ಅರಾವಳಿ ಬೆಟ್ಟದ ಸಾಲು ಇದೀಗ ಲಾಭಕೋರರ ಪಾಲು ಇತ್ತೀಚಿಗೆ ಸುಪ್ರೀಂ ಕೋರ್ಟ್ (ನವೆಂಬರ್ 29,2025)
ಅರಾವಳಿ ಬೆಟ್ಟದ ಸಾಲು
ಇದೀಗ ಲಾಭಕೋರರ ಪಾಲು
ಇತ್ತೀಚಿಗೆ ಸುಪ್ರೀಂ ಕೋರ್ಟ್ (ನವೆಂಬರ್ 29,2025) ಅರಾವಳಿ ಬೆಟ್ಟದ ಸಾಲಿನ ಕುರಿತು ನೀಡಿದ ತೀರ್ಪು ವಾಯುವ್ಯ ಭಾರತದ ರಾಜ್ಯಗಳಲ್ಲಿ ಬಿರುಗಾಳಿ ಎಬ್ಬಿಸಿತು. ಆ ತೀರ್ಪಿನ ಪ್ರಕಾರ, ಆ ಪ್ರದೇಶದ ನೆಲಮಟ್ಟದಿಂದ 100 ಮೀಟರ್ ಎತ್ತರಕ್ಕೆ ಇರುವ ಬೆಟ್ಟದ ಸಾಲುಗಳನ್ನು ಮಾತ್ರ ಅರಾವಳಿ ಬೆಟ್ಟದ ಸಾಲು ಎಂದು ಪರಿಗಣಿಸಲಾಗುವುದು. ಅದರರ್ಥ, 100 ಮೀಟರ್ ಎತ್ತರಕ್ಕಿಂತ ಕಡಿಮೆಯಿರುವ ಬೆಟ್ಟದ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಅರಣ್ಯನಾಶಗಳಿಗೆ ಮುಕ್ತ ಪರವಾನಿಗೆ ನೀಡಿದಂತೆ.
ತೀರ್ಪು ಬಹಿರಂಗವಾದ ಕೂಡಲೇ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಕೇಂದ್ರ ಸಮಿತಿಯು ತನ್ನ ಹೇಳಿಕೆಯಲ್ಲಿ, ಈ ತೀರ್ಪಿನಿಂದ “ಅಂತರ್ಜಲದ ಹರಿವಿಗೆ ಅಡ್ಡಿಯಾಗುತ್ತದೆ, ಅದು ನೈಸರ್ಗಿಕ ಮರುಪೂರಣವನ್ನು ನಾಶಮಾಡುತ್ತದೆ ಮತ್ತು ಅಂತಿಮವಾಗಿ ಕೆರೆ, ನದಿಗಳಿಗೆ ನೀರು ಹಣಿಸುವ ಭೂಗತವಾಗಿರುವ ಜಲಪದರವನ್ನು ಖಾಲಿ ಮಾಡಿ ಭೀಕರ ನೀರಿನ ಕೊರತೆಯನ್ನು ಸೃಷ್ಟಿಸುತ್ತದೆ.” ಎಂದು ತಿಳಿಸುತ್ತಾ, ಜನಜೀವನ, ಜಾನುವಾರು, ಪ್ರಕೃತಿ, ಹವಾಮಾನ, ಇವುಗಳ ಮೇಲೆ ಆಗುವ ಭಯಾನಕ ಪರಿಣಾಮಗಳನ್ನು ಮತ್ತು “ಇಂತಹ ವ್ಯವಸ್ಥಿತ ವಿನಾಶದ ಹಿಂದಿರುವ ಬಂಡವಾಳಶಾಹಿ ಪಿತೂರಿ”ಯನ್ನು ಬಯಲಿಗೆಳೆಯಿತು. ತೀರ್ಪು ಬಂದಾಕ್ಷಣವೇ, ಅರಾವಳಿ ಪ್ರದೇಶದ ಜನತೆ ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದರು. ಪರಿಸರ ವಿಜ್ಞಾನಿಗಳು, ಸಾಮಾಜಿಕ ಕಾರ್ಯಕರ್ತರು ಪ್ರತಿಭಟಿಸಿದರು. ಅಖಿಲ ಭಾರತ ರೈತ-ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಹೋರಾಟಗಳನ್ನು ಸಂಘಟಿಸಿತು. ಸುಪ್ರೀಂ ಕೋರ್ಟ್ ರಜಾಪೀಠವು ಡಿಸೆಂಬರ್ 29, 