ಗಾಜಾ಼: ಸಾಮ್ರಾಜ್ಯವಾದ ಸೃಷ್ಟಿಸಿದ ಹಸಿವು-ಕ್ಷಾಮಗಳೇ ಇಲ್ಲಿ ನಿಜವಾದ ಯುದ್ಧ.
ಗಾಜಾಪಟ್ಟಿಯ ಮೇಲೆ ಇಸ್ರೇಲಿನ ಯುದ್ಧ ಮುಂದುವರೆದಿದೆ. ಈಗಾಗಲೇ ಸಾವಿರಾರು ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಜನರಿಗೆ ತಲೆಯ ಮೇಲೆ ಸೂರಿಲ್ಲ. ಒಂದು ತುತ್ತು ಅನ್ನಕ್ಕಾಗಿ ಪ್ಯಾಲೆಸ್ಟೇನಿಯನ್ನರು ಪರದಾಡುತ್ತಿದ್ದಾರೆ. ಕೊನೆಗೂ 22 ಆಗಸ್ಟ್, 2025 ರಂದು ವಿಶ್ವಸಂಸ್ಥೆಯು ಗಾಜಾದಲ್ಲಿ ಕ್ಷಾಮವನ್ನು ಘೋಷಣೆ ಮಾಡಿದೆ. ಅದಾಗಲೇ ನೂರಾರು ಜನ ಹಸಿವಿನಿಂದ ಮೃತಪಟ್ಟಿದ್ದಾರೆ.
ಕನಿಷ್ಠವೆಂದರೂ ಅಂತಹ 273 ಪ್ರಕರಣಗಳು ದೃಢಪಟ್ಟಿದ್ದವು. ಅವರಲ್ಲಿ 112 ಮಕ್ಕಳು ಸೇರಿವೆ. ನಿಜವಾದ ಸಂಖ್ಯೆಗಳು ಇವನ್ನು ಮೀರಿವೆ. ಸಾಮ್ರಾಜ್ಯಶಾಹಿ ಅಮೇರಿಕದ ಬೆಂಬಲದೊಂದಿಗೆ ಯುದ್ಧ ನಡೆಸುತ್ತಿರುವ ಇಸ್ರೇಲ್ ಈ ಹಸಿವು, ಹಾಹಾಕಾರಗಳಿಗೆ ಕಾರಣವಾಗಿದೆ. ವಿಶ್ವಸಂಸ್ಥೆಯಿಂದ ಇಷ್ಟೊಂದು ತಡವಾಗಿ ಈ ಘೋಷಣೆ ಬಂದಿರುವುದು ಸಹ ಕೇವಲ ಆಕಸ್ಮಿಕವಲ್ಲ, ಅದು ಅಧಿಕಾರ ಮದದ ಕ್ರೌರ್ಯವಾಗಿದೆ. ಇದು ಹಸಿವನ್ನು ಆಯುಧವಾಗಿ ಬಳಸಿದ ಸಾಮ್ರಾಜ್ಯಶಾಹಿ ಇತಿಹಾಸದ ಮತ್ತೊಂದು ಕರಾಳ ಅಧ್ಯಾಯ. ವಿಶ್ವಸಂಸ್ಥೆಯ ಇನ್ಟಿಗ್ರೇಟೆಡ್ ಫುಡ್ ಸೆಕ್ಯುರಿಟಿ ಫೇಸ್ ಕ್ಲಾಸಿಫಿಕೇಷನ್(ಐಪಿಸಿ)ನ ಪ್ರಕಾರ, 5 ಲಕ್ಷಕ್ಕಿಂತ ಅಧಿಕ ಗಾಜ಼ನ್ನರು ಭಯಾನಕ ಹಸಿವನ್ನು ಎದುರಿಸುತ್ತಿದ್ದಾರೆ. ಮತ್ತೊಂದು ದಶಲಕ್ಷ ಜನ ತೀವ್ರ ಹಸಿವಿನ ಗಡಿಯಲ್ಲಿದ್ದಾರೆ.
ಆದರೆ, ಈ ಘೋಷಣೆಯೂ ಎಂದಿನಂತೆ ಬಹಳ ತಡವಾಗಿ ಬಂತು. ಕಾಗದದ ಮೇಲಿನ ಅಂಕಿ-ಅಂಶಗಳನ್ನು ಕಣ್ಣುಬಿಟ್ಟು ನೋಡುವಷ್ಟರಲ್ಲಿ ಜನರು ಬೆಂಕಿಗೆ ಸಿಕ್ಕ ಪತಂಗಗಳಂತೆ ಸಾವಿಗೀಡಾಗುತ್ತಿದ್ದರು. ಇದು ಅವರ ವಿಧಾನದಲ್ಲಿನ ದೋಷವಲ್ಲ; ವ್ಯವಸ್ಥೆ ಇರುವುದೇ ಹೀಗೆ ಜನರು ಸತ್ತ ನಂತರವೇ ವಿಶ್ವಸಂಸ್ಥೆಯು ಕ್ಷಾಮವನ್ನು ಘೋಷಿಸುತ್ತದೆ.
ಈ ಹಸಿವು ಮಾನವ ನಿರ್ಮಿತ
ಗಾಜಾ಼ದಲ್ಲಿ ಸೃಷ್ಟಿಯಾಗಿರುವ ಕ್ಷಾಮವು ಮಾನವ ನಿರ್ಮಿತವೆಂದು ವಿಶ್ವಸಂಸ್ಥೆಯ ವರದಿಯು ಸ್ಪಷ್ಟವಾಗಿ ಹೇಳುತ್ತದೆ. ಸಾಮ್ರಾಜ್ಯಶಾಹಿ ಅಮೇರಿಕ ಬೆಂಬಲಿತ “ಜಿ಼ಯೋನಿಸ್ಟ್ ಇಸ್ರೇಲ್”, ಗಾಜಾ಼ ಬೇಕರಿಗಳ ಮೇಲೆ ಬಾಂಬ್ ಹಾಕಿತು, ಹೊಲಗಳನ್ನು ನಾಶ ಮಾಡಿತು, ನೀರಿನ ಸರಬರಾಜು ನಾಶಮಾಡಿತು ಹಾಗೂ ನೆರವಿನ ವಾಹನಗಳನ್ನು ತಡೆಯಿತು. ಇಲ್ಲಿ ಶೇ.98ರಷ್ಟು ಕೃಷಿಭೂಪ್ರದೇಶ ನಾಶವಾಗಿದೆ. ಆಸ್ಪತ್ರೆಗಳು ಹಾಳಾಗಿವೆ. 400 ಆಹಾರ ವಿತರಣಾ ಕೇಂದ್ರಗಳನ್ನು ಇಸ್ರೇಲ್ ಮುಚ್ಚಿದೆ. ಅವುಗಳ ಬದಲಿಗೆ ಅಮೇರಿಕ-ಇಸ್ರೇಲ್ ಬೆಂಬಲಿತ “ಗಾಜಾ಼ ಹ್ಯೂಮ್ಯಾನಿಟೇರಿಯನ್ ಫೌಂಡೇಶನ್” ಎಂಬ 4 ಕೇಂದ್ರಗಳನ್ನು ತೆರೆಯಿತು. ಅವು ನೆರವು ನೀಡುವ ಸ್ಥಳಗಳಲ್ಲ, ಬದಲಿಗೆ ವಧಾ ಸ್ಥಾನಗಳು!! ಕೇವಲ 2025ರ ಮೇನಿಂದ ಆಗಸ್ಟ್ ನಡುವಿನ ಅವಧಿಯಲ್ಲಿ ಈ ಸ್ಥಳಗಳಲ್ಲಿ 2,000 ಜನರು ಕೊಲ್ಲಲ್ಪಟ್ಟರು ಅಥವಾ ಗಾಯಗೊಂಡರು. ಆಹಾರವನ್ನು ವಿಮಾನದಿಂದ ಎಸೆಯುವ ಏರ್ಡ್ರಾಪ್ನ ‘ನಾಟಕ’ದ ನೂಕುನುಗ್ಗಲಿನಲ್ಲಿ ಸಾವಿರಾರು ಜನರು ಗಾಯಗೊಂಡಿದ್ದಾರೆ. ಮಕ್ಕಳ ಪರಿಸ್ಥಿತಿಯಂತೂ ಹೇಳಲು ಸಾಧ್ಯವಿಲ್ಲ.
