತರುವುದು ಅಸಾಧ್ಯ ಮತ್ತು ಭಾರತದ ಮತ್ತು ಬೇರೆ ಗುಲಾಮಗಿರಿಗೊಳಗಾದ ರಾಷ್ಟ್ರಗಳ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ನಾವು, ಪ್ರಾಸಂಗಿಕವಾಗಿ ಬ್ರಿಟಿಷ್ ಜನತೆಯ ಆರ್ಥಿಕ ವಿಮುಕ್ತಿಗಾಗಿಯೂ ಹೋರಾಡುತ್ತಿದ್ದೇವೆ.
(1938ರ ಫೆಬ್ರವರಿಯಲ್ಲಿ, ಹರಿಪುರದಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ 51ನೇ ಅಧಿವೇಶನದಲ್ಲಿ ಮಾಡಿದ ಭಾಷಣದಿಂದ ಆಯ್ದ ಭಾಗ.)
ಭಾರತದ ಸ್ವಾತಂತ್ರ್ಯ ಮತ್ತು ಸಮಾಜವಾದ
…ಸಾಮ್ರಾಜ್ಯವಾದದ ಯುಗದ ಅಂತ್ಯ ಸಮೀಪಿಸುತ್ತಿದೆ ಮತ್ತು ಸ್ವಾತಂತ್ರ್ಯ, ಪ್ರಜಾತಂತ್ರ ಮತ್ತು ಸಮಾಜವಾದದ ಯುಗದ ಉದಯಕಾಲ ಹತ್ತಿರವಾಗುತ್ತಿದೆ. ಹಾಗಾಗಿ ಇಂದಿನ ಭಾರತವು ಇತಿಹಾಸದ ಕವಲುದಾರಿಗಳಲ್ಲೊಂದರಲ್ಲಿ ನಿಂತಿದೆ. ನಾವು ಬಯಸಿದರೆ, ಪ್ರಪಂಚ ನಿರೀಕ್ಷಿಸುತ್ತಿರುವ ಪರಂಪರೆಯ ಭಾಗ ನಾವಾಗಬಹುದು.
ಹಳೆಯ ರಚನೆಯೊಂದು ತನ್ನ ಭಾರಕ್ಕೇ ಕುಸಿದುಬಿದ್ದು ಅದರ ಅವಶೇಷಗಳಿಂದ ಹೊಸದೊಂದು ಇನ್ನೂ ಬರದೆ ಇರುವುದನ್ನು ಕಂಡು ದಿಗ್ಭ್ರಮೆಗೊಳ್ಳುವ ಜನರನ್ನು ನೋಡಿ ಆಶ್ಚರ್ಯವೇನೂ ಪಡಬೇಕಾಗಿಲ್ಲ. ಆದರೆ, ಅನಿಶ್ಚಯತೆಯ ಈ ಸಮಯದಲ್ಲಿ ನಮ್ಮ ಬಗ್ಗೆ, ನಮ್ಮ ದೇಶವಾಸಿಗಳ ಬಗ್ಗೆ ಮತ್ತು ಮಾನವೀಯತೆಯ ಬಗ್ಗೆ ನಾವು ನಂಬಿಕೆಯನ್ನು ಕಳೆದುಕೊಳ್ಳುವುದು ಬೇಡ. ನಂಬಿಕೆಯನ್ನು ಕಳೆದುಕೊಳ್ಳುವುದೆಂದರೆ ಅದೊಂದು ದೊಡ್ಡ ದುರಂತವೇ ಸರಿ.