2025 ರಂದು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲು ಮಾಡಿಕೊಂಡು ಸುಪ್ರೀಂ ಕೋರ್ಟಿನ ಹಿಂದಿನ ತೀರ್ಪನ್ನು ತಡೆಹಿಡಿಯಿತು. ಕೇಂದ್ರ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಅರಾವಳಿ ಪ್ರದೇಶದಲ್ಲಿ ಯಾವುದೇ ಹೊಸ ಗಣಿಗಾರಿಕೆಗೆ ಲೈಸೆನ್ಸ್ ನೀಡುವುದನ್ನು ತಕ್ಷಣದಿಂದಲೇ ಸಂಪೂರ್ಣವಾಗಿ ತಡೆ ಹಿಡಿಯಲು ಆದೇಶ ಹೊರಡಿಸಿತು. ಕೇವಲ ವಾಯುವ್ಯ ಭಾಗದಲ್ಲಷ್ಟೇ ಅಲ್ಲದೆ, ಭಾರತದಾದ್ಯಂತ ಜನರಲ್ಲಿ ಮತ್ತು ವಿಜ್ಞಾನಿಗಳು, ಪರಿಸರವಾದಿಗಳು, ರೈತ ಸಂಘಟನೆಗಳಲ್ಲಿ ಇಷ್ಟೊಂದು ಆತಂಕ, ಭೀತಿಯನ್ನು ಸೃಷ್ಟಿ ಮಾಡಲು ಕಾರಣವೇನು ಎನ್ನುವುದನ್ನು ತಿಳಿಯಲು ಅರಾವಳಿ ಪರ್ವತ ಪ್ರದೇಶದ ಇತಿಹಾಸ, ಅದರ ಪ್ರಾಮುಖ್ಯತೆ, ಅದರ ನಾಶದಿಂದಾಗುವ ವಿನಾಶಕಾರಿ, ವ್ಯಾಪಕ ಪರಿಣಾಮಗಳನ್ನು ತಿಳಿದುಕೊಳ್ಳಬೇಕು. ಜೊತೆಗೆ ಇದರಿಂದ ಲಾಭಗಳಿಸುವವರು ಯಾರು ಮತ್ತು ಅದಕ್ಕೆ ಬೆಲೆ ತೆರುವವರು ಯಾರು ಎನ್ನುವುದನ್ನು ಅರಿತುಕೊಳ್ಳಬೇಕು.
ಅರಾವಳಿಯ ಚಾರಿತ್ರಿಕ ಪ್ರಾಮುಖ್ಯತೆ
ಅರಾವಳಿ ಬೆಟ್ಟದ ಸಾಲಿಗೆ ಲಕ್ಷಾಂತರ ವರ್ಷಗಳ ಇತಿಹಾಸವಿದೆ. ಪ್ರಪಂಚದ ಈ ಅತ್ಯಂತ ಪುರಾತನ ಬೆಟ್ಟದ ಸಾಲು ಗುಜರಾತ್, ರಾಜಸ್ಥಾನ, ಹರಿಯಾಣ ಹಾಗೂ ದೆಹಲಿ ರಾಜ್ಯಗಳ ಸುತ್ತ ಸುಮಾರು 670-830 ಕಿ.ಮೀ.ವರೆಗೆ ಹರಡಿಕೊಂಡಿದೆ. ಪರಿಸರವನ್ನು ಹಾಳುಮಾಡದೆ ಕಾಪಾಡಿಕೊಳ್ಳುವ ತತ್ವದ ಆಧಾರದ ಮೇಲೆ ಜನರು ಶತಮಾನಗಳಿಂದ ಅದರ ಸುತ್ತಲೂ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸುಮಾರು ಹದಿನೈದನೇ ಶತಮಾನದ ಹಿಂದೆಯೇ, ಗುರು ಜಂಭೋಜಿ ಎಂದೇ ಹೆಸರುವಾಸಿಯಾದ ಮತ್ತು ಪರ್ಮರ್ ರಜಪೂತ್ ರೈತ ಸಮುದಾಯದಲ್ಲಿ ಹುಟ್ಟಿದ ಗುರು ಜಂಬೇಶ್ವರ, ಅಲ್ಲಿನ ಮರ, ವನ್ಯಜೀವಿ ಮತ್ತು ನೀರಿನ ಸಂರಕ್ಷಣೆಯ ಸಾಮಾಜಿಕ ಜವಾಬ್ದಾರಿಯನ್ನು ಕೇಂದ್ರವಾಗಿಟ್ಟುಕೊಂಡು ನೈತಿಕ ಚೌಕಟ್ಟನ್ನು ಬೋಧಿಸಿದ್ದಾರೆ. ಮೇಘವಾಲ್ ಸಮುದಾಯದ ಸ್ಥಾಪಕ ಋಷಿಗಳಾದ ಮೇಘರಿಷಿಗಳು ಶ್ರಮ, ಜಮೀನು ಮತ್ತು ಸಂಯಮಗಳ ತತ್ವವನ್ನು ಬೋಧಿಸಿದರು; ಅದು ಕರಕುಶಲತೆಗೆ ಮತ್ತು ವ್ಯವಸಾಯಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಸುಸ್ಥಿರತೆಯ ದೃಷ್ಠಿಯಿಂದ ಬಳಸುವ ಕಟ್ಟುಪಾಡಿಗೆ ಒಳಪಡಿಸುತ್ತದೆ. ಈ ಪರಂಪರೆಯನ್ನು ಮೇಘವಾಲ, ಜಿಂಗಾರ, ರೆಗಾರ ಮತ್ತು ಇನ್ನಿತರ ದಲಿತ ಸಮುದಾಯಗಳಲ್ಲಿ ಇಂದಿಗೂ ಕಾಣಬಹುದು. ಈ ಪರಂಪರೆ ಉಳಿಸಿಕೊಳ್ಳಲು ರಾಜಸ್ಥಾನದ ಮಾರ್ವಾರ್ ಪ್ರದೇಶದ ಅಮೃತಾ ದೇವಿ ಬಿಸ್ಣೋಯ್, ಆಕೆಯ ಮೂವರು ಮಕ್ಕಳು ಮತ್ತು ಆಕೆಯ ಸಮುದಾಯದ ನೂರಾರು ಜನರು ಜೀವ ಕೊಟ್ಟರು. ಜೋಧ್‌ಪುರ್ ಮಹಾರಾಜ ತನ್ನ ಅರಮನೆಗೆಂದು ಖೆಜ್ರಿ ಮರಗಳನ್ನು ಕಡಿದು ತರಲು ಆಜ್ಞಾಪಿಸಿದಾಗ, ಅದನ್ನು ಉಳಿಸಿಕೊಳ್ಳಲು ಮರಗಳನ್ನು ಅಪ್ಪಿಕೊಂಡು ಸೈನಿಕರ ಕತ್ತಿಯೇಟಿಗೆ ಬಲಿಯಾದರು.
ಈ ಬೆಟ್ಟದ ಸಾಲು ಥಾರ್ ಮರುಭೂಮಿಯ ವಿಸ್ತರಣೆಯನ್ನು ನಿಲ್ಲಿಸಿದೆ. ಅಲ್ಲಿಂದ ದೆಹಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಬೀಸುವ ಬಿಸಿಗಾಳಿಯನ್ನು ತಡೆಹಿಡಿದಿದೆ. ಹಾಗೆಯೇ ಭಿಲ್, ಮೀನಾ ಮತ್ತು ಗಿರಿಸಿಯಾಗಳಂತಹ ಆದಿವಾಸಿ ಗುಂಪುಗಳಿಗೆ ಅರಾವಳಿಯು ಕೇವಲ ಪರಿಸರ ಸಂಪತ್ತಷ್ಟೇ ಅಲ್ಲ, ಅದು ಅವರು ಜೀವಿಸುವ, ಕೆಲಸ ಮಾಡುವ, ಪೂಜಿಸುವ ಮತ್ತು ನೆನಪುಗಳ ಜಾಗ. ಅದರ ಕಾಡು ಮತ್ತು ಬೆಟ್ಟಗುಡ್ಡಗಳು ಜೀವನೋಪಾಯದ ವ್ಯವಸಾಯ, ದನ ಮೇಯಿಸುವುದು, ಕಾಡು ಉತ್ಪನ್ನಗಳ ಸಂಗ್ರಹ ಮತ್ತು ಕಾಲಮಾನದ ವಲಸೆಗಳಿಗೆ ಒತ್ತಾಸೆಯಾಗಿ ನಿಂತಿವೆ. ಅಲ್ಲಿ ಪವಿತ್ರ ತೋಪುಗಳು, ಸಮಾಧಿಗಳು, ಕಾಡುದೇವರುಗಳು ಮತ್ತು ಕಾಲಕಾಲಕ್ಕೆ ಬರುವ ಆಚರಣೆಗಳು ಜನರಿಗೆ ಅರಾವಳಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಸೆದಿವೆ. ಆದ್ದರಿಂದ, ಸುಪ್ರೀಂ ಕೋರ್ಟಿನ ತೀರ್ಪನ್ನು ಪಾಲಿಸಿದರೆ ಪರಿಸರವಷ್ಟೇ ಅಲ್ಲ ತಲೆಮಾರುಗಳ ಸಂಬಂಧ, ಸಂಸ್ಕೃತಿ, ಪರಂಪರೆಗಳೆಲ್ಲವೂ ನಾಶವಾಗುತ್ತವೆ.