ಕ್ಷಾಮದ ಮೂಲಕ ಸಾಮಾಜಿಕ ಹತ್ಯೆ
ಇಸ್ರೇಲ್ ನಿರ್ಬಂಧ ಹೇರಿತು, ಅಮೇರಿಕ ಬಾಂಬುಗಳನ್ನು ಒದಗಿಸಿತು, ನಂತರ ಇವರು “ನೆರವು” ಎಂಬ ನಾಟಕವನ್ನಾಡಿದರು. ಒಂದು ಕಡೆ ಮಗುವನ್ನು ಚಿವುಟುವುದು, ಇನ್ನೊಂದೆಡೆ ತೊಟ್ಟಿಲು ತೂಗುವ ನಾಟಕ. ಸಾಮ್ರಾಜ್ಯಶಾಹಿ-ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಆಹಾರ ಹಕ್ಕಲ್ಲ; ಅದೊಂದು ವ್ಯಾಪಾರದ ಸರಕು. ಗೋದಾಮುಗಳಲ್ಲಿ ಧಾನ್ಯ ತುಂಬಿದೆ, ಆದರೆ, ಜನರು ಹಸಿವಿನಿಂದ ಸಾಯುತ್ತಾರೆ. ಏಕೆಂದರೆ, ಇಲ್ಲಿ ಲಾಭವೊಂದೇ ಮುಖ್ಯ. ಕಾರ್ಮಿಕವರ್ಗದ ಮೊದಲ ಶಿಕ್ಷಕರಾದ ಕಾರ್ಲ್ ಮಾರ್ಕ್ಸ್, “ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಹಸಿವು ಎಂಬುದು ಸಾಮಾಜಿಕ ಹತ್ಯೆ” ಎಂದು ಹೇಳಿದರು. ಅದು ಈ ವ್ಯವಸ್ಥೆಯು ಉದ್ದೇಶಪೂರ್ವಕವಾಗಿ ಸೃಷ್ಟಿಸಿದ ಸಾವಿನ ಕೂಪ. ಇದಕ್ಕೆ ಗಾಜಾ಼ ಅಪವಾದವಲ್ಲ; ಇದೇ ಸಾಮ್ರಾಜ್ಯಶಾಹಿ ವ್ಯವಸ್ಥೆಯ ನಗ್ನ ರೂಪ.