…ಈ ಹಂತದಲ್ಲಿ, ಬೇರೆ ಪ್ರದೇಶಗಳಲ್ಲಿ ಮತ್ತು ಕಾಲಗಳಲ್ಲಿ ಬಂದ ಇಂತಹುದೇ ಬಿಕ್ಕಟ್ಟಿನ ಉದಾಹರಣೆಯನ್ನು ಕೊಡುತ್ತೇನೆ. ರಷ್ಯಾದಲ್ಲಿ 1917ರಲ್ಲಿ ನವೆಂಬರ್ (ಸಮಾಜವಾದಿ, ಸಂ) ಕ್ರಾಂತಿಯು ಸ್ಫೋಟಗೊಂಡಾಗ, ಕ್ರಾಂತಿಯನ್ನು ಯಾವ ದಾರಿಯಲ್ಲಿ ಕೊಂಡೊಯ್ಯಬೇಕು ಎಂಬ ಪರಿಕಲ್ಪನೆ ಯಾರಿಗೂ ಸ್ಪಷ್ಟವಾಗಿರಲಿಲ್ಲ. ಹೆಚ್ಚಿನ ಬೊಲ್ಷೆವಿಕರು ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡುತ್ತಿದ್ದರು. ಎಲ್ಲಾ ಮೈತ್ರಿಗಳನ್ನು ಅಲ್ಲಗಳೆದು, “ಎಲ್ಲಾ ಅಧಿಕಾರ ಸೋವಿಯತ್‌ಗಳಿಗೆ (ಜನಸಮಿತಿಗಳಿಗೆ-ಸಂ)” ಎಂದು ಲೆನಿನ್ ಘೋಷಿಸಬೇಕಾಯಿತು. ಸಂದೇಹ ಮತ್ತು ಚಂಚಲತೆಗಳ ಆ ಕಾಲಘಟ್ಟದಲ್ಲಿ ಲೆನಿನ್ ಸರಿಸಮಯದಲ್ಲಿ ನಾಯಕತ್ವ ನೀಡದೆ ಹೋಗಿದ್ದರೆ ರಷ್ಯಾದ ಇತಿಹಾಸ ಯಾವ ತಿರುವು ತೆಗೆದುಕೊಳ್ಳುತ್ತಿತ್ತೋ ಯಾರಿಗೆ ಗೊತ್ತು? ಅಂತಿಮವಾಗಿ ಭವಿಷ್ಯದ ವಾಣಿಯಂತೆ ಸಾಬೀತಾದ ಲೆನಿನ್ ಅವರ ಅಮೋಘ ಸಮಯಪ್ರಜ್ಞೆಯು (ಅಂತಃಪ್ರಜ್ಞೆ) ಮುಂದಿನ ದಿನಗಳಲ್ಲಿ ಸ್ಪೇನ್ ಅನುಭವಿಸಿದಂತಹ ಹಾನಿ ಮತ್ತು ದುರಂತಗಳಿಂದ ರಷ್ಯಾ ದೇಶವನ್ನು ಕಾಪಾಡಿತು.
ಈಗ ನಾವು ಇದಕ್ಕೆ ತದ್ವಿರುದ್ಧವಾದ ಸಂಗತಿಯನ್ನು ತೆಗೆದುಕೊಳ್ಳೋಣ. 1922ರಲ್ಲಿ ಇಟಲಿಯು ಎಲ್ಲಾ ರೀತಿಯಿಂದಲೂ ಸಮಾಜವಾದಕ್ಕೆ ಬದಲಾಗಲು ಪಕ್ವವಾಗಿತ್ತು. ಅದಕ್ಕೆ ಬೇಕಾಗಿದ್ದು ಇಟಲಾಯಿನ್ ಲೆನಿನ್ ಮಾತ್ರ. ಆದರೆ ಆ ಗಳಿಗೆಯ ವ್ಯಕ್ತಿ ಬರಲಿಲ್ಲ; ಹಾಗಾಗಿ, ಅವಕಾಶವು ಸಮಾಜವಾದಿ ಕೈಗಳಿಂದ ಜಾರಿಹೋಯಿತು. ಅದನ್ನು ತಕ್ಷಣವೇ ಕೈಗೆತ್ತಿಕೊಂಡಿದ್ದು ಫ್ಯಾಸಿಸ್ಟ್ ನಾಯಕ ಬೆನಿಟೊ ಮುಸಲೋನಿ. …ಆತನ ಕೈಗೆ ಅಧಿಕಾರ ಹೋದ ನಂತರ, ಇಟಲಿಯ ಇತಿಹಾಸವು ಸಂಪೂರ್ಣವಾಗಿ ವಿಭಿನ್ನ ದಾರಿಹಿಡಿಯಿತು; ಕಡೆಯಲ್ಲಿ ಇಟಲಿ ಸಮಾಜವಾದಿ ದೇಶವಾಗುವ ಬದಲು ಫ್ಯಾಸಿಸ್ಟ್ ದೇಶವಾಯಿತು. ಇಟಲಿಯ ನಾಯಕರಿಗೆ ಸಂದೇಹ ಮತ್ತು ಚಂಚಲತೆಯು ಕಾಡಿದ್ದರಿಂದ ಅವರು ವಿಫಲರಾದರು.