ಅರಾವಳಿ ಮರುವ್ಯಾಖ್ಯಾನ ಮತ್ತು ಅದರಿಂದ ಯಾರಿಗೆ ಲಾಭ
ಸುಪ್ರೀಂ ಕೋರ್ಟಿನ ಕೇಂದ್ರೀಯ ಅಧಿಕಾರದತ್ತ ಸಮಿತಿಯು (ಸಿಇಸಿ) ಅರಾವಳಿ ಬೆಟ್ಟದ ಸಾಲಿನ ಸಮಗ್ರ ಪರಿಸರ ಪರಿಣಾಮಗಳ ಬಗ್ಗೆ ವಿಶ್ಲೇಷಣಾತ್ಮಕ ವರದಿ ನೀಡಲು 2024 ಮಾರ್ಚ್ನಲ್ಲಿ ಸುಪ್ರೀಂ ಕೋರ್ಟ್ ಶಿಫಾರಸ್ಸು ಮಾಡಿತು. ಅದು ಭಾರತದ ಅರಣ್ಯ ಸಮೀಕ್ಷೆಯ (ಎಫ್‌ಎಸ್‌ಐ) ಇಳಿಜಾರು ಆಧಾರಿತ ವ್ಯಾಖ್ಯಾನಕ್ಕೆ ವಿರುದ್ಧವಾಗಿರಬಾರದೆಂದು ಸಲಹೆ ನೀಡಿತು. ಆದರೆ ಸಿಇಸಿಯ ವಿರೋಧವನ್ನು ಮತ್ತು ಎಫ್‌ಎಸ್‌ಐ ಎಚ್ಚರಿಕೆಗಳನ್ನು ಗಣನೆಗೆ ತೆಗೆದುಕೊಳ್ಳದ ಸುಪ್ರೀಂ ಕೋರ್ಟ್ ಆರಂಭದಲ್ಲಿ ಸರ್ಕಾರದ ಸಂಕುಚಿತ ವ್ಯಾಖ್ಯಾನವನ್ನು (ನವೆಂಬರ್, 2025 ರಂದು) ಒಪ್ಪಿಕೊಂಡಿತು. ಅದು ಎಲ್ಲಾ ವಿರೋಧಗಳಿಗೆ, ಹೋರಾಟಗಳಿಗೆ ನಾಂದಿ ಹಾಡಿತು. ವಾಸ್ತವವೆಂದರೆ, 2018 ರಂದು ಬಂದ ಸಿಇಸಿ ವರದಿಯು ಕಳೆದ 50 ವರ್ಷಗಳಲ್ಲಿ ರಾಜಸ್ಥಾನದ ಅರಾವಳಿ ಬೆಟ್ಟದ ಸಾಲಿನ 31 ಗುಡ್ಡಗಳು ಅಕ್ರಮ ಕ್ವಾರಿಯಿಂದ ಕಣ್ಮರೆಯಾಗಿರುವ ದುರಂತವನ್ನು ಬಹಿರಂಗಪಡಿಸಿದೆ. ಬಹಳ ಹಿಂದಿನಿಂದಲೂ ಬಂಡವಾಳ ಹಾಗೂ ರಾಜಕೀಯ ಪೋಷಣೆ ಹೊಂದಿರುವ ಅದಾನಿ, ವೇದಾಂತ ಸಮೂಹ, ಜೆಎಸ್‌ಇ ಸ್ಟೀಲ್ಸ್, ಮುಂತಾದ ಪ್ರಬಲ ವ್ಯಾಪಾರಿ ಸಮೂಹಗಳಿಗೆ ಗಣಿಗಾರಿಕೆ ಮಾಡಲು ಅವಕಾಶ ಸಿಕ್ಕಿದೆ. ಮಧ್ಯಪ್ರದೇಶದ ಸಿಂಗ್ರೌಲಿ ಆದಿವಾಸಿ ಜಿಲ್ಲೆಯಲ್ಲಿ ಅದಾನಿ ಸಮೂಹದ ಕಲ್ಲಿದ್ದಲು ಗಣಿಗಾಗಿ 6 ಲಕ್ಷ ಮರಗಳು ಧರೆಗುರುಳಿದವು. ನಿಕೊಬಾರ್ ದ್ವೀಪಗಳಲ್ಲಿ ಸರಕು ವರ್ಗಾವಣೆ ಬಂದರು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು 450 ಎಂವಿಎ ಸಾಮರ್ಥ್ಯದ ಅನಿಲ ಹಾಗೂ ಸೋಲಾರ್ ಆಧಾರಿತ ವಿದ್ಯುಚ್ಛಕ್ತಿ ಕಾರ್ಖಾನೆಯನ್ನು ನಿರ್ಮಿಸಲು 9.64 ಲಕ್ಷ ಮರಗಳನ್ನು ತುಂಡರಿಸಿದರು. ಛತ್ತೀಸ್‌ಗಢದಲ್ಲಿ ಅದಾನಿಯ ಗಣಿಗಾರಿಕೆಗೆ ಸಾಕಷ್ಟು ಕಾಡು ಪ್ರದೇಶವನ್ನು ಸಮ ಮಾಡಲಾಯಿತು ಮತ್ತು 3.68 ಲಕ್ಷ ಮರಗಳನ್ನು ಕಡಿಯಲಾಯಿತು.