“ಆಹಾರ ಏರ್ಡ್ರಾಪ್” ಎಂಬ ನಾಟಕ
ಪಾಶ್ಚಿಮಾತ್ಯ ಮಾಧ್ಯಮಗಳು ಪ್ಯಾರಾಶೂಟ್ಗಳಿಂದ ಬೀಳುವ ಆಹಾರದ ಪ್ಯಾಕೆಟ್ಗಳನ್ನು ತೋರಿಸಿ ಹಸಿವು ನಿವಾರಿಸಲು “ಪ್ರಯತ್ನ ಮಾಡಲಾಗುತ್ತಿದೆ” ಎಂಬ ಭ್ರಮೆಯನ್ನು ಹುಟ್ಟಿಸುತ್ತವೆ. ಆದರೆ, ಅದು ಮಾನವೀಯತೆ ಅಲ್ಲ; ಅಪಮಾನ. ಪ್ಯಾಲೆಸ್ಟೀನಿನ ಪ್ರಮುಖ ಲೇಖಕ ಘಸಾನ್ ಕನಾಫಾನಿ, “ವಸಾಹತುಶಾಹಿಯು ಕೇವಲ ಕೊಲ್ಲುವುದಿಲ್ಲ; ಅದು ಹಸಿವಿನಿಂದ ನರಳುವಂತೆ ಮಾಡುತ್ತದೆ, ಅವಮಾನಿಸುತ್ತದೆ” ಎಂದು ಒಮ್ಮೆ ಬರೆದಿದ್ದರು. ಆಕಾಶದಿಂದ ಬೀಳುವ ಆಹಾರ ಪ್ಯಾಕೆಟ್ಗಳು ಈ ನವ ವಸಾಹತುಶಾಹಿ ವ್ಯವಸ್ಥೆಯ ಪರಿಪೂರ್ಣ ಸ್ವರೂಪ. ಜನರ ಘನತೆಯ ಬದುಕು ಮತ್ತು ಭೂಮಿಯನ್ನು ಕಸಿದುಕೊಂಡು, ನಂತರ ಅವರಿಗೆ ಭಿಕ್ಷೆಯ ರೂಪದಲ್ಲಿ ಅನ್ನವನ್ನು ಎಸೆಯುವುದು. ಹಸಿವು ರಾಜಕೀಯದಿಂದ ಹುಟ್ಟಿದೆ; “ಆಹಾರ”ವು ಅದೇ ರಾಜಕೀಯದ ಭಾಗವಾಗಿದೆ.
ಹಸಿವು: ಸಾಮ್ರಾಜ್ಯಶಾಹಿಗಳ ನೆಚ್ಚಿನ ಆಯುಧ
ಗಾಜಾ಼ದ ಇತಿಹಾಸದಲ್ಲಿ ಕ್ಷಾಮವೇನೂ ಹೊಸದಲ್ಲ. 1943ರಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಉದ್ದೇಶಪೂರ್ವಕವಾಗಿ ಬಂಗಾಳದಲ್ಲಿ ಕ್ಷಾಮವನ್ನು ಸೃಷ್ಟಿಸಿದ್ದರು. ಆಗ ಲಕ್ಷಾಂತರ ಭಾರತೀಯರು ಸತ್ತಾಗ, ಬ್ರಿಟನ್ನಿನ ಪ್ರಧಾನಿಯಾದ ಚರ್ಚಿಲ್, ಭಾರತೀಯರು “ಮೊಲಗಳ ಹಾಗೆ ಸಂತಾನೋತ್ಪತ್ತಿ ಮಾಡುತ್ತಾರೆ” ಎಂದು ವ್ಯಂಗ್ಯವಾಡಿದ್ದರು. ಸುಡಾನ್, ಸೋಮಾಲಿಯಾ, ಯೆಮನ್ – ಈ ಎಲ್ಲ ರಾಷ್ಟ್ರಗಳಲ್ಲಿಯೂ ಸಾಮ್ರಾಜ್ಯಶಾಹಿ ಶಕ್ತಿಗಳು ಹಸಿವನ್ನು ಯುದ್ಧೋಪಾಯವಾಗಿ ಬಳಸಿವೆ. ಸುಡಾನಿನಲ್ಲಿ ನೆರವನ್ನು ತಡೆಹಿಡಿಯಲಾಯಿತು; ಸೋಮಾಲಿಯಾದಲ್ಲಿ ಅಮೇರಿಕ, ಭಯೋತ್ಪದಕರನ್ನು ಮಟ್ಟಹಾಕುವ ನೆಪವೊಡ್ಡಿ ನೆರವಿಗೆ ಕಡಿವಾಣ ಹಾಕಿ ಲಕ್ಷಾಂತರ ಜನರನ್ನು ಸಾವಿನ ದವಡೆಗೆ ದೂಡಿದೆ. ಯೆಮನ್ನಲ್ಲಿ ಅಮೇರಿಕ – ಸೌದಿ ಸೈನಿಕ ಬಲದಿಂದ ಹೇರಿದ ನಿಷೇಧ ಸಾವಿರಾರು ಜೀವಗಳನ್ನು ನಾಶ ಮಾಡಿತು.