…ಇಂದು ನಮ್ಮ ನಾಯಕರಲ್ಲಿ ತಾಕಲಾಟವಿದೆ ಮತ್ತು ಅವರ ಚಂಚಲತೆಯು ಎಡಪಂಥೀಯರ ಒಂದು ವಿಭಾಗದ ಆತ್ಮಸ್ಥೆೈರ್ಯವನ್ನು ಕುಗ್ಗಿಸಿದೆ. “ಐಕ್ಯತೆ”, “ರಾಷ್ಟ್ರೀಯ ರಂಗ”, “ಶಿಸ್ತು” – ಇವುಗಳೆಲ್ಲ ವಾಸ್ತವಕ್ಕೆ ಸಂಬಂಧವಿಲ್ಲದ ಅಗ್ಗದ ಘೋಷಣೆಗಳಾಗಿವೆ. ಅಂತಹ ಆಕರ್ಷಕ ಘೋಷಣೆಗಳ ಮಬ್ಬು ಕವಿದು, ಅವರು ರಾಷ್ಟ್ರೀಯ ಹೋರಾಟಕ್ಕೆ ನಮ್ಮನ್ನು ಮುನ್ನಡೆಸುವ ಒಂದು ಎದೆಗಾರಿಕೆಯ ಮತ್ತು ರಾಜಿರಹಿತ ನೀತಿಯು ಘಳಿಗೆಯ ಅವಶ್ಯಕತೆ ಎಂಬುದನ್ನು ಮರೆತಂತೆ ಕಾಣುತ್ತದೆ. ಈ ಉದ್ದೇಶಕ್ಕೆ ಪೂರಕವಾಗಿ ನಮಗೆ ಶಕ್ತಿ ನೀಡುವುದನ್ನೆಲ್ಲಾ ಸ್ವಾಗತಿಸಬೇಕು; ನಮ್ಮನ್ನು ದುರ್ಬಲಗೊಳಿಸುವುದನ್ನೆಲ್ಲಾ ತ್ಯಜಿಸಬೇಕು. ನಮ್ಮನ್ನು ಬಲಪಂಥೀಯರಿಗೆ ಗಂಟುಹಾಕುವ ಐಕ್ಯತೆಯು ನಮಗೆ ವರವೇನಲ್ಲ. ಎಲ್ಲಾ ಸಂದರ್ಭಗಳಲ್ಲೂ ಮತ್ತು ಎಲ್ಲಾ ಸನ್ನಿವೇಶಗಳಲ್ಲೂ ಐಕ್ಯತೆಯಿರಬೇಕೆಂದು ಬಯಸಿದರೆ, ಆಗ ಉದಾರವಾದಿ ಫೆಡರೇಶನ್ ಜೊತೆಗೆ ಐಕ್ಯತೆ ಸ್ಥಾಪಿಸಬೇಕೆಂದು ಕಾಂಗ್ರೆಸ್‌ನ ಮನವೊಲಿಸುವುದೇ ಒಳ್ಳೆಯದು.
(ಅಖಿಲ ಭಾರತ ರಾಜಿವಿರೋಧಿ ಸಮ್ಮೇಳನದಲ್ಲಿ ಮಾಡಿದ ಭಾಷಣದಿಂದ ಆಯ್ದ ಭಾಗ, ರಾಮ್‌ಘರ್, ಬಿಹಾರ. 19, ಮಾರ್ಚ್, 1940.)
ಹೋರಾಟದಲ್ಲಿ ಐಕ್ಯತೆ
…ನಾನು ಒಂದು ವಿಷಯವನ್ನು ಸೇರಿಸಲೇಬೇಕು; ಮಾರ್ಕ್ಸ್ ಮತ್ತು ಲೆನಿನ್‌ರವರ ಬರಹಗಳು ಮತ್ತು ಕಮ್ಯುನಿಸ್ಟ್ ಇಂಟರ್‌ನ್ಯಾಷನಲ್‌ನ ಅಧಿಕೃತ ಹೇಳಿಕೆಗಳು ರಾಷ್ಟ್ರೀಯ ಸ್ವಾತಂತ್ರ್ಯಕ್ಕೆ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತವೆ ಮತ್ತು ಅದು ಪ್ರಾಪಂಚಿಕ ದೃಷ್ಟಿಕೋನದ ಒಂದು ಅವಿಭಾಜ್ಯ ಅಂಗವೆಂದು ಗುರುತಿಸುತ್ತವೆ; ಇದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ ಮತ್ತು ಅದರ ಬಗ್ಗೆ ನನಗೆ ತೃಪ್ತಿಯಿದೆ.
(ಡೈಲಿ ವರ್ಕರ್ ಪತ್ರಿಕೆಯಲ್ಲಿ ಪ್ರಕಟವಾದದ ಆರ್.ಪಾಲ್ಮೆ ದತ್ತ ಅವರೊಂದಿಗಿನ ಸಂದರ್ಶನ, ಲಂಡನ್, 24, ಜನವರಿ, 1938.)