ಅರಾವಳಿ ಬೆಟ್ಟದ ಸಾಲಿನಲ್ಲಿ, ಅದರಲ್ಲೂ ರಾಜಾಸ್ಥಾನ ಹಾಗೂ ಹರಿಯಾಣದಲ್ಲಿ ಗಮನಾರ್ಹ ಭಾಗದ ಭೂಮಿಯನ್ನು ಅಗೆದಿರುವುದಕ್ಕೆ ‘ಮರಳು ಮಾಫಿಯಾ’ ಮತ್ತು ಇನ್ನಿತರ ಅಕ್ರಮ ಗುಂಪುಗಳ ಅಕ್ರಮ ಗಣಿಗಾರಿಕೆ ಕಾರಣವೆಂದು ಹೇಳುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಹಲವಾರು ಕೋರ್ಟು ಪ್ರಕರಣಗಳಿವೆ. ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ, ಜಲಾಶಯ, ವಿದ್ಯುಚ್ಛಕ್ತಿ ಕಾರ್ಖಾನೆ ನಿರ್ಮಾಣ ಮತ್ತು ನಗರೀಕರಣಗಳಿಂದಾಗಿ ಹಿಮಾಲಯದ ಪರ್ವತ ರಾಜ್ಯಗಳಲ್ಲಿ ಮೇಘಸ್ಪೋಟ, ನೆಲಕುಸಿತ, ಪ್ರವಾಹ, ಭೂಕಂಪಗಳು ಸಂಭವಿಸಿವೆ. ಇದರಿಂದ ಪ್ರಕೃತಿ, ಜನ ಜೀವನ, ಜಾನುವಾರು ಮತ್ತು ಕೃಷಿ ಭಯಂಕರ ನಷ್ಟಗಳನ್ನು ಅನುಭವಿಸಿವೆ. ಜಮೀನು, ಕಾಡು ಮತ್ತು ಜನರು ಹಾಗೂ ಮಂದಿನ ಪೀಳಿಗೆ ಇದಕ್ಕೆ ಬೆಲೆ ತೆರುತ್ತದೆ.
ಭುಗಿಲೆದ್ದ ಪ್ರತಿರೋಧ
ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಮತ್ತು ಭಾರತದ ನೀರಾಳು ಎಂದೇ ಪ್ರಸಿದ್ಧರಾದ ಶ್ರೀ ರಾಜೇಂದ್ರ ಸಿಂಗ್‌ರವರು ಸುಪ್ರೀಂ ಕೋರ್ಟಿಗೆ ಬರೆದ ಪತ್ರದಲ್ಲಿ ಹೀಗೆ ಹೇಳಿದ್ದಾರೆ: “ದೆಹಲಿ ಮತ್ತು ಹರಿಯಾಣ ಗಡಿಭಾಗದಲ್ಲಿ 100 ಮೀಟರ್ ಎತ್ತರದ ಬೆಟ್ಟಗಳಿಲ್ಲ. ಆದ್ದರಿಂದ, ಈ ತೀರ್ಪು ಅರಾವಳಿಯ ರಕ್ಷಿತ ಪ್ರದೇಶವನ್ನು ಹೊಸ ಗಣಿಗಾರಿಕೆ ಹಾಗೂ ಅಭಿವೃದ್ಧಿಗೆ ತೆರೆದಿಟ್ಟು ದೆಹಲಿಗೆ ಥಾರ್ ಮರುಭೂಮಿಯನ್ನು ತರಲು ಸಹಾಯ ಮಾಡುತ್ತದೆ ಎಂದು ನನ್ನ ನಂಬಿಕೆ. ಅರಾವಳಿಯೆನ್ನುವುದು ಒಂದು ವಸ್ತುವಲ್ಲ; ಅದು ಮೃದು ಇಳಿಜಾರುಗಳ ಪರಿಸರ ವ್ಯವಸ್ಥೆ…..ನಾವು ಹುಟ್ಟುವ ಮೊದಲೇ ಅರಾವಳಿಯು ತನ್ನ ಸುತ್ತಮುತ್ತ ಹಿಮಾಲಯ, ಸಮುದ್ರ ಹಾಗೂ ಸಹ್ಯಾದ್ರಿ ಸಾಲುಗಳ ರಚನೆಯಲ್ಲಿ ಪಾತ್ರ ವಹಿಸಿದೆ. ಹವಾಮಾನ ಬದಲಾವಣೆಯು ಜನರಿಗೆ ಧಕ್ಕೆ ತರುತ್ತಿರುವಾಗ, ಉಸಿರಾಡುವುದಕ್ಕೇ ಕಷ್ಟವಾಗುವಷ್ಟು ಗಾಳಿ ಕಲುಷಿತವಾಗಿರುವಾಗ, ನಾವು ಅರಾವಳಿಗೆ ಯಾವುದೇ ರೀತಿಯ ಅಪಾಯವುಂಟು ಮಾಡುವುದನ್ನು ಕಲ್ಪಿಸಿಕೊಳ್ಳಲಾದರೂ ಸಾಧ್ಯವೇ?” ಅವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದಾಗ, “ಜಸ್ಟೀಸ್ ಎಂ.ಎನ್.ವೆಂಕಟಾಚಲಯ್ಯ ನೇತೃತ್ವದ ಪೀಠವು ಸರೈಕ್ಸಾದಲ್ಲಿ 478 ಗಣಿಗಳನ್ನು ಮುಚ್ಚಲು ಆದೇಶ ನೀಡಿತು ಮತ್ತು ಅಲ್ಲಿಂದಾಚೆಗೆ ಅರಾವಳಿಯಲ್ಲೆಲ್ಲಾ ಗಣಿಗಾರಿಕೆ ನಿಂತಿತು” ಎನ್ನುವ ವಿಷಯವನ್ನೂ ಉಲ್ಲೇಖಿಸಿದರು.