ಈ ಎಲ್ಲ ಸಂದರ್ಭಗಳ ಮಾದರಿ ಒಂದೇ. ಕ್ಷಾಮ ಪ್ರಕೃತಿ ಸಹಜ ದುರಂತವಲ್ಲ; ಅದು ಸಾಮ್ರಾಜ್ಯಶಾಹಿ-ಬಂಡವಾಳಶಾಹಿ ದೇಶಗಳ ಯುದ್ಧೋದ್ಯಮದ ಆಯುಧ. ನಾಶವಾದ ಹೊಲಗಳ ಉಪಗ್ರಹ ಚಿತ್ರಗಳು, ಹಸಿದ ಮಕ್ಕಳ ವೀಡಿಯೊಗಳು, ಆಹಾರದ ಸಾಲುಗಳಲ್ಲಿ ಕೊಲೆಗೀಡಾದ ಜನರು – ಇವು ಲೋಕದ ಜನರ ಹೃದಯವನ್ನು ಕಲಕಿದರೆ, ಇಸ್ರೇಲ್ ಮತ್ತು ಅಮೇರಿಕಗಳು ಇದನ್ನು “ಅಪಪ್ರಚಾರ” ಎಂದು ತಳ್ಳಿಹಾಕುತ್ತವೆ. ಪಾಶ್ಚಾತ್ಯ ಮಾಧ್ಯಮ ಇದೇ ಶಬ್ದಗಳನ್ನು ಪುನರುಚ್ಚರಿಸಿ ಗಾಜಾ಼ದ ಅಳಲು ಅರಣ್ಯರೋದನವಾಗುವಂತೆ ಮಾಡುತ್ತದೆ.
ಅಂತರರಾಷ್ಟ್ರೀಯ ಕಾನೂನು ಎಂಬ ಅಪಹಾಸ್ಯ
ಉದ್ದೇಶಪೂರ್ವಕವಾಗಿ ನಾಗರಿಕರನ್ನು ಹಸಿವಿನಿಂದ ನರಳುವಂತೆ ಮಾಡುವುದು, ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಯುದ್ಧಾಪರಾಧ ಹಾಗೂ ಮಾನವೀಯತೆಯ ಮೇಲಿನ ಅಪರಾಧ ಎನ್ನಿಸಿಕೊಳ್ಳುತ್ತದೆ. ಆದರೆ, ಆ ಕಾನೂನೇ ಸಾಮ್ರಾಜ್ಯಶಾಹಿಗಳ ಕಪಿಮುಷ್ಟಿಯಲ್ಲಿರುವಾಗ ಅದು ಸಂಪೂರ್ಣ ನಿಷ್ಪ್ರಯೋಜಕವಾಗುತ್ತದೆ. ಅಮೇರಿಕ ನಿರಂತರವಾಗಿ ಇಸ್ರೇಲನ್ನು ರಕ್ಷಿಸುತ್ತದೆ; ಶಸ್ತ್ರಾಸ್ತ್ರಗಳನ್ನು ಪೂರೈಸುತ್ತದೆ. ವಿಟೊ ಅಧಿಕಾರವನ್ನು ಚಲಾಯಿಸುತ್ತದೆ. ಅಪರಾಧಿಗಳೇ ನ್ಯಾಯ ನೀಡುವವರಾದಾಗ, ನ್ಯಾಯ ಕಾಡಿನಪಾಲಾಗುತ್ತದೆ. ಬೇಲಿಯೇ ಎದ್ದು ಹೊಲ ಮೇಯುತ್ತದೆ. ಜನತೆ ಇದರ ವಿರುದ್ಧ ಹೋರಾಟಗಳನ್ನು ಕಟ್ಟಿದಾಗ ಮಾತ್ರ ಈ ಬಂಡವಾಳಶಾಹಿಗಳಿಗೆ ತಡೆಯೊಡ್ಡಲು ಸಾಧ್ಯ. ಇಲ್ಲದಿದ್ದರೆ, ಸಾಮ್ರಾಜ್ಯಶಾಹಿಗಳ ಪಾತಕೀ ಚರಿತ್ರೆಯ ಪುಸ್ತಕಕ್ಕೆ ಮತ್ತೊಂದು ಅಧ್ಯಾಯವಾಗುತ್ತದೆ, ಅಷ್ಟೆ.
ಈಗ ತತ್ಕ್ಷಣ ಆಗಬೇಕಾದದ್ದೇನು?
ಶಾಶ್ವತ ಯುದ್ಧ ವಿರಾಮ ಮತ್ತು ನಿರ್ಬಂಧವಿಲ್ಲದ ಮಾನವೀಯ ನೆರವಿನ ಪ್ರವೇಶಕ್ಕೆ ಅವಕಾಶ.
ಪೌಷ್ಟಿಕ ಆಹಾರ ಮತ್ತು ವೈದ್ಯಕೀಯ ನೆರವು ದೊರಕಬೇಕು. ಕೇವಲ ಗೋಧಿ ಚೀಲಗಳಲ್ಲ.
ಕೃಷಿಯ ಪುನರ್ ಸ್ಥಾಪನೆ ಮತ್ತು ಸ್ವಾವಲಂಬನೆ ಗಾಗಿ ನೆರವು.
ಹಸಿವನ್ನು ಯುದ್ಧಾಪರಾಧವಾಗಿ ಪರಿಗಣಿಸಿ ಹೊಣೆಗಾರರಿಗೆ ಉಗ್ರ ಶಿಕ್ಷೆ.
ಹೀಗಾಗಿ, ಗಾಜಾ಼ದಲ್ಲಿ ನಡೆಯುತ್ತಿರುವ ಹಸಿವು ಮಾನವೀಯ ಬಿಕ್ಕಟ್ಟಲ್ಲ. ಅದು ಯೋಜಿತ ರಾಜಕೀಯ ಅಪರಾಧ ಕೃತ್ಯ. ಅಲ್ಲಿ ದುರ್ಬಲರನ್ನು ಹಸಿವಿನಿಂದ ನರಳುವಂತೆ ಮಾಡಿ, ಸಾಮ್ರಾಜ್ಯವಾದವು ಅದನ್ನು ಭದ್ರತೆ ಎಂದು ಕರೆಯುತ್ತದೆ. ಬಂಡವಾಳವಾದಕ್ಕೆ ಹಸಿವು ಜನರನ್ನು ಸದೆಬಡಿಯುವ ಒಂದು ತಂತ್ರವಾಗಿದೆ. ಅದು ನೆರವನ್ನೇ ತನ್ನ ಪ್ರಚಾರದ ಸಾಮಾಗ್ರಿಯನ್ನಾಗಿಸಿಕೊಳ್ಳುತ್ತದೆ. ಈ ಘಳಿಗೆಯ ತುರ್ತು, ಬರೀ ಬಾಯುಪಚಾರದ ಸಾಂತ್ವನದ ಮಾತುಗಳಲ್ಲ. ಗಡಿಗಳನ್ನು ದಾಟಿ ಸಾಮ್ರಾಜ್ಯವಾದ-ಬಂಡವಾಳವಾದವು ಹೇರಿರುವ ನಿರ್ಬಂಧಗಳನ್ನು ಒಡೆಯಬೇಕು. ಸಾಮ್ರಾಜ್ಯಶಾಹಿಗಳು ಸೃಷ್ಟಿಸಿದ ಹಸಿವಿನ ಸೌಧವನ್ನು ಕೆಡವಬೇಕು. ಅಧಿಕಾರ ಹಾಗೂ ಲಾಭಕ್ಕಾಗಿ ಲಕ್ಷಾಂತರ ಜನರನ್ನು ಹಸಿವಿಗೆ ದೂಡಿ ಕೊಲ್ಲುವ ವ್ಯವಸ್ಥೆಗೆ ಅಂತ್ಯ ಹಾಡಬೇಕು.