ಸುಪ್ರೀಂ ಕೋರ್ಟಿನ ತೀರ್ಪಿನ ಬಗ್ಗೆ ನಾಗರಿಕ ಸೇವೆಯಿಂದ ನಿವೃತ್ತರಾದವರನ್ನು ಒಳಗೊಂಡಿರುವ ಸಾಂವಿಧಾನಿಕ ನಿರ್ವಹಣಾ ತಂಡ (ಸಿಸಿಜಿ), ತೀವ್ರ ಆತಂಕವನ್ನು ವ್ಯಕ್ತಪಡಿಸುತ್ತಾ ಹೇಳಿತು: “ಸುಪ್ರೀಂ ಕೋರ್ಟಿನ ಇತ್ತೀಚಿನ ಮೂರು ತೀರ್ಪುಗಳು, ನಮ್ಮ ಪ್ರಾಕೃತಿಕ ಪ್ರಪಂಚವನ್ನು ಮತ್ತು ಭಾರತೀಯರ ಬದುಕುವ ಹಕ್ಕನ್ನು ಕಾಪಾಡಿಕೊಳ್ಳಲು ಇರುವ ಕಟ್ಟಕಡೆಯ ಭದ್ರಕೋಟೆಯು ಶ್ರೀಮಂತರ ಹಾಗೂ ಪ್ರಬಲ ಪಟ್ಟಭದ್ರ ಹಿತಾಸಕ್ತಿಯ ಆಕ್ರಮಣದ ಮುಂದೆ ಕುಸಿಯುತ್ತಿದೆ ಎನ್ನುವ ಭಯವನ್ನು ಹುಟ್ಟಿಸಿವೆ…..ಗಣಿಗಾರಿಕೆಗೆ ಸಹಾಯ ಮಾಡಲು ತನ್ನ ಸಂರಕ್ಷಣೆಯ ಕಟ್ಟುಪಾಡುಗಳನ್ನು ಸಡಿಲಗೊಳಿಸಿ, ಅರಾವಳಿಯ ವಿನಾಶಕಾರಿ ಹಾಗೂ ವಿಧ್ವಂಸಕ ಪ್ರಸ್ತಾವನೆಯನ್ನು ಸ್ವತಃ ಪರಿಸರ, ಅರಣ್ಯ ಹಾಗೂ ಹವಾಮಾನ ವೈಪರೀತ್ಯದ ಸಚಿವಾಲಯದ ಸಮಿತಿಯೇ ನೀಡಿರುವುದನ್ನು ನೋಡಿದರೆ ದಿಗ್ಭ್ರಾಂತಿಯಾಗುತ್ತದೆ. ಇದೇ ಸಮಿತಿಗೆ ಸುಸ್ಥಿರ ಗಣಿಗಾರಿಕೆಯ ಯೋಜನೆಯನ್ನು ತಯಾರು ಮಾಡುವ ಆದೇಶವನ್ನು ಕೋರ್ಟ್ ನೀಡಿರುವುದರ ಪರಿಣಾಮವನ್ನು ಊಹಿಸಬಹುದು; ಕೋರ್ಟಿನ ಒಪ್ಪಿಗೆಯ ಮುದ್ರೆಯೊಂದಿಗೆ, ದಾವೆಗಳಿಗೆ ಅಂತಿಮ ತೆರೆಯೆಳೆಯುತ್ತಾ ಬೃಹತ್ ಪ್ರಮಾಣದಲ್ಲಿ ಗಣಿಗಾರಿಕೆಯನ್ನು ಕೈಗೆತ್ತಿಕೊಳ್ಳಲಾಗುವುದು.” ‘ಅರಾವಳಿಗಾಗಿ ಜನತೆ’ ಎನ್ನುವ ಬ್ಯಾನರ್ ಅಡಿಯಲ್ಲಿ ನಾಗರಿಕರ ಕಾಳಜಿಯ ಧ್ವನಿಯೆತ್ತುವ ಚಳುವಳಿಯಾದ ‘ಅರಾವಳಿ ವಿರಾಸತ್ ಜನ ಅಭಿಯಾನ’ದ ಸದಸ್ಯರು ಸುಪ್ರೀಂ ಕೋರ್ಟಿನ ಮಧ್ಯಂತರ ಆದೇಶವನ್ನು ಸ್ವಾಗತಿಸುತ್ತಲೇ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ: “ಅರಾವಳಿಯ ಬಗ್ಗೆ ವ್ಯಾಖ್ಯಾನದ ಅಗತ್ಯವಿಲ್ಲ. ಅದಕ್ಕೆ ಅಗತ್ಯವಿರುವುದು ರಕ್ಷಣೆ ಮತ್ತು ಪೋಷಣೆ.”
ಪ್ರಜಾತಂತ್ರದ ಹಕ್ಕುಗಳು ಹಾಗೂ ಧರ್ಮನಿರಪೇಕ್ಷತೆಯ ಸಂರಕ್ಷಣಾ ಕೇಂದ್ರವು (ಸಿಪಿಡಿಆರ್‌ಎಸ್) ಭಾರತದ ಮಾನ್ಯ ಚೀಫ್ ಜಸ್ಟೀಸ್ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿರುವುದೇನೆಂದರೆ, 1) ಗಣಿಗಾರಿಕೆ ಮತ್ತು ವಾಣಿಜ್ಯ ಕಟ್ಟಡಗಳಿಗೆ ಅವಕಾಶ ನೀಡುವ ಅರಾವಳಿಯ ಯಾವುದೇ ಅವೈಜ್ಞಾನಿಕ ಮರುವರ್ಗೀಕರಣವನ್ನು ಅಸಿಂಧುಗೊಳಿಸಬೇಕು. 2) ಇತ್ತೀಚಿಗೆ ನಡೆದ ಬುಡಕಟ್ಟು ಜನರಿರುವ ಕಾಡುಗಳಲ್ಲಿ ಕಾರ್ಪೊರೆಟ್ ಭೂಸ್ವಾಧೀನದಿಂದ ಆಗಿರುವ ವಿನಾಶವನ್ನು ಮೌಲ್ಯಮಾಪನ ಮಾಡಲು ಸ್ವತಂತ್ರ ತಜ್ಞರ ಸಮಿತಿಯನ್ನು ರಚಿಸಬೇಕು.
3) ಸಂಚಿತ ಪರಿಣಾಮ ಸಮೀಕ್ಷೆಯಾಗುವವರೆಗೂ ಪರಿಸರ ಸೂಕ್ಷ್ಮತೆಗಳಿರುವ ವಲಯಗಳಲ್ಲಿ ಎಲ್ಲಾ ಯೋಜನೆಗಳನ್ನು ತಕ್ಷಣವೇ ನಿಷೇಧಿಸಬೇಕು.
ಲಾಭದಾಹಿ ವಿನಾಶಕ್ಕೆ ಬೇಕು ತಡೆ
ಆದ್ದರಿಂದ, 100 ಮೀಟರ್ ಎತ್ತರದ ಮರುವ್ಯಾಖ್ಯಾನವನ್ನು ಸಂಪೂರ್ಣವಾಗಿ ವಾಪಸ್ ತೆಗೆದುಕೊಳ್ಳುವವರೆಗೂ ಮಧ್ಯಂತರ ತಡೆ ಆದೇಶದ ಬಗ್ಗೆ ತುಂಬಾ ಸಂತೋಷಪಡುವುದರಲ್ಲಿ ಅರ್ಥವಿಲ್ಲ. ನಾಲ್ಕು ರಾಜ್ಯಗಳೂ ಸೇರಿದಂತೆ ಇಡೀ ಅರಾವಳಿ ಪ್ರದೇಶದ ಸಂಚಿತ ಸಾಮಾಜಿಕ ಹಾಗೂ ಪರಿಸರದ ಪರಿಣಾಮದ ಬಗ್ಗೆ ಸ್ವತಂತ್ರ ಅಧ್ಯಯನದ ಹಕ್ಕೊತ್ತಾಯವನ್ನು ಈಡೇರಿಸಬೇಕು. ಅಭಿವೃದ್ಧಿಗಾಗಿ ಗಣಿಗಾರಿಕೆ, ಕ್ವಾರಿ, ಕಾಡು ನಾಶ ಅವಶ್ಯಕ; ಪ್ರಕೃತಿಯ ಮೇಲೆ ಮಾನವನ ಪ್ರಾಬಲ್ಯ ಸ್ಥಾಪಿಸಲಾಗಿದೆ ಎಂದೆಲ್ಲಾ ಬೂರ್ಜ್ವಾ ವರ್ಗದ ಹಿತೈಷಿಗಳು ವಾದಿಸುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಮಹಾನ್ ಮಾರ್ಕ್ಸ್ವಾದಿ ಚಿಂತಕರಲ್ಲೊಬ್ಬರಾದ ಫ್ರೆಡರಿಕ್ ಎಂಗೆಲ್ಸ್ ಸುಮಾರು 150 ವರ್ಷಗಳ ಹಿಂದೆ ಹೇಳಿದ ಮಾತುಗಳು ಇಲ್ಲಿ ಪ್ರಸ್ತುತವಾಗುತ್ತವೆ:
“…ಪ್ರಕೃತಿಯ ಮೇಲೆ ಮಾನವ ಸಾಧಿಸಿರುವ ಗೆಲುವಿನ ವಿಷಯದಲ್ಲಿ ತುಂಬಾ ಬೀಗಬೇಕಾಗಿಲ್ಲ. ಏಕೆಂದರೆ ಅಂತಹ ಗೆಲುವುಗಳು ನಮ್ಮ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತವೆ.
ಮೊದಲಿಗೆ, ನಾವು ಯಾವ ಪರಿಣಾಮಗಳಾಗಬಹುದೆಂದು ಲೆಕ್ಕ ಹಾಕಿದ್ದೆವೊ, ಅವುಗಳಲ್ಲಿ ಪ್ರತಿಯೊಂದೂ ಹಾಗೇ ಆಗಿರುವುದು ನಿಜ; ಆದರೆ, ಎರಡನೇ ಮತ್ತು ಮೂರನೇ ಹಂತಗಳಲ್ಲಿ ಅವು ಸಾಕಷ್ಟು ವಿಭಿನ್ನವೂ, ಅನಿರೀಕ್ಷಿತವೂ ಆಗಿದ್ದು, ಬಹುತೇಕವಾಗಿ ಮೊದಲನೆ ಹಂತದ ಪರಿಣಾಮಗಳನ್ನು ರದ್ದುಗೊಳಿಸುತ್ತವೆ….ನಾವು ಪ್ರಕೃತಿಗೆ ಅತೀತವಾಗಿದ್ದೇವೆ ಎನ್ನುವಂತೆ, ವಿದೇಶಿ ಜನರ ಮೇಲೆ ಆಕ್ರಮಣಕಾರನೊಬ್ಬ ಪ್ರಾಬಲ್ಯ ಸಾಧಿಸಿದಂತೆ ನಾವು ಪ್ರಕೃತಿಯ ಮೇಲೆ ಪ್ರಾಬಲ್ಯ ಸಾಧಿಸಿಲ್ಲವೆಂದು ಹೆಜ್ಜೆಹೆಜ್ಜೆಗೂ ನೆನಪಿಸಿಕೊಳ್ಳಬೇಕು….ಬದಲಿಗೆ, ರಕ್ತ-ಮಾಂಸ-ಮೆದುಳನ್ನು ಹೊಂದಿರುವ ನಾವು ಪ್ರಕೃತಿಗೇ ಸೇರಿದವರು ಮತ್ತು ಅದರ ಮಧ್ಯದಲ್ಲೇ ಜೀವಿಸುವವರು ಮತ್ತು ನಾವು ಪ್ರಕೃತಿಯ ಮೇಲೆ ಪ್ರಾಬಲ್ಯ ಸಾಧಿಸಿದ್ದೇವೆಂದರೆ, ಅದರರ್ಥ, ಅದರ ನಿಯಮಗಳನ್ನು ಅರಿತುಕೊಂಡು ಅವÀನ್ನು ಸರಿಯಾಗಿ ಅನ್ವಯಿಸುವುದರಲ್ಲಿ ಬೇರೆ ಜೀವಿಗಳಿಗಿಂತ ಹೆಚ್ಚು ಅನುಕೂಲ ಹೊಂದಿರುವವರು ಎಂದೇ. ಉತ್ಪಾದನೆ ಮತ್ತು ವಿತರಣೆಯ ಮೇಲೆ ಪ್ರಾಬಲ್ಯ ಹೊಂದಿರುವ ಬಂಡವಾಳಗಾರರು ತಮ್ಮ ಕ್ರಿಯೆಯಿಂದ ಸಿಗುವ ತಕ್ಷಣದ ಲಾಭದಾಯಕ ಪರಿಣಾಮಗಳ ಬಗ್ಗೆ ಮಾತ್ರ ಕಾಳಜಿ ವಹಿಸಲು ಸಾಧ್ಯ.
ನಿಜ, ಈ ಲಾಭದಾಯಕ ಪರಿಣಾಮವೂ ಕೂಡ ಹಿನ್ನೆಲೆಗೆ ಸರಿದು ಹೋಗಿ ಮಾರಾಟದಿಂದ ಮಾಡಿಕೊಳ್ಳುವ ಲಾಭ ಮಾತ್ರ ಏಕೈಕ ಉತ್ತೇಜಕವಾಗುತ್ತದೆ. …ಮತ್ತೆ, ತಮ್ಮ ಕ್ರಿಯೆಯ ದೂರಗಾಮಿ ಪ್ರಭಾವಗಳು ಬಹತೇಕವಾಗಿ ತದ್ವಿರುದ್ಧ ಪರಿಣಾಮ ಬೀರಿದಾಗ ಅವರು ಅಚ್ಚರಿಗೊಳಗಾಗುತ್ತಾರೆ.”